ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಯುವತಿ ವಿರುದ್ಧ ದೂರು ದಾಖಲು!...ಏನಿದು ಝೀರೋ ಎಫ್‌ಐಆರ್..? | Zero FIR

Zero FIR | ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಯುವತಿ ವಿರುದ್ಧ ದೂರು ದಾಖಲು!
Zero FIR | ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಯುವತಿ ವಿರುದ್ಧ ದೂರು ದಾಖಲು!
Published on
ನವದೆಹಲಿ: ಇಲ್ಲಿನ ಜಂತರ್ ಮಂಥರ್‌ನಲ್ಲಿ ಕಳೆದ ವಾರ ನಡೆದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಕುರಿತಾದ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಯುವತಿಯೊಬ್ಬರ ವಿರುದ್ಧ ಝೀರೋ ಎಫ್‌ಐಆರ್ (Zero FIR) ದಾಖಲಿಸಲಾಗಿದೆ. ನೋಯ್ಡಾದ ಸೆಕ್ಟರ್ 168ರ ನಿವಾಸಿ ರುಚಿಕಾ ಸಿಂಗ್ ವಿರುದ್ಧ ಘಾಜಿಯಾಬಾದ್ ನಿವಾಸಿ ಸ್ಮೃತಿ ಸಿಂಗ್ ನೀಡಿದ ದೂರಿನ ಮೇರೆಗೆ ಜುಲೈ 29 ರಂದು ಗೌತಮ್ ಬುದ್ಧ ನಗರದ ಎಕ್ಸ್‌ಪ್ರೆಸ್‌ವೇ ಪೊಲೀಸ್ ಠಾಣೆಯಲ್ಲಿ ಈ ಎಫ್‌ಐಆರ್ ದಾಖಲಾಗಿದೆ.
ಎಫ್‌ಐಆರ್ ಪ್ರಕಾರ, ದೂರುದಾರರು ಜುಲೈ 23 ರಂದು ಜಂತರ್ ಮಂಥರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಆರೋಪಿಯು ಪ್ರಧಾನಮಂತ್ರಿಯವರ ವಿರುದ್ಧ ನಿಂದನೀಯ ಮತ್ತು ಆಕ್ಷೇಪಾರ್ಹ ಭಾಷೆಯನ್ನು ಬಳಸಿದ್ದಾರೆ, ಆ ಮೂಲಕ ಪ್ರಧಾನಮಂತ್ರಿಯವರ ಸಾಂವಿಧಾನಿಕ ಹುದ್ದೆಯ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ. ಸಾರ್ವಜನಿಕ ಶಾಂತಿಗೆ ಭಂಗ ತರುವ, ದುರುದ್ದೇಶಪೂರ್ವಕವಾಗಿ ವೈಷಮ್ಯ ಮತ್ತು ದ್ವೇಷವನ್ನು ಹರಡುವ ಉದ್ದೇಶದಿಂದ ಈ ಹೇಳಿಕೆಗಳನ್ನು ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ, ಈ ಹೇಳಿಕೆಗಳು ಸಾಮಾಜಿಕ ಸೌಹಾರ್ದತೆಯನ್ನು ಕದಡುವ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಸಾಮರ್ಥ್ಯವನ್ನು ಹೊಂದಿವೆ ಎಂದೂ ದೂರಿನಲ್ಲಿ ಹೇಳಲಾಗಿದೆ.
ಘಾಜಿಯಾಬಾದ್ ನಿವಾಸಿ ಸ್ಮೃತಿ ಸಿಂಗ್ ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
  • ಸೆಕ್ಷನ್ 352 (ಶಾಂತಿ ಭಂಗ ತರಲು ಉದ್ದೇಶಪೂರ್ವಕವಾಗಿ ಅವಮಾನಿಸುವುದು).
  • ಸೆಕ್ಷನ್ 353(1) (ಸಾರ್ವಜನಿಕರಿಗೆ ಕಿರುಕುಳ ಅಥವಾ ಉಪದ್ರವ ಉಂಟುಮಾಡುವ ಹೇಳಿಕೆಗಳು).
  • ಸೆಕ್ಷನ್ 356(1) (ಮಾನನಷ್ಟ).
