ಸೂಪರ್​ 8ರ ಮೊದಲ ಪಂದ್ಯಕ್ಕೂ ಮುನ್ನವೇ "ಬೋಲೆ ಸೋ ನಿಹಾಲ್" ಎಂದು ಕೂಗಿದ ಅಭಿ! ಏನಿದರ ಅರ್ಥ? Abhishek Sharma

ಬೋಲೆ ಸೋ ನಿಹಾಲ್ ಎಂಬ ಘೋಷಣೆ ಕೂಗಿದ ಅಭಿಷೇಕ್​ ಶರ್ಮಾ ( Abhishek Sharma )
ಬೋಲೆ ಸೋ ನಿಹಾಲ್ ಎಂಬ ಘೋಷಣೆ ಕೂಗಿದ ಅಭಿಷೇಕ್​ ಶರ್ಮಾ ( Abhishek Sharma )
Published on

ಪ್ರಮುಖ ಮುಖ್ಯಾಂಶಗಳು

  • ಸೂಪರ್​ 8ರ ಹಂತದಲ್ಲೂ ಗೆಲುವಿನ ಓಟ ಮುಂದುವರಿಸಲು ಟೀಮ್​ ಇಂಡಿಯಾ ಸಜ್ಜು
  • ಇಂದು ದಕ್ಷಿಣ ಆಫ್ರಿಕಾ ವಿರುದ್ಧ ಸೂಪರ್​ 8 ಹಂತದ ಮೊದಲ ಪಂದ್ಯವಾಡಲಿದೆ ಟೀಮ್​ ಇಂಡಿಯಾ
  • ಟೀಮ್​ ಇಂಡಿಯಾದ ಸ್ಫೋಟಕ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರು ಸ್ಫೂರ್ತಿದಾಯಕ ಭಾಷಣ
  • ಅಭಿಷೇಕ್​ ಶರ್ಮಾ ಕೂಗಿರುವ ಘೋಷಣೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​
Abhishek Sharma: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ ಟೂರ್ನಿಯ ಲೀಗ್​ ಹಂತ ಮುಗಿದಿದ್ದು, ನಿನ್ನೆಯಿಂದ ಸೂಪರ್​ 8 ಹಂತ ಆರಂಭವಾಗಿದೆ. ಲೀಗ್​ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿರುವ ಟೀಮ್​ ಇಂಡಿಯಾ ಇದೀಗ ಸೂಪರ್​ 8ರ ಹಂತದಲ್ಲೂ ಗೆಲುವಿನ ಓಟ ಮುಂದುವರಿಸಲು ಸಜ್ಜಾಗಿದ್ದು, ಇಂದು ದಕ್ಷಿಣಾ ಆಫ್ರಿಕಾ ವಿರುದ್ಧ ಕಾದಾಡಲಿದೆ. ಈ ಪಂದ್ಯಕ್ಕೂ ಮುನ್ನವೇ ಟೀಮ್​ ಇಂಡಿಯಾ ಯುವ ಆರಂಭಿಕ ಆಟಗಾರ ಅಭಿಷೇಕ್​ ಶರ್ಮಾ ಕೂಗಿರುವ ಘೋಷಣೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಟೀಮ್​ ಇಂಡಿಯಾದ ಅಭ್ಯಾಸ ಅವಧಿಯಲ್ಲಿ, ಸ್ಫೋಟಕ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರು ಸ್ಫೂರ್ತಿದಾಯಕ ಭಾಷಣ ಮಾಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ನಾನು ನಮ್ಮ ಹುಡುಗರನ್ನು ಉತ್ತೇಜಿಸಲು ಹೋಗುತ್ತಿದ್ದೇನೆ. ಈ ಮಾತುಗಳು ನಮ್ಮ ತಂಡಕ್ಕೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ ಎನ್ನುತ್ತಾ ಮಾತು ಆರಂಭಿಸಿದ ಅಭಿಷೇಕ್​, ಪ್ರತಿಯೊಂದು ಪಂದ್ಯವನ್ನು ಆನಂದಿಸುವುದು ಒಬ್ಬ ಚಾಂಪಿಯನ್ ತಂಡದ ಲಕ್ಷಣ. ಆಟಗಾರರು ಒಬ್ಬರ ಪ್ರದರ್ಶನವನ್ನು ಮತ್ತೊಬ್ಬರು ಆನಂದಿಸಬೇಕು ಮತ್ತು ಇದೇ ರೀತಿ ಬೆಂಬಲವಾಗಿ ಇರಬೇಕು ಎಂದರು. ಅಲ್ಲದೆ, ನಮ್ಮ ತಂಡವು ಎಲ್ಲಾ ಪಂದ್ಯಗಳಲ್ಲಿ ತೋರಿಸುತ್ತಿರುವ ಅಸಾಧಾರಣ ಶಕ್ತಿ ಮತ್ತು ಉತ್ಸಾಹವನ್ನು ಅಭಿ ಶ್ಲಾಘಿಸಿದರು. ನಾವು ಇಲ್ಲಿಗೆ ಬಂದಿರುವುದು ಎಲ್ಲಾ ಪಂದ್ಯಗಳನ್ನು ಗೆಲ್ಲಲು, ಆದ್ದರಿಂದ ಆಟವನ್ನು ಆನಂದಿಸುತ್ತಾ ಮುನ್ನಡೆಯೋಣ ಎಂದು ಅಭಿ ತಂಡಕ್ಕೆ ಸ್ಫೂರ್ತಿ ನೀಡಿದರು.
ವಿಡಿಯೋದ ಕೊನೆಯಲ್ಲಿ, ಅಭಿಷೇಕ್​ ಅವರು "ಬೋಲೆ ಸೋ ನಿಹಾಲ್" ಎಂಬ ಜಯದ ಘೋಷಣೆಯನ್ನು ಕೂಗುವ ಮೂಲಕ ಇಡೀ ತಂಡದಲ್ಲಿ ಹೊಸ ಸಂಚಲನ ಮೂಡಿಸಿದರು.

