ಅಸಮಾಧಾನದ ನಡುವೆ ಸಂಪುಟ ಸಭೆ ಮುಕ್ತಾಯ: ನಾಳೆಯಿಂದಲೇ ಬರ ಅಧ್ಯಯನ ನಡೆಸಿ, ವರದಿ ಸಲ್ಲಿಸಿ; 'ಮಹಿಳೆ' ಗೆ ಸಚಿವ ಸ್ಥಾನದ ಭರವಸೆ ನೀಡಿದ ಸಿಎಂ ಡಿಕೆಶಿ! Cabinet Meeting

ನೂತನ ಸಚಿವರೊಂದಿಗೆ ಸಿಎಂ ಸಂಪುಟ ಸಭೆ
ನೂತನ ಸಚಿವರೊಂದಿಗೆ ಸಿಎಂ ಸಂಪುಟ ಸಭೆ
Published on
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಪುಟ ವಿಸ್ತರಣೆಯ ಸಂಭ್ರಮ ಹಾಗೂ ಅಸಮಾಧಾನದ ನಡುವೆಯೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ನೂತನ ಸಚಿವರಿಗೆ ಮಹತ್ವದ ಜವಾಬ್ದಾರಿಯನ್ನು ವಹಿಸಿದ್ದಾರೆ.
ಹೊಸದಾಗಿ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ 19 ಜನರ ಜೊತೆ ಬರೋಬ್ಬರಿ ಎರಡು ಗಂಟೆಗಳ ಕಾಲ ಸುದೀರ್ಘ ಸಂಪುಟ ಸಭೆ(Cabinet Meeting) ನಡೆಸಿರುವ ಸಿಎಂ, ನಾಳೆಯಿಂದಲೇ ಎಲ್ಲಾ ಸಚಿವರು ಜಿಲ್ಲೆಗಳಿಗೆ ತೆರಳಿ ಬರ ಅಧ್ಯಯನ ಹಾಗೂ ಫೀಲ್ಡ್ ವಿಸಿಟ್ ಮಾಡುವಂತೆ ಖಡಕ್ ಸೂಚನೆ ನೀಡಿದ್ದಾರೆ.

ಸಚಿವ ಸಂಪುಟದಲ್ಲಿ ಹೊಸಬರಿಗೆ ಮಣೆ:

ಸಚಿವ ಸಂಪುಟಕ್ಕೆ 19 ಜನ ಹೊಸಬರನ್ನು ಸೇರಿಸಿಕೊಳ್ಳಲಾಗಿದ್ದು, ಎಲ್ಲರಿಗೂ ಅವಕಾಶ ಸಿಗುವ ಹಂತ ಹಂತದ ರಾಜಕೀಯ ತಂತ್ರದ ಬಗ್ಗೆಯೂ ಮಾತನಾಡಲಾಗಿದೆ. ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡು, ನಾವು ಮೊದಲ ಬಾರಿಗೆ ಶಾಸಕರಾದಾಗಲೂ ಹಿರಿಯರು ಮಂತ್ರಿಗಳಾಗಿರಲಿಲ್ಲ, ನಾವೂ ಕೂಡ ತಾಳ್ಮೆಯಿಂದ ಕಾದಿದ್ದೆವು.
ಹೈಕಮಾಂಡ್ ತೀರ್ಮಾನದಂತೆ ಎಲ್ಲವೂ ನಡೆಯುತ್ತದೆ ಎಂದು ಅಸಮಾಧಾನಿತ ಶಾಸಕರಿಗೆ ಸಮಾಧಾನ ಹೇಳುವ ಪ್ರಯತ್ನ ಮಾಡಿರುವ ಸಿಎಂ, ಸದ್ಯದಲ್ಲೇ ಮಹಿಳಾ ಸಚಿವರ ನೇಮಕ ಮಾಡುವುದಾಗಿಯೂ ಭರವಸೆ ನೀಡಿದ್ದಾರೆ.

