ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ಶಾಸಕ ಸ್ಥಾನಕ್ಕೆ ಕುತ್ತು, ಮಾಜಿ ಸಚಿವರ ಮುಂದಿನ ನಡೆಯೇನು? Vinay Kulkarni

ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ಶಾಸಕ ಸ್ಥಾನಕ್ಕೆ ಕುತ್ತು, ಮಾಜಿ ಸಚಿವರ ಮುಂದಿನ ನಡೆಯೇನು? Vinay Kulkarni
ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ಶಾಸಕ ಸ್ಥಾನಕ್ಕೆ ಕುತ್ತು, ಮಾಜಿ ಸಚಿವರ ಮುಂದಿನ ನಡೆಯೇನು? Vinay Kulkarni
Published on

ಪ್ರಮುಖ ಮುಖ್ಯಾಂಶಗಳು

  • ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣ
  • ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಜೀವಾವಧಿ ಶಿಕ್ಷೆ
  • ಸುದೀರ್ಘ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ
  • ಜೀವಾವಧಿ ಶಿಕ್ಷೆಯಿಂದಾಗಿ ವಿನಯ್​ ಕುಲಕರ್ಣಿ ಶಾಸಕ ಸ್ಥಾನಕ್ಕೆ ಕುತ್ತು, ಹಾಗಾದರೆ ಮುಂದಿನ ನಡೆಯೇನು?
ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ( Vinay Kulkarni ) ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಜೀವಾವಧಿ ಶಿಕ್ಷೆ ವಿಧಿಸಿದೆ. ಇದರಿಂದ 14 ವರ್ಷಗಳ ಕಾಲ ವಿನಯ್​ ಕುಲಕರ್ಣಿ ಅವರು ಜೈಲುವಾಸ ಅನುಭವಿಸಲಿದ್ದಾರೆ. ಅಲ್ಲದೆ, ಅವರ ಶಾಸಕ ಸ್ಥಾನವೂ ಹೋಗಲಿದೆ.
ಅಂದಹಾಗೆ, ಸುದೀರ್ಘ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ತೀರ್ಪನ್ನು ನೀಡಿದ್ದು, ಇದು ವಿನಯ್​ ಕುಲಕರ್ಣಿ ಅವರ ರಾಜಕೀಯ ಜೀವನಕ್ಕೆ ದೊಡ್ಡ ಹಿನ್ನಡೆಯಾಗಿದೆ. ಈ ತೀರ್ಪಿನ ಬೆನ್ನಲ್ಲೇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.

ಶಾಸಕ ಸ್ಥಾನ ರದ್ದು

ಜನಪ್ರತಿನಿಧಿ ಕಾಯ್ದೆ 1951ರ ಅನ್ವಯ, ಯಾವುದೇ ಶಾಸಕ ಅಥವಾ ಸಂಸದರು ಕ್ರಿಮಿನಲ್ ಪ್ರಕರಣವೊಂದರಲ್ಲಿ ದೋಷಿ ಎಂದು ಸಾಬೀತಾಗಿ ಕನಿಷ್ಠ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆಗೆ ಗುರಿಯಾದಲ್ಲಿ, ಅವರು ತಕ್ಷಣವೇ ತಮ್ಮ ಸ್ಥಾನದಿಂದ ಅನರ್ಹಗೊಳ್ಳುತ್ತಾರೆ. ಅದರಲ್ಲೂ ವಿಶೇಷವಾಗಿ ಕೊಲೆ ಪ್ರಕರಣಗಳಲ್ಲಿ (IPC 302 ಅಥವಾ BNS 103) ಅಪರಾಧ ದೃಢಪಟ್ಟಾಗ ಕಾನೂನಿನ ಪ್ರಕಾರ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ವಿಧಿಸುವುದು ಅನಿವಾರ್ಯವಾಗಿದ್ದು, ಇದು ನಿಗದಿಪಡಿಸಿದ ಕನಿಷ್ಠ ಮಿತಿಗಿಂತ ಹೆಚ್ಚಿನ ಅವಧಿಯಾಗಿರುವುದರಿಂದ ಶಿಕ್ಷೆ ಪ್ರಕಟವಾದ ಕ್ಷಣದಿಂದಲೇ ಅವರ ಶಾಸಕತ್ವವು ಅಧಿಕೃತವಾಗಿ ರದ್ದಾಗುತ್ತದೆ. ಅಲ್ಲದೆ, ಶಿಕ್ಷೆಯ ಅವಧಿ ಪೂರ್ಣಗೊಂಡ ನಂತರವೂ ಮುಂದಿನ 6 ವರ್ಷಗಳ ಕಾಲ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ.

