ಬೊಮ್ಮನಹಳ್ಳಿ ಕಾಲ್ ಸೆಂಟರ್ ಮೇಲೆ ಸಿಸಿಬಿ ದಾಳಿ; ಠಾಣಾ ವ್ಯಾಪ್ತಿಯ ಪೊಲೀಸರ ಮೇಲೂ ತನಿಖೆ ಸಾಧ್ಯತೆ!

ajay.
Published on

ಬೆಂಗಳೂರು: ಬೊಮ್ಮನಹಳ್ಳಿ ಕಾಲ್ ಸೆಂಟರ್ ಮೇಲೆ ಸಿಸಿಬಿ ದಾಳಿ ನಡೆಸಿದ್ದು ಇದೀಗ ಬೊಮ್ಮನಹಳ್ಳಿ ಪೊಲೀಸರ ಮೇಲೂ ತನಿಖೆ ನಡೆಯೋ ಸಾಧ್ಯತೆ ಇದೆ ಎಂದು ಮೇಲ್ನೋಟಕ್ಕೆ ತೋರುತ್ತಿದೆ.

ಪೊಲೀಸರಿಗೂ ಈ ಖದೀಮರಿಗೂ ಹಿಂದೆ ನಡೆದಿತ್ತಾ ಡೀಲ್?

ಬೊಮ್ಮನಹಳ್ಳಿ ಠಾಣೆಯ ಇನ್ಸ್​ಪೆಕ್ಟರ್ ಪ್ರಶಾಂತ್ ಹಾಗೂ ಸಿಬ್ಬಂದಿಗಳ ಮೇಲೆ ಇಲಾಖಾ ತನಿಖೆ ನಡೆಯುವ ಸಾಧ್ಯತೆ ಇದ್ದು ಅದಕ್ಕೆ ಕಾರಣ ಆರೋಪಿಗಳಿಂದ ಬೊಮ್ಮನಹಳ್ಳಿ ಪೊಲೀಸರು ಈ ಹಿಂದೆಯೇ ಬೆನಿಫಿಟ್ಸ್ ಪಡೆದಿದ್ದರಾ ಎಂಬ ಅನುಮಾನವೇ ಕಾರಣವಾಗಿದೆ. ಅಕ್ಯುಮೆಟ್ರಿಕ್ ಕಂಪೆನಿಯ ಮೇಲೆ ಸಿಸಿಬಿ ದಾಳಿಯಿಂದ ಹಿಂದಿನ ಡೀಲ್ ಪ್ರಕರಣ ಬೆಳಕಿಗೆ ಬರುತ್ತಾ ಎನ್ನುವ ಅನುಮಾನ ಇದೀಗ ಎದ್ದಿದೆ.

ಏನಿದು ಪ್ರಕರಣ?

ಚಿತ್ತೂರಿನ ಅಜಯ್, ಎನ್.ವಿ ಅಕ್ಯುಮೆಟ್ರಿಕ್ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ. ಬಡಮಕ್ಕಳಿಗೆ ಸಹಾಯ ಮಾಡ್ತೀವಿ ಎಂದು ಈತ ಕಾಲ್ ಸೆಂಟರ್ ತೆಗೆದಿದ್ದ. ಕಾಲ್ ಸೆಂಟರ್​ನ ಪ್ರತಿ ಸಿಬ್ಬಂದಿಯೂ ದಿನವೊಂದಕ್ಕೆ 200 ಕಾಲ್ ಮಾಡಲೇ ಬೇಕಿತ್ತು ಎಂದು ಹೇಳಲಾಗುತ್ತಿದೆ.

ಹೀಗೆ ಕರೆ ಸ್ವೀಕರಿಸಿ ದಾನ ಮಾಡುತ್ತೇವೆ ಎಂದು ಹಣವನ್ನು ಟ್ರಾನ್ಫರ್ ಮಾಡಿದರೆ ಆರೋಪಿ ಅಜಯ್​, ತನ್ನ ಎನ್​ಜಿಓ ಬ್ಯಾಂಕ್ ಖಾತೆಗೆ ಆ ಹಣವನ್ನು ವರ್ಗಾಯಿಸಿಕೊಳ್ಳುತ್ತಿದ್ದ ಎಂದು ಆರೋಪಿಸಲಾಗಿದೆ.

