ಹೊಸ ವರ್ಷದ ಆರಂಭದಲ್ಲೇ RCB ಫ್ಯಾನ್ಸ್​ಗೆ ಗುಡ್​ ನ್ಯೂಸ್​: ಚಿನ್ನಸ್ವಾಮಿಯಲ್ಲಿ ಮತ್ತೆ ಶುರುವಾಗಲಿದೆ ಕ್ರಿಕೆಟ್​ ಕಲರವ!

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ
Published on

ಪ್ರಮುಖ ಮುಖ್ಯಾಂಶಗಳು

  • ಹೊಸ ವರ್ಷದ ಆರಂಭದಲ್ಲೇ ಆರ್​ಸಿಬಿ ಅಭಿಮಾನಿಗಳಿಗೆ ಒಂದು ಗುಡ್​ ನ್ಯೂಸ್ ಸಿಕ್ಕಿದೆ
  • ಅಯ್ಯೋ ತವರಿನಲ್ಲಿ ನಮ್ಮ ಆರ್​ಸಿಬಿ ಪಂದ್ಯಗಳನ್ನು ನೋಡುವುದಕ್ಕೆ ಆಗುವುದಿಲ್ಲವೇ ಎಂಬ ಚಿಂತೆ ಬೇಡ
  • ಮತ್ತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್​ ಕಲರವ ಶುರುವಾಗುವ ಸ್ಪಷ್ಟ ಸುಳಿವು ಸಿಕ್ಕಿದೆ
  • ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಚಟುವಟಿಕೆ ಎಲ್ಲರ ಭರವಸೆಯನ್ನು ಜೀವಂತವಾಗಿರಿಸಿದೆ
ಬೆಂಗಳೂರು: ಕಳೆದ 18 ವರ್ಷಗಳಿಂದ ಈ ಸಲ ಕಪ್​ ನಮ್ದೆ ಅಂತಾ ಹೇಳಿ ಹೇಳಿ ಬೇಸರಗೊಂಡಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ( RCB ) ತಂಡದ ಅಭಿಮಾನಿಗಳಿಗೆ 2025 ಮರೆಯಲಾಗದ ವರ್ಷ. ಚೊಚ್ಚಲ ಐಪಿಎಲ್​ ಟ್ರೋಫಿ ಗೆದ್ದ ಖುಷಿ ಒಂದೆಡೆಯಾದರೆ, ಆ ಗೆಲುವಿನ ಸಂಭ್ರಮನ್ನು ಕಸಿದುಕೊಂಡ ಮಹಾ ದುರಂತ ಇನ್ನೊಂದೆಡೆ. ಕಪ್​ ಗೆದ್ದ ಖುಷಿಯಲ್ಲಿ ಸಂಭ್ರಮಾಚರಣೆ ಮಾಡುವ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದು ಕಹಿ ನೆನಪಾಗಿಯೇ ನಮ್ಮ ನಡುವೆ ಉಳಿದಿದೆ. ಈ ಒಂದು ಕಾರಣಕ್ಕೆ ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್​ ಪಂದ್ಯಗಳನ್ನು ನಡೆಸದಿರಲು ಸರ್ಕಾರ ನಿರ್ಧಾರ ಮಾಡಿತು. ಇದರಿಂದ ಅಸಂಖ್ಯಾತ ಆರ್​ಸಿಬಿ ಅಭಿಮಾನಿಗಳಿಗೆ ಸಖತ್​ ಬೇಜಾರಾಗಿತ್ತು. ನೆಚ್ಚಿನ ತಂಡದ ಆಟವನ್ನು ನೇರವಾಗಿ ಕಣ್ತುಂಬಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿ ಅಭಿಮಾನಿಗಳು ಮುಳುಗಿದ್ದರು. ಆದರೆ, ಆ ಚಿಂತೆ ಇನ್ನು ಬೇಡ.
ಹೊಸ ವರ್ಷದ ಆರಂಭದಲ್ಲೇ ಆರ್​ಸಿಬಿ ಅಭಿಮಾನಿಗಳಿಗೆ ಒಂದು ಗುಡ್​ ನ್ಯೂಸ್ ಸಿಕ್ಕಿದೆ. ಅಯ್ಯೋ ತವರಿನಲ್ಲಿ ನಮ್ಮ ಆರ್​ಸಿಬಿ ಪಂದ್ಯಗಳನ್ನು ನೋಡುವುದಕ್ಕೆ ಆಗುವುದಿಲ್ಲವೇ ಎಂಬ ಚಿಂತೆಯನ್ನು ಈ ಗುಡ್​ ನ್ಯೂಸ್​ ಮರೆ ಮಾಡಲಿದೆ. ಅಷ್ಟಕ್ಕೂ ಆ ಗುಡ್​ ನ್ಯೂಸ್​ ಏನು ಅಂತಿರಾ? ಮತ್ತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್​ ಕಲರವ ಶುರುವಾಗುವ ಸ್ಪಷ್ಟ ಸುಳಿವು ಸಿಕ್ಕಿದೆ.​ ಈ ಸುಳಿವು ನೋಡಿದರೆ, ಚಿನ್ನಸ್ವಾಮಿಯಲ್ಲಿ ಐಪಿಎಲ್​ ಪಂದ್ಯಗಳು ನಡೆಯುವುದು ಪಕ್ಕಾ ಅನ್ನುವಂತಿದೆ.
