ಒಂದೇ ಒಂದು ಸೋಲಿನಿಂದ ಭಾರತದ ಸೆಮೀಸ್ ಹಾದಿ ಕಠಿಣ: ಈ ಪವಾಡ ನಡೆದ್ರೆ ಮಾತ್ರ ಟ್ರೋಫಿ ಆಸೆ ಜೀವಂತ! Team India

ಒಂದೇ ಒಂದು ಸೋಲಿನಿಂದ ಭಾರತದ ಸೆಮೀಸ್ ಹಾದಿ ಕಠಿಣ! Team India
ಒಂದೇ ಒಂದು ಸೋಲಿನಿಂದ ಭಾರತದ ಸೆಮೀಸ್ ಹಾದಿ ಕಠಿಣ! Team India
Published on

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾದ ಗೆಲುವಿನ ಓಟಕ್ಕೆ ಬ್ರೇಕ್​ ಬಿದ್ದಿದೆ
  • ತಮ್ಮ ಮೊದಲ ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸೋಲುಂಡಿದೆ
  • ಈ ಒಂದು ಹೀನಾಯ ಸೋಲಿನಿಂದ ಟಿ20 ವಿಶ್ವಕಪ್​ನಲ್ಲಿ ಸೆಮೀಸ್​ ಹಾದಿ ಕಠಿಣವಾಗಿದೆ
Team India : ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾದ ಗೆಲುವಿನ ಓಟಕ್ಕೆ ಬ್ರೇಕ್​ ಬಿದ್ದಿದೆ. ಸತತ ಗೆಲುವುಗಳೊಂದಿಗೆ ಹೊಸ ಹುರುಪಿನಲ್ಲಿದ್ದ ಭಾರತಕ್ಕೆ ನಿನ್ನೆ (ಫೆ.22) ನಡೆದ ಪಂದ್ಯ ಭಾರಿ ಆಘಾತ ನೀಡಿದೆ.
ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ತಮ್ಮ ಮೊದಲ ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸೋಲುಂಡಿದೆ. ಇದು ವಿರೋಚಿತ ಸೋಲಲ್ಲ ಬದಲಾಗಿ ಹೀನಾಯ ಸೋಲು ಎಂಬದನ್ನು ಭಾರತದ ಕ್ರಿಕೆಟ್​ ಪ್ರೇಮಿಗಳು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಒಂದು ಹೀನಾಯ ಸೋಲಿನಿಂದ ಟಿ20 ವಿಶ್ವಕಪ್​ನಲ್ಲಿ ಸೆಮಿಫೈನಲ್​ಗೆ ಅರ್ಹತೆ ಪಡೆಯುವ ಟೀಮ್​ ಇಂಡಿಯಾದ ಹಾದಿ ದುರ್ಗಮವಾಗಿದೆ. 76 ರನ್‌ಗಳ ಭಾರಿ ಅಂತರದಲ್ಲಿ ಸೋಲುಂಡ ಪರಿಣಾಮ ತಂಡದ ನೆಟ್​ ರನ್​ ರೇಟ್​ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಈಗ, ಸೆಮಿಫೈನಲ್ ತಲುಪಲು ಟೀಮ್ ಇಂಡಿಯಾ ಉಳಿದ ಎರಡೂ ಪಂದ್ಯಗಳಲ್ಲಿ ಭಾರಿ ಅಂತರದಲ್ಲಿ ಗೆಲುವು ಸಾಧಿಸಬೇಕಾಗಿದೆ.
ಹೌದು, 76 ರನ್‌ಗಳ ಭಾರಿ ಅಂತರದ ಸೋಲು ಭಾರತ ತಂಡದ ನೆಟ್​ ರನ್​ ರೇಟ್​ ಮೇಲೆ ತೀವ್ರ ಪರಿಣಾಮ ಬೀರಿದೆ. ಟೀಮ್ ಇಂಡಿಯಾದ ಪ್ರಸ್ತುತ ರನ್ ರೇಟ್ -3.800 ಇದೆ. ಇದು ಮೈನಸ್​ ರನ್​ ರೇಟ್ ಎಂಬುದು ಗಮನದಲ್ಲಿರಲಿ​. ಹೀಗಾಗಿ, ಟೀಮ್​ ಇಂಡಿಯಾ, ಉಳಿದ ಎರಡು ಪಂದ್ಯಗಳನ್ನು ಗೆದ್ದರು ಕೂಡ ಸೆಮಿಫೈನಲ್‌ಗೆ ಅರ್ಹತೆ ಪಡೆಯುವುದು ಕೊಂಚ ಕಷ್ಟಕರವಾಗಿರುತ್ತದೆ. ಏಕೆಂದರೆ, ಟೀಮ್​ ಇಂಡಿಯಾ ಇತರ ತಂಡಗಳ ಮೇಲಿನ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ.

