ಯುವತಿಯರಿಗೆ ಕಿರುಕುಳ: ಲೇವಡಿ ಮಾಡಿದ ಕಾಮುಕರ ಮುಖಕ್ಕೆ ಮಸಿ, ಚಪ್ಪಲಿ ಗೂಸಾ; ವಿಡಿಯೋ ವೈರಲ್​! Viral Video

ಯುವತಿಯರಿಗೆ ಕಿರುಕುಳ ನೀಡಿ ಲೇವಡಿ ಮಾಡಿದ ಕಾಮುಕರಿಗೆ ಗ್ರಾಮಸ್ಥರಿಂದ ತಕ್ಕ ಶಾಸ್ತಿ
ಯುವತಿಯರಿಗೆ ಕಿರುಕುಳ ನೀಡಿ ಲೇವಡಿ ಮಾಡಿದ ಕಾಮುಕರಿಗೆ ಗ್ರಾಮಸ್ಥರಿಂದ ತಕ್ಕ ಶಾಸ್ತಿ
Published on
ನೈನಿತಾಲ್​: ಸ್ಥಳೀಯ ಯುವತಿಯರ ಜತೆ ಅಸಭ್ಯವಾಗಿ ವರ್ತಿಸಿದ ಇಬ್ಬರು ಕಾಮುಕರಿಗೆ ಗ್ರಾಮಸ್ಥರು ಸಾರ್ವಜನಿಕವಾಗಿ ಗೂಸಾ ನೀಡಿ, ಮುಖಕ್ಕೆ ಮಸಿ ಬಳಿದ ಘಟನೆ ಉತ್ತರಾಖಂಡದ ನೈನಿತಾಲ್​ನಲ್ಲಿ ನಡೆದಿದೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ (Viral Video) ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.

ಅಷ್ಟಕ್ಕೂ ಅಲ್ಲಿ ನಡೆದಿದ್ಕೇನು?

ಉತ್ತರಾಖಂಡದ ಪ್ರಸಿದ್ಧ ಪ್ರವಾಸಿ ತಾಣವಾದ ನೈನಿತಾಲ್ ಜಿಲ್ಲೆಯ ಮುಕ್ತೇಶ್ವರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಉತ್ತರ ಪ್ರದೇಶದ ಮೊರಾದಾಬಾದ್ ನಿವಾಸಿಗಳೆಂದು ಹೇಳಲಾದ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಈ ಗ್ರಾಮದ ಮೂಲಕ ಹೋಗುತ್ತಿದ್ದರು.
ಆ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿದ್ದ ಸ್ಥಳೀಯ ಯುವತಿಯರ ಮೇಲೆ ಇವರು ಅನುಚಿತ ಕಾಮೆಂಟ್‌ಗಳನ್ನು ಮಾಡಿ, ಕೀಟಲೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಹೆಣ್ಣುಮಕ್ಕಳನ್ನು ಲೇವಡಿ ಮಾಡಿ ತಪ್ಪಿಸಿಕೊಳ್ಳಲು ಮುಂದಾದ ಈ ಕಾಮುಕರನ್ನು, ತಕ್ಷಣವೇ ಗ್ರಾಮಸ್ಥರು ಮತ್ತು ಮಹಿಳೆಯರು ಅವರ ಕಾರನ್ನು ಅಡ್ಡಗಟ್ಟಿ ಇಬ್ಬರನ್ನೂ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.

ಮುಖಕ್ಕೆ ಮಸಿ, ಚಪ್ಪಲಿ ಗೂಸಾ!

ಕೈಗೆ ಸಿಕ್ಕಿಬಿದ್ದ ಆರೋಪಿಗಳಿಗೆ ಗ್ರಾಮಸ್ಥರು ಮತ್ತು ಮಹಿಳೆಯರು ಸ್ಥಳದಲ್ಲೇ ತಕ್ಕ ಶಾಸ್ತಿ ಮಾಡಿದ್ದಾರೆ. ಕೇವಲ ಬೈಗುಳಕ್ಕೆ ಸೀಮಿತವಾಗದೆ, ಇಬ್ಬರ ಮುಖಕ್ಕೂ ಕಪ್ಪು ಮಸಿ ಬಳಿಯಲಾಗಿದೆ. ಬಳಿಕ ಚಪ್ಪಲಿಗಳಿಂದ ಹಿಗ್ಗಾಮುಗ್ಗಾ ಥಳಿಸಿ ಸಾರ್ವಜನಿಕವಾಗಿ ಪಾಠ ಕಲಿಸಲಾಗಿದೆ ಎಂದು ತಿಳಿದು ಬಂದಿದೆ.

