ಇವಿಎಂಗೆ ‘ಅತ್ತರ್’ ಘಮಲು, ಟಿಎಂಸಿಯಿಂದ ಮತದಾರರ ಮನೆಗೆ ಬೆಂಕಿ ಹಚ್ಚುವ ಬೆದರಿಕೆ... ಫಾಲ್ಟಾ ಚುನಾವಣೆ ರದ್ದು, ಹೊಸ ಡೇಟ್ ಫಿಕ್ಸ್! | Falta RePoll

Falta RePoll | ಫಾಲ್ಟಾ ಚುನಾವಣೆ ರದ್ದು, ಹೊಸ ಡೇಟ್ ಫಿಕ್ಸ್!
Falta RePoll | ಫಾಲ್ಟಾ ಚುನಾವಣೆ ರದ್ದು, ಹೊಸ ಡೇಟ್ ಫಿಕ್ಸ್!
Published on
Falta RePoll: ಪಶ್ಚಿಮ ಬಂಗಾಳದ ಫಾಲ್ಟಾ ವಿಧಾನಸಭಾ ಕ್ಷೇತ್ರದಲ್ಲಿ ಏಪ್ರಿಲ್ 29 ಮತ್ತು ಮೇ 2 ರಂದು ನಡೆದ ಮತದಾನದ ವೇಳೆ ಕಂಡುಬಂದ ಚುನಾವಣಾ ಅಕ್ರಮಗಳು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯ ಬುಡಮೇಲು ಮಾಡುವಂತಹ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಚುನಾವಣಾ ಆಯೋಗವು, ಕ್ಷೇತ್ರದ ಎಲ್ಲಾ 285 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸಲು ಅಧಿಕೃತವಾಗಿ ಆದೇಶ ಹೊರಡಿಸಿದೆ.
ಚುನಾವಣಾ ವೀಕ್ಷಕರು ಮತ್ತು ರಿಟರ್ನಿಂಗ್ ಅಧಿಕಾರಿಗಳು ನೀಡಿದ ವರದಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಮೇ 21 ರಂದು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಎಲ್ಲಾ ಸಹಾಯಕ ಮತಗಟ್ಟೆಗಳು ಸೇರಿದಂತೆ ಪೂರ್ಣ ಪ್ರಮಾಣದ ಮತದಾನ ನಡೆಯಲಿದೆ. ಈ ಮರು ಮತದಾನದ ಫಲಿತಾಂಶಕ್ಕಾಗಿ ಮೇ 24 ರಂದು ಪ್ರತ್ಯೇಕವಾಗಿ ಮತ ಎಣಿಕೆ ಪ್ರಕ್ರಿಯೆ ಜರುಗಲಿದೆ.

ಬೆಂಕಿ ಹಚ್ಚುವುದಾಗಿ ಟಿಎಂಸಿ ನಾಯಕರಿಂದ ಬೆದರಿಕೆ!..

