ಲವ್​, ಪ್ರಪೋಸ್​, ಮದ್ವೆ, ಬ್ರೇಕಪ್​: ಒಂದೇ ವರ್ಷದಲ್ಲಿ ಸ್ಮೃತಿ ಬಾಳಲ್ಲಿ ಏನೆಲ್ಲ ಆಗೋಯ್ತು? ಘಟನೆಯ ಟೈಮ್​ ಲೈನ್​ ಇಲ್ಲಿದೆ... Smriti Mandhana

ಟೀಮ್​ ಇಂಡಿಯಾ ಮಹಿಳಾ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಸಂಗೀತ ನಿರ್ದೇಶಕ ಪಲಾಶ್​ ಮುಚ್ಚಲ್
ಟೀಮ್​ ಇಂಡಿಯಾ ಮಹಿಳಾ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಸಂಗೀತ ನಿರ್ದೇಶಕ ಪಲಾಶ್​ ಮುಚ್ಚಲ್
Published on

ಪ್ರಮುಖ ಮುಖ್ಯಾಂಶಗಳು

  • ಮದುವೆ ರದ್ದಾಗಿರುವ ಬಗ್ಗೆ ಕೊನೆಗೂ ಮೌನ ಮುರಿದ ಟೀಮ್​ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ
  • ಇನ್​ಸ್ಟಾಗ್ರಾಂನಲ್ಲಿ ಸ್ಟೋರಿ ಪೋಸ್ಟ್​ ಮಾಡುವ ಮೂಲಕ ಮದುವೆ ವದಂತಿಗೆ ಸ್ಪಷ್ಟನೆ ನೀಡಿದ ಸ್ಮೃತಿ-ಪಲಾಶ್​
  • ಈ ಕಠಿಣ ಸಮಯದಲ್ಲಿ ಎರಡೂ ಕುಟುಂಬದ ಗೌಪ್ಯತೆ ಗೌರವಿಸಬೇಕೆಂದು ಸ್ಮೃತಿ ಮನವಿ
  • ಲವ್​, ಪ್ರಪೋಸ್​, ಮದ್ವೆ, ಬ್ರೇಕಪ್​: ಒಂದೇ ವರ್ಷದಲ್ಲಿ ಸ್ಮೃತಿ ಬಾಳಲ್ಲಿ ಏನೆಲ್ಲ ಆಗೋಯ್ತು ನೋಡಿ
ನವದೆಹಲಿ: ತಮ್ಮ ಮದುವೆ ವಿಚಾರವಾಗಿ ಕಳೆದ ಎರಡು ವಾರಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಸಾರ್ವಜನಿಕವಾಗಿ ಹರಿದಾಡುತ್ತಿದ್ದ ಎಲ್ಲ ಊಹಾಪೋಹಗಳಿಗೆ ಭಾರತದ ಮಹಿಳಾ ತಂಡದ ಉಪನಾಯಕಿ ಹಾಗೂ ಸ್ಟಾರ್​ ಬ್ಯಾಟ್ಸ್​ವುಮನ್​​ ಸ್ಮೃತಿ ಮಂಧಾನ ( Smriti Mandhana ) ಹಾಗೂ ಬಾಲಿವುಡ್​ ಸಂಗೀತ ನಿರ್ದೇಶಕ ಮತ್ತು ನಿರ್ಮಾಪಕ ಪಲಾಶ್​ ಮುಚ್ಚಲ್​ ಅಧಿಕೃತವಾಗಿ ತೆರೆಎಳೆದಿದ್ದಾರೆ.
ತಮ್ಮ ತಮ್ಮ ಇನ್​ಸ್ಟಾಗ್ರಾಂನಲ್ಲಿ ಏಕಕಾಲದಲ್ಲಿ ನಿನ್ನೆ (ಡಿ.07) ಸ್ಟೋರಿ ಪೋಸ್ಟ್​ ಮಾಡಿದ ಸ್ಮೃತಿ ಮತ್ತು ಪಲಾಶ್​, ತಮ್ಮ ಮದುವೆ ಮುರಿದು ಬಿದ್ದಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದರು. ಅಲ್ಲದೆ, ತಮ್ಮ ವೈಯಕ್ತಿಕ ಜೀವನವನ್ನು ಗೌರವಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಇದರೊಂದಿಗೆ, ಕಳೆದ ಕೆಲವು ವಾರಗಳಿಂದ ಮಿಲಿಯನ್​ ಡಾಲರ್ ಪ್ರಶ್ನೆಯಾಗಿ ಉಳಿದಿದ್ದ ಸ್ಮೃತಿ-ಪಲಾಶ್ ಅವರ ವಿವಾಹಕ್ಕೆ ಕೊನೆಗೂ ಒಂದು ಉತ್ತರ ಸಿಕ್ಕಿದೆ. ಕಳೆದ ಒಂದು ವರ್ಷದಿಂದ ಭಾರಿ ಸುದ್ದಿಯಲ್ಲಿರುವ ಸ್ಮೃತಿ ಮತ್ತು ಪಲಾಶ್​ ನಡುವಿನ ಪ್ರೀತಿ, ಪ್ರೇಮ ನಿವೇದನೆ, ಮದುವೆ ಹಾಗೂ ಬ್ರೇಕ್ಅಪ್ ಕತೆಯ ಕಂಪ್ಲೀಟ್​ ಚಿತ್ರಣದ ಟೈಮ್​ ಲೈನ್​ ಅನ್ನು ನಾವೀಗ ವಿವರವಾಗಿ ತಿಳಿದುಕೊಳ್ಳೋಣ.

