ನಾವು ಮಾಡಿದ ಈ ಒಂದು ತಪ್ಪಿನಿಂದಲೇ ಹೀನಾಯವಾಗಿ ಸೋತೆವು... ಅಚ್ಚರಿ ಹೇಳಿಕೆ ನೀಡಿದ ಕ್ಯಾಪ್ಟನ್​ ಸೂರ್ಯ! IND vs SA

ಭಾರತದ ಟಿ20 ತಂಡದ ನಾಯಕ ಸೂರ್ಯಕುಮಾರ್​ ಯಾದವ್​ ( IND vs SA )
ಭಾರತದ ಟಿ20 ತಂಡದ ನಾಯಕ ಸೂರ್ಯಕುಮಾರ್​ ಯಾದವ್​ ( IND vs SA )
Published on

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್‌ ಮೆಗಾ ಟೂರ್ನಮೆಂಟ್​ನಲ್ಲಿ ಟೀಮ್​ ಇಂಡಿಯಾಗೆ ಭಾರಿ ಆಘಾತ
  • ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಸೂಪರ್-8 ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲು
  • 188 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಲಾಗದೇ 111 ರನ್​ಗಳಿಗೆ ಆಲೌಟ್​
  • ಬ್ಯಾಟಿಂಗ್ ವೈಫಲ್ಯದಿಂದಾಗಿ ಸೋಲುಂಡಿದ್ದಾಗಿ ನಾಯಕ ಸೂರ್ಯಕುಮಾರ್​ ಯಾದವ್​ ಹೇಳಿಕೆ
ಅಹಮದಾಬಾದ್​ : ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ ಮೆಗಾ ಟೂರ್ನಮೆಂಟ್​ನಲ್ಲಿ ಟೀಮ್​ ಇಂಡಿಯಾಗೆ ( IND vs SA ) ಭಾರಿ ಆಘಾತವಾಗಿದೆ. ಭಾನುವಾರ (ಫೆ.23) ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಸೂಪರ್-8 ಪಂದ್ಯದಲ್ಲಿ ಭಾರತ ಹೀನಾಯ ಸೋಲು ಅನುಭವಿಸಿದೆ. ಹರಿಣ ಪಡೆ ನೀಡಿದ 188 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ 111 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ 76 ರನ್‌ಗಳ ಭಾರಿ ಅಂತರದಿಂದ ಹೀನಾಯ ಸೋಲು ಅನುಭವಿಸಿತು. ಪಂದ್ಯದ ಬೆನ್ನಲ್ಲೇ, ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ್ದು, ಬ್ಯಾಟಿಂಗ್ ವೈಫಲ್ಯದಿಂದಾಗಿ ಸೋಲುಂಡಿದ್ದಾಗಿ ತಿಳಿಸಿದ್ದಾರೆ. 
ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 187 ರನ್ ಗಳಿಸಿತು. ಪ್ರೋಟಿಯಸ್​ ಬ್ಯಾಟ್ಸ್‌ಮನ್‌ಗಳಲ್ಲಿ ಡೇವಿಡ್ ಮಿಲ್ಲರ್ (63 ರನ್​, 35 ಎಸೆತ, 7 ಬೌಂಡರಿ, 3 ಸಿಕ್ಸರ್‌ಗಳು) ಅದ್ಭುತ ಅರ್ಧಶತಕ ಗಳಿಸಿದರು. ಜೂನಿಯರ್​ ಎಬಿಡಿ ಎಂದೇ ಖ್ಯಾತಿಯಾಗಿರುವ ಡೆವಾಲ್ಡ್ ಬ್ರೆವಿಸ್ (45 ರನ್​, 29 ಎಸೆತ, 3 ಬೌಂಡರಿಗಳು, 3 ಸಿಕ್ಸರ್‌ಗಳು) ಮತ್ತು ಡೆತ್​ ಓವರ್​ಗಳಲ್ಲಿ ಅದ್ಭುತ ಬ್ಯಾಟಿಂಗ್​ ಮಾಡುವಲ್ಲಿ ಹೆಸರಾಗಿರುವ ಟ್ರಿಸ್ಟಾನ್ ಸ್ಟಬ್ಸ್ (ಅಜೇಯ 44 ರನ್​, 24 ಎಸೆತ, 1 ಬೌಂಡರಿ, 3 ಸಿಕ್ಸರ್‌ಗಳು) ಸಿಡಿಲಬ್ಬರದ ಬ್ಯಾಟಿಂಗ್​ ಪ್ರದರ್ಶನ ನೀಡಿದರು. ಭಾರತೀಯ ಬೌಲರ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ ಮೂರು ವಿಕೆಟ್ ಪಡೆದರೆ, ಅರ್ಷದೀಪ್​ ಸಿಂಗ್​ ಎರಡು ವಿಕೆಟ್ ಪಡೆದರು. ವರುಣ್ ಚಕ್ರವರ್ತಿ ಮತ್ತು ಶಿವಂ ದುಬೆ ತಲಾ ಒಂದು ವಿಕೆಟ್ ಪಡೆದರು.
ಆಫ್ರಿಕಾ ಪಡೆ ನೀಡಿದ ಸವಾಲಿನ ಗುರಿಯನ್ನು ಬೆನ್ನಟ್ಟಿದ ಭಾರತ 18.5 ಓವರ್‌ಗಳಲ್ಲಿ 111 ರನ್‌ಗಳಿಗೆ ಆಲೌಟ್ ಆಯಿತು. ಶಿವಂ ದುಬೆ (42 ರನ್​, 37 ಎಸೆತ, 1 ಬೌಂಡರಿ, 3 ಸಿಕ್ಸರ್) ಭಾರತದ ಪರ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ತಂಡದ ಉಳಿದ ಆಟಗಾರರು ಬ್ಯಾಟಿಂಗ್​ನಲ್ಲಿ ವಿಫಲರಾದ್ದರಿಂದ ಟೀಮ್​ ಇಂಡಿಯಾ ಸೋಲಬೇಕಾಯಿತು. ದಕ್ಷಿಣ ಆಫ್ರಿಕಾದ ಬೌಲರ್‌ಗಳಲ್ಲಿ ಮಾರ್ಕೊ ಜಾನ್ಸೆನ್ ನಾಲ್ಕು ವಿಕೆಟ್ ಪಡೆದರೆ, ಕೇಶವ್ ಮಹಾರಾಜ್ ಮೂರು ವಿಕೆಟ್ ಪಡೆದರು. ಕಾರ್ಬಿನ್ ಬಾಷ್ ಎರಡು ವಿಕೆಟ್ ಪಡೆದರೆ, ಐಡೆನ್ ಮಾರ್ಕ್ರಾಮ್ ಒಂದು ವಿಕೆಟ್ ಪಡೆದರು.