ಮೇ 4 ರಂದು ಫಲಿತಾಂಶ ಪ್ರಕಟವಾದ ಬಳಿಕ ಭೀಕರ ಹಿಂಸಾಚಾರ ನಡೆಸುವುದಾಗಿ ಮತ್ತು ಮನೆಗಳಿಗೆ ಬೆಂಕಿ ಹಚ್ಚುವುದಾಗಿ ಟಿಎಂಸಿ ಅಭ್ಯರ್ಥಿ ಜೆಹಾಂಗೀರ್ ಖಾನ್ ಆಪ್ತ ಇಸ್ರಾಫಿಲ್ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನೂರಾರು ಗ್ರಾಮಸ್ಥರು ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಹಾಸಿಮ್‌ನಗರ ಗ್ರಾಮದಲ್ಲಿ ಬಿಜೆಪಿ ಧ್ವಜ ಹಿಡಿದ ಮಹಿಳೆಯರು ಸೇರಿದಂತೆ ನೂರಾರು ಜನರು ರಸ್ತೆ ತಡೆ ನಡೆಸಿ, ಪ್ರಾಣ ರಕ್ಷಣೆಗಾಗಿ ಮರು ಮತದಾನಕ್ಕೆ ಆಗ್ರಹಿಸಿದರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಜನರಿಗೆ ಭದ್ರತೆಯ ಭರವಸೆ ನೀಡಿದ್ದಾರೆ.
ಕ್ಷೇತ್ರದ ದೇವಿಪುರ ಸೇರಿದಂತೆ ಹಲವು ಭಾಗಗಳಲ್ಲಿ ಇವಿಎಂ ಯಂತ್ರಗಳನ್ನು ತಿರುಚಿದ ಆರೋಪಗಳು ಕೇಳಿಬಂದಿದ್ದು, ವಿಶೇಷವಾಗಿ ಬಿಜೆಪಿ ಬಟನ್​​ಗಳಿಗೆ ಟೇಪ್​ ಹಚ್ಚುವ ಮೂಲಕ ಮತದಾರರನ್ನು ತಡೆಯಲಾಗಿತ್ತು ಎಂಬ ಗಂಭೀರ ದೂರನ್ನು ಅಭ್ಯರ್ಥಿಗಳು ನೀಡಿದ್ದರು. ಇದರ ಬೆನ್ನಲ್ಲೇ ಫಾಲ್ಟಾದಲ್ಲಿ ಭಾರಿ ಪ್ರತಿಭಟನೆಗಳು ವ್ಯಕ್ತವಾಗಿದ್ದು, ಸ್ಥಳೀಯರು ಬೆದರಿಕೆ ಕರೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇಡೀ ವಿಧಾನಸಭಾ ಕ್ಷೇತ್ರಕ್ಕೇ ಮರುಚುನಾವಣೆ ಘೋಷಿಸಿರುವುದು ಅಪರೂಪದ ಕ್ರಮವಾಗಿದ್ದು, ಅಹಿತಕರ ಘಟನೆಗಳನ್ನು ತಡೆಯಲು ಮತ್ತು ಪಾರದರ್ಶಕತೆ ಕಾಪಾಡಲು ಆಯೋಗವು ಹೆಚ್ಚುವರಿ ಪೊಲೀಸ್ ವೀಕ್ಷಕರು ಮತ್ತು ಎಣಿಕೆ ವೀಕ್ಷಕರನ್ನು ನಿಯೋಜಿಸಿದೆ.
ಈ ಬಾರಿಯ ಚುನಾವಣೆಯಲ್ಲಿ ಮೃಗೀಯ ಎನ್ನಬಹುದಾದ ಹೊಸ ಮಾದರಿಯ ಅಕ್ರಮಗಳು ಬೆಳಕಿಗೆ ಬಂದಿವೆ. ಇವಿಎಂ ಬಟನ್‌ಗಳ ಮೇಲೆ ಅತ್ತರ್ ಸವರುವ ಮೂಲಕ, ಮತದಾರ ಯಾವ ಅಭ್ಯರ್ಥಿಗೆ ಮತ ಚಲಾಯಿಸಿದ್ದಾನೆ ಎಂಬುದನ್ನು ವಾಸನೆಯ ಮೂಲಕ ಗುರುತಿಸಿ ಇದಾದ ಬಳಿಕ ಅವರ ಮೇಲೆ ದಾಳಿ ಮಾಡುವ ಸಂಚು ರೂಪಿಸಲಾಗಿತ್ತು ಎಂಬ ಆಘಾತಕಾರಿ ದೂರುಗಳು ದಾಖಲಾಗಿವೆ. ಇವಿಎಂ ತಿರುಚುವಿಕೆ ಮತ್ತು ಮತದಾರರ ಗುರುತಿಸುವಿಕೆ ಸೇರಿದಂತೆ ಒಟ್ಟು 77 ಗಂಭೀರ ದೂರುಗಳನ್ನು ಸ್ವೀಕರಿಸಿದ ಚುನಾವಣಾ ಆಯೋಗವು ಮರು ಮತದಾನಕ್ಕೆ ಆದೇಶಿಸಿದೆ.
ಸಂವಿಧಾನದ 324 ನೇ ವಿಧಿಯ ಅಡಿಯಲ್ಲಿ ಲಭ್ಯವಿರುವ ಅಧಿಕಾರವನ್ನು ಬಳಸಿರುವ ಆಯೋಗವು, ಮತದಾನ ಮತ್ತು ಎಣಿಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಬೆದರಿಕೆ ಮುಕ್ತ ಮತ್ತು ಶಾಂತಿಯುತ ವಾತಾವರಣದಲ್ಲಿ ನಡೆಯುವಂತೆ ಖಚಿತಪಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net