ಇಷ್ಟಕ್ಕೇ ಕೋಪ ತಣ್ಣಗಾಗದ ಗ್ರಾಮಸ್ಥರು, ಕಾಡಿನಲ್ಲಿ ಸ್ವಾಭಾವಿಕವಾಗಿ ಬೆಳೆಯುವ 'ಬಿಚ್ಚು ಬೂಟಿ' ಎಲೆಯಿಂದ ಆರೋಪಿಗಳ ಮೈಯೆಲ್ಲಾ ಉಜ್ಜಿದ್ದಾರೆ. ಹಿಮಾಲಯ ಪ್ರದೇಶದಲ್ಲಿ ಸಿಗುವ ಈ ಗಿಡ ಚರ್ಮಕ್ಕೆ ತಾಕಿದರೆ ಸಾಕು, ತೀವ್ರವಾದ ಸುಡುವಿಕೆ, ವಿಪರೀತ ತುರಿಕೆ ಮತ್ತು ಚುಚ್ಚುವ ಸಂವೇದನೆ ಉಂಟಾಗುತ್ತದೆ. ಇಂತಹ ವಿಶೇಷ ಹಾಗೂ ನೋವಿನ ಶಿಕ್ಷೆಯನ್ನು ನೀಡುವುದರ ಮೂಲಕ ಇನ್ನುಮುಂದೆ ಯಾರೂ ಇಂತಹ ತಪ್ಪು ಮಾಡದಂತೆ ಎಚ್ಚರಿಕೆ ನೀಡಲಾಗಿದೆ.

ಬಳಿಕ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರಿಗೆ ಈ ಇಬ್ಬರು ಕಾಮುಕರನ್ನು ಗ್ರಾಮಸ್ಥರು ಒಪ್ಪಿಸಿದ್ದು, ಪೊಲೀಸರು ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.


ನೆಟಿಗರಿಂದ ಭರ್ಜರಿ ಬೆಂಬಲ!

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋಗೆ ನೆಟಿಗರಿಂದ ಭರ್ಜರಿ ಲೈಕ್ಸ್ ಹಾಗೂ ಕಮೆಂಟ್‌ಗಳು ಹರಿದುಬರುತ್ತಿವೆ. ಬಹುತೇಕ ಮಂದಿ ಗ್ರಾಮಸ್ಥರ ಈ ಕ್ರಮವನ್ನು ಕೊಂಡಾಡಿದ್ದಾರೆ.
ಮಹಿಳೆಯರನ್ನು ಅಗೌರವಿಸುವ ಮತ್ತು ಕಿರುಕುಳ ನೀಡುವ ಯಾರೇ ಆಗಲಿ, ಅವರಿಗೆ ಇಂತಹ ಕಠಿಣ ಶಿಕ್ಷೆಯೇ ಸರಿಯಾದ ಮದ್ದು. ಸಮುದಾಯ ಅಥವಾ ಧರ್ಮ ಯಾವುದು ಎಂಬುದು ಮುಖ್ಯವಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ವ್ಯಂಗ್ಯವಾಗಿ, ಆ ಬಿಚ್ಚು ಬೂಟಿ ಮದ್ದಿನ ಸುಡುವಿಕೆ ವಾರಗಳವರೆಗೆ ಇರುತ್ತದೆ, ಇನ್ನು ಮುಂದೆ ಅವರು ಯಾವ ಹುಡುಗಿಯರ ಹತ್ತಿರವೂ ಸುಳಿಯುವುದಿಲ್ಲ ಎಂದು ಬರೆದುಕೊಂಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net