

ಚಂಢೀಗಡ: ಭಾರತದ ಶತಾಯುಷಿ ಅಥ್ಲೀಟ್ ಮಾನ್ ಕೌರ್, ಶನಿವಾರ ಹೃದಯಾಘಾತದಿಂದ ನಿಧನರಾದರು. ಹಿರಿಯ ಹಾಗೂ ವೇಗದ ಓಟಗಾರ್ತಿ ಆಗಿದ್ದ ಮಾನ್ ಕೌರ್‌ಗೆ 105 ವರ್ಷ ವಯಸ್ಸಾಗಿತ್ತು. ಮೃತರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ‘ಹೃದಯಾಘಾತದಿಂದ ನಿಧನರಾದರು. ಕಳೆದ ಹಲವು ತಿಂಗಳಿಂದ ಅವರ ಆರೋಗ್ಯ ಹದಗೆಟ್ಟಿತ್ತು. ಬಳಿಕ ಅವರನ್ನ ಮೊಹಾಲಿಯ ದೆರಾಬಾಸ್ಸಿ ಆಯುರ್ವೇದ ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದು ಮೃತರ ಪುತ್ರ ಗುರುದೇವ್ ಸಿಂಗ್ ತಿಳಿಸಿದ್ದಾರೆ.
1916, ಮಾರ್ಚ್ 1 ರಂದು ಜನಿಸಿದ ಮಾನ್ ಕೌರ್, ‘ಚಂಢೀಗಡದ ಮಿರಾಕಲ್ ಮಾಮ್’ ಎಂದೇ ಕರೆಸಿಕೊಂಡಿದ್ದರು. ತಮ್ಮ 93ನೇ ವಯಸ್ಸಿನಲ್ಲಿ ಓಡಲು ಆರಂಭಿಸಿದ ಮಾನ್ ಕೌರ್, 2007ರಲ್ಲಿ ಮೊದಲ ಪದಕ ಜಯಿಸಿದ್ದರು. ಚಂಢೀಗಡದ ಮಾಸ್ಟರ್ಸ್ ಅಥ್ಲೆಟಿಕ್ಸ್ ಕೂಟದಲ್ಲಿ ಪದಕ ಗೆದ್ದಿದ್ದರು. 2017ರಲ್ಲಿ ಅಕ್ಲೇಂಡ್‌ನಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಗೇಮ್ಸ್‌ನನಲ್ಲಿ 100 ಮೀಟರ್ ಓಟದಲ್ಲಿ ಪದಕ ಜಯಿಸಿದ್ದ ಕೌರ್, ಹಲವು ವಿಶ್ವ ದಾಖಲೆ ನಿರ್ಮಿಸಿದ್ದರು. ಪೋಲೆಂಡ್‌ನಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಸ್ವರ್ಣ ಪದಕ ಗೆದ್ದುಕೊಂಡಿದ್ದರು.
ಮಾನ್ ಕೌರ್, ರಾಷ್ಟ್ರಪತಿಗಳಿಂದ ‘ನಾರಿ ಶಕ್ತಿ’ ಪುರಸ್ಕಾರಕ್ಕೆ ಭಾಜನರಾಗಿದ್ದರು. ಮಾನ್ ಕೌರ್ ನಿಧನಕ್ಕೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಪಂಜಾಬ್ ಕ್ರೀಡಾ ಸಚಿವ ರಾಣಾ ಗುರ್ಮಿತ್ ಸಿಂಗ್ ಸೋಧಿ ಸೇರಿದಂತೆ ಹಲವು ಮಂದಿ ಸಂತಾಪ ಸೂಚಿಸಿದ್ದಾರೆ.