More

    ಇನ್ನು ಇಂಜೆಕ್ಷನ್​ ಭಯ ಬಿಟ್ಟು ಬಿಡಿ! ಬಂದಿದೆ ಹೊಸ ತಂತ್ರಜ್ಞಾನ

    ನವದೆಹಲಿ: ಅಮೆರಿಕದ ಸಂಶೋಧಕರು ಹೊಸ ಚಿಕಿತ್ಸಾ ವಿಧಾನವನ್ನು ಪ್ರಾರಂಭಿಸಿದ್ದಾರೆ. ಇಂಜೆಕ್ಷನ್ ಬಳಸದೇ ಚರ್ಮದೊಳಕ್ಕೆ ಔಷಧವನ್ನು ತಲುಪಿಸುವ ವಿಧಾನವನ್ನು ಈ ಸಂಶೋಧಕರು ಕಂಡುಕೊಂಡಿದ್ದು ಇದಕ್ಕಾಗಿ ಅಮೆರಿಕದ ಮಸಾಚುಸೆಟ್ಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರು ಚರ್ಮಕ್ಕೆ ಸುಲಭವಾಗಿ ಅಂಟಿಕೊಳ್ಳುವ ಪ್ಯಾಚ್​ನಂತಹ ಸಾಧನವನ್ನು ತಯಾರಿಸಿದ್ದಾರೆ.

    ಏನಿದು ಪ್ಯಾಚ್?

    ದೇಹಕ್ಕೆ ಸೇರಿಸಬೇಕಾದ ಮದ್ದನ್ನು ಈ ಪ್ಯಾಚ್​​ಗೆ ಸೇರಿಸಲಾಗುತ್ತದೆ. ಈ ಮೂಲಕ ಅದು ಶರೀರವನ್ನು ಸೇರುವಂತೆ ವಿನ್ಯಾಸಗೊಳಿಸಲಾಗಿದೆ. ಇದರ ವಿಶೇಷತೆ ಏನಪ್ಪಾ ಎಂದರೆ, ಸೂಜಿಯನ್ನು ಚುಚ್ಚುವ ಅಗತ್ಯವಿಲ್ಲದೆಯೇ ಔಷಧವನ್ನು ಚರ್ಮದ ಪದರಗಳ ಒಳಕ್ಕೆ ಮದ್ದನ್ನು ತಲುಪಿಸಲಾಗುತ್ತದೆ.

    ಪ್ರಸ್ತುತ ಚುಚ್ಚುಮದ್ದು ಬಳಸಿ ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಆದರೆ, ಕೆಲವೊಮ್ಮೆ ಚುಚ್ಚುಮದ್ದು ರೋಗಿಗೆ ಸಾಕಷ್ಟು ನೋವನ್ನು ಉಂಟುಮಾಡಬಹುದು. ನಾಡಿ ಸಿಗದೇ ತಪ್ಪಿದರಂತೂ ನೋವಿನ ಜತೆಗೆ ಎಡವಟ್ಟೂ ಪಕ್ಕಾ.

    ಚುಚ್ಚುಮದ್ದು ಇಷ್ಟಪಡದ ರೋಗಿಗಳಿಗೆ ಬಾಯಿಯ ಮೂಲಕ ಮದ್ದು ನೀಡಬೇಕಾಗುತ್ತದೆ. ಆದರೆ ಕೆಲ ಔಷಧಿಗಳು ಕಹಿಯಾಗಿದ್ದು ಬಾಯಿಯನ್ನು ಕಿವುಚುವಂತೆ ಮಾಡುತ್ತವೆ. ಅದಲ್ಲದೆ, ಅವು ಜೀರ್ಣಾಂಗ ವ್ಯವಸ್ಥೆಯ ಮೂಲಕ ಹಾದುಹೋಗಬೇಕು. ಇದರಿಂದಾಗಿ ಗ್ಯಾಸ್ಟ್ರಿಕ್ ಸಮಸ್ಯೆಗಳು ಉಂಟಾಗಬಹುದು.

