ಉಪ ಸಭಾಧ್ಯಕ್ಷ ಬದಲಿಗೆ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡ ಶಾಸಕ ಎ.ಎಸ್.ಪೊನ್ನಣ್ಣ | A S Ponnanna

ಕಾಂಗ್ರೆಸ್ ಶಾಸಕ ಎ.ಎಸ್.ಪೊನ್ನಣ್ಣ
ಕಾಂಗ್ರೆಸ್ ಶಾಸಕ ಎ.ಎಸ್.ಪೊನ್ನಣ್ಣ
Published on
ಬೆಂಗಳೂರು: ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಕೊಡಗು ಜಿಲ್ಲೆಯ ವಿರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಎ.ಎಸ್.ಪೊನ್ನಣ್ಣ(A S Ponnanna) ಅವರು, ಸಿಎಂ ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸಿಎಂ ಕಾನೂನು ಸಲಹೆಗಾರರಾಗಿದ್ದ ಪೊನ್ನಣ್ಣ ಅವರು, ಸಚಿವ ಸಂಪುಟ ವಿಸ್ತರಣೆ ಬಳಿಕ ಸಚಿವ ಸ್ಥಾನ ನಿರೀಕ್ಷೆಯಲ್ಲಿದ್ದರು. ಆದರೆ ಎರಡು ತಿಂಗಳ ಹಿಂದೆ ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಕ್ರಿಯೆ ನಡೆದು ಸರ್ಕಾರ ಬದಲಾಯಿತು. ಡಿಸಿಎಂ ಆಗಿದ್ದ ಡಿ.ಕೆ.ಶಿವಕುಮಾರ್ ಅವರು ಜೂ. 04ರಂದು ಸಿಎಂ ಆಗಿ ಅಧಿಕಾರ ವಹಿಸಿಕೊಂಡರು.
ಸಿಎಂ ಡಿ.ಕೆ.ಶಿವಕುಮಾರ್ ಅಧಿಕಾರ ವಹಿಸಿಕೊಂಡು ಎರಡು ತಿಂಗಳ ಬಳಿಕ ಇತ್ತೀಚೆಗೆ ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, 19 ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸಿದರು. ಆದರೆ ಎ.ಎಸ್.ಪೊನ್ನಣ್ಣ ಅವರಿಗೆ ಸ್ಥಾನ ಸಿಗಲಿಲ್ಲ. ಆದರ ಬದಲಿಗೆ ಹೈಕಮಾಂಡ್ ಅವರನ್ನು ವಿಧಾನಸಭೆಯ ಉಪಸಭಾದ್ಯಕ್ಷ ಮಾಡಲು ಮುಂದಾಗಿತ್ತು. ಹೈಕಮಾಂಡ್ ಕಳುಹಿಸಿದ ಪಟ್ಟಿಯಲ್ಲಿ ಅವರನ್ನು ಉಪಾಸಭಾಧ್ಯಕ್ಷರನ್ನಾಗಿ ನೇಮಿಸಲು ಆದೇಶಿಸಲಾಗಿತ್ತು.
ಆದರೆ ಇಂದು(ಆ. 12) ಸಿಎಂ ಡಿ.ಕೆ.ಶಿವಕುಮಾರ್ ಅವರ ಆದೇಶದ ಮೇರೆಗೆ ರಾಜ್ಯಪಾಲರು ಥಾವರ್ ಚಂದ್ ಗೆಹ್ಲೋಟ್ ಅವರು, ಎ.ಎಸ್.ಪೊನ್ನಣ್ಣ ಅವರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ ನೀಡಿ ಸಿಎಂ ರಾಜಕೀಯ ಸಲಹೆಗಾರರಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ. 

ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷರಾಗಿ ದೇಶಪಾಂಡೆ

ಇನ್ನೂ ರಾಜ್ಯದಲ್ಲಿ ಕಳೆದ 30ಕ್ಕೂ ಹೆಚ್ಚು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಚಿವ ಸಂಪುಟದಿಂದ ಬ್ರಾಹ್ಮಣರನ್ನು ಕೈಬಿಟ್ಟಿರುವ ಹಿನ್ನೆಲೆ ಮತ್ತು ಸಂಪುಟದಲ್ಲಿ ಸ್ಥಾನ ವಂಚಿತರಾಗಿರುವ ಹಿರಿಯ ಕಾಂಗ್ರೆಸ್ ನಾಯಕ ಆರ್.ವಿ.ದೇಶಪಾಂಡೆಯವರನ್ನು ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ವಿಧಾನಸಭೆ ಉಪಾಧ್ಯಕ್ಷರಾಗಿ ಮಂಕಾಳ್ ವೈದ್ಯ

ಇನ್ನೂ ವಿಧಾನಸಭಾ ಉಪಾಧ್ಯಕ್ಷ ಸ್ಥಾನಕ್ಕೆ ಸಚಿವ ಸ್ಥಾನದಿಂದ ವಂಚಿತರಾಗಿರುವ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಕ್ಷೇತ್ರದ ಶಾಸಕ ಮಂಕಾಳ ವೈದ್ಯ ಅವರಿಗೆ ನೀಡಲಾಗುತ್ತಿದೆ ಎನ್ನಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net