ಸೋಲಿನ ಬಗ್ಗೆ ಸೂರ್ಯಕುಮಾರ್​ ಹೇಳಿದ್ದೇನು?

ಈ ಪಂದ್ಯದ ನಂತರ ಮಾತನಾಡಿದ ಭಾರತದ ಟಿ20 ನಾಯಕ ಸೂರ್ಯಕುಮಾರ್ ಯಾದವ್, ಪವರ್ ಪ್ಲೇನಲ್ಲಿ ವಿಕೆಟ್ ಕಳೆದುಕೊಂಡ ಕಾರಣ ನಾವು ಪಂದ್ಯದಲ್ಲಿ ಹಿಂದೆ ಬಿದ್ದೆವು ಮತ್ತು ಆ ನಂತರ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. ಪವರ್ ಪ್ಲೇನಲ್ಲಿ ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದರೆ ಫಲಿತಾಂಶ ಬೇರೆಯೇ ಆಗಿರುತ್ತಿತ್ತು ಎಂದರು.

7 ಓವರ್​ನಿಂದ 15 ಓವರ್​ ಚೆನ್ನಾಗಿ ಆಡಿದರು

ಇನ್ನೂ ಈ ಪಂದ್ಯದ ಆರಂಭದಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದೆವು. ಭಾರತೀಯ ಬೌಲರ್‌ಗಳು ಕೇವಲ 21 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಬಳಿಸಿ ದಕ್ಷಿಣ ಆಫ್ರಿಕಾವನ್ನು ಒತ್ತಡಕ್ಕೆ ಸಿಲುಕಿಸಿದರು. ಆದಾಗ್ಯೂ, ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು 7 ಓವರ್​ನಿಂದ 15 ಓವರ್​ವರೆಗೆ ಉತ್ತಮವಾಗಿ ಆಡಿದರು. ಇದಾದ ನಂತರ, ಕೊನೆಯ ಓವರ್​ ವೇಳೆ ಮತ್ತೆ ಉತ್ತಮ ಆಟವಾಡಿದರು. ಈ ಮೂಲಕ ಆಫ್ರಿಕಾ ಉತ್ತಮ ಮೊತ್ತ ಕಲೆಹಾಕಿತು. ಒಟ್ಟಾರೆಯಾಗಿ, ಭಾರತೀಯ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡಿದರು. ಆದರೆ, ಬ್ಯಾಟಿಂಗ್​ನಲ್ಲಿ ವೈಫಲ್ಯ ಕಂಡೆವು ಎಂದು ಸೂರ್ಯ ಹೇಳಿದರು.