ಏನಿದು ಝೀರೋ ಎಫ್‌ಐಆರ್..? ಪೊಲೀಸರು ಹೇಳಿದ್ದೇನು..?
ಈ ಕುರಿತು ಹಿರಿಯ ಪೊಲೀಸ್ ಅಧಿಕಾರ ಮನೀಷಾ ಸಿಂಗ್ ಪ್ರತಿಕ್ರಿಯಿಸಿ, ನೋಯ್ಡಾದ ಸೆಕ್ಟರ್ 168ರ ಯುವತಿ, ಭಾರತದ ಪ್ರಧಾನಿಯವರ ವಿರುದ್ಧ ಜಂತರ್ ಮಂಥರ್‌ನಲ್ಲಿ ನಿಂದನೀಯ ಭಾಷೆ ಬಳಸಿದ್ದಾರೆ ಎಂದು ಆರೋಪಿಸಿ ಘಾಜಿಯಾಬಾದ್ ನಿವಾಸಿಯೊಬ್ಬರು ದೂರು ನೀಡಿದ್ದಾರೆ. ಇದೊಂದು ಝೀರೋ ಎಫ್‌ಐಆರ್ ಆಗಿದ್ದು, ಮುಂದಿನ ತನಿಖೆಗಾಗಿ ನವದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಅಪರಾಧ ನಡೆದ ಸ್ಥಳ ಯಾವುದೇ ಆಗಿದ್ದರೂ, ಯಾವುದೇ ಪೊಲೀಸ್ ಠಾಣೆಯಲ್ಲಿ ಝೀರೋ ಎಫ್‌ಐಆರ್ ದಾಖಲಿಸಬಹುದು. ತನಿಖಾ ವ್ಯಾಪ್ತಿಯ ಸಮಸ್ಯೆಗಳಿಂದ ತನಿಖೆಗೆ ವಿಳಂಬವಾಗಬಾರದು ಎಂಬ ಕಾರಣಕ್ಕೆ, ನಂತರ ಇದನ್ನು ಸಂಬಂಧಪಟ್ಟ ಪ್ರಾದೇಶಿಕ ವ್ಯಾಪ್ತಿಯ ಪೊಲೀಸ್ ಠಾಣೆಗೆ ವರ್ಗಾಯಿಸಲಾಗುತ್ತದೆ. ಈಗ ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯು ತನಿಖೆ ನಡೆಸಿ, ಅದರ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಂತರ್ ಮಂಥರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ದೆಹಲಿಯ ಜಂತರ್ ಮಂಥರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನಡೆಸುತ್ತಿದ್ದ ಪ್ರತಿಭಟನೆಗಳು ಜುಲೈ 25 ರಂದು ಮುಕ್ತಾಯಗೊಂಡವು. ನೀಟ್​ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಸಾವಿರಾರು ವಿದ್ಯಾರ್ಥಿಗಳು ಸೋನಮ್​ ವಾಂಗ್ಚುಕ್​ ನೇತೃತ್ವದಲ್ಲಿ ಹೋರಾಟ ನಡೆಸಿದ್ದರು. ಧರಣಿ, ಪೊಲೀಸರೊಂದಿಗಿನ ಸಂಘರ್ಷ ಮತ್ತು ಜುಲೈ 20 ರಂದು ಸಂಸತ್ತಿಗೆ ನಡೆಸಿದ ಬೃಹತ್ ಪಾದಯಾತ್ರೆಯ ನಂತರ, ಈ ಸುದೀರ್ಘ ಹೋರಾಟದ ಪರಿಣಾಮವಾಗಿ ಅಂದಿನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ಬಲಪಡಿಸುವ ಉದ್ದೇಶದ ಶಿಕ್ಷಣ ಸುಧಾರಣೆಗಳು ಸೇರಿದಂತೆ ತಮ್ಮ ಮುಖ್ಯ ಬೇಡಿಕೆಗಳಿಗೆ ಸರ್ಕಾರ ಒಪ್ಪಿಕೊಂಡ ನಂತರ ಸಿಜೆಪಿ ಅಧಿಕೃತವಾಗಿ ಪ್ರತಿಭಟನೆಯನ್ನು ಅಂತ್ಯಗೊಳಿಸಿತು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net