ಕ್ವೀನ್​ ಸಿನಿಮಾಗೆ ಸಿಕ್ತು ಗ್ರೀನ್​ಸಿಗ್ನಲ್​​; ಷರತ್ತುಗಳೊಂದಿಗೆ ‘ಎಮರ್ಜೆನ್ಸಿ’ ರಿಲೀಸ್​ಗೆ ಅಸ್ತು ಎಂದ CBFC

Untitled-design-93
Published on

ಮುಂಬೈ: ಬಿಟೌನ್​ ಕ್ವೀನ್​​ ಕಂಗನಾ ರಣಾವತ್​​ ಅಭಿನಯದ ಸಿನಿಮಾ ಎಮರ್ಜೆನ್ಸಿ ಸಿನಿಮಾದ ಟ್ರೈಲರ್​ ಬಿಡುಗಡೆಯಾದಗಿನಿಂದಲೂ ಒಂದಲ್ಲ ಒಂದು ವಿವಾದದಲ್ಲಿ ಚಿತ್ರ ಸಿಲುಕಿದೆ. ಸೆಪ್ಟೆಂಬರ್​ 6ರಂದು ರಿಲೀಸ್​ ಆಗಬೇಕಿದ್ದ ಸಿನಿಮಾ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC)ನಿಂದ ಪ್ರಮಾಣೀಕರಣ ಸಿಗದ ಕಾರಣ ಬಿಡುಗಡೆಯಾಗಿಲ್ಲ. ಸದ್ದಯ ಎಮರ್ಜೆನ್ಸಿಗೆ ಸೆನ್ಸಾರ್​ ಮಂಡಳಿ ಗ್ರೀನ್​ಸಿಗ್ನಲ್​ ನೀಡಿದೆ.

ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್​ನ(ಸಿಬಿಎಫ್‌ಸಿ) ಸ್ಕ್ರೀನಿಂಗ್​​​ ಸಮಿತಿಯು ಬಿಡುಗಡೆಗೆ ಮುನ್ನ ಮೂರು ಕಟ್​ ಹಾಗೂ 10 ಬದಲಾವಣೆ ಮಾಡಬೇಕೆಂಬ ಷರತ್ತಿನ ಮೇಲೆ 'ಯುಎ' ಪ್ರಮಾಣೀಕರಣಕ್ಕೆ ಅನುಮೋದನೆ ನೀಡಿದೆ. 'ಯುಎ' ಪ್ರಮಾಣೀಕರಣ ಎಂದರೆ ಚಿತ್ರವು ಪೋಷಕರ ಮಾರ್ಗದರ್ಶನದೊಂದಿಗೆ ವೀಕ್ಷಿಸಲು ಸೂಕ್ತವಾಗಿದೆ. ಮೂಲಗಳ ಪ್ರಕಾರ, ನಿರ್ಮಾಪಕರು ಜುಲೈ 8 ರಂದು ಚಲನಚಿತ್ರವನ್ನು ಪ್ರಮಾಣೀಕರಣಕ್ಕಾಗಿ ಸಲ್ಲಿಸಿದರು.

ಕಂಗನಾ ರಣಾವತ್ ಅವರ ಎಮರ್ಜೆನ್ಸಿ ಚಿತ್ರದಲ್ಲಿ ತೋರಿಸಿರುವ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಸತ್ಯವನ್ನು ಪ್ರಸ್ತುತಪಡಿಸಲು ಸೆನ್ಸಾರ್ ಮಂಡಳಿ ಕೇಳಿದೆ. ವಾಸ್ತವವಾಗಿ ಸಿನಿಮಾದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ರಿಚರ್ಡ್ ಮಿಲ್ಹೌಸ್ ನಿಕ್ಸನ್ ಅವರು ಭಾರತೀಯ ಮಹಿಳೆಯರ ಬಗ್ಗೆ ಮಾಡಿದ ಅವಹೇಳನಕಾರಿ ಹೇಳಿಕೆಗಳು ಮತ್ತು ಭಾರತೀಯರು ಮೊಲಗಳಂತೆ ಸಂತಾನೋತ್ಪತ್ತಿ ಮಾಡುವ ಮಾತುಗಳನ್ನು ಒಳಗೊಂಡಿದೆ. ಈ ಹೇಳಿಕೆಗಳ ಮೂಲವನ್ನು ಪ್ರಸ್ತುತಪಡಿಸುವಂತೆ ಸಿಬಿಎಫ್​ಸಿ ಕೇಳಿದೆ.

ಅಲ್ಲದೆ ಸಿನಿಮಾದಲ್ಲಿ ಮಾಡಬೇಕಾದ 10 ಬದಲಾವಣೆಗಳ ಪಟ್ಟಿಯನ್ನು ಕಳುಹಿಸಿದೆ. ಅವುಗಳಲ್ಲಿ ಹೆಚ್ಚಿನವು ಸಿಖ್ ಸಮುದಾಯದಿಂದ ಆಕ್ಷೇಪಿಸಲ್ಪಟ್ಟ ದೃಶ್ಯಗಳನ್ನು ಒಳಗೊಂಡಿವೆ. ಅದಲ್ಲದೆ ಚಿತ್ರದ ಒಂದು ದೃಶ್ಯದಲ್ಲಿ, ಪಾಕಿಸ್ತಾನಿ ಸೈನಿಕರು ಬಾಂಗ್ಲಾದೇಶಿ ನಿರಾಶ್ರಿತರ ಮೇಲೆ ದಾಳಿ ಮಾಡುವ ದೃಶ್ಯಗಳಿದ್ದುಕ ಅದರಲ್ಲಿ ವಿಶೇಷವಾಗಿ ಸೈನಿಕನೊಬ್ಬ ನವಜಾತ ಶಿಶು ಮತ್ತು ಮೂವರು ಮಹಿಳೆಯರ ಶಿರಚ್ಛೇದನ ಮಾಡುವ ದೃಶ್ಯವನ್ನು ಅಳಿಸಿ ಅಥವಾ ಬದಲಿಸುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ.

ಕಂಗನಾ ರಣಾವತ್​​ ಮುಂದಿನ ಸಿನಿಮಾ ಎಮರ್ಜೆನ್ಸಿ, ದೇಶದಲ್ಲಿನ ತುರ್ತು ಪರಿಸ್ಥಿತಿ ಹೇರಿದ ಅವಧಿಯನ್ನು ಆಧರಿಸಿದೆ. ಕಂಗನಾ ರಣಾವತ್​ ಭಾರತದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್ ಮತ್ತು ದಿವಂಗತ ಸತೀಶ್ ಕೌಶಿಕ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net