ಕೇಂದ್ರ ಸರ್ಕಾರ ಮತ ಕಳ್ಳತನದ ನಂತರ ಅಧಿಕಾರ ಕಳ್ಳತನ ಮಾಡಲು ಪ್ರಯತ್ನಿಸುತ್ತಿದೆ: ಮಲ್ಲಿಕಾರ್ಜುನ್​ ಖರ್ಗೆ| Mallikarjun Kharge

Mallikarjun Kharge 24
Published on

Mallikarjun Kharge: ಕೇಂದ್ರದ ಸರ್ಕಾರವು 30 ದಿನಗಳಲ್ಲಿ ವಿರೋಧ ಪಕ್ಷಗಳು ಅಡಳಿತದಲ್ಲಿರುವ ಸರ್ಕಾರಗಳನ್ನು ಉರುಳಿಸುವ ಗುರಿಯನ್ನು ಹೊಂದಿರುವ ಹೊಸ ಮಸೂದೆಗಳ ಮೂಲಕ ಅಧಿಕಾರ ಕಳ್ಳತನ ಮಾಡಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇಂದಿರಾ ಭವನದಲ್ಲಿ ಮಾತನಾಡಿದ ಖರ್ಗೆ, ಈ ಮಸೂದೆಗಳು ನಾಗರಿಕರು ತಮ್ಮ ಚುನಾಯಿತ ಸರ್ಕಾರವನ್ನು ರಚಿಸುವ ಅಥವಾ ತೆಗೆದುಹಾಕುವ ಹಕ್ಕನ್ನು ಕಸಿದುಕೊಳ್ಳುತ್ತವೆ. ಪೂರ್ಣ ಅಧಿಕಾರವನ್ನು ED ಮತ್ತು CBI ನಂತಹ ಸಂಸ್ಥೆಗಳಿಗೆ ನೀಡುತ್ತದೆ ಎಂದು ಖರ್ಗೆ ಪ್ರತಿಪಾದಿಸಿದರು. ಅಲ್ಲದೆ, ಇದು ಪ್ರಜಾಪ್ರಭುತ್ವದ ಮೇಲೆ ಬುಲ್ಡೋಜರ್ ಚಲಾಯಿಸಿದಂತೆ ಎಂದು ಖರ್ಗೆ ಆರೋಪಿಸಿದರು.

ಮುಂದುವರೆದು ಮಾತನಾಡಿದ ಖರ್ಗೆ, ಇತ್ತೀಚೆಗೆ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಕಾರ್ಯನಿರ್ವಹಿಸಬೇಕು ಮತ್ತು ಸಾರ್ವಜನಿಕ ಸಮಸ್ಯೆಗಳನ್ನು ಚರ್ಚಿಸಬೇಕು ಎಂದು ಬಯಸಿದ್ದವು, ಆದರೆ ಬಿಜೆಪಿ ಸರ್ಕಾರವು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ಮತ ಕಳ್ಳತನದಂತಹ ವಿಷಯಗಳ ಕುರಿತು ಚರ್ಚೆಗಳನ್ನು ತಪ್ಪಿಸಿತು ಎಂದು ಖರ್ಗೆ ಹೇಳಿದ್ದಾರೆ.

ವಿರೋಧ ಪಕ್ಷದ ಮತಗಳನ್ನು ಕಡಿತಗೊಳಿಸಲು ಬಿಜೆಪಿಯು ಮತದಾರರ ಪಟ್ಟಿಯ SIR ಅನ್ನು ಬಳಸುತ್ತಿದೆ. ಕಾಂಗ್ರೆಸ್​ ಪಕ್ಷದ ಕಾರ್ಯಕರ್ತರು ಮತದಾರರ ಪಟ್ಟಿಗಳ ಮೇಲೆ ನಿಗಾ ಇಡಬೇಕೆಂದು ಖರ್ಗೆ ಒತ್ತಾಯಿಸಿದರು. ಇದರಿಂದಾಗಿ ಬಿಜೆಪಿ ಸದಸ್ಯರು ಅಥವಾ ಬೂತ್ ಮಟ್ಟದ ಅಧಿಕಾರಿಗಳು ಕಾಂಗ್ರೆಸ್ ಬೆಂಬಲಿಗರ ಹೆಸರುಗಳನ್ನು ಅಳಿಸಲು ಮಾಡುವ ಯಾವುದೇ ಪ್ರಯತ್ನವನ್ನು ತಕ್ಷಣವೇ ಪತ್ತೆಹಚ್ಚಬಹುದು ಎಂದು ಎಚ್ಚರಿಸಿದ್ದಾರೆ.

ಬಿಹಾರದಲ್ಲಿ ರಾಹುಲ್ ಗಾಂಧಿಯ ಮತದಾರ ಅಧಿಕಾರ ಯಾತ್ರೆಯ ಬಗ್ಗೆ ಮಾತನಾಡಿದ ಖರ್ಗೆ, ಮತದಾರರ ಕುಶಲತೆಯ ವಿರುದ್ಧ ಲಕ್ಷಾಂತರ ಜನರನ್ನು ಪ್ರತಿಭಟನೆಗೆ ಸೆಳೆಯುತ್ತಿದ್ದಾರೆ ಎಂದು ಹೇಳಿದರು. ಆದರೆ, ಪ್ರಧಾನಿ ಜನರನ್ನು ದಾರಿ ತಪ್ಪಿಸಲು ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಖರ್ಗೆ ಹೇಳಿದರು.

ಗಂಭೀರ ಆರೋಪಗಳ ಮೇಲೆ ಸತತ 30 ದಿನಗಳ ಕಾಲ ಬಂಧನಕ್ಕೊಳಗಾದ ಪ್ರಧಾನಿ, ಮುಖ್ಯಮಂತ್ರಿಗಳು ಮತ್ತು ಸಚಿವರು 31 ನೇ ದಿನದಂದು ಸ್ವಯಂಚಾಲಿತವಾಗಿ ತಮ್ಮ ಹುದ್ದೆಯನ್ನು ಕಳೆದುಕೊಳ್ಳುತ್ತಾರೆ ಎಂದು ಪ್ರಸ್ತಾಪಿಸುವ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಲೋಕಸಭೆಯಲ್ಲಿ ಮಂಡಿಸಿದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net