ಭಾರತಕ್ಕೆ ಯಾವ ಅವಕಾಶಗಳು ಇವೆ?

ಸೂಪರ್​ 8ರ ಹಂತದಲ್ಲಿ ಭಾರತಕ್ಕೆ ಎರಡು ಪಂದ್ಯಗಳು ಬಾಕಿ ಇವೆ. ಈ ಪಂದ್ಯಗಳಲ್ಲಿ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ತಂಡಗಳನ್ನು ಭಾರತ ಎದರಿಸಲಿದೆ. ಇಲ್ಲಿ ಎರಡೂ ತಂಡಗಳನ್ನು ಭಾರತ ಸೋಲಿಸಿದರೆ, ಆಗ ಭಾರತಕ್ಕೆ ನಾಲ್ಕು ಅಂಕಗಳು ಸಿಗುತ್ತವೆ. ಅದೇ ಸಮಯದಲ್ಲಿ, ಇನ್ನೆರಡು ತಂಡಗಳು ನಾಲ್ಕು ಅಂಕಗಳನ್ನು ಗಳಿಸದೇ ಹೋದರೆ, ಭಾರತ ಸೆಮಿಫೈನಲ್ ತಲುಪುತ್ತದೆ. ಒಂದು ವೇಳೆ, ಇನ್ನೆರಡು ತಂಡಗಳು 4 ಅಂಕಗಳನ್ನು ಹೊಂದಿದರೆ, ಆಗ ಟೀಮ್ ಇಂಡಿಯಾಗೆ ತುಂಬಾ ಕಷ್ಟವಾಗುತ್ತದೆ. ಏಕೆಂದರೆ, ಉತ್ತಮ ನೆಟ್ ರನ್ ರೇಟ್ ಹೊಂದಿರುವ ತಂಡ ಮಾತ್ರ ಸೆಮಿಫೈನಲ್ ತಲುಪುತ್ತದೆ. ಆದ್ದರಿಂದ, ಟೀಮ್ ಇಂಡಿಯಾ ತನ್ನ ನೆಟ್ ರನ್ ರೇಟ್ ಅನ್ನು ಇದೀಗ ಸುಧಾರಿಸಬೇಕಾಗುತ್ತದೆ.
ಒಂದು ವೇಳೆ ಭಾರತ, ಉಳಿದ ಎರಡು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದರೆ, ದಕ್ಷಿಣ ಆಫ್ರಿಕಾ ತನ್ನ ಉಳಿದ ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ. ಅದೇ ಸಮಯದಲ್ಲಿ, ಟೀಮ್ ಇಂಡಿಯಾ, ವೆಸ್ಟ್ ಇಂಡೀಸ್ vs ಜಿಂಬಾಬ್ವೆ ಪಂದ್ಯದ ವಿಜೇತರನ್ನು ಸೋಲಿಸಬೇಕಾಗುತ್ತದೆ. ಈ ರೀತಿಯಾದಾಗ ಭಾರತ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ತಲಾ ಎರಡು ಅಂಕಗಳನ್ನು ಹೊಂದಿರುತ್ತವೆ. ಈ ಹಂತದಲ್ಲಿ ತಂಡದ ನೆಟ್​ ರನ್​ ರೇಟ್​ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ, ಟೀಮ್​ ಇಂಡಿಯಾ ಇದೀಗ ಸಂಕಷ್ಟದ ಸ್ಥಿತಿಗೆ ಸಿಲುಕಿದೆ. ಇನ್ನೊಂದು ಪಂದ್ಯವನ್ನು ಸೋತರೆ, ಟೀಮ್​ ಇಂಡಿಯಾ ವಿಶ್ವಕಪ್​ ಟೂರ್ನಿಯಿಂದಲೇ ಹೊರಬೀಳಲಿದೆ.