ಹೆಚ್ಚಿನ ವಿಕೆಟ್‌ಗಳನ್ನು ಕಳೆದುಕೊಂಡೆವು

ಗುರಿಯನ್ನು ಬೆನ್ನಟ್ಟುವ ವಿಷಯಕ್ಕೆ ಬಂದಾಗ, ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಬೇಕಾಗಿದೆ. ಪವರ್ ಪ್ಲೇನಲ್ಲಿ ಸಾಧ್ಯವಾದಷ್ಟು ರನ್ ಗಳಿಸುವುದು ಬಹಳ ಮುಖ್ಯ. ವಿಶೇಷವಾಗಿ 180 ರಿಂದ 185 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ ಪವರ್​ ಪ್ಲೇನಲ್ಲಿ ರನ್​ ಬರುವುದು ತುಂಬಾನೇ ಮುಖ್ಯ. ಆದರೆ, ಪವರ್ ಪ್ಲೇನಲ್ಲಿ ವಿಕೆಟ್‌ಗಳು ಕಳೆದುಕೊಂಡರೆ, ಆ ಪಂದ್ಯವನ್ನು ಗೆಲ್ಲುವುದು ಕಷ್ಟ. ನಾವು ಪವರ್ ಪ್ಲೇನಲ್ಲಿ ಹೆಚ್ಚಿನ ವಿಕೆಟ್‌ಗಳನ್ನು ಕಳೆದುಕೊಂಡೆವು. ಗುರಿಯನ್ನು ಬೆನ್ನಟ್ಟುವಲ್ಲಿ ಜತೆಯಾಟ ಪ್ರಮುಖ ಪಾತ್ರ ವಹಿಸುತ್ತವೆ. ನಮ್ಮಿಂದ ಸಣ್ಣ ಜತೆಯಾಟ ಕೂಡ ಬರಲಿಲ್ಲ. ಆದಾಗ್ಯೂ, ಇದೆಲ್ಲವೂ ಆಟದ ಭಾಗವಾಗಿದೆ. ಈ ಸೋಲಿನಿಂದ ನಾವು ಪಾಠಗಳನ್ನು ಕಲಿಯುತ್ತೇವೆ ಮತ್ತು ನಾವು ಬಲವಾಗಿ ಹಿಂತಿರುಗುತ್ತೇವೆ ಎಂದು ಸೂರ್ಯಕುಮಾರ್​ ಹೇಳಿದರು. 

ಅಪಾಯಕಾರಿ ಜೋಡಿ

ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್​ ಸಿಂಗ್ ಅವರ ಬೌಲಿಂಗ್​ ಸಂಯೋಜನೆ ಎಷ್ಟು ಅಪಾಯಕಾರಿ ಎಂದು ಎಲ್ಲರಿಗೂ ತಿಳಿದಿದೆ. ಇಬ್ಬರೂ ಅದ್ಭುತವಾಗಿ ಬೌಲಿಂಗ್ ಮಾಡಿದರು. ಇಬ್ಬರು ಎಂಟು ಓವರ್ ಬೌಲಿಂಗ್ ಮಾಡಿ ಕೇವಲ 45 ರಿಂದ 50 ರನ್ ನೀಡಿ 5 ವಿಕೆಟ್ ಪಡೆದರು. ನಮಗೆ ಬೇಕಾಗಿದ್ದು ಅದನ್ನೇ. ಈ ಜೋಡಿ ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದೆ. ಅವರಿಬ್ಬರೂ ತಂಡದಲ್ಲಿ ಇರುವುದು ಬಹಳ ಮುಖ್ಯ ಎಂದು ಸೂರ್ಯ ಹೇಳಿದರು.

ಸೋಲನ್ನು ಮರೆತು ಬರುತ್ತೇವೆ

ಅಂದಹಾಗೆ, ಭಾರತ ತಂಡ ಮುಂದಿನ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ. ಈ ಪಂದ್ಯದ ಕುರಿತು ಮಾತನಾಡಿದ ಸೂರ್ಯ, ಈ ಸೋಲನ್ನು ಮರೆತು ನಮ್ಮ ನೈಸರ್ಗಿಕ ಶೈಲಿಯ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತೇವೆ ಎಂದು ಆಶಿಸುತ್ತೇನೆ ಎಂದು ಹೇಳಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net