ನಿಮಗೆ ಈಗಾಗಲೇ ಗೊತ್ತಿದೆ, ಇತ್ತೀಚೆಗೆ ರಾಜ್ಯ ಸರ್ಕಾರ ವಿಜಯ ಹಜಾರೆ ಪಂದ್ಯಾವಳಿಗೆ ಅನುಮತಿ ನಿರಾಕರಿಸಿತ್ತು. ಭದ್ರತೆ ಹಾಗೂ ಸುರಕ್ಷತೆಯ ಕಾರಣ ನೀಡಿ ಪಂದ್ಯಗಳನ್ನು ನಡೆಸಲು ಸರ್ಕಾರ ಗ್ರೀನ್​ ಸಿಗ್ನಲ್​ ನೀಡಲಿಲ್ಲ. ಇದರಿಂದಾಗಿ ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಬಿಸಿಸಿಐ ಸೆಂಟರ್​ ಆಫ್​ ಎಕ್ಸಲೆನ್ಸ್​ನಲ್ಲಿ ಈ ಪಂದ್ಯಗಳು ನಡೆದವು. ವಿಜಯ್​ ಹಜಾರೆ ಪಂದ್ಯಗಳು ಸ್ಥಳಾಂತರಗೊಂಡಿದ್ದರಿಂದ ಕ್ರಿಕೆಟ್​ ಪ್ರೇಮಿಗಳಿಗೆ ಭಾರಿ ನಿರಾಸೆ ಆಯಿತು. ಮತ್ತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್​ ಪಂದ್ಯಗಳು ನಡೆಯುವುದಿಲ್ಲ ಭರವಸೆ ಮಂಕಾಯಿತು. ಆದರೆ, ಇದೀಗ ಮತ್ತೆ ಭರವಸೆ ಹುಟ್ಟಿಕೊಂಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಸ್ತುತ ನಡೆಯುತ್ತಿರುವ ಚಟುವಟಿಕೆ ಎಲ್ಲರ ಭರವಸೆಯನ್ನು ಜೀವಂತವಾಗಿರಿಸಿದೆ.
ಹೌದು, ಸರ್ಕಾರ ಹೇಳಿದಂತಹ ಷರತ್ತುಗಳನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್​ಸಿಎ) ಅನುಷ್ಠಾನಗೊಳಿಸುತ್ತಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಿನೋವೇಶನ್ ಕೆಲಸಗಳು ನಡೆಯುತ್ತಿವೆ. ಅಗ್ನಿಶಾಮಕ ದಳದ ಷರತ್ತುಗಳಂತೆ ಪ್ರೇಕ್ಷಕರು ಪ್ರವೇಶ ನೀಡುವ ದ್ವಾರಗಳ ಅಗಲೀಕರಣ ಕಾರ್ಯ ಆರಂಭವಾಗಿದೆ. 15 ದಿನದಲ್ಲಿ ಎಲ್ಲಾ ಷರತ್ತುಗಳನ್ನು ಕಾರ್ಯಗತಗೊಳಿಸಲು ಕೆಎಸ್​ಸಿಎ ಮುಂದಾಗಿದೆ.
ರಿನೋವೇಶನ್​ ಕೆಲಸ ಮುಗಿದ ನಂತರ ಅಗ್ನಿಶಾಮಕ‌ದಳ ಹಾಗೂ ಪೊಲೀಸ್ ಇಲಾಖೆ ಮತ್ತೆ ಪರಿಶೀಲನೆ ನಡೆಸಲಿದೆ. ಈ ವೇಳೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಕಂಡುಬಂದರೆ ಚಿನ್ನಸ್ವಾಮಿಯಲ್ಲಿ ಕ್ರಿಕೆಟ್​ ಪಂದ್ಯಗಳನ್ನು ನಡೆಸಲು ಅನುಮತಿ ಸಿಗಲಿದೆ. ಐಪಿಎಲ್​ ಪಂದ್ಯಗಳು ಮತ್ತೆ ಚಿನ್ನಸ್ವಾಮಿಯಲ್ಲಿ ನಡೆಯುವ ಲಕ್ಷಣಗಳು ಕಾಣಿಸುತ್ತಿವೆ. ಹೀಗಾಗಿ, ಅಭಿಮಾನಿಗಳಿಗೆ ಇದೊಂದು ಗುಡ್​ ನ್ಯೂಸ್​ ಎಂದರೆ ತಪ್ಪಾಗಲಾರದು.

