ಪ್ರೀತಿಗೆ ಒಂದು ಬಲಿ ಸೇಡಿಗೆ ಆರು ಹೆಣ, ಭೀಮಾತೀರದ ರೋಚಕ ಕಹಾನಿ

ಗೋವಿಂದಪುರದ ಹತ್ಯಾಕಾಂಡದ ಬಳಿಕ ಚಡಚಣ ಪಟ್ಟಣ ಬಿಕೋ ಎನ್ನುತ್ತಿರುವುದು.
ಗೋವಿಂದಪುರದ ಹತ್ಯಾಕಾಂಡದ ಬಳಿಕ ಚಡಚಣ ಪಟ್ಟಣ ಬಿಕೋ ಎನ್ನುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಚಡಚಣ ಸೀಮೆಯಲ್ಲಿ ಚೆಲ್ಲಿತು ಬಿಸಿರಕ್ತ
  • ಖೂನಿ ಹಿಂದಿದೆ ಹಸಿಹಸಿ ಪ್ರೇಮ ಕಹಾನಿ
  • ನೆತ್ತರಿನಲ್ಲಿ ನೆನೆದ ಭೀಮಾತೀರದ ನೆಲ
ವಿಜಯಪುರ: ಬಿರುಬಿಸಿಲಿನಿಂದ ಬತ್ತಿದ ಭೀಮೆಯಲ್ಲೀಗ ಮುಂಗಾರಿನ ಹನಿ ಬೀಳುವ ಮೊದಲೇ ನೆತ್ತರಿನ ಹನಿ ಹರಿದಿದೆ !
ಭೀಮಾತೀರದ ಹಂತಕರು ಖ್ಯಾತಿಯ ಮಲ್ಲಿಕಾರ್ಜುನ ಚಡಚಣನ ಪುತ್ರರಾದ ಧರ್ಮರಾಜ ಹಾಗೂ ಗಂಗಾಧರನ ಭೀಕರ ಹತ್ಯಾಕಾಂಡದ ಬಳಿಕ ಶಾಂತವಾಗಿದ್ದ ಭೀಮಾತೀರದಲ್ಲಿ ಮತ್ತೆ ನೆತ್ತರಿನ ಘಮ ಹರಡಿದೆ. ಸಾಹುಕಾರ ಮಹಾದೇವ ಭೈರಗೊಂಡ ಮೇಲಿನ ಭಯಾನಕ ದಾಳಿ ಬಳಿಕ ಮೂಲೆ ಸೇರಿದ್ದ ಮಾರಕಾಸ್ತ್ರಗಳು ಮತ್ತೆ ಝಳಪಿಸತೊಡಗಿವೆ. ನಿರುಮ್ಮಳವಾಗಿ ನಿದ್ರಿಸುತ್ತಿದ್ದ ಜನರಲ್ಲಿ ಕ್ರಮೇಣ ಭಯ-ಆತಂಕ ಮಡುಗಟ್ಟತೊಡಗಿದೆ.
ಚಡಚಣ ಪಟ್ಟಣದ ಹೊರವಲಯದಲ್ಲಿ ಕೊಲೆಗೀಡಾದವರ ಅಂತ್ಯಕ್ರೀಯೆ ನೂರಾರು ಜನರ ಸಮ್ಮುಖದಲ್ಲಿ ನೆರವೇರಿತು.

ಪ್ರೇಮಕ್ಕೆ ಬಲಿಯಾದ ಒಂದು ಜೀವಕ್ಕೆ ಪ್ರತೀಕಾರವೆಂಬಂತೆ ಆರು ಹೆಣಗಳ ರಾಶಿ ಬಿದ್ದಿದ್ದು, ಭೀಮಾ ನದಿ ಪಾತ್ರದಲ್ಲಿರುವ ಚಡಚಣ ತಾಲೂಕಿನ ಗೋವಿಂದಪುರ ಎಂಬ ಗ್ರಾಮ ಅಕ್ಷರಶಃ ರಣರಂಗವಾಗಿದೆ. ಎರಡು ಬಲಾಢ್ಯ ಕುಟುಂಬಗಳ ಮಧ್ಯೆ ನಡೆದ ಕಾಳಗದಲ್ಲಿ ಸಾಲು ಸಾಲಾಗಿ ಬಿದ್ದ ಆರು ಹೆಣಗಳ ರಾಶಿಯ ಹಿಂದಿನ ಈ ಕಥೆ ರೋಮ ರೋಮಗಳನ್ನು ನಿಮಿರಿಸುತ್ತದೆ. ಸುದೀರ್ಘ 11 ವರ್ಷಗಳ ಕಾಲ ಹಿಡಿದಿಟ್ಟಿದ್ದ ಎರಡು ಕುಟುಂಬಗಳ ನಡುವಿನ ದ್ವೇಷ ಜಮೀನು ವಿವಾದದ ನೆಪದಲ್ಲಿ ಭುಗಿಲೆದ್ದು, ಮೂರನೇ ಕುಟುಂಬವನ್ನು ಬಲಿ ಪಡೆದಿದೆ.

