

ನ್ಯಾಮತಿ: ನಮ್ಮ ರಾಷ್ಟ್ರೀಯ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಬೇಕೆಂದು ತಹಸೀಲ್ದಾರ್ ಆರ್.ವಿ. ಕಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಾಲೂಕು ಕಛೇರಿ ಆವರಣದಲ್ಲಿ ಆಗಸ್ಟ್ 15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಂಗಳವಾರ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ದಿನಾಚರಣೆಯನ್ನು ಕಳೆದ ಬಾರಿಗಿಂತ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಯಾವುದೇ ಲೋಪದೋಷಗಳು ಆಗದಂತೆ ಆಚರಣೆ ಮಾಡಬೇಕೆಂದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಧ್ವಜಾರೋಹಣ ಮತ್ತು ಕಾರ್ಯಕ್ರಮ ನಡೆಯಲಿದ್ದು, ಸಭೆಯಲ್ಲಿ ಎಸ್ಎಸ್ಎಲ್ಸಿ, ಪಿಯುಸಿ, ಡಿಗ್ರಿ ಕಾಲೇಜ್ಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಮಾಜಿ ಸೈನಿಕರಿಗೆ, ನಿವೃತ್ತ ಸೈನಿಕರಿಗೆ ಮತ್ತಿತರರಿಗೆ ಸನ್ಮಾನಿಸಲು ತೀರ್ಮಾನಿಸಲಾಯಿತು.
ತಾಲೂಕಿನ ಸರ್ಕಾರಿ ಕಚೇರಿಗಳು, ಪಪಂ, ಗ್ರಾಪಂಗಳಲ್ಲಿ ಕಡ್ಡಾಯವಾಗಿ ಯಾವುದೇ ಲೋಪಗಳಾಗದೆ ಧ್ವಜಾರೋಹಣ ನೆರವೇರಿಸಬೇಕು. ಸಾಂಸ್ಕೃತಿಕ ಕಾರ್ಯಕ್ರಮ, ಅಂಗನವಾಡಿ ಮಕ್ಕಳಿಂದ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣದ ವ್ಯವಸ್ಥೆ ಇರುತ್ತದೆ ಎಂದರು.
ನ್ಯಾಮತಿ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯು 76ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಕ್ತದಾನ ಶಿಬಿರ ತಾಲೂಕು ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಗ್ರೇಡ್ 2 ತಹಸೀಲ್ದಾರ್ ಗೋವಿಂದಪ್ಪ, ಕಾರ್ಯ ನಿರ್ವಾಹಕ ಕೆ.ಟಿ. ಕರಿಬಸಪ್ಪ, ಶಿಕ್ಷಣಾಧಿಕಾರಿ ಗಂಗಾಧರ್, ಪಿಎಸ್ಐ ರಮೇಶ್, ಅಗ್ನಿಶಾಮಕ ದಳ ಇನ್ಸ್ಪೆಕ್ಟರ್ ಪರಶುರಾಮ್ ಮತ್ತಿತರರಿದ್ದರು.