32 ವರ್ಷಗಳ ಹಿಂದಿನ ಸಫೈರ್ ಸೀಕ್ರೆಟ್ ಆಪರೇಷನ್ ರಿಪೀಟ್ ಆಗುತ್ತಾ? ಟ್ರಂಪ್ ಮಾಸ್ಟರ್ ಪ್ಲಾನ್‌ಗೆ ಬೆಚ್ಚಿಬಿದ್ದ ಇರಾನ್! Project Sapphire

32 ವರ್ಷಗಳ ಹಿಂದಿನ ಸಫೈರ್ ಸೀಕ್ರೆಟ್ ಆಪರೇಷನ್ ರಿಪೀಟ್ ಆಗುತ್ತಾ? ಟ್ರಂಪ್ ಮಾಸ್ಟರ್ ಪ್ಲಾನ್‌ಗೆ ಬೆಚ್ಚಿಬಿದ್ದ ಇರಾನ್! Project Sapphire
32 ವರ್ಷಗಳ ಹಿಂದಿನ ಸಫೈರ್ ಸೀಕ್ರೆಟ್ ಆಪರೇಷನ್ ರಿಪೀಟ್ ಆಗುತ್ತಾ? ಟ್ರಂಪ್ ಮಾಸ್ಟರ್ ಪ್ಲಾನ್‌ಗೆ ಬೆಚ್ಚಿಬಿದ್ದ ಇರಾನ್! Project Sapphire
Published on
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ದಿನದಿಂದ ದಿನಕ್ಕೆ ಭೀಕರ ಸ್ವರೂಪ ಪಡೆಯುತ್ತಿದೆ. ಫೆಬ್ರವರಿ 28ರಂದು ಆರಂಭವಾದ ಈ ಸಂಘರ್ಷ ಈಗ 33ನೇ ದಿನಕ್ಕೆ ಕಾಲಿಟ್ಟಿದ್ದು, ಸಾವಿನ ಸಂಖ್ಯೆ 3,000 ಗಡಿ ದಾಟಿದೆ. ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನಿಂದ ಸುಮಾರು 450 ಕಿಲೋಗ್ರಾಂಗಳಷ್ಟು ಸಂವರ್ಧಿತ ಯುರೇನಿಯಂ(Project Sapphire) ಅನ್ನು ವಶಪಡಿಸಿಕೊಳ್ಳಲು ಸೇನಾ ಕಾರ್ಯಾಚರಣೆಯ ಗುಪ್ತ ಯೋಜನೆಯನ್ನು ರೂಪಿಸುತ್ತಿದ್ದಾರೆ ಎಂಬ ವರದಿಗಳು ಜಾಗತಿಕ ರಾಜಕೀಯದಲ್ಲಿ ಸಂಚಲನ ಮೂಡಿಸಿವೆ.
ಅಮೆರಿಕದ ಈ ಆಲೋಚನೆಯು 1994ರಲ್ಲಿ ನಡೆದ ಐತಿಹಾಸಿಕ ಪ್ರಾಜೆಕ್ಟ್ ಸಫೈರ್ ಕಾರ್ಯಾಚರಣೆಯನ್ನು ನೆನಪಿಸುತ್ತಿದೆ. ಆದರೆ, ಅಂದಿನ ಕಜಕಿಸ್ತಾನದ ಸನ್ನಿವೇಶಕ್ಕೂ ಇಂದಿನ ಇರಾನ್‌ನ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ರಕ್ಷಣಾ ತಜ್ಞರು ಎಚ್ಚರಿಸಿದ್ದಾರೆ.

ಏನಿದು 'ಪ್ರಾಜೆಕ್ಟ್ ಸಫೈರ್..? 

