

ನವದೆಹಲಿ: ರಾಷ್ಟ್ರ ರಾಜಧಾನಿಯ ನೂತನ ಮುಖ್ಯ ಕಾರ್ಯದರ್ಶಿಯಾಗಿ ಐಎಎಸ್ ಧರ್ಮೇಂದ್ರ ಅವರನ್ನು ಕೇಂದ್ರ ನೇಮಕ ಮಾಡಿದೆ. ಪ್ರಸ್ತುತ ಧರ್ಮೇಂದ್ರ ಅವರು ಅರುಣಾಚಲ ಪ್ರದೇಶದ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ. 2022 ಏಪ್ರಿಲ್ 19 ರಿಂದ ಅರುಣಾಚಲ ಪ್ರದೇಶದಲ್ಲಿ ಅವರು ಮುಖ್ಯ ಕಾರ್ಯದರ್ಶಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
ಸದ್ಯ ಅರುಣಾಚಲ ಪ್ರದೇಶದ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಧರ್ಮೇಂದ್ರ ಅವರು 2024 ಸೆಪ್ಟೆಂಬರ್ 1 ರಿಂದ ದೆಹಲಿಯ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಗೃಹ ಸಚಿವಾಲಯ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ದೆಹಲಿಯ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಐಎಎಸ್ ಧರ್ಮೇಂದ್ರ ಅವರ ಹೆಸರು ನಿರಂತರ ರೇಸ್ನಲ್ಲಿತ್ತು. ಅವರು AGMUT ಕೇಡರ್ನ 1989 ಬ್ಯಾಚ್ನ ಹಿರಿಯ ಐಎಎಸ್ ಅಧಿಕಾರಿಯಾಗಿದ್ದಾರೆ. ಐಎಎಸ್ ಅಧಿಕಾರಿ ಧರ್ಮೇಂದ್ರ ಅವರು ಸಿವಿಲ್ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಮಾಡಿದ್ದಾರೆ. ಅರುಣಾಚಲ ಪ್ರದೇಶದ ಮುಖ್ಯ ಕಾರ್ಯದರ್ಶಿಯಾಗುವ ಮೊದಲು ಅವರು ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಅಂದರೆ ಎನ್ಡಿಎಮ್ಸಿಯ ಅಧ್ಯಕ್ಷರ ಜವಾಬ್ದಾರಿ ಹೊಂದಿದ್ದರು. ಐಎಎಸ್ ನರೇಶ್ ಕುಮಾರ್ ಅವರನ್ನು ದೆಹಲಿ ಮುಖ್ಯ ಕಾರ್ಯದರ್ಶಿಯನ್ನಾಗಿ ಮಾಡಿದಾಗ ಧರ್ಮೇಂದ್ರ ಅವರ ಹೆಸರೂ ಚರ್ಚೆಗೆ ಬಂದಿತ್ತು.
ಪ್ರಸ್ತುತ ದೆಹಲಿಯ ಮುಖ್ಯ ಕಾರ್ಯದರ್ಶಿಯಾಗಿರುವ ನರೇಶ್ ಕುಮಾರ್ ಅವರಿಗೆ ಕೇಂದ್ರ ಸರ್ಕಾರ ಈ ಹಿಂದೆ ಎರಡು ಬಾರಿ ವಿಸ್ತರಣೆ ನೀಡಿತ್ತು, ಈಗ ಅವರ ಅಧಿಕಾರಾವಧಿ ಆಗಸ್ಟ್ 31ರಂದು ಕೊನೆಗೊಳ್ಳುತ್ತಿದೆ. ಹಾಲಿ ಮುಖ್ಯ ಕಾರ್ಯದರ್ಶಿ ನರೇಶ್ಕುಮಾರ್ಗೆ ಮೂರನೇ ಬಾರಿ ಸೇವಾ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂಬ ಸುದ್ದಿಗಳು ಹರಿದಾಡುತ್ತಿತ್ತು. ಆದರೆ ಮೂರನೇ ಬಾರಿಯ ವಿಸ್ತರಣೆ ಸಿಕ್ಕಿಲ್ಲ ಎಂಬುದು ಸರ್ಕಾರ ಹೊರಡಿಸಿರುವ ಆದೇಶದಿಂದ ದೃಢವಾಗಿದೆ. (ಏಜೆನ್ಸೀಸ್)