ಹೀಗಿತ್ತು ಆ ಪ್ರೇಮಕಥೆ

ಅದು 2015ನೇ ಇಸ್ವಿ. ತೇಲಿ ಮನೆತನ ಹೆಣ್ಣು ಮಗಳನ್ನು ಗೋವಿಂದಪುರದ ಕಲ್ಲನಗೌಡ ಈಶ್ವರಗೌಡ ಪಾಟೀಲ ಎಂಬುವರ ಪುತ್ರ ಶಿವಾನಂದ ಅಪಹರಿಸಿಕೊಂಡು ಹೋಗಿ ಮದುವೆಯಾಗಿದ್ದನು. ಇದರಿಂದ ಆಕ್ರೋಶಗೊಂಡ ತೇಲಿ ಕುಟುಂಬದ ಶಶಿಕಾಂತ, ಪ್ರಶಾಂತ, ಕಾಮನಿಂಗ, ಮಹಾದೇವ ಸೇರಿ ಟ್ಯ್ರಾಕ್ಟರ್ ಹಾಯಿಸಿ ಶಿವಾನಂದನನ್ನು ಭೀಕರವಾಗಿ ಹತ್ಯೆಗೈದಿದ್ದರು. ಬಳಿಕ ಜೈಲು ಶಿಕ್ಷೆಯಾಗಿದ್ದರಿಂದ ಗೋವಿಂದಪುರದಲ್ಲಿದ್ದ 30 ಎಕರೆ ಜಮೀನು ಬಿಟ್ಟು ಬೇರೆ ಊರಿಗೆ ಹೊರಟು ಹೋಗಿದ್ದರು. ಇದರಿಂದ ನಿಗಿನಿಗಿ ಕೆಂಡವಾಗಿದ್ದ ಪಾಟೀಲರ ಕುಟುಂಬ ಅದೇ ತೇಲಿ ಮನೆತನದ ಜಮೀನಿನಲ್ಲಿಯೇ ಶಿವಾನಂದನ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಶಿವಾನಂದನನ್ನು ಕಳೆದುಕೊಂಡ ತೇಲಿ ಕುಟುಂಬದ ಆ ಹೆಣ್ಣು ಮಾತ್ರ ಜಮೀನಿನ ಮೇಲೆಯೇ ಚಿತ್ತ ನೆಟ್ಟು ಗಂಡನ ಆಗಮನದ ಹುಸಿ ಭರವಸೆಯಲ್ಲಿ ಕಾಲ ಕಳೆಯುತ್ತಿದ್ದಳು.

ತಾರಕಕ್ಕೇರಿತ್ತು ಜಮೀನು ವಿವಾದ

ಚಡಚಣ ಪಟ್ಟಣದ ಹೊರವಲಯದಲ್ಲಿ ಕೊಲೆಗೀಡಾದವರ ಅಂತ್ಯಕ್ರೀಯೆ ನೂರಾರು ಜನರ ಸಮ್ಮುಖದಲ್ಲಿ ನೆರವೇರಿತು.

