ಕ್ರಿಕೆಟ್ ಇತಿಹಾಸದಲ್ಲೇ ಅಪರೂಪದ ಘಟನೆ: ಒಂದೇ ಪಂದ್ಯದಲ್ಲಿ ಒಟ್ಟಿಗೆ ಆಡಿದ ಅಪ್ಪ-ಮಗ! Mohammad Nabi

ಮೊಹಮ್ಮದ್ ನಬಿ ಹಾಗೂ ಪುತ್ರ ಹಸನ್ ಇಸಾಖಿಲ್
ಮೊಹಮ್ಮದ್ ನಬಿ ಹಾಗೂ ಪುತ್ರ ಹಸನ್ ಇಸಾಖಿಲ್
Published on

ಪ್ರಮುಖ ಮುಖ್ಯಾಂಶಗಳು

  • ಕ್ರಿಕೆಟ್ ಇತಿಹಾಸದಲ್ಲೇ ಒಂದು ಅದ್ಭುತ ಘಟನೆಗೆ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ ಸಾಕ್ಷಿಯಾಗಿದೆ
  • ಒಂದೇ ಪಂದ್ಯದಲ್ಲಿ ಅಪ್ಪ ಮತ್ತು ಮಗ ಒಟ್ಟಿಗೆ ಆಡಿರುವುದು ಕ್ರಿಕೆಟ್​ ಪ್ರೇಮಿಗಳ ಗಮನವನ್ನು ಸೆಳೆದಿದೆ
  • ಅಫ್ಘಾನಿಸ್ತಾನದ ಸ್ಟಾರ್ ಆಲ್‌ರೌಂಡರ್ ಮೊಹಮ್ಮದ್ ನಬಿ ತಮ್ಮ ಪುತ್ರನೊಂದಿಗೆ ಆಡಿದ್ದಾರೆ
Mohammad Nabi : ಕ್ರಿಕೆಟ್ ಇತಿಹಾಸದಲ್ಲೇ ಒಂದು ಅದ್ಭುತ ಘಟನೆಗೆ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ (BPL) ಸಾಕ್ಷಿಯಾಗಿದೆ. ಒಂದೇ ಪಂದ್ಯದಲ್ಲಿ ಅಪ್ಪ ಮತ್ತು ಮಗ ಒಟ್ಟಿಗೆ ಆಡಿರುವುದು ಕ್ರಿಕೆಟ್​ ಪ್ರೇಮಿಗಳ ಗಮನವನ್ನು ಸೆಳೆದಿದೆ. ಹೌದು, ಅಫ್ಘಾನಿಸ್ತಾನದ ಸ್ಟಾರ್ ಆಲ್‌ರೌಂಡರ್ ಮೊಹಮ್ಮದ್ ನಬಿ ಮತ್ತು ಅವರ ಮಗ ಹಸನ್ ಇಸಾಖಿಲ್ ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನಲ್ಲಿ ಒಂದೇ ತಂಡದ ಪರ ಆಡಿದ್ದಾರೆ.
ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ. ಕಳೆದ ವರ್ಷ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ, ತಂದೆ ಸುಹೈಲ್ ಸತ್ತಾರ್ (50) ಮತ್ತು ಮಗ ಯಾಹ್ಯಾ ಸುಹೈಲ್ (17) ಟಿಮೋರ್-ಲೆಸ್ಟೆ ಪರ ಒಟ್ಟಿಗೆ ಟಿ20 ಪಂದ್ಯ ಆಡಿದರು. ವೆಸ್ಟ್ ಇಂಡೀಸ್‌ನ ದಂತಕಥೆ ಶಿವನಾರಾಯಣ್ ಚಂದ್ರಪಾಲ್ ಮತ್ತು ಅವರ ಮಗ ತೇಜ್ನರೀನ್ ಚಂದ್ರಪಾಲ್ ಒಟ್ಟಿಗೆ ಕ್ಲಬ್ ಪಂದ್ಯ ಆಡಿದ್ದಾರೆ.
ಇತ್ತೀಚಿನ ಘಟನೆಗೆ ಬರುವುದಾದರೆ, ಮೊಹಮ್ಮದ್​ ನಬಿಗೆ 41 ವರ್ಷ ಮತ್ತು ಹಸನ್‌ಗೆ 19 ವರ್ಷ. ನಬಿ ಮತ್ತು ಹಸನ್ ಇಬ್ಬರೂ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ನೊಖಾಲಿ ಎಕ್ಸ್‌ಪ್ರೆಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಬೆಂಚ್‌ನಲ್ಲಿ ಕುಳಿತಿದ್ದ ಹಸನ್, ಢಾಕಾ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಮೂಲಕ ಬಿಪಿಎಲ್‌ನಲ್ಲಿ ಪಾದಾರ್ಪಣೆ ಮಾಡಿದರು.
ತಮ್ಮ ಚೊಚ್ಚಲ ಪಂದ್ಯದಲ್ಲಿ ಹಸನ್ ಅದ್ಭುತ ಪ್ರದರ್ಶನ ನೀಡಿದರು. 60 ಎಸೆತಗಳನ್ನು ಎದುರಿಸಿದ ಅವರು 7 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ 92 ರನ್ ಗಳಿಸಿದರು. ಸ್ವಲ್ಪದರಲ್ಲೇ ಶತಕ ವಂಚಿತರಾದರು. ತಮ್ಮ ತಂದೆ ನಬಿ (17) ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 53 ರನ್‌ಗಳ ಜತೆಯಾಟವನ್ನು ಕೂಡ ನೀಡಿದರು.
ಬ್ಯಾಟಿಂಗ್‌ನಲ್ಲಿ ವಿಫಲರಾದ ನಬಿ, ಬೌಲಿಂಗ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದರು. ಅವರು 4 ಓವರ್‌ಗಳಲ್ಲಿ 23 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಪಡೆದರು. ತಂದೆ ಮತ್ತು ಮಗನ ಪ್ರದರ್ಶನದಿಂದ, ನೊಖಾಲಿ ಎಕ್ಸ್‌ಪ್ರೆಸ್, ಢಾಕಾ ಕ್ಯಾಪಿಟಲ್ಸ್ ವಿರುದ್ಧ 41 ರನ್‌ಗಳಿಂದ ಗೆದ್ದಿತು.
ತಮ್ಮ ಮಗನೊಂದಿಗೆ ಆಡಿದ್ದಕ್ಕೆ ಪ್ರತಿಕ್ರಿಯಿಸಿದ ನಬಿ, ತುಂಬಾ ಸಂತೋಷವಾಗಿದ್ದೇನೆ ಎಂದರು. ನನ್ನ ಮಗನೊಂದಿಗೆ ಆಡಲು ಬಹಳ ಸಮಯದಿಂದ ಕಾಯುತ್ತಿದ್ದೆ. ಅದು ಈಗ ನೆರವೇರಿದೆ ಎಂದು ಹೇಳಿದರು. ಪಂದ್ಯಾವಳಿಯಲ್ಲಿ ತಮ್ಮ ಮಗನ ಯಶಸ್ಸಿನ ಬಗ್ಗೆ ಸಂತೋಷ ವ್ಯಕ್ತಪಡಿಸಿದ ನಬಿ, ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವುದು ನನ್ನ ಮಗನ ಕನಸು ಎಂದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net