ಜುಲೈ 2024

ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ಅವರು 2024ರ ಜುಲೈ ತಿಂಗಳಲ್ಲಿ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ತಮ್ಮ ಪ್ರೇಮ ಸಂಬಂಧವನ್ನು ಸಾರ್ವಜನಿಕವಾಗಿ ಘೋಷಿಸಿದರು. ತಮ್ಮ ಪ್ರೀತಿ ಐದನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ, ಇಬ್ಬರು 5ನೇ ಸಂಖ್ಯೆ ಇರುವ ಕೇಕ್ ಕತ್ತರಿಸಿ ತಾವು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡರು.

ಅಕ್ಟೋಬರ್​ 2025

ಪತ್ರಿಕಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪಲಾಶ್ ಮುಚ್ಚಲ್, ಸ್ಮೃತಿ ಅವರನ್ನು ಉಲ್ಲೇಖಿಸಿ, ಆಕೆ ಶೀಘ್ರದಲ್ಲೇ ಇಂದೋರ್​ನ ಸೊಸೆಯಾಗುತ್ತಾಳೆ ಎಂದು ತಮಾಷೆಯಾಗಿ ಹೇಳಿದ್ದರು. ಇದನ್ನು ಕೇಳಿದ ಅಭಿಮಾನಿಗಳು ಸ್ಮೃತಿ-ಪಲಾಶ್ ಅವರ ವಿವಾಹದ ಸಮಯ ಸಮೀಪಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದರು.

2025 ನವೆಂಬರ್​ 02

ಭಾರತದ ಮಹಿಳಾ ಕ್ರಿಕೆಟ್ ತಂಡವು ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದಿತು. ಪಲಾಶ್ ಮುಚ್ಚಲ್ ಕೂಡ ಭಾರತೀಯ ತಂಡದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದರು. ಈ ವೇಳೆ ಇಬ್ಬರೂ ಒಟ್ಟಿಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದವು.

2025 ನವೆಂಬರ್​ 21

ಮಹಿಳಾ ಟೀಮ್​ ಇಂಡಿಯಾ ವಿಶ್ವಕಪ್​ ಗೆದ್ದಂತಹ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಪಲಾಶ್ ಅವರು ಸ್ಮೃತಿಗೆ ಸಿನಿಮೀಯ ಶೈಲಿಯಲ್ಲಿ ಪ್ರಪೋಸ್ ಮಾಡಿದರು. ಸ್ಮೃತಿಯನ್ನು ಕಣ್ಣುಮುಚ್ಚಿ ಮೈದಾನಕ್ಕೆ ಕರೆದೊಯ್ದು, ಪಲಾಶ್ ಮೊಣಕಾಲು ಊರಿ ಪ್ರಪೋಸ್ ಮಾಡಿದರು. ಈ ವೇಳೆ ಸ್ಮೃತಿ ನಾಚಿಕೆಯಿಂದ ಓಕೆ ಎಂದು ಹೇಳಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

