ಶಿರಸಿ: ಭಾನುವಾರ ಮುಂಜಾನೆ ಶಿರಸಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಭರ್ಜರಿ ಮಳೆ ಸುರಿದಿದೆ. .ಎರಡು ತಾಸಿಗೂ ಅಧಿಕ ಕಾಲ ಸುರಿದ (Rain) ಮಳೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹಲವು ಅಧ್ವಾನಗಳನ್ನು ಸೃಷ್ಟಿಸಿದೆ..ಗಣೇಶನಗರದಲ್ಲಿ ಚರಂಡಿ ನೀರು ಹರಿದು ಇಲ್ಲಿಯ ನಾಲ್ಕಾರು ಮನೆಗಳ ಒಳಗೆ ನುಗ್ಗಿದೆ. ಗುಡುಗು ಸಿಡಿಲಿನ ಅಬ್ಬರವೂ ಜೋರಾಗಿದ್ದ ಕಾರಣ ರಾತ್ರಿ ವಿದ್ಯುತ್ ಸಂಪರ್ಕ ಸಹ ಕಡಿತವಾಗಿತ್ತು..ಇಳಿಜಾರಿನ ಪ್ರದೇಶದಲ್ಲಿರುವ ಗಣೇಶನಗರದಲ್ಲಿ ಈ ವರ್ಷ ಹೊಸದಾಗಿ ರಸ್ತೆ ನಿರ್ಮಿಸಿ ಸಿಮೆಂಟ್ ತಡೆಗೋಡೆ ಸಹ ನಿರ್ಮಿಸಲಾಗಿತ್ತು..ಆದರೆ, ಮಳೆಯ ಅಬ್ಬರದಿಂದಾಗಿ ನೀರು ಒಮ್ಮೆಲೇ ನುಗ್ಗಿದ ಪರಿಣಾಮವಾಗಿ ಇಲ್ಲಿಯ ರಸ್ತೆಗಳು ಕೊಚ್ಚಿಹೋಗಿವೆ..ಅಲ್ಲದೆ, ಅನೇಕ ಮನೆಗಳ ಒಳಗೆ ನೀರಿನೊಂದಿಗೆ ರಸ್ತೆಗೆ ಹಾಕಿದ್ದ ಮಣ್ಣೂ ನುಗ್ಗಿದ್ದು, ಇಲ್ಲಿಯ ನಿವಾಸಿಗಳು ಸಮಸ್ಯೆ ಎದುರಿಸುವಂತಾಯಿತು. .ಗ್ರಾಮೀಣ ಪ್ರದೇಶದಲ್ಲಿ ಬೆಳಗಿನ ಜಾವ 3 ಗಂಟೆಗೆ ಒಮ್ಮೆಲೇ ಗಾಳಿಯೊಂದಿಗೆ ಮಳೆ ಆರಂಭಗೊಂಡಿದೆ. ಇದರಿಂದಾಗಿ ಅನೇಕ ಕಡೆ ಅಡಕೆ ಮರಗಳು ಮುರಿದುಬಿದ್ದು ರೈತರು ಹಾನಿ ಅನುಭವಿಸಿದ್ದಾರೆ.