ಯಾರೋ ಹೇಳಿದ ಸುಳ್ಳು ಸುದ್ದಿ ನಂಬಬೇಡಿ: ನಿರೂಪಕರ ಪ್ರಶ್ನೆಗೆ ಖಡಕ್​ ಉತ್ತರ ನೀಡಿದ ವೈಭವ್ ಸೂರ್ಯವಂಶಿ! Vaibhav Sooryavanshi

ಯಾರೋ ಹೇಳಿದ ಸುಳ್ಳು ಸುದ್ದಿ ನಂಬಬೇಡಿ: ನಿರೂಪಕರ ಪ್ರಶ್ನೆಗೆ ಖಡಕ್​ ಉತ್ತರ ನೀಡಿದ ವೈಭವ್ ಸೂರ್ಯವಂಶಿ! Vaibhav Sooryavanshi
ಯಾರೋ ಹೇಳಿದ ಸುಳ್ಳು ಸುದ್ದಿ ನಂಬಬೇಡಿ: ನಿರೂಪಕರ ಪ್ರಶ್ನೆಗೆ ಖಡಕ್​ ಉತ್ತರ ನೀಡಿದ ವೈಭವ್ ಸೂರ್ಯವಂಶಿ! Vaibhav Sooryavanshi
Published on

ಪ್ರಮುಖ ಮುಖ್ಯಾಂಶಗಳು

  • ಫೈನಲ್ ಗೆಲುವಿನ ಬೆನ್ನಲ್ಲೇ ವೈಭವ್ ಸೂರ್ಯವಂಶಿ ಮಾಸ್ ಸ್ಟೇಟ್‌ಮೆಂಟ್
  • ತಮ್ಮ ಮೇಲಿನ ಅಪಪ್ರಚಾರಕ್ಕೆ ಸಂದರ್ಶನದಲ್ಲೇ ತಿರುಗೇಟು ನೀಡಿದ ವೈಭವ್ ಸೂರ್ಯವಂಶಿ
  • ನಾನು ಏಕದಿನದಲ್ಲೂ ಧೂಳೆಬ್ಬಿಸಬಲ್ಲೆ ಎಂದು ವಿಮರ್ಶಕರಿಗೆ ವೈಭವ್ ಖಡಕ್ ಉತ್ತರ
Vaibhav Sooryavanshi : ಯುವ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ದಂಬುಲ್ಲಾದಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಎ ತಂಡದ ವಿರುದ್ಧ ಕೇವಲ 29 ಎಸೆತಗಳಲ್ಲಿ ಭರ್ಜರಿ 94 ರನ್ ಚಚ್ಚಿದ ಅವರು, ಭಾರತ ಎ ತಂಡದ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಸೂರ್ಯವಂಶಿ ಅವರ ಈ ಅದ್ಭುತ ಇನ್ನಿಂಗ್ಸ್ ನೆರವಿನಿಂದ ಭಾರತ ಎ ತಂಡವು 378 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಎ ತಂಡವು ನಿಗದಿತ ಓವರ್‌ಗಳಲ್ಲಿ ಗುರಿ ತಲುಪಲಾಗದೆ 66 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತು.
ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ವೈಭವ್ ಸೂರ್ಯವಂಶಿ ಅವರಿಗೆ 'ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ನಡೆದ ಸಂದರ್ಶನದಲ್ಲಿ ಒಂದು ಸ್ವಾರಸ್ಯಕರ ಘಟನೆ ಕೂಡ ಜರುಗಿತು.
ನಿರೂಪಕರು ವೈಭವ್ ಅವರ ವಯಸ್ಸನ್ನು ಉಲ್ಲೇಖಿಸಿ, ನೀವು ಟಿ20 ಕ್ರಿಕೆಟ್‌ನಲ್ಲಿ ಅದ್ಭುತವಾಗಿ ಆಡುತ್ತಿದ್ದೀರಿ, ಆದರೆ ಏಕದಿನ ಪಂದ್ಯಗಳಲ್ಲಿ ನೀವು ಹೆಚ್ಚು ಆಡಿಲ್ಲ. ಈ ಟೂರ್ನಿಯಿಂದ ನೀವು ಏನು ಕಲಿತಿದ್ದೀರಿ? ಎಂದು ಪ್ರಶ್ನಿಸಿದಾಗ, ವೈಭವ್ ಅವರು ಆ ಕಾಮೆಂಟ್ ಅನ್ನು ಸಂಪೂರ್ಣವಾಗಿ ನಿರಾಕರಿಸುವ ಮೂಲಕ ನಿರೂಪಕರಿಗೆ ತಕ್ಕ ಉತ್ತರವನ್ನು ನೀಡಿ ಎಲ್ಲರ ಗಮನವನ್ನು ತಮ್ಮತ್ತ ಸೆಳೆದರು.

ಅಷ್ಟಕ್ಕೂ ವೈಭವ್​ ಹೇಳಿದ್ದೇನು?