ಫೀಲ್ಡ್ ವಿಸಿಟ್ ಮಾಡಿ ವರದಿ ಕೊಡಿ: ಸಿಎಂ ಟಾಸ್ಕ್

ವಿರೋಧ ಪಕ್ಷಗಳು ರಾಜ್ಯದಲ್ಲಿ ಬರ ಘೋಷಣೆ ಮಾಡುವಂತೆ ನಿರಂತರವಾಗಿ ಒತ್ತಡ ಹೇರುತ್ತಿರುವ ಬೆನ್ನಲ್ಲೇ, ಸರ್ಕಾರ ಅಲರ್ಟ್ ಆಗಿದೆ. ಈ ಬಗ್ಗೆ ಮಾತನಾಡಿದ ನಾಯಕರು, ವಿಪಕ್ಷಗಳ ನಾಯಕರು ಅನುಭವಸ್ಥರು, ಅವರ ಒತ್ತಡಕ್ಕೆ ಹಾಗೂ ಪ್ರಶ್ನೆಗಳಿಗೆ ಉತ್ತರ ನೀಡಲು ಸಚಿವರು ನಾಳೆಯಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು.
ನಾಡಿದ್ದಿನಿಂದಲೇ ಜಿಲ್ಲಾ ಪ್ರವಾಸ ಕೈಗೊಂಡು, ಬರ ಪರಿಸ್ಥಿತಿ ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಖುದ್ದಾಗಿ ಪರಿಶೀಲಿಸಿ ಕಂದಾಯ ಸಚಿವರಿಗೆ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿದ್ದಾರೆ. ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ನೀರಿನ ಸಮಸ್ಯೆ ಹಾಗೂ ಮಳೆ ಅನಾಹುತಗಳ ವರದಿ ಪಡೆಯುವಂತೆ ಸೂಚಿಸಲಾಗಿದೆ.

ಸಿದ್ದರಾಮಯ್ಯ ಗೈರು; ಅಸಮಾಧಾನ ವಾದಕ್ಕೆ ಸ್ಪಷ್ಟನೆ!

ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರಾಗಿರುವುದು ಹಾಗೂ ಅವರು ಅಸಮಾಧಾನಗೊಂಡಿದ್ದಾರೆ ಎಂಬ ವದಂತಿಗಳಿಗೆ ತೆರೆ ಎಳೆದ ಸಿಎಂ ಡಿ.ಕೆ. ಶಿವಕುಮಾರ್​ ಇವತ್ತು ಅವರ ಹುಟ್ಟಿದ ದಿನ, ಅವರಿಗೆ ಶುಭ ಹಾರೈಸಿದ್ದೇನೆ.
ನಾವೆಲ್ಲರೂ ಒಂದೇ ತಂಡ, ಸಿದ್ದರಾಮಯ್ಯ ಹಾಗೂ ನನ್ನ ಅಭಿಮಾನಿಗಳು ಎಲ್ಲರೂ ಒಂದೇ ಕುಟುಂಬದವರು. ತಾಂತ್ರಿಕ ಕಾರಣಗಳಿಂದ ಕೆಲ ವ್ಯತ್ಯಾಸಗಳಾಗಿರಬಹುದು, ಆದರೆ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.

ವಿಪಕ್ಷಗಳ ಟೀಕೆಗೆ ತಿರುಗೇಟು!

ಸಚಿವರಿಗೆ ಖಾತೆ ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಬಿಜೆಪಿ ಮಾಡುತ್ತಿರುವ ಟೀಕೆಗಳಿಗೂ ತಿರುಗೇಟು ನೀಡಿದ್ದಾರೆ. ನನ್ನ ಮೇಲೂ ಕೇಸ್ ಇದೆ, ಯಾರ್ಯಾರ ಮೇಲೆ ಏನೇನಿದೆ ಎಂದು ಮಾತನಾಡಬೇಕೆ? ಎಂದು ಪ್ರಶ್ನಿಸುವ ಮೂಲಕ ವಿಪಕ್ಷಗಳ ವಾಗ್ದಳಿಗೆ ತಕ್ಕ ಉತ್ತರ ನೀಡಿದ್ದಾರೆ.
ಕಾವೇರಿ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ತಜ್ಞರ ಜೊತೆ ಚರ್ಚಿಸಿ ಮುಂದಿನ ಹೆಜ್ಜೆ ಇಡುವುದಾಗಿ ತಿಳಿಸಲಾಗಿದೆ. ಒಟ್ಟಿನಲ್ಲಿ ಹೊಸ ಸಚಿವರಿಗೆ ಮೊದಲ ದಿನವೇ ಬಿರುಸಿನ ಕೆಲಸದ ಟಾಸ್ಕ್ ನೀಡುವ ಮೂಲಕ ಸರ್ಕಾರ ಆಡಳಿತದ ಚುಕ್ಕಾಣಿಯನ್ನು ಚುರುಕುಗೊಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net