ಸೂರ್ಯವಂಶಿಯ ಬಿರುಗಾಳಿ ಆಟವೇ ಆತನಿಗೆ ಶಾಪವಾಗುತ್ತಾ? ದಕ್ಷಿಣ ಆಫ್ರಿಕಾದ ದಿಗ್ಗಜನಿಂದ ಶಾಕಿಂಗ್ ಹೇಳಿಕೆ!

ಸೂರ್ಯವಂಶಿಯ ಬಿರುಗಾಳಿ ಆಟವೇ ಆತನಿಗೆ ಶಾಪವಾಗುತ್ತಾ? ದಕ್ಷಿಣ ಆಫ್ರಿಕಾದ ದಿಗ್ಗಜನಿಂದ ಶಾಕಿಂಗ್ ಹೇಳಿಕೆ!
ಸೂರ್ಯವಂಶಿಯ ಬಿರುಗಾಳಿ ಆಟವೇ ಆತನಿಗೆ ಶಾಪವಾಗುತ್ತಾ? ದಕ್ಷಿಣ ಆಫ್ರಿಕಾದ ದಿಗ್ಗಜನಿಂದ ಶಾಕಿಂಗ್ ಹೇಳಿಕೆ!
Published on

ಪ್ರಮುಖ ಮುಖ್ಯಾಂಶಗಳು

  • ವೈಭವ್​ ಸೂರ್ಯವಂಶಿಯ ಬಗ್ಗೆ ಸೌತ್ ಆಫ್ರಿಕಾ ಮಾಜಿ ದಿಗ್ಗಜನಿಂದ ಶಾಕಿಂಗ್ ಎಚ್ಚರಿಕೆ
  • 'ವಂಡರ್ ಕಿಡ್' ವೈಭವ್ ಬ್ಯಾಟಿಂಗ್ ಶೈಲಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಡ್ಯಾರಿಲ್ ಕಲಿನನ್
  • ಸಚಿನ್‌ಗೇ ಕಾಡಿದ್ದ ಟೆನ್ನಿಸ್ ಎಲ್ಬೋ ಗಾಯ, ಈಗ 15ರ ಹರೆಯದ ವೈಭವ್‌ಗೂ ಕಾಡಬಹುದೇ?
  • ವೈಭವ್ ಸೂರ್ಯವಂಶಿ ಫಿಟ್‌ನೆಸ್ ಕುರಿತು ವೈದ್ಯಕೀಯ ತಜ್ಞರ ಸಲಹೆಗೆ ಒತ್ತಾಯಿಸಿದ ಕಲಿನನ್
Vaibhav Suryavanshi : ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ತಾರೆ ಹಾಗೂ ಯುವ ಆಟಗಾರ ವೈಭವ್ ಸೂರ್ಯವಂಶಿ ತಮ್ಮ ಬಿರುಗಾಳಿಯ ಬ್ಯಾಟಿಂಗ್ ಪ್ರದರ್ಶನದಿಂದ ಅತ್ಯಂತ ಕಡಿಮೆ ಅವಧಿಯಲ್ಲಿ ಜಾಗತಿಕ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ.
ಕೇವಲ 15ನೇ ವಯಸ್ಸಿಗೆ ಭಾರತೀಯ ಜೂನಿಯರ್ ತಂಡಕ್ಕೆ ಪಾದಾರ್ಪಣೆ ಮಾಡಿರುವ ಈ ಯುವ ಪ್ರತಿಭೆ, ಶೀಘ್ರದಲ್ಲೇ ನಡೆಯಲಿರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ನಿನ್ನೆಯಷ್ಟೇ ಶ್ರೀಲಂಕಾ ವಿರುದ್ಧ ನಡೆದ ಏಕದಿನ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ವೈಭವ್​, ಒಟ್ಟಾರೆ 29 ಎಸೆತಗಳಲ್ಲಿ ಭರ್ಜರಿ 94 ರನ್ ಚಚ್ಚುವ ಮೂಲಕ ಲಿಸ್ಟ್-ಎ ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ.
ವೈಭವ್​ ಅವರ ಬಿರುಗಾಳಿಯ ಬ್ಯಾಟಿಂಗ್​ ಇಡೀ ವಿಶ್ವದ ಗಮನ ಸೆಳೆಯುತ್ತಿರುವ ಈ ಸಮಯದಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್‌ಮನ್ ಡ್ಯಾರಿಲ್ ಕಲಿನನ್ ಅವರು ವೈಭವ್​ಗೆ ಒಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
