ಆರ್ಡರ್​ ಮಾಡಿದ್ದು 2010ರಲ್ಲಿ ಡೆಲಿವರಿ ಆಗಿದ್ದು ಈಗ: ಕಾರಣವೇನು? ಇದು ಉದ್ಯಮಿಯ ನೋಕಿಯಾ ಫೋನ್​ ಕತೆ! Nokia Phones

16 ವರ್ಷಗಳ ಬಳಿಕ ಆರ್ಡರ್​ ಸ್ವೀಕರಿಸಿದ ಲಿಬಿಯಾ ಉದ್ಯಮಿ
16 ವರ್ಷಗಳ ಬಳಿಕ ಆರ್ಡರ್​ ಸ್ವೀಕರಿಸಿದ ಲಿಬಿಯಾ ಉದ್ಯಮಿ
Published on

ಪ್ರಮುಖ ಮುಖ್ಯಾಂಶಗಳು

  • ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ ಲಿಬಿಯಾ ರಾಜಧಾನಿ ಟ್ರಿಪೋಲಿಯ ಉದ್ಯಮಿಯೊಬ್ಬರ ಕಥೆ
  • 2010ರಲ್ಲಿ ನೋಕಿಯಾ ಫೋನ್‌ಗಳು ಜಾಗತಿಕ ಮಾರುಕಟ್ಟೆಯನ್ನು ಆಳುತ್ತಿದ್ದವು
  • 16 ವರ್ಷದ ಹಿಂದೆ ಲಿಬಿಯಾದ ಉದ್ಯಮಿ ನೋಕಿಯಾ ಮೊಬೈಲ್ ಫೋನ್‌ಗಳಿಗೆ ದೊಡ್ಡ ಆರ್ಡರ್ ಮಾಡಿದ್ದರು
Nokia Phones : ಲಿಬಿಯಾ ರಾಜಧಾನಿ ಟ್ರಿಪೋಲಿಯ ಉದ್ಯಮಿಯೊಬ್ಬರ ಕಥೆ ಈಗ ಇಂಟರ್ನೆಟ್​ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ನಮಗೆ ಇಷ್ಟವಾದ ಯಾವುದಾದರೂ ವಸ್ತುವನ್ನು ನಾವು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದಾಗ ಯಾವಾಗ ಡೆಲಿವರಿ ಆಗುತ್ತೋ ಎಂದು ಕಾಯುತ್ತಿರುತ್ತೇವೆ. ಒಂದು ವೇಳೆ ನಿಗದಿತ ದಿನಾಂಕದಂದು ಬಾರದೇ ಒಂದೆರೆಡು ದಿನ ತಡವಾಗಿಬಿಟ್ಟರೆ ಸಾಕು, ನಮ್ಮ ತಾಳ್ಮೆಯ ಕಟ್ಟೆ ಹೊಡೆಯುತ್ತದೆ.
ಹೀಗಿರುವಾಗ, ಉದ್ಯಮಿಯೊಬ್ಬರು ತಾನು ಆರ್ಡರ್ ಮಾಡಿದ ಐಟಂಗಾಗಿ ಬರೋಬ್ಬರಿ 16 ವರ್ಷ ಕಾದರು ಎಂದರೆ ನೀವು ನಂಬುತ್ತೀರಾ? ನೀವು ನಂಬದಿದ್ದರೂ ಇದೇ ಸತ್ಯ. ಇದನ್ನು ಕೇಳಿದಾಗ, ಇದಕ್ಕಿಂತ ಅಚ್ಚರಿಯ ಸಂಗತಿ ಬೇರೊಂದಿಲ್ಲ. ಹೌದು, 16 ವರ್ಷಗಳ ಬಳಿಕ ಅಂತಿಮವಾಗಿ ಉದ್ಯಮಿ ಬುಕ್​ ಮಾಡಿದ್ದ ಐಟಂ ಅವರ ಕೈ ಸೇರಿದೆ. ಯಾವುದಪ್ಪಾ ಆ ವಸ್ತು ಎಂಬ ಕುತೂಹಲ ಸಹ ಮೂಡುತ್ತದೆ. ಅದಕ್ಕೆ ಉತ್ತರ ನೋಕಿಯಾ ಫೋನ್​. ಒಂದು ಕಾಲದಲ್ಲಿ ಮೊಬೈಲ್ ಜಗತ್ತನ್ನು ಆಳುತ್ತಿದ್ದ ನೋಕಿಯಾ ಹ್ಯಾಂಡ್‌ಸೆಟ್‌ಗಳು ಇಂದು ಕಣ್ಮರೆಯಾಗಿವೆ. ಹೀಗಾಗಿ, ಲಿಬಿಯಾ ಉದ್ಯಮಿಯ ನೋಕಿಯಾ ಫೋನ್​ ಕತೆ ಇದೀಗ ಎಲ್ಲೆಡೆ ವೈರಲ್​ ಆಗಿದೆ.