ಶಿವಾನಂದನ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ತೇಲಿ ಕುಟುಂಬದ ನಾಲ್ವರು ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ವರೆಗೂ ಹೋಗಿ 2024ರಲ್ಲಿ ಬಿಡುಗಡೆಯಾಗಿ ಬಂದಿದ್ದರು. ಆದರೆ, ಜಮೀನಿಗೆ ಕಾಲಿಡಲಾಗದೇ ಪರಿತಪಿಸುತ್ತಿದ್ದರು. ಆರು ತಿಂಗಳ ಹಿಂದೆ ಚಡಚಣದ ನಿರಾಳೆ ಕುಟುಂಬದ ದುಂಡಪ್ಪ, ಶಿವಪುತ್ರ ಹಾಗೂ ಚಂದ್ರಕಾಂತ ಅವರ ಬಳಿಗೆ ಹೋದ ತೇಲಿ ಕುಟುಂಬದ ಖ್ಯಾಮನಿಂಗ ನಡೆದ ವೃತ್ತಾಂತವನ್ನೆಲ್ಲ ತಿಳಿಸಿ ‘ನಮ್ಮ ಹೊಲ ಫಡಿ ಬಿದ್ದಿರುತ್ತದೆ ಆದ್ದರಿಂದ ನಮ್ಮ ಹೊ ನೀವು ಖರೀದಿ ಮಾಡುತ್ತಿದ್ದರೆ ನಿಮಗೆ ಕೊಡತೀವಿ’ ಎಂದಿದ್ದರು. ಅದಕ್ಕೆ ನಿರಾಳೆ ಕುಟುಂಬದ ಆ ಹಿರಿಯರು ಕಲ್ಲನಗೌಡ ಪಾಟೀಲ ಮತ್ತವರ ಕುಟುಂಬಸ್ಥರನ್ನು ಸಂಪರ್ಕಿಸಿ ‘ನಾವು ಖ್ಯಾಮನಿಂಗ ತೇಲಿಯರ ಹೊಲಾ ಖರೀದಿ ಮಾಡಬೇಕಂತ ಮಾಡಿದೀವಿ, ಆ ಹೊಲಾ ನೀವು ತಗೊಳ್ಳುತ್ತಿದ್ದರೆ ತಗೊಳ್ಳಿ’ ಎನ್ನಲಾಗಿ ಪಾಟೀಲ ಕುಟುಂಬಸ್ಥರು ‘ಇಲ್ಲ ನಮ್ಮ ಹೊಲಗಳು ಬಹಳಷ್ಟು ಅದಾವ್ ಆ ಹೊಲಾ ನಾವು ತೊಳುವುದಿಲ್ಲ ನೀವೇ ಖರೀದಿ ಮಾಡ್ರಿ ಅದಕ್ಕೆ ನಮ್ಮದೇನೂ ತಕರಾರು ಇಲ್ಲ’ ಎಂದಿದ್ದಾರೆ.

ಖರೀದಿ ಬಳಿಕ ತಕರಾರು

ತೇಲಿ ಕುಟುಂಬಸ್ಥರು 30 ಎಕರೆ ಜಮೀನು ಪೈಕಿ 5 ಎಕರೆ ಮೃತ ಶಿವಾನಂದನ ಮಡದಿ ಅಂದರೆ ತಮ್ಮ ಮನೆತನದ ಹೆಣ್ಣುಗಳಿಗಾಗಿಯೇ ಬಿಟ್ಟು ಉಳಿದ 25 ಎಕರೆ ಜಮೀನು ನಿರಾಳೆ ಕುಟುಂಬಕ್ಕೆ ಖರೀದಿ ಹಾಕಿಕೊಟ್ಟಿದ್ದಾರೆ. ಆದರೆ, ಇನ್ನೊಂದೆಡೆ ಈ ಖರೀದಿಗೆ ಪಾಟೀಲರ ಕುಟುಂಬಸ್ಥರು ಮೊದಲನಿಂದಲೇ ವಿರೋಧವಿದ್ದು ನಿರಾಳೆ ಕುಟುಂಬಸ್ಥರ ಮನೆವರೆಗೂ ಹೋಗಿ ಕೈ ಮುಗಿದು ‘ನಮ್ಮ ಮನೆಯಲ್ಲಿ ಈ ಜಮೀನಿನ ವಿಚಾರವಾಗಿಯೇ ಹೆಣ ಬಿದ್ದಿದೆ ಹೀಗಾಗಿ ಖರೀದಿಸಬೇಡಿ’ ಎಂದು ಪರಿಪರಿಯಾಗಿ ಕೇಳಿಕೊಂಡಿದ್ದಾರೆಂಬ ಮಾಹಿತಿಯೂ ಇದೆ.
ಗೋವಿಂದಪುರದ ಹತ್ಯಾಕಾಂಡದ ಬಳಿಕ ಚಡಚಣ ಪಟ್ಟಣ ಬಿಕೋ ಎನ್ನುತ್ತಿರುವುದು.

