ಮುಂದುವರಿದ ಡ್ರಗ್ಸ್ ಜಾಲದ ಬೇಟೆ: ವಿದೇಶಿ ಡ್ರಗ್ಸ್ ಪೆಡ್ಲರ್ ಲೂಮ್ ಪೆಪ್ಪರ್ ಬಾಯ್ಬಿಟ್ಟ ರಹಸ್ಯ

drugs
Published on

* ಮತ್ತಿಬ್ಬರು ಕಿಂಗ್​ಪಿನ್​ಗಳು ವಶಕ್ಕೆ, ಒಬ್ಬನಿಗೆ ಕರೊನಾ ದೃಢ * ಹೊರರಾಜ್ಯಗಳಲ್ಲೂ ಸಿಸಿಬಿ ಪೊಲೀಸರ ಕಾರ್ಯಾಚರಣೆ ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ಸ್ ಮಾಫಿಯಾ ಜಾಲದಲ್ಲಿರುವವರ ಬೇಟೆ ಮುಂದುವರಿಸಿರುವ ಸಿಸಿಬಿ ಪೊಲೀಸರ ತಂಡ, ಭಾನುವಾರ ಮತ್ತಿಬ್ಬರು ಡ್ರಗ್ಸ್ ಪೆಡ್ಲರ್​ಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರ ಹೇಳಿಕೆ ಆಧರಿಸಿ ಹೊರರಾಜ್ಯಗಳಲ್ಲೂ ಸಿಸಿಬಿ ಶೋಧ ಮುಂದುವರಿದಿದೆ. ಈಗಾಗಲೇ ಬಂಧಿತನಾಗಿರುವ ಅಂತಾರಾಷ್ಟ್ರೀಯ ಡ್ರಗ್ಸ್ ಪೆಡ್ಲರ್ ಲೂಮ್ ಪೆಪ್ಪರ್ ವಿಚಾರಣೆ ವೇಳೆ ಮಹತ್ವದ ಸಂಗತಿ ಹೊರಹಾಕಿದ್ದು, ಹಲವರ ಹೆಸರು ಬಾಯ್ಬಿಟ್ಟಿದ್ದಾನೆ. ಅದನ್ನು ಆಧರಿಸಿ ಬಂಧನ ಕಾರ್ಯಾಚರಣೆ ನಡೆಯುತ್ತಿದೆ.

ಆದಿತ್ಯ ಆಳ್ವ ನಾಪತ್ತೆ ಮಾಜಿ ಸಚಿವ ದಿವಂಗತ ಜೀವರಾಜ್ ಆಳ್ವಾ ಪುತ್ರ ಆದಿತ್ಯ ಆಳ್ವ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಸದಾಶಿವನಗರದಲ್ಲಿರುವ ಮನೆಯಲ್ಲಿಯೂ ಇಲ್ಲ. ಅಲ್ಲದೆ, ಮತ್ತಷ್ಟು ಆರೋಪಿಗಳು ಹೊರರಾಜ್ಯದಲ್ಲಿ ತಲೆಮರೆಸಿಕೊಂಡಿದ್ದು, ಪ್ರತ್ಯೇಕ ತಂಡಗಳು ಅಲ್ಲಿಗೆ ತೆರಳಿ ತೀವ್ರ ಶೋಧ ನಡೆಸುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಡ್ರಗ್ಸ್ ಪೆಡ್ಲರ್ ರಾಜಸ್ಥಾನ ಮೂಲದ ವೈಭವ್ ಜೈನ್ ಹಾಗೂ ಪ್ರಶಾಂಕ್ ರಂಕಾನನ್ನು ವಶಕ್ಕೆ ಪಡೆಯಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ವೈಭವ್ ಜೈನ್​ಗೆ ಕರೊನಾ ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗುಣಮುಖನಾದ ನಂತರ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಕರಣದ 7ನೇ ಆರೋಪಿ ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಲೂಮ್ ಪೆಪ್ಪರ್, ‘ತನಗೆ ಆಫ್ರಿಕನ್ ಬಿಟ್ಟರೆ ಬೇರೆ ಯಾವುದೇ ಭಾಷೆ ಬರುವುದಿಲ್ಲ’ ಎಂದು ವಿಚಾರಣೆ ವೇಳೆ ತಗಾದೆ ತೆಗೆದಿದ್ದ. ರಾಗಿಣಿ ಆಪ್ತ ರವಿಶಂಕರ್ ಜತೆ ಆನ್​ಲೈನ್ ಮೂಲಕ ಇಂಗ್ಲಿಷ್​ನಲ್ಲಿ ಸಂವಹನ ನಡೆಸಿರುವ ದಾಖಲೆಗಳನ್ನು ಮುಂದಿಟ್ಟಾಗ ತೆಪ್ಪಗಾಗಿದ್ದಾನೆ. ಬಳಿಕ ತಾನಾಗಿಯೇ ಬಾಯ್ಬಿಟ್ಟಿದ್ದಾನೆ. ಕಾಯಂ ಆಗಿ ಡ್ರಗ್ಸ್ ಖರೀದಿಸುತ್ತಿದ್ದ ಹಲವರ ಹೆಸರನ್ನು ಲೂಮ್ ಹೊರಹಾಕಿದ್ದಾನೆ. ಡ್ರಗ್ಸ್ ದಂಧೆಯಲ್ಲಿ ತನ್ನ ಜತೆ ಭಾಗಿಯಾಗಿರುವ ಪೆಡ್ಲರ್​ಗಳ ಜಾಲದ ಬಗ್ಗೆ ಮಾಹಿತಿ ನೀಡಿದ್ದಾನೆ. ಡಾರ್ಕ್​ವೆಬ್ ಬಳಕೆ ಮಾಡುತ್ತಿರುವುದು ಗೊತ್ತಾಗಿದೆ. ಆತನ ಹೇಳಿಕೆಯನ್ನು ಮತ್ತೊಮ್ಮೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಲೂಮ್ ಪೆಪ್ಪರ್ ಜತೆ ನಂಟು ಹೊಂದಿರುವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದೇಶದಿಂದ ಡ್ರಗ್ಸ್ ಕಳ್ಳಸಾಗಾಣೆ ಮಾಡಿಕೊಳ್ಳುತ್ತಿದ್ದ ಲೂಮ್ ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಐಟಿ- ಬಿಟಿಯವರಿಗೆ ಪೂರೈಕೆ ಮಾಡುತ್ತಿದ್ದ. ಪಬ್​ವೊಂದರಲ್ಲಿ ಪಾರ್ಟಿ ವೇಳೆ ಪರಿಚಯವಾಗಿದ್ದ ವ್ಯಕ್ತಿಯಿಂದ ದೊಡ್ಡ ಮಟ್ಟದ ಗ್ರಾಹಕರ ಸಂಪರ್ಕ ಬೆಳೆದಿತ್ತು. ಬಳಿಕ ಪಾರ್ಟಿಗಳಿಗೆ ನೇರವಾಗಿ ಹೋಗಿ ಡ್ರಗ್ಸ್ ಕೊಡುತ್ತಿದ್ದ. ದಂಧೆಯಲ್ಲಿ ರವಿಶಂಕರ್​ಗೂ ಕಮೀಷನ್ ನೀಡುತ್ತಿದ್ದ ಬಗ್ಗೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿದೆ. ಬ್ಯಾಂಕ್ ವಿವರ ಪರಿಶೀಲಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net