ಕಾಲ್ತುಳಿತ ದುರಂತ

ಕ್ರಿಕೆಟ್ ಮೇಲಿನ ಉತ್ಸಾಹ ಜೀವಗಳನ್ನು ಬಲಿ ತೆಗೆದುಕೊಂಡಿತು. ಹೌದು, ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿತು. 18 ವರ್ಷಗಳ ಬಳಿಕ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡ ಚೊಚ್ಚಲ ಐಪಿಎಲ್ ಟ್ರೋಫಿ ಜಯಿಸಿತು. ಇದೇ ಖುಷಿಯಲ್ಲಿ ವಿಜಯೋತ್ಸವ ಆಚರಿಸಲು ಆರ್​ಸಿಬಿ ತಂಡವು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರುವ ಮುಂಚೆಯೇ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿತು. ಕ್ರೀಡಾಂಗಣಕ್ಕೆ ಆಟಗಾರರು ಬರುತ್ತಾರೆ ಅನ್ನೋ ಸುದ್ದಿ ಕೇಳಿದ ಕ್ರೀಡಾಭಿಮಾನಿಗಳು ಒಮ್ಮೆಲ್ಲೆ ಸ್ಟೇಡಿಂಯಂನತ್ತ ನುಗ್ಗಿದ್ದರಿಂದ ಕಾಲ್ತುಳಿತ ಸಂಭವಿಸಿ 11 ಜನ ಮೃತಪಟ್ಟರು. ಅಲ್ಲದೆ, 47 ಮಂದಿ ಗಾಯಗೊಂಡರು. ಜನರು ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಉಚಿತ ಪಾಸ್‌ಗಳು ದೊರೆಯುತ್ತದೆ ಎಂಬ ವದಂತಿ ಹಾಗೂ ದೊಡ್ಡ ಜನಸಂದಣಿ ಮತ್ತು ಸರಿಯಾದ ನಿರ್ವಹಣೆಯ ಕೊರತೆಯಿಂದ ಕಾಲ್ತುಳಿತ ಸಂಭವಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net