ಅದಾಗ್ಯೂ ನಿರಾಳೆ ಕುಟುಂಬಸ್ಥರು ದಾಷ್ಟೃತೆಯಿಂದ ಜಮೀನಿಗೆ ನುಗ್ಗಿ ಸ್ವಚ್ಛತೆ ಕಾರ್ಯದಲ್ಲಿ ತೊಡಗಿದ್ದಾರೆ. ವಾರದಿಂದ ನ್ಯಾಯ ಪಂಚಾಯಿತಿ ನಡೆದರೂ ಸಂಧಾನ ವಿಫಲವಾಗಿದೆ. ಮೇ 29 ರಂದು ಮಧ್ಯಾಹ್ನ 2.30ರ ಸುಮಾರಿಗೆ ನಿರಾಳೆ ಕುಟುಂಬದ ಚಂದು ಊರ್ಫ್ ಚಂದ್ರಕಾಂತ ನಿರಾಳೆ, ದುಂಡಪ್ಪ, ಶಿವಪುತ್ರ, ರಾಹುಲ್ ನಿರಾಳೆ ಮತ್ತು ಸಮರ್ಥ ಸೇರಿ ಶಬ್ಬೀರ ಅತ್ತಾರ ಎಂಬಾತನೊಂದಿಗೆ ಜಮೀನನಲ್ಲಿಸ ಸ್ವಚ್ಛತೆ ಕಾರ್ಯ ನಡೆಸಿದ್ದಾರೆ. ಆಗ ಪಾಟೀಲರ ಕುಟುಂಬ ಹಾಗೂ ನಿರಾಳೆ ಕುಟುಂಬದ ಮಧ್ಯೆ ಮಾತಿನ ಚಕಮಕಿ ನಡೆದು ಪಾಟೀಲ ಕುಟುಂಬಸ್ಥರು ಗ್ರಾಮದೊಳಕ್ಕೆ ತೆರಳಿದ್ದಾರೆ.

ಕ್ಷಣಾರ್ಧದಲ್ಲೇ ಮಾರಣಹೋಮ

ಊಟ ಮುಗಿಸಿ ಜೆಸಿಬಿ ಮೂಲಕ ಸ್ವಚ್ಛತೆ ಆರಂಭಿಸುತ್ತಿದ್ದಂತೆ ಬೈಕ್ ಮೇಲೆ ಬಂದ ಪಾಟೀಲರ ಕುಟುಂಬಸ್ಥರು ಕಣ್ಣಿಗೆ ಖಾರದ ಪುಡಿ ಎರಚಿ, ಕಬ್ಬು ಕತ್ತರಿಸುವ ಹರಿತ ಆಯುಧದಿಂದ ಕಬ್ಬು ಕತ್ತರಿಸುವಂತೆಯೇ ಕತ್ತರಿಸಲಾರಂಭಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಹೆಣಗಳ ರಾಶಿ ನೆಲಕ್ಕಚ್ಚಿದೆ. ಜೆಸಿಬಿ ಆಪರೇಟರ್ ಹಾಗೂ ಓರ್ವ ಕೆಲಸಗಾರರು ಗಂಭೀರ ಗಾಯಗೊಂಡಿದ್ದಾರೆ. ಇಡೀ ಗೋವಿಂದಪುರ ಸ್ತಬ್ದವಾಗಿದೆ. ಕೆಲ ಕಾಲ ಭೀಮಾತೀರವೆಲ್ಲ ಭಯ-ಆತಂಕದಿಂದ ಕಂಪಿಸಿದೆ. ನೂತನ ಐಜಿ ಸಂದೀಪ ಪಾಟೀಲರ ಅಧಿಕಾರ ಸ್ವೀಕಾರ ಹಿನ್ನೆಲೆ ಬೆಳಗಾವಿಗೆ ತೆರಳಿದ್ದ ಎಸ್‌ಪಿ ಲಕ್ಷ್ಮಣ ನಿಂಬರಗಿ ದೌಡಾಯಿಸಿ ಬರುವಷ್ಟರಲ್ಲೇ ಗೋವಿಂದಪುರ ಕತ್ತಲೆ ಹೊದ್ದು ಮಲಗಿತ್ತು. ಇಡೀ ಸನ್ನಿವೇಶವನ್ನು ಹಿಡಿತಕ್ಕೆ ತೆಗೆದುಕೊಂಡ ಖಾಕಿಪಡೆ ಮೃತರ ಮರೋಣತ್ತರ ಪರೀಕ್ಷೆ ನಡೆಸಿ ಶನಿವಾರ ಚಡಚಣದಲ್ಲಿ ಅಂತ್ಯಕ್ರಿಯೆ ನೆರವೇರಿಸುವ ಹೊತ್ತಿಗೆ ಭೀಮೆ ತಣ್ಣಗಾಗಿದ್ದಳು.
ಎರಡು ಹೃದಯಗಳ ಸಂಗಮದಿಂದ ಆರಂಭಗೊಂಡ ಪ್ರಕರಣವೊಂದು ಎರಡು ಕುಟುಂಬಗಳ ದ್ವೇಷದೊಂದಿಗೆ ಬೆಳೆದು ಮೂರನೇ ಕುಟುಂಬದ ಭೂದಾಹದಲ್ಲಿ ಅಂತ್ಯಕಂಡಿದೆ. ಆದರೆ ಭೀಮೆ ಮಾತ್ರ ನಿಜಕ್ಕೂ ಇದು ಅಂತ್ಯವಾ ? ಎಂದು ಹುಸಿನಗುತ್ತಿದ್ದಾಳೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net