ಬಡ ಮಕ್ಕಳ ಕೈಹಿಡಿತೀವಿ ಅಂತ ಸಿಕ್ಕಸಿಕ್ಕವರ ಬಳಿ ಖಾತೆಗೆ ಹಣ ಹಾಕಿಸಿಕೊಂಡು ಟ್ರಾನ್ಫರ್ ಮಾಡಿಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಹೆಚ್ಚು ಜನರ ಕೈಯಿಂದ ಹಣ ಪಡೆಯುವ ಉದ್ದೇಶದಿಂದ ಈತ ಕಾಲ್ ಸೆಂಟರ್​ನಲ್ಲಿ ಕೇವಲ ಹೆಣ್ಣುಮಕ್ಕಳನ್ನ ನೇಮಿಸಿಕೊಂಡಿದ್ದ!

ಹತ್ತಾರು ಕೋಟಿ ರೂಪಾಯಿಯನ್ನು ಬಡಮಕ್ಕಳ ಹೆಸರಲ್ಲಿ ಹಣ ಹಾಕಿಸಿಕೊಂಡಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಈ ಹಿಂದೆಯೇ ಬೊಮ್ಮನಹಳ್ಳಿ ಪೊಲೀಸರು ಆರೋಪಿ ಅಜಯ್ ನನ್ನ ಕರೆಸಿ ಮಾತುಕತೆ ನಡೆಸಿದ್ದರು ಎಂದು ಹೇಳಲಾಗಿದೆ. ಆದರೆ ನಂತರ ಯಾವುದೇ ಬೆಳವಣಿಗೆ ನಡೆದಿರಲಿಲ್ಲ.

ಪೊಲೀಸರು ಹಾಗೂ ಆರೋಪಿ ಅಜಯ್​ಗೂ ನಡೆದ ಡೀಲ್​ ಯಾವುದು?

ಇದೀಗ ವಿಚಾರಣೆ ವೇಳೆ ಹಳೆ ಡೀಲ್ ವಿಚಾರವನ್ನು ಅಜಯ್ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದ್ದು ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯ ಕೆಲ ಪೊಲೀಸರು ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ.

ಇನ್ನು ಈ ಆರೋಪಿ ಅಜಯ್, ಈ ಹಿಂದೆ ಯೂಟ್ಯೂಬ್ ನಲ್ಲಿ ಸಾಂಗ್ ಕೂಡ ಮಾಡಿದ್ದ. ಯೂಟ್ಯೂಬ್​ನಲ್ಲಿ ಆರೋಪಿಯ ಹಾಡುಗಳು ಲಕ್ಷಾಂತರ ವೀವ್ಸ್ ಪಡೆದಿದ್ದು ಈತನ ಕ್ರೇಜ್ ಹೇಗಿದೆ ಅನ್ನೋದನ್ನ ಈ ವೀಡಿಯೋವನ್ನು ನೋಡಿದ್ರೆ ಗೊತ್ತಾಗುತ್ತದೆ.

ಅಜಯ್ ಬೇಗ ಶ್ರೀಮಂತನಾಗಬೇಕು, ಪ್ರಖ್ಯಾತಿ ಗಳಿಸಬೇಕು ಎಂದು ಹೀಗೆಲ್ಲಾ ಮಾಡಿದ್ದಾನೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಆರೋಪಿ ಅಜಯ್ ಇದೀಗ ಸಿಸಿಬಿ ಕೈಯಲ್ಲಿ ಸಿಕ್ಕಿ ಎಲ್ಲಾ ವಿಚಾರವನ್ನು ಹೊರಗೆಡಹುತ್ತಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net