ನಿರೂಪಕರ ಪ್ರಶ್ನೆಗೆ ಖಾರವಾಗಿಯೇ ಪ್ರತಿಕ್ರಿಯಿಸಿದ ವೈಭವ್ ಸೂರ್ಯವಂಶಿ, ನಾನು ಏಕದಿನ ಮಾದರಿಯಲ್ಲೂ ಸಹ ಸಾಕಷ್ಟು ಪಂದ್ಯಗಳನ್ನು ಆಡಿದ್ದೇನೆ, ಆದರೆ ಈ ವಿಷಯ ಬಹಳಷ್ಟು ಜನರಿಗೆ ತಿಳಿದಿಲ್ಲವಷ್ಟೇ, ಹಾಗಾಗಿ ನಾನು ಏಕದಿನ ಪಂದ್ಯಗಳನ್ನು ಆಡಿಲ್ಲ ಎಂಬುದು ಕೇವಲ ಒಂದು ವದಂತಿ ಎಂದು ಹೇಳುವ ಮೂಲಕ ಆ ಮಾತನ್ನು ತಳ್ಳಿಹಾಕಿದರು. ಇದರೊಂದಿಗೆ, ದಂಬುಲ್ಲಾ ಪಿಚ್ ಹಾಗೂ ಅಲ್ಲಿನ ಹವಾಮಾನದ ಪರಿಸ್ಥಿತಿಗಳು ತಮಗೆ ಸಂಪೂರ್ಣ ಹೊಸ ಅನುಭವವನ್ನು ನೀಡಿವೆ ಮತ್ತು ಅಂತಹ ಕಠಿಣ ಪರಿಸ್ಥಿತಿಗಳಲ್ಲಿ ಬ್ಯಾಟಿಂಗ್ ಮಾಡಿದ್ದು ತಮಗೆ ಅತ್ಯಂತ ಸಂತಸ ತಂದಿದೆ ಎಂದು ವೈಭವ್​ ಅವರು ಇದೇ ವೇಳೆ ಹಂಚಿಕೊಂಡರು.
ತ್ರಿಕೋನ ಸರಣಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ವೈಭವ್ ಸೂರ್ಯವಂಶಿ ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ದೊಡ್ಡ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಆ ನಾಲ್ಕು ಪಂದ್ಯಗಳಲ್ಲಿ ಅವರು ಕೇವಲ 117 ರನ್ ಗಳಿಸಲಷ್ಟೇ ಶಕ್ತರಾಗಿದ್ದರು ಮತ್ತು ಅವರ ಬ್ಯಾಟ್‌ನಿಂದ ಒಂದೂ ಅರ್ಧಶತಕ ಮೂಡಿಬಂದಿರಲಿಲ್ಲ. ಅಷ್ಟೇ ಅಲ್ಲದೆ, ಆ ಇಡೀ ಪಂದ್ಯಗಳಲ್ಲಿ ಅವರು ಬಾರಿಸಿದ್ದು ಕೇವಲ 3 ಸಿಕ್ಸರ್‌ಗಳನ್ನು ಮಾತ್ರವಾಗಿತ್ತು. ಆದರೆ, ಮಹತ್ವದ ಫೈನಲ್ ಪಂದ್ಯದಲ್ಲಿ ತಮ್ಮ ಆಟದ ಶೈಲಿಯನ್ನೇ ಸಂಪೂರ್ಣವಾಗಿ ಬದಲಾಯಿಸಿದ ಅವರು, ಎದುರಾಳಿ ಬೌಲರ್‌ಗಳ ಮೇಲೆ ಆಕ್ರಮಣಕಾರಿ ಬ್ಯಾಟಿಂಗ್ ದಾಳಿ ನಡೆಸಿದರು. ಶ್ರೀಲಂಕಾ ಎ ತಂಡದ ವಿರುದ್ಧ ಕೇವಲ 29 ಎಸೆತಗಳಲ್ಲಿ 94 ರನ್ ಚಚ್ಚಿದ ಅವರ ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಹಾಗೂ 8 ಬೃಹತ್ ಸಿಕ್ಸರ್‌ಗಳು ಒಳಗೊಂಡಿದ್ದವು.
ವಿಶೇಷವೆಂದರೆ, ಈ ಪಂದ್ಯದಲ್ಲಿ ಅವರು ಕೇವಲ 11 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸುವ ಮೂಲಕ, ಲಿಸ್ಟ್-ಎ (List-A) ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ಐತಿಹಾಸಿಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಫೈನಲ್ ಪಂದ್ಯದ ಈ ಸ್ಮರಣೀಯ ಇನ್ನಿಂಗ್ಸ್‌ನೊಂದಿಗೆ ವೈಭವ್ ಸೂರ್ಯವಂಶಿ ಅವರು ಒಟ್ಟು 211 ರನ್‌ಗಳೊಂದಿಗೆ ತಮ್ಮ ತ್ರಿಕೋನ ಸರಣಿಯ ಅಭಿಯಾನವನ್ನು ಮುಗಿಸಿದರು. ಆಡಿದ ಒಟ್ಟು ಐದು ಪಂದ್ಯಗಳಿಂದ 211 ರನ್ ಕಲೆಹಾಕಿದ ಅವರು, ಇಡೀ ಟೂರ್ನಿಯಲ್ಲಿ ಒಟ್ಟು 11 ಸಿಕ್ಸರ್‌ಗಳನ್ನು ಸಿಡಿಸಿ ಮಿಂಚಿದ್ದಾರೆ, (ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net