ಶಾಸಕ ಸ್ಥಾನ ರದ್ದಾಗುವ ಪ್ರಕ್ರಿಯೆ ಹೇಗೆ?

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಕಟಿಸಿರುವ ತೀರ್ಪಿನ ಪ್ರತಿ ರಾಜ್ಯ ವಿಧಾನಸಭೆಯ ಸಭಾದ್ಯಕ್ಷರ ಕಚೇರಿಗೆ ಕಳುಹಿಸಲಾಗುತ್ತದೆ. ತೀರ್ಪಿನ ಪ್ರತಿಯನ್ನು ಪರಿಶೀಲಿಸುವ ಸಭಾಧ್ಯಕ್ಷರು ಅಪರಾಧಿ ಸ್ಥಾನದಲ್ಲಿ ನಿಂತು ಶಿಕ್ಷೆಗೆ ಗುರಿಯಾಗಿರುವ ಶಾಸಕರನ್ನು ಆ ಸ್ಥಾನದಿಂದ ವಜಾಗೊಳಿಸಿ, ಅಧಿಕೃತ ಆದೇಶವನ್ನು ಹೊರಡಿಸುತ್ತಾರೆ. ಬಳಿಕ ಆ ಆದೇಶದ ಪ್ರತಿಯನ್ನು ಚುನಾವಣ ಆಯೋಗಕ್ಕೆ ಕಳುಹಿಸಲಾಗುತ್ತದೆ. ಬಳಿಕ, ಚುನಾವಣಾ ಆಯೋಗ್ಯ ಖಾಲಿಯಾದ ಶಾಸಕ ಸ್ಥಾನಕ್ಕೆ ಉಪಚುನಾವಣೆಯನ್ನು ನಡೆಸುತ್ತದೆ.

ವಿನಯ್​ ಕುಲಕರ್ಣಿಯ ಮುಂದಿನ ನಡೆ ಏನು?

ಅಂದಹಾಗೆ, ವಿನಯ್ ಕುಲಕರ್ಣಿ ಅವರ ಮುಂದಿನ ಕಾನೂನು ನಡೆ ಎಂದರೆ ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸುವುದು. ಶಿಕ್ಷೆಗೆ ತಡೆ ನೀಡುವಂತೆ ಅಥವಾ ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸುವಂತೆ ಅವರು ನ್ಯಾಯಾಲಯದ ಮೊರೆ ಹೋಗಬಹುದು. ಒಂದು ವೇಳೆ ಹೈಕೋರ್ಟ್ ಕೆಳಹಂತದ ನ್ಯಾಯಾಲಯದ ತೀರ್ಪಿಗೆ ತಡೆ ನೀಡದಿದ್ದರೆ, ಅವರು ಜೈಲಿನಲ್ಲೇ ಉಳಿಯಬೇಕಾಗುತ್ತದೆ.
ಅಂದಹಾಗೆ, ಚುನಾವಣ ಆಯೋಗ 6 ತಿಂಗಳ ನಂತರ ಉಪಚುನಾವಣೆಯನ್ನು ನಡೆಸುತ್ತದೆ. ಅಷ್ಟರಲ್ಲಿ ವಿನಯ್​ ಕುಲಕರ್ಣಿ ಅವರು ತಮಗೆ ವಿಧಿಸಿರುವ ಶಿಕ್ಷೆಯನ್ನು ರದ್ದು ಮಾಡಿಸಿಕೊಂಡರೆ ಅಥವಾ ತಡೆ ತಂದರೆ ಅವರ ಶಾಸಕ ಸ್ಥಾನ ಮರಳಿ ಸಿಗಲಿದೆ. ಕಾನೂನು ತಜ್ಞರ ಪ್ರಕಾರ, ಈ ಹಂತದಲ್ಲಿ ಜಾಮೀನು ಪಡೆಯುವುದು ಅಥವಾ ತೀರ್ಪನ್ನು ರದ್ದುಗೊಳಿಸುವುದು ಕುಲಕರ್ಣಿ ಅವರಿಗೆ ಅತ್ಯಂತ ಸವಾಲಿನ ಕೆಲಸವಾಗಿದೆ.