ಬೋಲೆ ಸೋ ನಿಹಾಲ್ ಎಂದರೇನು?

ಬೋಲೆ ಸೋ ನಿಹಾಲ್ ಎಂಬುದು ಸಿಖ್ ಧರ್ಮದ ಅತ್ಯಂತ ಪ್ರಸಿದ್ಧವಾದ ಮತ್ತು ಶಕ್ತಿಯುತವಾದ ಘೋಷವಾಕ್ಯವಾಗಿದೆ. ಇದರ ಸಂಪೂರ್ಣ ರೂಪ "ಬೋಲೆ ಸೋ ನಿಹಾಲ್, ಸತ್ ಶ್ರೀ ಅಕಾಲ್". ಯಾರು ಈ ಘೋಷಣೆಯನ್ನು ಕೂಗುತ್ತಾರೋ, ಅವರು ಆಶೀರ್ವದಿಸಲ್ಪಡಲಿ ಅಥವಾ ಸಂತೋಷದಿಂದ ಕೂಡಿರಲಿ ಎಂದರ್ಥ ಸೂಚಿಸುತ್ತದೆ.

ಐತಿಹಾಸಿಕ ಹಿನ್ನೆಲೆ ಏನು?

ಈ ಘೋಷಣೆಯನ್ನು ಸಿಖ್ ಧರ್ಮದ ಹತ್ತನೇ ಗುರುಗಳಾದ ಗುರು ಗೋಬಿಂದ್ ಸಿಂಗ್ ಅವರು ಪರಿಚಯಿಸಿದರು. ಇದು ಸಿಖ್ಖರ ಯುದ್ಧದ ಘೋಷಣೆಯೂ ಹೌದು. ರಣಭೂಮಿಯಲ್ಲಿ ಸೈನಿಕರಲ್ಲಿ ಧೈರ್ಯ ಮತ್ತು ಹುಮ್ಮಸ್ಸು ತುಂಬಲು ಇದನ್ನು ಬಳಸಲಾಗುತ್ತಿತ್ತು.