2025 ನವೆಂಬರ್​ 21

ನವೆಂಬರ್ 21ರಂದು ಪಲಾಶ್​ ಅವರು ಸ್ಮೃತಿಗೆ ಪ್ರೇಮ ನಿವೇದನೆ ಮಾಡಿದ ಬಳಿಕ ಇಬ್ಬರ ಮದುವೆಯ ಸಿದ್ಧತೆಗಳು ಪ್ರಾರಂಭವಾದವು. ನವೆಂಬರ್ 21 ರಂದು ಹಳದಿ ಸಮಾರಂಭ ಮತ್ತು ನವೆಂಬರ್ 22 ರಂದು ಮೆಹಂದಿ ಸಮಾರಂಭ ನಡೆಯಿತು. ವೇಳೆ ಭಾರತೀಯ ತಂಡದ ಆಟಗಾರರು ಸಹ ಈ ಸಮಾರಂಭಗಳಲ್ಲಿ ಭಾಗವಹಿಸಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಹ ವೈರಲ್ ಆಗಿದ್ದವು.

2025 ನವೆಂಬರ್​ 23

ಮದುವೆಯ ದಿನದ ಎಲ್ಲಾ ವ್ಯವಸ್ಥೆಗಳನ್ನು ಮಹಾರಾಷ್ಟ್ರದ ಸಾಂಗ್ಲಿಯಲ್ಲಿರುವ ಸ್ಮೃತಿ ಮಂಧಾನ ಒಡೆತನದ ಫಾರ್ಮ್​ ಹೌಸ್​ನಲ್ಲಿ ಮಾಡಲಾಗಿತ್ತು. ಆದರೆ, ಸ್ಮೃತಿ ಅವರ ತಂದೆ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದರಿಂದ ಮದುವೆಯನ್ನು ಮುಂದೂಡಲಾಯಿತು. ಇದೇ ಸಮಯದಲ್ಲಿ, ಪಲಾಶ್ ಕೂಡ ಅನಾರೋಗ್ಯಕ್ಕೆ ಒಳಗಾದರು ಮತ್ತು ಆಸ್ಪತ್ರೆಗೆ ದಾಖಲಾಗಿದ್ದರು.

