

ಕಾಸರಗೋಡು: ಪೆರ್ಲ ಶ್ರೀ ಸತ್ಯನಾರಾಯಣ ವಿದ್ಯಾಸಂಸ್ಥೆ ನೂರನೇ ವರ್ಷಕ್ಕೆ ಪದಾರ್ಪಣೆಗೈಯುತ್ತಿದ್ದು, ಶಾಲಾ ಶತಮಾನೋತ್ಸವ ಸಮಾರಂಭ ವರ್ಷಪೂರ್ತಿ ಆಚರಿಸುವ ನಿಟ್ಟಿನಲ್ಲಿ ಶಾಲಾ ಪೂರ್ವ ವಿದ್ಯಾರ್ಥಿಗಳ ಸಭೆ ಆಯೋಜಿಸಲಾಯಿತು.
ಶಾಲಾ ಆಡಳಿತ ಮಂಡಳಿಯ ಡಾ.ಪ್ರಸನ್ನ ಮಿತ್ರ ಅಧ್ಯಕ್ಷತೆ ವಹಿಸಿದ್ದರು. ವರ್ಷಪೂರ್ತಿ ಕಾರ್ಯಕ್ರಮದ ಉದ್ಘಾಟನೆ 2025ರ ಜನವರಿಯಲ್ಲಿ ನಡೆಸುವ ಮೂಲಕ ಪ್ರತಿ ತಿಂಗಳು ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳುವುದು. ಮೇ ತಿಂಗಳ ವೇಳೆಗೆ ಹಿರಿಯ ವಿದ್ಯಾರ್ಥಿಗಳ ಹಾಗೂ ಶಾಲಾ ವಿದ್ಯಾರ್ಥಿಗಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವುದರೊಂದಿಗೆ ಡಿಸೆಂಬರ್‌ನಲ್ಲಿ ಸಮಾರೋಪ ಸಮಾರಂಭ ನಡೆಸಲು ತೀರ್ಮಾನಿಸಲಾಯಿತು.
ಶಾಲಾ ಮುಖ್ಯಶಿಕ್ಷಕ ಎನ್.ಕೇಶವ ಪ್ರಕಾಶ್ ಪ್ರಾಸ್ತಾವಿಕ ಮಾತನಾಡಿದರು. ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಸದಾಶಿವ ಭಟ್ ಹರಿನಿಲಯ, ಸಿಬಿಐ ಬೆಂಗಳೂರು ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಾನಂದ ಪೆರ್ಲ, ಕೃಷ್ಣರಾಜ್ ಪಿ., ರಾಜಾರಾಮ ಎಸ್.ಪೆರ್ಲ, ರಕ್ಷಕ ಶಿಕ್ಷಕ ಸಂಘ ಅಧ್ಯಕ್ಷ ನಾರಾಯಣ ನಾಯಕ್ ಉಪಸ್ಥಿತರಿದ್ದರು.
ಶತಮಾನೋತ್ಸವ ಕಾರ್ಯಕ್ರಮದ ಪ್ರಚಾರಾರ್ಥ ವಿಶೇಷ ಲಾಂಛನ ತಯಾರಿ, ಶಾಲಾ ವೆಬ್‌ಸೈಟನ್ನು ಮತ್ತಷ್ಟು ಸಕ್ರಿಯಗೊಳಿಸುವುದು, ಜತೆಗೆ ವರ್ಷಪೂರ್ತಿ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಬಿರ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
ಡಾ.ಕೇಶವ ನಾಯ್ಕ ಖಂಡಿಗೆ, ಪಿ.ಅಹಮ್ಮದ್ ಪೆರ್ಲ, ರಾಮಕೃಷ್ಣ ರೈ ಕುದ್ವ, ಡಾ.ಕಿಶೋರ್ ಕುಮಾರ್ ರೈ ಶೇಣಿ, ರಾಜೇಶ್ ಮಾಸ್ಟರ್ ಬಜಕೂಡ್ಲು, ಪುಟ್ಟಪ್ಪ ಖಂಡಿಗೆ, ಉದಯ ಚೆಟ್ಟಿಯಾರ್ ಬಜಕೂಡ್ಲು ಅಭಿಪ್ರಾಯ ಮಂಡಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಸಮಿತಿ ರಚನಾ ಸಭೆ ಜ.12ರಂದು ನಡೆಸಲು ತೀರ್ಮಾನಿಸಲಾಯಿತು. ಡಾ.ಸತೀಶ್ ಪುಣಿಂಚಿತ್ತಾಯ ಸ್ವಾಗತಿಸಿ, ನಿರೂಪಿಸಿದರು. ವೇಣುಗೋಪಾಲ ಮಾಸ್ಟರ್ ವಂದಿಸಿದರು.