ಬೆಂಗಳೂರು: ನಿಯಮ ಉಲ್ಲಂಘಿಸಿ ಗಣಿ ಕಂಪನಿಗೆ ಮಂಜೂರಾತಿ ನೀಡಿದ ವಿಚಾರದಲ್ಲಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ಬಂಧಿಸುವುದಾಗಿ ಎಲ್ಲಿಯೂ ಹೇಳಿಲ್ಲ. ಅಗತ್ಯಬಿದ್ದರೆ ಮುಲಾಜಿಲ್ಲದೆ ಬಂದಿಸ್ತೀವಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: 1992ರ ಅಜ್ಮೀರ್ ಸಾಮೂಹಿಕ ಅತ್ಯಾಚಾರ ಪ್ರಕರಣ: 6 ಮಂದಿಗೆ ಜೀವಾವಧಿ ಶಿಕ್ಷೆ
ಆಲಮಟ್ಟಿಗೆ ಬಾಗೀನ ಅರ್ಪಿಸಲು ತೆರಳುವ ಮೊದಲು ಬುಧವಾರ ಇಲ್ಲಿಗೆ ಸಮೀಪದ ಗಿಣಿಗೇರಿಯಲ್ಲಿರುವ ಎರ್ ಸ್ಕ್ರಿಪ್ಟ್ ನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಬಂಧಿಸುವ ಅಗತ್ಯಬಿದ್ದರೆ ಮುಲಾಜಿಲ್ಲದೆ ಬಂದಿಸ್ತೀವಿ. ಆದರೆ ಈಗ ಇನ್ನೂ ಬಂಧಿಸುವ ಸನ್ನಿವೇಶ ಬಂದಿಲ್ಲ ಎಂದರು.
ಕುಮಾರಸ್ವಾಮಿಯವರು ಈಗಲೇ ಹೆದರಿದ್ದಾರೆ. ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಬಹುದು ಎಂಬ ಭಯ ಅವರನ್ನು ಕಾಡುತ್ತಿದೆ. ಅವರ ವಿರುದ್ಧ ಲೋಕಾಯುಕ್ತ ಎಸ್ಐಟಿ ಯವರು ತನಿಖಾ ವರದಿ ನೀಡಿ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿದ್ದಾಗ್ಯೂ ರಾಜ್ಯಪಾಲರಿಂದ ಯಾವುದೇ ಕ್ರಮವಾಗದ ಕಾರಣ, ಎಸ್ಐಟಿ ಮತ್ತೊಮ್ಮೆ ಅರ್ಜಿ ಸಲ್ಲಿಸಿದೆ ಎಂದರು.
ಕುಮಾರಸ್ವಾಮಿ ಅವರ ಪ್ರಕರಣದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯಪಾಲರು, ನನ್ನ ವಿರುದ್ಧ ಮಾತ್ರ ಯಾವುದೇ ತನಿಖಾ ವರದಿಯನ್ನು ಆಧರಿಸದೇ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಇದು ತಾರತಮ್ಯವಲ್ಲದೆ ಮತ್ತೇನು? ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಅವರ ಮಾತುಗಳು ಹಿಟ್ ಅಂಡ್ ರನ್ ನಂತೆ ಇರುತ್ತವೆ. ಜೇಬಿನಲ್ಲಿ ಪೆನ್ಡ್ರೈವ್ ಇದೆ ಎಂದರು. ಒಂದೂ ದಿನ ತೋರಿಸಿಲ್ಲ ಮಾಧ್ಯಮದವರು ಅವರನ್ನು(ಕುಮಾರಸ್ವಾಮಿ) ಹೇಳುವುದನ್ನು ಕೇಳುತ್ತಿದ್ದರಲ್ಲ ಎಂದು ಪ್ರಶ್ನಿಸಿದರು.
ನನ್ನನ್ನು ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕು: ಎಚ್ಡಿಕೆ ಟಾಂಗ್
ನಿಯಮ ಉಲ್ಲಂಘಿಸಿ ಗಣಿ ಕಂಪನಿಗೆ ಮಂಜೂರಾತಿ ನೀಡಿದ ವಿಚಾರದಲ್ಲಿ ಕುಮಾರಸ್ವಾಮಿ ಅವರನ್ನು ಬಂಧಿಸುವುದಾಗಿ ಎಲ್ಲಿಯೂ ಹೇಳಿಲ್ಲ. ಅಗತ್ಯಬಿದ್ದರೆ ಮುಲಾಜಿಲ್ಲದೆ ಬಂದಿಸ್ತೀವಿ ಎಂದಿದ್ದ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಎಚ್ಡಿಕೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನನ್ನನ್ನು ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕು. ಕಳೆದ ವಾರದಿಂದ ಮುಖ್ಯಮಂತ್ರಿ ಹೇಗೆ ನಡೆದುಕೊಂಡಿದ್ದಾರೆ ನೋಡಿದ್ದೀರಲ್ವಾ? ಇವರು ಏನು ಮಾಡಿದ್ದಾರೆ ಎಂದು ಜನರು ನೋಡಿದ್ದಾರೆ. ಮುಡಾ ಆಸ್ತಿಯನ್ನ ನನ್ನ ಆಸ್ತಿ ಅಂತ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.