ಇದು ಆಟೋ ಅಲ್ಲ.. ಮಿನಿ ಲೈಬ್ರರಿ; ಬಂಟ್ವಾಳದ ಈ ಆಟೋ ಚಾಲಕನ ಐಡಿಯಾಗೆ ನೆಟ್ಟಿಗರಿಂದ ಶಬ್ಬಾಷ್! | Mini Library Auto

ಆಟೋ ಹತ್ತಿದ್ರೆ ಪ್ರಯಾಣದ ಜೊತೆ ಪುಸ್ತಕವೂ ಸಿಗುತ್ತೆ
ಆಟೋ ಹತ್ತಿದ್ರೆ ಪ್ರಯಾಣದ ಜೊತೆ ಪುಸ್ತಕವೂ ಸಿಗುತ್ತೆ
Published on: 

ಪ್ರಮುಖ ಮುಖ್ಯಾಂಶಗಳು

  • ಆಟೋವನ್ನೇ ಮಿನಿ ಲೈಬ್ರರಿಯನ್ನಾಗಿ ಮಾಡಿದ ಡ್ರೈವರ್​
  • ಆಟೋದ ಎರಡೂ ಬದಿಯಲ್ಲಿ ಸಣ್ಣ-ಸಣ್ಣ ಗಿಡಗಳು
  • ಫಸ್ಟ್ ಏಡ್ ಬಾಕ್ಸ್, ಕುಡಿಯುವ ನೀರಿನ ವ್ಯವಸ್ಥೆ
Mini Library Auto: ಆಟೋ ಅಂದ್ರೆ ಪ್ರಯಾಣಿಕರನ್ನು ಒಂದು ಕಡೆಯಿಂದ ಮತ್ತೊಂದು ಕಡೆ ಕರೆದೊಯ್ಯೋ ವಾಹನ. ಆದ್ರೆ ಬಂಟ್ವಾಳದ ಸುಶಾನ್ ಅವರ ಆಟೋ ಮಾತ್ರ ಸಖತ್ ಡಿಫರೆಂಟ್. ಇಲ್ಲಿ ಪ್ರಯಾಣದ ಜೊತೆ ಪುಸ್ತಕ ಓದಬಹುದು, ಮೊಬೈಲ್ ಚಾರ್ಜ್ ಮಾಡಿಕೊಳ್ಳಬಹುದು, ನೀರು ಕುಡಿಯಬಹುದು. ತುರ್ತು ಸಂದರ್ಭಕ್ಕೆ ಫಸ್ಟ್ ಏಡ್ ಬಾಕ್ಸ್ ಕೂಡ ಇದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ.ಸಿ. ರೋಡ್ ಅಜ್ಜಿಬೆಟ್ಟಿ ನಿವಾಸಿ ಸುಶಾನ್ ತಮ್ಮ ಆಟೋವನ್ನೇ ಮಿನಿ ಲೈಬ್ರರಿಯನ್ನಾಗಿ ಮಾಡಿದ್ದಾರೆ. ಸಿಗ್ನಲ್ ಅಥವಾ ಟ್ರಾಫಿಕ್‌ನಲ್ಲಿ ಕಾಯುವಾಗ ಪ್ರಯಾಣಿಕರು ಮೊಬೈಲ್ ನೋಡುವ ಬದಲು ಪುಸ್ತಕ ಓದಲಿ ಅನ್ನೋದು ಅವರ ಉದ್ದೇಶ.

ಆಟೋದಲ್ಲಿ ಕಥೆ, ಕಾದಂಬರಿ ಪುಸ್ತಕಗಳು

ಚಾಲಕನ ಸೀಟಿನ ಹಿಂಭಾಗದಲ್ಲಿ ಮರದ ರ್ಯಾಕ್ ಅಳವಡಿಸಿದ್ದು, ಕಥೆ, ಕಾದಂಬರಿ, ದಿನಪತ್ರಿಕೆ ಹಾಗೂ ಪ್ರೇರಣಾದಾಯಕ ಪುಸ್ತಕಗಳನ್ನು ಇಟ್ಟಿದ್ದಾರೆ. ಪ್ರಯಾಣಿಕರು ಪ್ರಯಾಣದ ವೇಳೆ ತಮಗೆ ಇಷ್ಟವಾದ ಪುಸ್ತಕ ಓದಬಹುದು.

ಪರಿಸರ ಕಾಳಜಿಯ ಸಂದೇಶ

ಆಟೋದ ಎರಡೂ ಬದಿಯಲ್ಲಿ ಸಣ್ಣ ಗಿಡಗಳನ್ನೂ ಬೆಳೆಸಿದ್ದು, ಪರಿಸರ ಕಾಳಜಿಯ ಸಂದೇಶ ನೀಡಿದ್ದಾರೆ. ಜೊತೆಗೆ ಮೊಬೈಲ್ ಚಾರ್ಜಿಂಗ್, ಕುಡಿಯುವ ನೀರು, ಫಸ್ಟ್ ಏಡ್ ಬಾಕ್ಸ್ ಹಾಗೂ ಪೊಲೀಸ್, ಅಗ್ನಿಶಾಮಕ ದಳ ಮತ್ತು ಆಸ್ಪತ್ರೆಗಳ ತುರ್ತು ಸಹಾಯವಾಣಿ ಸಂಖ್ಯೆಗಳನ್ನೂ ಆಟೋದಲ್ಲಿ ಇಟ್ಟಿದ್ದಾರೆ.

ಮಕ್ಕಳಿಗಾಗಿ ಚಾಕೊಲೇಟ್

ಮಕ್ಕಳಿಗಾಗಿ ಚಾಕೊಲೇಟ್ ಮತ್ತು ಟಾಫಿಗಳ ಜಾರ್ ಕೂಡ ಇದೆ. ಬಾಲ್ಯದಿಂದಲೇ ಪುಸ್ತಕ ಓದುವ ಹವ್ಯಾಸ ಹೊಂದಿರುವ ಸುಶಾನ್, ಕನ್ನಡ ಚಿತ್ರರಂಗದಲ್ಲೂ ಕೆಲಸ ಮಾಡಿದ್ದಾರೆ. ಕೆಲವು ಸಿನಿಮಾಗಳಲ್ಲಿ ಸಹಾಯಕ ಕಲಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಅನುಭವವೂ ಅವರಿಗಿದೆ.
ಮೊಬೈಲ್‌ ಯುಗದಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿರುವಾಗ, ಪ್ರಯಾಣದ ಸಮಯವನ್ನೇ ಪುಸ್ತಕ ಓದಲು ಬಳಸಿಕೊಳ್ಳುವಂತೆ ಮಾಡಿರುವ ಸುಶಾನ್​ರ ಈ ವಿಭಿನ್ನ ಪ್ರಯತ್ನ ಇದೀಗ ಗಮನ ಸೆಳೆಯುತ್ತಿದೆ. (ಏಜೆನ್ಸೀಸ್​)