    ಈ ಹಿನ್ನೆಲೆಯಲ್ಲಿ ಈ ಹೊಸ ಪ್ಯಾಚ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಪ್ಯಾಚ್, ಚರ್ಮದ ಪದರದಲ್ಲಿ ಸಣ್ಣ ಚಾನಲ್‌ಗಳನ್ನು ರಚಿಸಲು ಅಲ್ವಾಸಾನಿಕ್ ತರಂಗಗಳನ್ನು ಬಳಸುತ್ತದೆ. ನಂತರ ನೋವುರಹಿತವಾಗಿ ಈ ಚಾನಲ್‌ಗಳ ಮೂಲಕ ಔಷಧವನ್ನು ಚರ್ಮದಾಳಕ್ಕೆ ತಲುಪಿಸುತ್ತದೆ. ಅದರ ನಂತರ, ಔಷಧವು ಗುರಿಪಡಿಸಿದ ಪ್ರದೇಶದ ಮೇಲೆ ಪರಿಣಾಮ ಬೀರುತ್ತದೆ ಎಂದು ಖಚಿತಪಡಿಸುತ್ತದೆ.

    ಇದು ಕೆಲಸ ಮಾಡೋದು ಹೇಗೆ?

    ಹಗುರವಾಗಿ ಇರುವ ಈ ಪ್ಯಾಚನ್ನು ಚರ್ಮದ ಮೇಲೆ ಸುಲಭವಾಗಿ ಧರಿಸಬಹುದಾಗಿದೆ. ಇದು ಕೆಲ ರೀತಿಯ ಸಂಜ್ಞಾ ಪರಿವರ್ತಕಗಳನ್ನು ಹೊಂದಿದೆ. ಇದು ಶರೀರದಲ್ಲಿರುವ ವಿದ್ಯುತ್ ಪ್ರವಾಹವನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ.

    ಒಮ್ಮೆ ಸಕ್ರಿಯಗೊಳಿಸಿದಾಗ, ಈ ಸಂಜ್ಞಾ ಪರಿವರ್ತಕಗಳು ಒತ್ತಡವನ್ನು ಉಂಟುಮಾಡುತ್ತವೆ. ಚರ್ಮದ ಕೋಶಗಳನ್ನು ಚೆದುರಿಸಿ ಔಷಧ ಭೇದಿಸುವುದಕ್ಕೆ ಅವಕಾಶ ಮಾಡಿಕೊಡಲು ಸೂಕ್ಷ್ಮ-ಮಾರ್ಗಗಳನ್ನು ರೂಪಿಸುತ್ತದೆ. ಆಗ ಈ ಔಷಧಿ ದೇಹಕ್ಕೆ ಹೋಗುತ್ತದೆ.

    ಭವಿಷ್ಯದಲ್ಲಿ ಹೆಚ್ಚಿನ ಸಂಶೋಧನೆ

    ಪ್ರಸ್ತುತ, ಈ ಸಾಧನವನ್ನು ಚರ್ಮದ ಮೂಲಕ ಮಾತ್ರ ಔಷಧವನ್ನು ತಲುಪಿಸಲು ವಿನ್ಯಾಸಗೊಳಿಸಲಾಗಿದೆ. ಭವಿಷ್ಯದಲ್ಲಿ, ಔಷಧವು ದೇಹದ ರಕ್ತನಾಳಗಳಿಗೆ ಹೋಗುವಂತೆ ಅದನ್ನು ಮಾರ್ಪಡಿಸಲಾಗುತ್ತದೆ. ಈ ಪ್ಯಾಚ್ ಲಭ್ಯವಾದ ನಂತರ, ಪ್ರೊಜೆಸ್ಟರಾನ್ ನಂತಹ ಹಾರ್ಮೋನುಗಳನ್ನು ದೇಹದಲ್ಲಿ ಸರಳ ರೀತಿಯಲ್ಲಿ ವಿತರಿಸಬಹುದು. ಅದಷ್ಟೇ ಅಲ್ಲದೇ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಗೆ ಕಠಿಣ ಕೀಮೊ ಥೆರಪಿ ಚಿಕಿತ್ಸೆಯ ಬದಲಾಗಿ ಇಂತಹ ಸಾಧನಗಳ ಮೂಲಕ ಮದ್ದನ್ನು ಶರೀರಕ್ಕೆ ತಲುಪಿಸಬಹುದೇ ಎಂದು ಸಂಶೋಧನೆ ಮಾಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts