ಎಂಜಿನಿಯರಿಂಗ್ ಪದವೀಧರರು 'ಕ್ರಿಮಿನಲ್ ವೇಸ್ಟ್' ಎಂದ ರೇವಂತ್ ರೆಡ್ಡಿ; ಸ್ವಯಂ ಘೋಷಿತ ಜಿನ್ ಝಿಗಳು ಈಗ ಧ್ವನಿ ಎತ್ತುತ್ತಾರಾ ಎಂದು ಬಿಜೆಪಿ ಕಿಡಿ! | Revanth Reddy

Revanth Reddy | ಎಂಜಿನಿಯರಿಂಗ್ ಪದವೀಧರರು 'ಕ್ರಿಮಿನಲ್ ವೇಸ್ಟ್' ಎಂದ ರೇವಂತ್ ರೆಡ್ಡಿ
Revanth Reddy | ಎಂಜಿನಿಯರಿಂಗ್ ಪದವೀಧರರು 'ಕ್ರಿಮಿನಲ್ ವೇಸ್ಟ್' ಎಂದ ರೇವಂತ್ ರೆಡ್ಡಿ
Published on
ಹೈದ್ರಾಬಾದ್​: ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ (Revanth Reddy) ಎಂಜಿನಿಯರಿಂಗ್ ಪದವೀಧರರ ಉದ್ಯೋಗಾರ್ಹತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಈ ಸಂದರ್ಭದಲ್ಲಿ ಅವರು ಬಳಸಿದ ಕ್ರಿಮಿನಲ್ ವೇಸ್ಟ್ ಎಂಬ ಪದವು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಸಿಎಂ ವಿದ್ಯಾರ್ಥಿಗಳನ್ನು ಅವಮಾನಿಸಿದ್ದಾರೆ ಎಂದು ವಿರೋಧ ಪಕ್ಷಗಳಾದ ಬಿಆರ್​ಎಸ್​ ಮತ್ತು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿವೆ.
ಹೈದ್ರಾಬಾದ್​​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರೇವಂತ್ ರೆಡ್ಡಿ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ತಮ್ಮ ಎರಡು ಕಣ್ಣುಗಳಿದ್ದಂತೆ ಎಂದರು. ಪ್ರತಿವರ್ಷ ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದು, 1.10 ಲಕ್ಷ ಎಂಜಿನಿಯರಿಂಗ್ ಪದವೀಧರರು ತಮ್ಮ ಕೋರ್ಸ್ ಪೂರ್ಣಗೊಳಿಸುತ್ತಿದ್ದಾರೆ. ಆದರೆ ಇವರಲ್ಲಿ ಅನೇಕರಿಗೆ ಒಂದು ಉದ್ಯೋಗದ ಅರ್ಜಿಯನ್ನು ಬರೆಯಲು ಕೂಡ ಬರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನೀವು ಶಿಕ್ಷಕರು ಅವರಿಗೆ ಎಂಜಿನಿಯರಿಂಗ್ ಪದವೀಧರರಿಗೆ ಒಂದು ಖಾಲಿ ಕಾಗದವನ್ನು ಕೊಟ್ಟು ಉದ್ಯೋಗದ ಅರ್ಜಿಯನ್ನು ಬರೆಯಲು ಹೇಳಿ. ಕ್ರಿಮಿನಲ್ ವೇಸ್ಟ್. ಅವರು ಎಂಜಿನಿಯರಿಂಗ್ ಓದಿರುವುದರಿಂದ ಸಣ್ಣಪುಟ್ಟ ಕೆಲಸಕ್ಕೂ ಅರ್ಜಿ ಸಲ್ಲಿಸುವುದಿಲ್ಲ. ಯಾವುದೇ ಕೌಶಲ್ಯವನ್ನೂ ಕರಗತ ಮಾಡಿಕೊಳ್ಳುವುದಿಲ್ಲ ಎಂದು ರೇವಂತ್ ರೆಡ್ಡಿ ಹೇಳಿದ್ದರು. ನಂತರ ಅವರು ತಾವು ವಿದ್ಯಾರ್ಥಿಗಳನ್ನಲ್ಲ, ಬದಲಿಗೆ ದೋಷಪೂರಿತ ಶಿಕ್ಷಣ ವ್ಯವಸ್ಥೆಯನ್ನು ದೂರುತ್ತಿರುವುದಾಗಿ ಸ್ಪಷ್ಟನೆ ನೀಡಿದರು.
ರೇವಂತ್ ರೆಡ್ಡಿ ಹೇಳಿಕೆಗೆ ವಿಪಕ್ಷಗಳು ಕಿಡಿ
ಮುಖ್ಯಮಂತ್ರಿಗಳು ಎಂಜಿನಿಯರಿಂಗ್ ಪದವೀಧರರನ್ನು ಮತ್ತು ಅವರ ಸಾಮರ್ಥ್ಯವನ್ನು ಅವಮಾನಿಸಿದ್ದಾರೆ ಎಂದು ಬಿಆರ್​ಎಸ್​ ಮತ್ತು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಬಿಆರ್​ಎಸ್​ ಕಾರ್ಯಾಧ್ಯಕ್ಷ ಕೆ ಟಿ ರಾಮರಾವ್ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದು, ಅದರಲ್ಲಿ, ರೇವಂತ್ ರೆಡ್ಡಿ ಅವರಿಗೆ ಇಂತಹ ಹೇಳಿಕೆ ನೀಡಲು ಯಾವ ಅರ್ಹತೆಯಿದೆ ಎಂದು ಪ್ರಶ್ನಿಸಿದರು. ಅವರು ತಮ್ಮ ಜೀವನದಲ್ಲಿ ಎಂದಾದರೂ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದಿದ್ದಾರೆಯೇ..? ಉದ್ಯೋಗಕ್ಕಾಗಿ ಎಂದಾದರೂ ಸಂದರ್ಶನಕ್ಕೆ ಹಾಜರಾಗಿದ್ದಾರೆಯೇ..? ವೃತ್ತಿಪರ ವಾತಾವರಣದಲ್ಲಿ ಎಂದಾದರೂ ಕೆಲಸ ಮಾಡಿದ್ದಾರೆಯೇ ಎಂದು ತರಾಟೆಗೆ ತೆಗೆದುಕೊಂಡರು.
ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎನ್ ವಿ ಸುಭಾಷ್ ಮಾತನಾಡಿ, ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ಮೂರ್ಖರು ಎಂದು ಕರೆದರೆ, ಅವರ ಆಪ್ತ ಶಿಷ್ಯ ರೇವಂತ್ ರೆಡ್ಡಿ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಕ್ರಿಮಿನಲ್ ವೇಸ್ಟ್ ಎಂದು ಕರೆಯುವ ಮೂಲಕ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದರು. ಎಂಜಿನಿಯರ್‌ಗಳು ದೇಶದ ಬೆನ್ನೆಲುಬು ಎಂದು ಬಣ್ಣಿಸಿದ ಅವರು, ಕಾಂಗ್ರೆಸ್ ಇವರನ್ನು ಅವಮಾನಿಸುವ ಮೂಲಕ ಗಂಭೀರ ತಪ್ಪು ಮಾಡಿದೆ ಎಂದು ವಾಗ್ದಾಳಿ ನಡೆಸಿದರು. ಅಲ್ಲದೆ, ರೋಚಕ ವಿದ್ಯಮಾನವೊಂದನ್ನು ಉಲ್ಲೇಖಿಸಿ, ರೇವಂತ್ ರೆಡ್ಡಿ ಹೇಳಿಕೆಯ ವಿರುದ್ಧ ಈಗ ಸ್ವಯ ಘೋಷಿತ ಜಿನ್ ಝಿ ಕಾರ್ಯಕರ್ತರು ಮತ್ತು ವಿರೋಧಿಗಳು ಧ್ವನಿ ಎತ್ತುವರೇ ಎಂದು ಪ್ರಶ್ನಿಸಿದರು.
ವಿರೋಧ ಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಸಂಸದ ಚಾಮಲ ಕಿರಣ್ ಕುಮಾರ್ ರೆಡ್ಡಿ, ಬಿಆರ್​ಎಸ್​ ನಾಯಕ ಕೆಟಿಆರ್ ರಾಜಕೀಯ ವಂಶಪಾರಂಪರ್ಯದ ಮೂಲಕ ರಾಜಕೀಯ ಪ್ರವೇಶಿಸಿದ್ದಾರೆಯೇ ಹೊರತು ತಳಮಟ್ಟದಿಂದ ಬೆಳೆದುಬಂದವರಲ್ಲ ಎಂದು ವಾಗ್ದಾಳಿ ನಡೆಸಿದರು. ರೇವಂತ್ ರೆಡ್ಡಿ ಜೆಡ್‌ಪಿಟಿಸಿ ಸದಸ್ಯರಿಂದ ಹಿಡಿದು ಎಂಎಲ್‌ಸಿ, ಶಾಸಕ, ಸಂಸದ ಮತ್ತು ಈಗ ಮುಖ್ಯಮಂತ್ರಿಯವರೆಗೆ ಹಂತ ಹಂತವಾಗಿ ಬೆಳೆದು ಬಂದ ನಾಯಕ ಎಂದು ಸಮರ್ಥಿಸಿಕೊಂಡರು. ಅಬ್ರಾಹಂ ಲಿಂಕನ್ ಮತ್ತು ವಿನ್‌ಸ್ಟನ್ ಚರ್ಚಿಲ್ ಅವರಂತಹ ನಾಯಕರ ಸಾಧನೆಗಳು ಶೈಕ್ಷಣಿಕ ಪದವಿಗಳು ಅಥವಾ ಕುಟುಂಬದ ಪ್ರಿವಿಲೆಜ್‌ನಿಂದಲ್ಲ, ಬದಲಾಗಿ ನಾಯಕತ್ವ ಮತ್ತು ದೃಢಸಂಕಲ್ಪದಿಂದ ಬಂದಿವೆ ಎಂದು ಇತಿಹಾಸ ಹೇಳುತ್ತದೆ ಎಂದರು. ರಾಜಕೀಯಕ್ಕೆ ಪ್ಯಾರಾಚೂಟ್ ಮೂಲಕ ಬರುವವರಿಗಿಂತ ತಳಮಟ್ಟದ ನಾಯಕರಿಗೆ ಜನರ ಆಕಾಂಕ್ಷೆಗಳು ಚೆನ್ನಾಗಿ ತಿಳಿದಿರುತ್ತವೆ ಎಂದು ತಿರುಗೇಟು ನೀಡಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net