ಭಾರತದ ಉಳಿದ ಸೂಪರ್​ 8 ಪಂದ್ಯಗಳು

* ಫೆಬ್ರವರಿ 26, ಗುರುವಾರ: ಭಾರತ vs ಜಿಂಬಾಬ್ವೆ, ರಾತ್ರಿ 7 ಗಂಟೆ, ಚಿದಂಬರಂ ಸ್ಟೇಡಿಯಂ, ಚೆನ್ನೈ (ಭಾರತ)

* ಮಾರ್ಚ್​ 1, ಭಾನುವಾರ: ಭಾರತ vs ವೆಸ್ಟ್ ಇಂಡೀಸ್, ರಾತ್ರಿ 7 ಗಂಟೆ, ಈಡನ್​ ಗಾರ್ಡನ್​ ಸ್ಟೇಡಿಯಂ, ಕೋಲ್ಕತ (ಭಾರತ)

ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು

ನಿನ್ನೆ (ಫೆ.22) ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 187 ರನ್ ಗಳಿಸಿತು. ಪ್ರೋಟಿಯಸ್​ ಬ್ಯಾಟ್ಸ್‌ಮನ್‌ಗಳಲ್ಲಿ ಡೇವಿಡ್ ಮಿಲ್ಲರ್ (63 ರನ್​, 35 ಎಸೆತ, 7 ಬೌಂಡರಿ, 3 ಸಿಕ್ಸರ್‌ಗಳು) ಅದ್ಭುತ ಅರ್ಧಶತಕ ಗಳಿಸಿದರು. ಜೂನಿಯರ್​ ಎಬಿಡಿ ಎಂದೇ ಖ್ಯಾತಿಯಾಗಿರುವ ಡೆವಾಲ್ಡ್ ಬ್ರೆವಿಸ್ (45 ರನ್​, 29 ಎಸೆತ, 3 ಬೌಂಡರಿಗಳು, 3 ಸಿಕ್ಸರ್‌ಗಳು) ಮತ್ತು ಡೆತ್​ ಓವರ್​ಗಳಲ್ಲಿ ಅದ್ಭುತ ಬ್ಯಾಟಿಂಗ್​ ಮಾಡುವಲ್ಲಿ ಹೆಸರಾಗಿರುವ ಟ್ರಿಸ್ಟಾನ್ ಸ್ಟಬ್ಸ್ (ಅಜೇಯ 44 ರನ್​, 24 ಎಸೆತ, 1 ಬೌಂಡರಿ, 3 ಸಿಕ್ಸರ್‌ಗಳು) ಸಿಡಿಲಬ್ಬರದ ಬ್ಯಾಟಿಂಗ್​ ಪ್ರದರ್ಶನ ನೀಡಿದರು. ಭಾರತೀಯ ಬೌಲರ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ ಮೂರು ವಿಕೆಟ್ ಪಡೆದರೆ, ಅರ್ಷದೀಪ್​ ಸಿಂಗ್​ ಎರಡು ವಿಕೆಟ್ ಪಡೆದರು. ವರುಣ್ ಚಕ್ರವರ್ತಿ ಮತ್ತು ಶಿವಂ ದುಬೆ ತಲಾ ಒಂದು ವಿಕೆಟ್ ಪಡೆದರು.
ಆಫ್ರಿಕಾ ಪಡೆ ನೀಡಿದ ಸವಾಲಿನ ಗುರಿಯನ್ನು ಬೆನ್ನಟ್ಟಿದ ಭಾರತ 18.5 ಓವರ್‌ಗಳಲ್ಲಿ 111 ರನ್‌ಗಳಿಗೆ ಆಲೌಟ್ ಆಯಿತು. ಶಿವಂ ದುಬೆ (42 ರನ್​, 37 ಎಸೆತ, 1 ಬೌಂಡರಿ, 3 ಸಿಕ್ಸರ್) ಭಾರತದ ಪರ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ತಂಡದ ಉಳಿದ ಆಟಗಾರರು ಬ್ಯಾಟಿಂಗ್​ನಲ್ಲಿ ವಿಫಲರಾದ್ದರಿಂದ ಟೀಮ್​ ಇಂಡಿಯಾ ಸೋಲಬೇಕಾಯಿತು. ದಕ್ಷಿಣ ಆಫ್ರಿಕಾದ ಬೌಲರ್‌ಗಳಲ್ಲಿ ಮಾರ್ಕೊ ಜಾನ್ಸೆನ್ ನಾಲ್ಕು ವಿಕೆಟ್ ಪಡೆದರೆ, ಕೇಶವ್ ಮಹಾರಾಜ್ ಮೂರು ವಿಕೆಟ್ ಪಡೆದರು. ಕಾರ್ಬಿನ್ ಬಾಷ್ ಎರಡು ವಿಕೆಟ್ ಪಡೆದರೆ, ಐಡೆನ್ ಮಾರ್ಕ್ರಾಮ್ ಒಂದು ವಿಕೆಟ್ ಪಡೆದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net