ವೈಭವ್​ ಸೂರ್ಯವಂಶಿಯ ಸುದೀರ್ಘ ವೃತ್ತಿಜೀವನ ಮತ್ತು ಫಿಟ್‌ನೆಸ್ ಕುರಿತು ಕಲಿನನ್​ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸೂರ್ಯವಂಶಿ ಅವರ ಆಟದ ಶೈಲಿಯು ಕೇವಲ ದೈಹಿಕ ಶಕ್ತಿಯನ್ನು ಅವಲಂಬಿಸಿದೆ ಮತ್ತು ಅವರು ಪ್ರತಿಯೊಂದು ಶಾಟ್‌ಗೂ ವಿಪರೀತ ಬ್ಯಾಟ್ ವೇಗವನ್ನು ಬಳಸುತ್ತಾರೆ ಎಂದು ಕಲಿನನ್ ಹೇಳಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಭಾರವಾದ ಬ್ಯಾಟ್ ಹಿಡಿದು ಅತಿಯಾದ ವೇಗದಲ್ಲಿ ಬೀಸುವುದರಿಂದ ಅವರ ಮಣಿಕಟ್ಟು, ಮೊಣಕೈ ಮತ್ತು ಕೀಲುಗಳ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿರುವ ಕಲಿನನ್​, ಇದು ಅವರ ಸುದೀರ್ಘ ಕ್ರಿಕೆಟ್ ಭವಿಷ್ಯಕ್ಕೆ ಕಂಟಕವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತೀಯ ಕ್ರಿಕೆಟ್‌ನ ದೇವರೆಂದೇ ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಕೂಡ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಅತ್ಯಂತ ಆಕ್ರಮಣಕಾರಿ ಆಟವಾಡಿದ್ದರು, ಆದರೆ ಬ್ಯಾಟ್ ಅನ್ನು ಹೆಚ್ಚು ಜೋರಾಗಿ ಬೀಸದಿದ್ದರೂ ಅವರು 2004ರಲ್ಲಿ 'ಟೆನ್ನಿಸ್ ಎಲ್ಬೋ' ಗಾಯಕ್ಕೆ ತುತ್ತಾಗಿ ಅವರ ವೃತ್ತಿಜೀವನವೇ ಕೊನೆಗೊಳ್ಳುವ ಹಂತಕ್ಕೆ ತಲುಪಿತ್ತು ಎಂಬುದನ್ನು ಕಲಿನನ್ ನೆನಪಿಸಿಕೊಂಡಿದ್ದಾರೆ.
ಸಚಿನ್ ಅವರ ಪರಿಸ್ಥಿತಿಯೇ ಹಾಗಿರಬೇಕಾದರೆ, ಸದಾ ಬ್ಯಾಟ್ ಅನ್ನು ಅತಿ ವೇಗವಾಗಿ ಬೀಸುವ ಸೂರ್ಯವಂಶಿಯಂತಹ ಹಿಟ್ಟರ್‌ನ ಸ್ಥಿತಿ ಏನಾಗಬೇಡ ಎಂದು ಅವರು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಪ್ರಸ್ತುತ ಕ್ರಿಕೆಟ್ ವೇಳಾಪಟ್ಟಿ ಅತ್ಯಂತ ಬಿಜಿಯಾಗಿದ್ದು, ಕೇವಲ 15 ವರ್ಷದ ಯುವ ಆಟಗಾರನ ಇನ್ನೂ ಬೆಳವಣಿಗೆಯ ಹಂತದಲ್ಲಿರುವ ಸ್ನಾಯುಗಳು ಮತ್ತು ಲಿಗಮೆಂಟ್‌ಗಳ ಮೇಲೆ ಈ ನಿರಂತರ ಕ್ರಿಕೆಟ್ ವಿಪರೀತ ಒತ್ತಡವನ್ನು ಉಂಟುಮಾಡುತ್ತದೆ ಎಂದು ಕಲಿನನ್ ಆತಂಕ ವ್ಯಕ್ತಪಡಿಸಿದ್ದಾರೆ.
ತಾವು ಕ್ರಿಕೆಟ್ ಆಡುತ್ತಿದ್ದ ದಿನಗಳಲ್ಲಿ ಹಗುರವಾದ ಬ್ಯಾಟ್‌ಗಳನ್ನು ಬಳಸುತ್ತಿದ್ದೆವು ಮತ್ತು ಇಂದಿನಷ್ಟು ಹೆಚ್ಚು ಕ್ರಿಕೆಟ್ ಪಂದ್ಯಗಳನ್ನು ಆಡುತ್ತಿರಲಿಲ್ಲ, ಆದರೂ ಕೂಡ ನಮ್ಮಲ್ಲಿ ಕೆಲವರಿಗೆ ಮಣಿಕಟ್ಟಿನ ಸಮಸ್ಯೆಗಳು ಎದುರಾಗಿದ್ದವು ಎಂದು ಡ್ಯಾರಿಲ್ ಕಲಿನನ್ ನೆನಪಿಸಿಕೊಂಡಿದ್ದಾರೆ.
ಇಂದು ಆಧುನಿಕ ತರಬೇತಿ ಮತ್ತು ಗಾಯದಿಂದ ಬೇಗ ಚೇತರಿಸಿಕೊಳ್ಳುವ ಮುಂದುವರಿದ ವೈದ್ಯಕೀಯ ಪದ್ಧತಿಗಳು ಲಭ್ಯವಿದ್ದರೂ ಸಹ, ಈ ಯುವ ಆಟಗಾರನ ದೀರ್ಘಕಾಲದ ಭವಿಷ್ಯ ಮತ್ತು ಆರೋಗ್ಯದ ದೃಷ್ಟಿಯಿಂದ ಕಳವಳ ವ್ಯಕ್ತಪಡಿಸಿರುವ ಕಲಿನನ್​, ವೈಭವ್ ಸೂರ್ಯವಂಶಿ ಅವರ ದೈಹಿಕ ಸಾಮರ್ಥ್ಯದ ಕುರಿತು ವೈದ್ಯಕೀಯ ತಜ್ಞರ ಸೂಕ್ತ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆದುಕೊಳ್ಳುವುದು ಅತ್ಯಂತ ಅವಶ್ಯಕ ಎಂದು ಸಲಹೆ ನೀಡಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net