ಅಂದಹಾಗೆ, 2010ರಲ್ಲಿ ನೋಕಿಯಾ ಫೋನ್‌ಗಳು ಜಾಗತಿಕ ಮಾರುಕಟ್ಟೆಯನ್ನು ಆಳುತ್ತಿದ್ದವು. ಆ ಸಮಯದಲ್ಲಿ ಲಿಬಿಯಾದ ಉದ್ಯಮಿ ನೋಕಿಯಾ ಮೊಬೈಲ್ ಫೋನ್‌ಗಳಿಗೆ ದೊಡ್ಡ ಆರ್ಡರ್ ಮಾಡಿದ್ದರು. ಆದರೆ, 2011 ರಲ್ಲಿ, ಲಿಬಿಯಾದಲ್ಲಿನ ಅಂತರ್ಯುದ್ಧ, ರಾಜಕೀಯ ಅಸ್ಥಿರತೆ ಮತ್ತು ತೀವ್ರ ಘರ್ಷಣೆಗಳು ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಿದವು. ಇದರಿಂದಾಗಿ ಉದ್ಯಮಿಯ ನೋಕಿಯಾ ಫೋನ್​ಗಳಿದ್ದ ಬಾಕ್ಸ್​ ಎಲ್ಲೋ ಒಂದು ಕಡೆ ಸಿಲುಕಿಕೊಂಡಿತು. ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ನಡೆದ ಈ ಅವ್ಯವಸ್ಥೆಯಿಂದಾಗಿ ಉದ್ಯಮಿ ಕೂಡ ತನ್ನ ಆರ್ಡರ್ ಅನ್ನು ಮರೆತು ಹೋದರು.
ಅವ್ಯವಸ್ಥೆ ಸರಿಯಾದ ಬಳಿಕ ಸುಮಾರು 16 ವರ್ಷಗಳ ನಂತರ ಟ್ರಿಪೋಲಿಯಲ್ಲಿರುವ ಉದ್ಯಮಿಯ ಅಂಗಡಿಗೆ ನೋಕಿಯಾ ಫೋನ್​ಗಳು ಬಂದವು. ಈ ವೇಳೆ ಉದ್ಯಮಿ, ಸಂತೋಷದ ಜತೆಗೆ ಆಶ್ಚರ್ಯವನ್ನು ವ್ಯಕ್ತಪಡಿಸಿದರು. ಇನ್ನೊಂದೆಡೆ ಬೇಸರವೂ ಇತ್ತು. ಏಕೆಂದರೆ, ನೋಕಿಯಾ ಫೋನ್​ಗಳ ಬಳಕೆ ಇಂದು ತೀರಾ ಕಡಿಮೆ ಆಗಿದೆ. ಈ ಫೋನ್​ಗಳನ್ನು ಏನು ಮಾಡಬೇಕೆಂಬ ಗೊಂದಲ ಉದ್ಯಮಿಯಲ್ಲೂ ಇದೆ ಎಂದರೆ ತಪ್ಪಾಗಲಾರದು.
ಅಂದಹಾಗೆ, ಲಿಬಿಯಾದ ಉದ್ಯಮಿ ಬಾಕ್ಸ್​ ಓಪನ್​ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆ ಬಾಕ್ಸ್​ನಲ್ಲಿ ಒಂದು ಕಾಲದಲ್ಲಿ ಪ್ರಸಿದ್ಧವಾಗಿದ್ದ ನೋಕಿಯಾ ಮಾದರಿಗಳು (ಬಟನ್ ಫೋನ್‌ಗಳು) ಕಂಡುಬಂದಿವೆ. ಉದ್ಯಮಿ ಮತ್ತು ಅವರ ಸ್ನೇಹಿತರು ಹಳೆಯ ನೋಕಿಯಾ ಫೋನ್​ಗಳನ್ನು ನೋಡಿದಾಗ ಆಶ್ಚರ್ಯದಿಂದ ನಗುವುದನ್ನು ಅವರಿಂದ ತಡೆಯಲು ಸಾಧ್ಯವಾಗಲಿಲ್ಲ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net