ಯಾವಾಗ ಬಳಸಲಾಯಿತು?

ಗುರುದ್ವಾರಗಳಲ್ಲಿ ಪ್ರಾರ್ಥನೆಯ ನಂತರ ಅಥವಾ ಧಾರ್ಮಿಕ ಸಭೆಗಳಲ್ಲಿ ಇದನ್ನು ಬಳಸಲಾಗುತ್ತದೆ. ಕ್ರೀಡೆಗಳಲ್ಲಿ ಅಥವಾ ಯಾವುದಾದರೂ ಕಠಿಣ ಕೆಲಸ ಮಾಡುವಾಗ ತಂಡದ ಸದಸ್ಯರಲ್ಲಿ ಒಗ್ಗಟ್ಟು ಮತ್ತು ಶಕ್ತಿಯನ್ನು ತುಂಬಲು ಈ ಘೋಷಣೆಯನ್ನು ಕೂಗಲಾಗುತ್ತದೆ.
ಸರಳವಾಗಿ ಹೇಳುವುದಾದರೆ, ಇದು "ದೇವರೇ ಸತ್ಯ, ಆತನನ್ನು ಸ್ಮರಿಸುವವರು ಸದಾ ಸುಖಿಯಾಗಿರುತ್ತಾರೆ" ಎಂಬ ನಂಬಿಕೆಯೊಂದಿಗೆ ಕೂಗುವ ವಿಜಯದ ಸಂಕೇತವಾಗಿದೆ. ಅಭಿಷೇಕ್ ಶರ್ಮಾ ಅವರು ವಿಡಿಯೋದಲ್ಲಿ ತಮ್ಮ ತಂಡದ ಆಟಗಾರರಲ್ಲಿ ಜೋಶ್ ಮತ್ತು ಏಕತೆಯನ್ನು ತರಲು ಈ ಘೋಷಣೆಯನ್ನು ಬಳಸಿದ್ದಾರೆ.
ಅಂದಹಾಗೆ, 2026 ರ ಟಿ20 ವಿಶ್ವಕಪ್‌ನಲ್ಲಿ ಅಭಿಷೇಕ್ ಶರ್ಮಾ ಇದುವರೆಗೆ ಒಂದು ರನ್ ಗಳಿಸಿಲ್ಲ. ಅನಾರೋಗ್ಯದ ಕಾರಣ ಅವರು ಒಂದು ಪಂದ್ಯವನ್ನು ತಪ್ಪಿಸಿಕೊಂಡರು ಮತ್ತು ಆಡಿದ ಮೂರು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾದರು. ವಿಶ್ವದ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಿ ಚುಟುಕು ವಿಶ್ವಕಪ್‌ಗೆ ಪ್ರವೇಶಿಸಿದ ನಂತರ ಫಾರ್ಮ್​ ಕಳೆದುಕೊಂಡಿರುವುದು ಟೀಮ್​ ಇಂಡಿಯಾಗೆ ಒಂದು ದೊಡ್ಡ ಹೊಡೆತವಾಗಿದೆ. ಆದಾಗ್ಯೂ, ಅವರಿಗೆ ತಂಡದ ಆಡಳಿತ ಮಂಡಳಿಯಿಂದ ಇನ್ನೂ ಬಲವಾದ ಬೆಂಬಲವಿದೆ. ಅಭಿಷೇಕ್ ಶರ್ಮಾ ಅವರ ಫಾರ್ಮ್ ಬಗ್ಗೆ ಅವರು ಸದ್ಯಕ್ಕೆ ಚಿಂತಿಸುತ್ತಿಲ್ಲ ಮತ್ತು ಅವರು ಕೇವಲ ಒಂದು ಇನ್ನಿಂಗ್ಸ್‌ನೊಂದಿಗೆ ಫಾರ್ಮ್‌ಗೆ ಬರುತ್ತಾರೆ ಎಂದು ನಾಯಕ ಸೂರ್ಯಕುಮಾರ್ ಯಾದವ್ ವಿಶ್ವಾಸ ವ್ಯಕ್ತಪಡಿಸಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net