ಟಿಎಂಸಿಗೆ ಬಿಗ್ ಶಾಕ್...ನಿಯಮಬಾಹಿರವಾಗಿ ಏನೂ ನಡೆದಿಲ್ಲ ಎನ್ನುತ್ತಾ ಮತ ಎಣಿಕೆ ಸಂಘರ್ಷಕ್ಕೆ ತೆರೆ ಎಳೆದ ಸುಪ್ರೀಂ ಕೋರ್ಟ್! | West Bengal Elections

West Bengal Elections | ಬಂಗಾಳ ಎಣಿಕೆ ಸಂಘರ್ಷಕ್ಕೆ ತೆರೆ ಎಳೆದ ಸುಪ್ರೀಂ ಕೋರ್ಟ್
West Bengal Elections | ಬಂಗಾಳ ಎಣಿಕೆ ಸಂಘರ್ಷಕ್ಕೆ ತೆರೆ ಎಳೆದ ಸುಪ್ರೀಂ ಕೋರ್ಟ್
Published on
ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ (West Bengal Elections) ಮತ ಎಣಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹೂಡಿದ್ದ ಕಾನೂನು ಸಮರಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ತೆರೆ ಬಿದ್ದಿದ್ದು, ಮತ ಎಣಿಕೆ ಕೇಂದ್ರಗಳಲ್ಲಿ ಕೇವಲ ಕೇಂದ್ರ ಸರ್ಕಾರಿ ಮತ್ತು ಸಾರ್ವಜನಿಕ ವಲಯದ ನೌಕರರನ್ನು ಮಾತ್ರ ಮೇಲ್ವಿಚಾರಕರನ್ನಾಗಿ ನೇಮಿಸಬೇಕು ಎಂಬ ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.
ಶನಿವಾರ ನಡೆದ ವಿಶೇಷ ವಿಚಾರಣೆಯಲ್ಲಿ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ಈ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಆಯೋಗವು ಹೊರಡಿಸಿರುವ ಸುತ್ತೋಲೆಯಲ್ಲಿ ಯಾವುದೇ ರೀತಿಯ ಕಾನೂನುಬಾಹಿರ ಅಂಶಗಳಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಕೇಂದ್ರ ಸರ್ಕಾರಿ ಸಿಬ್ಬಂದಿಯನ್ನು ಎಣಿಕೆ ಕಾರ್ಯಕ್ಕೆ ನಿಯೋಜಿಸುವುದು ನಿಯಮಗಳಿಗೆ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದೆ. ಚುನಾವಣಾ ಪ್ರಕ್ರಿಯೆಯ ಆಡಳಿತಾತ್ಮಕ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ ನ್ಯಾಯಪೀಠವು, ಕಲ್ಕತ್ತಾ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ.
ಮತಗಟ್ಟೆಗೆ ತನಗೆ ಬೇಕಾದ ಅಧಿಕಾರಿಗಳನ್ನು ಆಯ್ಕೆ ಮಾಡುವ ಸಂಪೂರ್ಣ ಹಕ್ಕು ಚುನಾವಣಾ ಆಯೋಗಕ್ಕಿದ್ದು, ಮತ ಎಣಿಕೆ ಮೇಲ್ವಿಚಾರಕರು ಮತ್ತು ಎಣಿಕೆ ಏಜೆಂಟರು ಇಬ್ಬರೂ ಕೇಂದ್ರ ಸರ್ಕಾರಿ ಅಧಿಕಾರಿಗಳಾಗಿರುವ ಕಾರಣಕ್ಕಾಗಿ ಆಯೋಗದ ಸುತ್ತೋಲೆಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಚುನಾವಣಾ ಆಯೋಗದ ಪರ ವಕೀಲರು, ಏಪ್ರಿಲ್ 13 ರಂದು ಹೊರಡಿಸಲಾದ ಸುತ್ತೋಲೆಯನ್ನು ಅಕ್ಷರಶಃ ಜಾರಿಗೆ ತರಲಾಗುವುದು ಎಂದು ನೀಡಿದ ಹೇಳಿಕೆಯನ್ನು ನ್ಯಾಯಾಲಯವು ದಾಖಲಿಸಿಕೊಂಡಿದೆ. ಇದರ ಹೊರತಾಗಿ ಈ ವಿಷಯದಲ್ಲಿ ಯಾವುದೇ ಹೆಚ್ಚಿನ ನಿರ್ದೇಶನಗಳನ್ನು ನೀಡುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ವ್ಯವಸ್ಥೆ ಪಾರದರ್ಶಕತೆಯಿಂದ ಕೂಡಿದೆ ಎಂದ ಆಯೋಗ!