ನವೆಂಬರ್​ ಕೊನೆಯಲ್ಲಿ

ಮದುವೆ ಮುಂದೂಡಲ್ಪಟ್ಟ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿವಿಧ ಊಹಾಪೋಹಗಳು ಪ್ರಾರಂಭವಾದವು. ಪಲಾಶ್ ಮತ್ತು ಸ್ಮೃತಿ ನಡುವೆ ತೀವ್ರ ವಾಗ್ವಾದ ನಡೆದಿದೆ ಎಂದು ಹೇಳಲಾಯಿತು. ತಂದೆ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಸ್ಮೃತಿ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಿಂದ ನಿಶ್ಚಿತಾರ್ಥ ಮತ್ತು ಕ್ರಿಕೆಟ್​ ಮೈದಾನದಲ್ಲಿ ಪಲಾಶ್​ ಪ್ರಪೋಸ್​ ಮಾಡಿದ ವಿಡಿಯೋಗಳು ಸೇರಿದಂತೆ ಮದುವೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನು ಡಿಲೀಟ್​ ಮಾಡಿದರು. ಇದು ಸಾಲದು ಎಂಬಂತೆ ಸ್ಮೃತಿಯ ಸಹ ಆಟಗಾರ್ತಿಯರಾದ ಜೆಮಿಮಾ ರೋಡ್ರಿಗಸ್​ ಮತ್ತು ಶ್ರೇಯಾಂಕ ಪಾಟೀಲ್​ ಕೂಡ ಪೋಸ್ಟ್​ಗಳನ್ನು ಡಿಲೀಟ್​ ಮಾಡಿದರು. ಮತ್ತೊರ್ವ ಆಟಗಾರ್ತಿ ರಾಧಾ ಯಾದವ್​ ಅವರು ಪಲಾಶ್​ ಅವರನ್ನು ಅನ್​ಫಾಲೋ ಮಾಡಿದರು. ಈ ಎಲ್ಲ ನಡೆಗಳನ್ನು ನೋಡಿದಾಗ ಅನುಮಾನ ದಟ್ಟವಾಯಿತು. ವಿವಾಹವನ್ನು ಮುಂದೂಡಿರುವುದರ ಹಿಂದೆ ಏನೋ ಒಂದು ದೊಡ್ಡ ಸಮಸ್ಯೆ ಇದೆ ಎಂಬ ಊಹಾಪೋಹಕ್ಕೆ ಕಾರಣವಾಯಿತು. ಇದರ ನಡುವೆ ಪಲಾಶ್ ಅವರ ಸಹೋದರಿ ಮತ್ತು ಬಾಲಿವುಡ್ ಗಾಯಕಿ ಪಲಾಕ್​ ಮುಚ್ಚಲ್, ತಮ್ಮ ಸಹೋದರನ ಮದುವೆ ಬಗ್ಗೆ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದರು. ಸ್ಮೃತಿಯ ತಂದೆಯ ಅನಾರೋಗ್ಯದ ಕಾರಣ ಮದುವೆಯನ್ನು ಮುಂದೂಡಲಾಗಿದೆ ಎಂದು ಹೇಳಿದರು. ಯಾವಾಗ ಪಲಾಕ್ ಮುಚ್ಚಲ್ ಅವರು ಫೋಸ್ಟ್​ ಮಾಡಿದರೋ ಕೆಲವೇ ಕ್ಷಣಗಳಲ್ಲಿ ಅಪರಿಚಿತ ಮಹಿಳೆಯೊಬ್ಬರು ಪಲಾಶ್ ಜೊತೆ ಚಾಟ್​ ಮಾಡಿದ್ದಾರೆನ್ನಲಾದ ಸ್ಕ್ರೀನ್‌ಶಾಟ್‌ಗಳು ಜಾಲತಾಣದಲ್ಲಿ ಕಾಣಿಸಿಕೊಂಡವು. ಕೆಲವು ಪೋಸ್ಟ್‌ಗಳಲ್ಲಿ ಮೇರಿ ಡಿ'ಕೋಸ್ಟಾ ಎಂದು ಗುರುತಿಸಲ್ಪಟ್ಟ ಮಹಿಳೆ ಸ್ಕ್ರೀನ್​ ಶಾಟ್​ಗಳನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿದವು. ಆ ಚಾಟ್​ನಲ್ಲಿ ಪಲಾಶ್ ಅವರು ನಿಗೂಢ ಯುವತಿಯ ಲುಕ್​ ಅನ್ನು ಹೊಗಳಿದ್ದರು ಮತ್ತು ಸ್ಮೃತಿ ಬಗ್ಗೆಯೂ ಚರ್ಚಿಸಿದ್ದರು. ಅಲ್ಲದೆ, ಡೇಟಿಂಗ್​ ಬಗ್ಗೆಯೂ ಉಲ್ಲೇಖಿಸಿದ್ದರು. ಆದರೆ, ಇದು ಪಲಾಶ್​ ಅವರಿಗೆ ಸಂಬಂಧಿಸಿದ ಸ್ಕ್ರೀನ್​ಶಾಟ್​ ಎಂಬುದಕ್ಕೆ ಯಾವುದೇ ಪುರಾವೆ ಇರಲಿಲ್ಲ. ಅಂದಿನಿಂದ ಅನೇಕ ಊಹಾಪೋಹಗಳು ಹರಡುತ್ತಾ ಬಂದವು.

2025 ಡಿಸೆಂಬರ್​​ 7

ಡಿಸೆಂಬರ್ 7 ರ ಭಾನುವಾರದಂದು ಸ್ಮೃತಿ ಮಂಧಾನ ಹಾಗೂ ಪಲಾಶ್​ ಮುಚ್ಚಲ್​ ಅವರು ತಮ್ಮ ವಿವಾಹ ಮುಂದೂಡಿಕೆಯ ಕುರಿತು ಮೊದಲ ಬಾರಿಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದರು. ಸ್ಮೃತಿ ಹಾಗೂ ಪಲಾಶ್,​ ತಮ್ಮ ವಿವಾಹ ರದ್ದತಿಯನ್ನು ದೃಢಪಡಿಸಿದರು. ತಮ್ಮ ವೈಯಕ್ತಿಕ ಗೌಪ್ಯತೆಯನ್ನು ಎಲ್ಲರೂ ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ಸ್ಮೃತಿ ಹೇಳಿದ್ದೇನು?