ನ್ಯಾಯಾಲಯದ ತೀರ್ಪು

ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ಶಾಸಕ ವಿನಯ್​ ಕುಲಕರ್ಣಿ ಅವರನ್ನು ದೋಷಿ ಎಂದು ಏಪ್ರಿಲ್​ 15ರಂದು ತೀರ್ಪು ಪ್ರಕಟಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಶಿಕ್ಷೆ ಪ್ರಮಾಣವನ್ನು ಪ್ರಕಟ ಮಾಡಿದೆ. ಮಾಜಿ ಸಚಿವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ವಿನಯ್​ ಕುಲಕರ್ಣಿ ಸೇರಿದಂತೆ 16 ಅಪರಾಧಿಗಳಿಗೂ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಇನ್ನೂ 19ನೇ ಅಪರಾಧಿ ಚೆನ್ನಕೇಶವ ಟಿಂಗರಿಕರ್​ಗೆ 7 ವರ್ಷ ಜೈಲು ಶಿಕ್ಷೆ ಹಾಗೂ 30 ಸಾವಿರ ರೂ. ದಂಡವನ್ನು ವಿಧಿಸಿದೆ. ಇದೇ ಸಮಯದಲ್ಲಿ 16 ಲಕ್ಷ ರೂ. ಪರಿಹಾರ ಹಣವನ್ನು ಹತ್ಯೆಯಾದ ಯೋಗೀಶ್​ ಗೌಡ ಅವರ ಮಕ್ಕಳಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಅಂದಹಾಗೆ, ಈ ಮಹತ್ವದ ತೀರ್ಪನ್ನು ನ್ಯಾಯಾಧೀಶರಾದ ಗಜಾನನ ಭಟ್ ಅವರು​ ಪ್ರಕಟಿಸಿದರು.
ಏಪ್ರಿಲ್​ 15ರಂದು ವಿನಯ್​ ಕುಲಕರ್ಣಿ ಸೇರಿದಂತೆ 17 ಆರೋಪಿಗಳನ್ನು ನ್ಯಾಯಾಲಯ ದೋಷಿ ಎಂದು ತೀರ್ಪು ಪ್ರಕಟಿಸಿತು. ಅಲ್ಲದೆ, ಅವರನ್ನು ವಶಕ್ಕೆ ಪಡೆದು ಜೈಲಿಗೆ ಕಳುಹಿಸುವಂತೆ ನ್ಯಾಯಾಲಯ ಸೂಚನೆ ನೀಡಿತು. ಅಂದೇ ಸಿಬಿಐ ಅಧಿಕಾರಿಗಳು ವಿನಯ್​ ಕುಲಕರ್ಣಿ ಸೇರಿದಂತೆ ಇತರೆ ಅಪರಾಧಿಗಳನ್ನು ತಮ್ಮ ವಶಕ್ಕೆ ಪಡೆದು ಜೈಲಿಗೆ ಕಳುಹಿಸಿದರು. ಇಂದು ಶಿಕ್ಷೆ ಪ್ರಮಾಣ ಪ್ರಕಟ ಹಿನ್ನೆಲೆಯಲ್ಲಿ ಎಲ್ಲ ಅಪರಾಧಿಗಳು ಪೊಲೀಸ್​ ಬಿಗಿ ಬಂದೋಬಸ್ತ್​ನಲ್ಲಿ ಕೋರ್ಟಿಗೆ ಹಾಜರಾಗಿದ್ದರು. ಅಂತಿಮವಾಗಿ ಇಂದು ಶಿಕ್ಷೆ ಪ್ರಮಾಣ ಪ್ರಕಟ ಮಾಡಿದ ಕೋರ್ಟ್​, ಮಾಜಿ ಸಚಿವ ವಿನಯ್​ ಕುಲಕರ್ಣಿ ಸೇರಿದಂತೆ 16 ಅಪರಾಧಿಗಳಿಗೂ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ತೀರ್ಪು ಕೇಳುತ್ತಿದ್ದಂತೆ ವಿನಯ್​ ಕುಲಕರ್ಣಿ ಕಣ್ಣೀರಿಟ್ಟರು. ಇದೇ ವೇಳೆ ಜೈಲಿಗೆ ಹೋಗುವ ಮುನ್ನ ಬಟ್ಟೆ ಬದಲಿಸಲು ಅನುಮತಿ ನೀಡಿ ಎಂದು ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ ಜೈಲಿನ ಕೈಪಿಡಿಯಲ್ಲಿ ಇರುವಂತೆ ಬಟ್ಟೆ ಧರಿಸಲು ಸೂಚನೆ ನೀಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net