ಈ ವೇಳೆ ಚುನಾವಣಾ ಆಯೋಗವು ತನ್ನ ನಿಲುವನ್ನು ಸಮರ್ಥಿಸಿಕೊಂಡಿದ್ದು, ವ್ಯವಸ್ಥೆಯು ಪಾರದರ್ಶಕತೆಯಿಂದ ಕೂಡಿದೆ ಎಂದು ಹೇಳಿದೆ. ಎಣಿಕೆ ಮೇಲ್ವಿಚಾರಕರು ಕೇಂದ್ರ ಸರ್ಕಾರದಿಂದ ಬಂದಿದ್ದರೆ, ಎಣಿಕೆ ಏಜೆಂಟ್​ರನ್ನು ರಾಜ್ಯ ಸರ್ಕಾರದಿಂದ ಆಯ್ಕೆ ಮಾಡಲಾಗುತ್ತದೆ. ಈ ಮೂಲಕ ಎಣಿಕೆ ಪ್ರಕ್ರಿಯೆಯಲ್ಲಿ ರಾಜ್ಯದ ಕನಿಷ್ಠ ಒಬ್ಬ ಅಧಿಕಾರಿಯಾದರೂ ಇರುವುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ ಎಂದು ಆಯೋಗವು ಸುಪ್ರೀಂ ಕೋರ್ಟ್‌ಗೆ ವಿವರಿಸಿದೆ.

ಟಿಎಂಸಿ ಆರೋಪವೇನು..?

ರಾಜ್ಯ ಸರ್ಕಾರಿ ನೌಕರರನ್ನು ಎಣಿಕೆ ಪ್ರಕ್ರಿಯೆಯಿಂದ ಹೊರಗಿಟ್ಟಿರುವುದು ನಿಷ್ಪಕ್ಷಪಾತ ತತ್ವಕ್ಕೆ ವಿರುದ್ಧವಾಗಿದೆ ಎಂಬುದು ಟಿಎಂಸಿಯ ಮುಖ್ಯ ವಾದವಾಗಿದ್ದು, ಈ ವಾದವನ್ನು ತಿರಸ್ಕರಿಸಿರುವ ಕೊಲ್ಕತ್ತಾ ಹೈಕೋರ್ಟ್, ಯಾರನ್ನು ನೇಮಿಸಿಕೊಳ್ಳಬೇಕು ಎಂಬುದು ಸಂಪೂರ್ಣವಾಗಿ ಚುನಾವಣಾ ಆಯೋಗದ ವಿವೇಚನೆಗೆ ಬಿಟ್ಟ ವಿಚಾರವಾಗಿದ್ದು, ಇದರಲ್ಲಿ ಯಾವುದೇ ಕಾನೂನುಬಾಹಿರ ಅಂಶಗಳಿಲ್ಲ ಎಂದು ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರಿ ನೌಕರರು ರಾಜಕೀಯ ಪ್ರಭಾವಕ್ಕೆ ಒಳಗಾಗುತ್ತಾರೆ ಎಂಬ ಶಂಕೆಗೆ ಯಾವುದೇ ಬಲವಾದ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ತೀರ್ಪನ್ನು ಸ್ವಾಗತಿಸಿರುವ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್, ಚುನಾವಣಾ ಪ್ರಕ್ರಿಯೆಯಲ್ಲಿ ಸಿಬ್ಬಂದಿಗಳ ನಿಯೋಜನೆ ಆಯೋಗದ ಹಕ್ಕು ಎಂದು ಪ್ರತಿಪಾದಿಸಿದ್ದಾರೆ.

ಈ ನಡುವೆ, ರಾಜ್ಯದಲ್ಲಿನ ಚುನಾವಣಾ ವಾತಾವರಣವು ಸಾಕಷ್ಟು ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಸಾಕ್ಷಿಯಾಗಿದೆ. ಕೇಂದ್ರ ಪಡೆಗಳು ಮತ್ತು ಹೊರ ರಾಜ್ಯದ ಅಧಿಕಾರಿಗಳನ್ನು ಬಳಸಿ ಟಿಎಂಸಿ ಕಾರ್ಯಕರ್ತರನ್ನು ಗುರಿಯಾಗಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ. ಸ್ಥಳೀಯ ಪೊಲೀಸರ ಅರಿವಿಲ್ಲದೆಯೇ ಸಿಆರ್‌ಪಿಎಫ್ ಸಿಬ್ಬಂದಿ ಕಾರ್ಯಕರ್ತರ ಮನೆಗಳಿಗೆ ನುಗ್ಗುತ್ತಿದ್ದಾರೆ ಎಂಬುದು ಟಿಎಂಸಿ ನಾಯಕರ ವಾದವಾಗಿದೆ(ಏಜೆನ್ಸೀಸ್​​).

Related Stories

Boiled Sambar
35 ರಲ್ಲಿ 31 ಕೌನ್ಸಿಲರ್‌ಗಳು ಪಕ್ಷೇತರ, ಕೋರ್ಟ್ ಮೊರೆ, ರಾತ್ರಿ 10 ಗಂಟೆಯವರೆಗೂ ಮತದಾನ!...ಥ್ರಿಲ್ಲರ್ ಸಿನಿಮಾವನ್ನೇ ಮೀರಿಸುವಂತಿದೆ ರಾಜಸ್ಥಾನದ ಚುನಾವಣೆ | Tijara Election
Delhi riots case: Sharjeel Imam granted interim bail to attend a wedding ceremony.
Waris Pathan
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net