ಅಷ್ಟಕ್ಕೂ ಸ್ಮೃತಿ ಅವರು ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಏನು ಬರೆದುಕೊಂಡಿದ್ದಾರೆ ಅನ್ನೋದನ್ನು ಡೀಟೈಲ್​ ಆಗಿ ತಿಳಿಯುವುದಾದರೆ, ಕಳೆದ ಕೆಲ ವಾರಗಳಿಂದ ನನ್ನ ಹಾಗೂ ನನ್ನ ಜೀವನದ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಡುತ್ತಿವೆ. ಈ ಸಮಯದಲ್ಲಿ ಇದರ ಬಗ್ಗೆ ಮಾತನಾಡುವುದು ನನಗೆ ಸೂಕ್ತ ಅನಿಸಿತು. ನಾನು ಜೀವನದಲ್ಲಿ ತುಂಬಾ ಖಾಸಗಿ ವ್ಯಕ್ತಿ ಮತ್ತು ನಾನು ಅದೇ ರೀತಿ ಎಂದಿಗೂ ಇರಲು ಬಯಸುತ್ತೇನೆ. ಆದರೆ, ಈ ಸಂದರ್ಭದಲ್ಲಿ ಮದುವೆ ರದ್ದಾಗಿದೆ ಅನ್ನೋದನ್ನು ಸ್ಪಷ್ಟಪಡಿಸಬೇಕಿದೆ ಎಂದು ಸ್ಮೃತಿ ಬರೆದುಕೊಂಡಿದ್ದಾರೆ.
ಮತ್ತಷ್ಟು ಬರೆದುಕೊಂಡಿರುವ ಸ್ಮೃತಿ, ಈ ವಿಚಾರವನ್ನು ಇಲ್ಲಿಗೆ ಮುಗಿಸಲು ನಾನು ಇಚ್ಛಿಸುತ್ತೇನೆ. ನಾನು ಎಲ್ಲರ ಬಳಿಯೂ ಇದನ್ನೇ ಕೇಳಿಕೊಳ್ಳುತ್ತೇನೆ. ಈ ಸಮಯದಲ್ಲಿ ಎರಡೂ ಕುಟುಂಬದ ಗೌಪ್ಯತೆಯನ್ನು ಗೌರವಿಸಬೇಕೆಂದು ನಾನು ಎಲ್ಲರ ಬಳಿ ಮನವಿ ಮಾಡಿಕೊಳ್ಳುತ್ತೇನೆ. ಈ ಕಠಿಣ ಪರಿಸ್ಥಿತಿಯಿಂದ ಹೊರಬಂದು ನಮ್ಮ ದಾರಿಯಲ್ಲಿ ನಾವು ಮುಂದುವರಿಯಲು ಅವಕಾಶ ನೀಡುವಂತೆ ಕೇಳಿಕೊಳ್ಳುತ್ತೇನೆ ಎಂದಿರುವ ಸ್ಮೃತಿ, ನಿಮ್ಮೆಲ್ಲರನ್ನೂ ಮತ್ತು ನನ್ನ ದೇಶವನ್ನು ಯಾವಾಗಲೂ ಉನ್ನತ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ನನಗೆ ಒಂದು ಉನ್ನತ ಉದ್ದೇಶವಿದೆ ಎಂದು ನಾನು ನಂಬುತ್ತೇನೆ. ಸಾಧ್ಯವಾದಷ್ಟು ಕಾಲ ಭಾರತಕ್ಕಾಗಿ ಆಟವಾಡುವುದನ್ನು ಮತ್ತು ಟ್ರೋಫಿಗಳನ್ನು ಗೆಲ್ಲುವುದನ್ನು ಮುಂದುವರಿಸಬೇಕೆಂದು ನಾನು ಭಾವಿಸುತ್ತೇನೆ ಮತ್ತು ನನ್ನ ಗಮನವು ಶಾಶ್ವತವಾಗಿ ಅಲ್ಲೇ ಇರುತ್ತದೆ. ಇಂತಹ ಕಠಿಣ ಸಂದರ್ಭದಲ್ಲಿ ನೀವೆಲ್ಲರು ಬೆಂಬಲ ನೀಡಿದ್ದಕ್ಕೆ ಧನ್ಯವಾದಗಳು. ಇದು ಮುಂದುವರಿಯುವ ಸಮಯ ಎನ್ನುವ ಮೂಲಕ ಸ್ಮೃತಿ ಎಲ್ಲ ವದಂತಿಗಳಿಗೆ ತೆರೆಎಳೆದಿದ್ದಾರೆ.

