ವಿಜಯಪುರ: ಆಲಮಟ್ಟಿಯ ಲಾಲ ಬಹಾದ್ದೂರ ಶಾಸ್ತ್ರಿ ಜಲಾಶಯಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಅವರು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಕೃಷ್ಣೆ ರೈತರ ಬಾಳು ಹಸನಾಗಿಸಲಿ. ಈ ಭಾಗದಲ್ಲಿ ಸದಾ ಸಮೃದ್ಧಿ ತರಲಿ ಎಂದು ಪ್ರಾರ್ಥಿಸಿದರು.
ಇದನ್ನೂ ಓದಿ: ಕುಮಾರಸ್ವಾಮಿಯನ್ನು ಬಂಧಿಸುವ ಅಗತ್ಯಬಿದ್ದರೆ ಮುಲಾಜಿಲ್ಲದೆ ಬಂಧಿಸ್ತೀವಿ: ಸಿದ್ದರಾಮಯ್ಯ
ಆಲಮಟ್ಟಿಯ ಲಾಲ ಬಹಾದ್ದೂರ ಶಾಸ್ತ್ರಿ ಜಲಾಶಯದಲ್ಲಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದ ಬಳಿಕ ಅವರು ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಕೃಷ್ಣಾ ನ್ಯಾಯಾಧಿಕರಣ-2 ರ ತೀರ್ಪಿನ ಅನ್ವಯ ನೋಟಿಫಿಕೇಶನ್ ಹೊರಡಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಹೇಳಿದರು.
ಪ್ರಸಕ್ತ ಸಾಲಿನಲ್ಲಿ ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ವಿದ್ಯುತ್ ಉತ್ಪಾದನೆ ಮಾಡುವ ಜಲಾಶಯಗಳು ಕೂಡ ಭರ್ತಿಯಾಗಿವೆ. ಕುಡಿಯುವ ನೀರು ಹಾಗೂ ವಿದ್ಯುತ್ ಶಕ್ತಿ ಉತ್ಪಾದನೆಗೆ ಸಹಕಾರಿಯಾಗಿದೆ. ಕೆರೆಗಳನ್ನು ಸಹ ತುಂಬಿಸಲಾಗುತ್ತಿದೆ. ಇದರಿಂದ ಅಂತರ್ಜಲ ಮಟ್ಟ ಏರಿಕೆಯಾಗಿ ಬೋರ್ ವೆಲ್ಗಳು ರಿಚಾರ್ಜ್ ಆಗುತ್ತಿವೆ. ಹೀಗಾಗಿ ರಾಜ್ಯದ ಜನ ಖುಷಿಯಾಗಿದ್ದಾರೆ ಎಂದರು.
ಆಲಮಟ್ಟಿ ಎರಡನೇ ನ್ಯಾಯಾಧೀಕರಣ ತೀರ್ಪು ಬಂದಿದೆ. ಅದರಂತೆ 130 ಟಿಎಂಸಿ ನೀರು ಸಿಗಲಿದೆ. ಅದಕ್ಕಾಗಿ ಅಣೆಕಟ್ಟೆ ಎತ್ತರ 524 ಮೀಟರ್ಗೆ ಹೆಚ್ಚಿಸಬೇಕು. ಅದರ ನೋಟಿಫಿಕೇಶನ್ ಆಗಿಲ್ಲ. ಈ ಮಧ್ಯೆ ನ್ಯಾಯಾಲಯದಲ್ಲಿ ವ್ಯಾಜ್ಯ ಇದೆ. ಹೀಗಾಗಿ ನೋಟಿಫಿಕೇಶನ್ ಮಾಡದೇ ಎತ್ತರ ಹೆಚ್ಚಿಸಲು ಆಗಲ್ಲ ಎಂದರು.
ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು: ಸರ್ಕಾರ ರಿ ಹ್ಯಾಬಿಟೇಶನ್ಗೆ ತಯಾರಿದೆ. ಸುಮಾರು 51 ಕೋಟಿ ಯಷ್ಟು ಅಂದಾಜು ಇತ್ತು. ಈಗ ಅದು ಲಕ್ಷ ಕೋಟಿ ಆಗಲಿದೆ ಎಂದು ಅಂದಾಜಿಸಲಾಗಿದೆ. ಅದಾದರೆ ಪ್ರತಿ ವರ್ಷ 20 ಸಾವಿರ ಕೋಟಿ ಇಟ್ಟು ಲಕ್ಷ ಕೋಟಿ ಐದು ವರ್ಷಗಳಲ್ಲಿ ಖರ್ಚು ಮಾಡಲು ತೀರ್ಮಾನಿಸಲಾಗಿದೆ. ಆದರೆ ನೋಟಿಫಿಕೇಶನ್ ಆಗಬೇಕು. ಅದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಬೆಂಗಳೂರಿನಲ್ಲಿ ಜನಪ್ರತಿನಿಧಿಗಳ ಸಭೆ ಕರೆಯಲಾಗುವುದು. ಚರ್ಚೆ ಮಾಡಿ ಮುಂದಿನ ಸಾಧ್ಯಾಸಾಧ್ಯತೆಗಳ ಕುರಿತು ಚರ್ಚಿಸಲಾಗುವುದು. ಪುನರ್ವಸತಿ ಮತ್ತು ಪುನರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈವರೆಗೆ 18370 ಕೋಟಿ ಖರ್ಚು ಮಾಡಲಾಗಿದೆ ಎಂದರು.
ಅಣೆಕಟ್ಟೆ ಭದ್ರತೆ ಪರಿಶೀಲನೆಗೆ ಸಮಿತಿ ರಚನೆ: ತುಂಗಭದ್ರಾ ಜಲಾಶಯದ 19 ನೇ ಗೇಟ್ ಮುರಿದ ಕಾರಣ 30-35 ಟಿಎಂ ಸಿ ನೀರು ಪೋಲಾಗಿದೆ. ಸುಮಾರು 78 ಟಿಎಂಸಿ ನೀರು ಈಗಲೂ ಇದೆ. ಅದರ ಸಾಮರ್ಥ್ಯ 105 ಟಿಎಂಸಿ. ಸ್ವಲ್ಪ ಹೂಳು ತುಂಬಿದ್ದರಿಂದ ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ. ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಕ್ಕೆ ಈ ಯೋಜನೆಯಿಂದ ನೀರಾವರಿ ಸೌಲಭ್ಯ ಸಿಗಲಿದೆ. ಇನ್ನೂ 20 ಟಿಎಂಸಿ ನೀರು ಬಂದರೆ 95 ಟಿಎಂಸಿ ನೀರು ಸಂಗ್ರಹ ಆಗಲಿದೆ. ಹೀಗಾಗಿ ರೈತರ ಆತಂಕ ನಿವಾರಣೆಯಾಗಿದೆ.
ಕನ್ನಯ್ಯ ನಾಯ್ಡು ಎಂಬ ತಜ್ಞರು ನಾಲ್ಕು ದಿನದಲ್ಲಿ ಗೇಟ್ ಅಳವಡಿಸಿ ನೀರು ಪೋಲಾಗದ ರೀತಿ ಮಾಡಿದ್ದು ಅವರಿಗೆ ಧನ್ಯವಾದ ಹೇಳುವೆ. ಜೊತೆಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ, ಜಿಲ್ಲಾ ಮಂತ್ರಿಗಳಿಗೆ ಧನ್ಯವಾದ ತಿಳಿಸುವೆ ಎಂದರು.
1992ರ ಅಜ್ಮೀರ್ ಸಾಮೂಹಿಕ ಅತ್ಯಾಚಾರ ಪ್ರಕರಣ: 6 ಮಂದಿಗೆ ಜೀವಾವಧಿ ಶಿಕ್ಷೆ