ಪಲಾಶ್​ ಹೇಳಿದ್ದೇನು?

ಪಲಾಶ್​ ಅವರು ಏನು ಬರೆದಿದ್ದಾರೆ ಅನ್ನೋದನ್ನು ಡೀಟೈಲ್​ ಆಗಿ ನೋಡುವುದಾದರೆ, ನಾನು ನನ್ನ ವೈಯಕ್ತಿಯ ಸಂಬಂಧದಿಂದ (ಸ್ಮೃತಿ ಮಂಧಾನ ಪ್ರೀತಿ) ಹಿಂದೆ ಸರಿದು, ನನ್ನ ಜೀವನದಲ್ಲಿ ಮುಂದುವರಿಯಲು ನಿರ್ಧರಿಸಿದ್ದೇನೆ. ಆಧಾರವಿಲ್ಲದ ವದಂತಿಗಳನ್ನು ನಂಬಿ ಜನರು ಸುಲಭವಾಗಿ ಪ್ರತಿಕ್ರಿಯಿಸುತ್ತಿರುವುದನ್ನು ನೋಡಿದರೆ ತುಂಬಾ ಕಷ್ಟವಾಗುತ್ತಿದೆ ಮತ್ತು ಭಯವಾಗುತ್ತಿದೆ. ನನ್ನ ಜೀವನದ ಅತ್ಯಂತ ಕಷ್ಟದ ಹಂತದಲ್ಲಿ ನಾನಿಂದು ಇದ್ದೇನೆ. ಆದರೆ, ನಾನು ನನ್ನ ನಂಬಿಕೆಗಳನ್ನು ಯಾವುದೇ ಕ್ಷಣದಲ್ಲೂ ಬಿಟ್ಟುಕೊಡದೇ, ಈ ಪರಿಸ್ಥಿತಿಯನ್ನು ಸಂತೋಷವಾಗಿಯೇ ನಿಭಾಯಿಸುತ್ತೇನೆ. ಮೂಲಗಳು ಯಾವುದೆಂದು ತಿಳಿಯದ ವದಂತಿಗಳನ್ನು ನಂಬಿ ಇನ್ನೊಬ್ಬರ ವ್ಯಕ್ತಿತ್ವವನ್ನು ನಿರ್ಣಯಿಸುವುದಕ್ಕೆ ಈ ಸಮಾಜ ವಿರಾಮ ಹೇಳುತ್ತದೆ ಎಂದು ನಾನು ಭಾವಿಸುತ್ತೇನೆಂದು ಪಲಾಶ್​ ಬರೆದುಕೊಂಡಿದ್ದಾರೆ.
ಇದಿಷ್ಟೇ ಅಲ್ಲದೆ, ಮತ್ತಷ್ಟು ಬರೆದುಕೊಂಡಿರುವ ಪಲಾಶ್​, ಸದ್ಯ ನಾವು ಈ ವಿಚಾರಗಳನ್ನು (ವದಂತಿಗಳನ್ನು) ಯೋಚಿಸುತ್ತಿರುವಾಗಲೇ, ಪ್ರಪಂಚದ ಅನೇಕ ಜನರು ಇಂತಹ ವದಂತಿಗಳನ್ನು ಹರಡಿ ತೀವ್ರ ಪರಿಣಾಮಗಳನ್ನು ಈಗಾಗಲೇ ಎದುರಿಸುತ್ತಿದ್ದಾರೆ. ಸುಳ್ಳು ಮತ್ತು ಮಾನಹಾನಿಕರ ವಿಷಯವನ್ನು ಹರಡುವವರ ವಿರುದ್ಧ ನನ್ನ ತಂಡವು ಕೂಡ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ. ಈ ಕಠಿಣ ಸಮಯದಲ್ಲಿ ನನ್ನ ಮೇಲೆ ದಯೆ ತೋರಿದವರಿಗೆ ನಾನು ಧನ್ಯವಾದ ತಿಳಿಸುತ್ತೇನೆ ಎಂದು ಹೇಳುವ ಮೂಲಕ ಪಲಾಶ್​ ವದಂತಿಗಳಿಗೆ ತೆರೆ ಎಳೆದಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net