1994ರಲ್ಲಿ ಬಿಲ್ ಕ್ಲಿಂಟನ್ ಆಡಳಿತಾವಧಿಯಲ್ಲಿ ನಡೆದ ಈ ಕಾರ್ಯಾಚರಣೆ ಅಣು ಪ್ರಸರಣ ತಡೆ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಸೋವಿಯತ್ ಒಕ್ಕೂಟದ ಪತನದ ನಂತರ, ಕಜಕಿಸ್ತಾನದ ಉಲ್ಬಾ ಮೆಟಲರ್ಜಿಕಲ್ ಸೌಲಭ್ಯದಲ್ಲಿ 600 ಕೆಜಿ ಅತ್ಯಂತ ಸಂವರ್ಧಿತ ಯುರೇನಿಯಂ ಅಸುರಕ್ಷಿತವಾಗಿತ್ತು.
ಅಂದು ಅಮೆರಿಕ ಮತ್ತು ಕಜಕಿಸ್ತಾನ ಸರ್ಕಾರಗಳು ಪರಸ್ಪರ ಸಹಕರಿಸಿದ್ದವು. 31 ತಜ್ಞರ ತಂಡವು ಹಗಲಿರುಳು ಶ್ರಮಿಸಿ, ಯುರೇನಿಯಂ ಅನ್ನು ವಿಶೇಷ ಕಂಟೈನರ್‌ಗಳಲ್ಲಿ ತುಂಬಿ ಸಿ-5 ಗ್ಯಾಲಕ್ಸಿ ಸರಕು ವಿಮಾನದ ಮೂಲಕ ಅಮೆರಿಕಕ್ಕೆ ಸಾಗಿಸಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕ ಕಜಕಿಸ್ತಾನಕ್ಕೆ ಆರ್ಥಿಕ ಪರಿಹಾರ ನೀಡಿತ್ತು. ಅಂದು ಒಂದೂ ಗುಂಡು ಹಾರಿರಲಿಲ್ಲ, ಒಬ್ಬನೇ ಒಬ್ಬ ಸೈನಿಕ ಮೃತಪಟ್ಟಿರಲಿಲ್ಲ.

ಇರಾನ್‌ನಲ್ಲಿ ಇದು ಏಕೆ ಅಸಾಧ್ಯ? - ತಜ್ಞರ ವಿಶ್ಲೇಷಣೆ

ರಕ್ಷಣಾ ತಜ್ಞರ ಪ್ರಕಾರ, ಇರಾನ್‌ನಲ್ಲಿ ಅಂತಹದ್ದೇ ಕಾರ್ಯಾಚರಣೆ ಮಾಡುವುದು ಅಮೆರಿಕಕ್ಕೆ ಆತ್ಮಹತ್ಯಾತ್ಮಕ ನಿರ್ಧಾರವಾಗಬಹುದು. ಇದಕ್ಕೆ ಮುಖ್ಯ ಕಾರಣಗಳು ಇಲ್ಲಿವೆ.

1. ಸಹಕಾರದ ಬದಲು ಸಂಘರ್ಷ

ಕಜಕಿಸ್ತಾನ ಅಂದು ಅಮೆರಿಕಕ್ಕೆ ಬಾಗಿಲು ತೆರೆದಿತ್ತು. ಆದರೆ ಇರಾನ್ ಮತ್ತು ಅಮೆರಿಕ ಇಂದು ಪರಮ ಶತ್ರುಗಳು. ಇರಾನ್ ತನ್ನ ಪರಮಾಣು ಯೋಜನೆಯನ್ನು ತನ್ನ ರಾಷ್ಟ್ರೀಯ ಗೌರವ ಮತ್ತು ಭದ್ರತೆಯ ಅವಿಭಾಜ್ಯ ಅಂಗವೆಂದು ಭಾವಿಸುತ್ತದೆ. ಅಲ್ಲಿ ಅಮೆರಿಕದ ಹಸ್ತಕ್ಷೇಪಕ್ಕೆ ಇಂಚಿಂಚೂ ಪ್ರತಿರೋಧ ವ್ಯಕ್ತವಾಗುವುದು ನಿಶ್ಚಿತವಾಗಿದೆ.

2. ಭೂಸೇನಾ ದಾಳಿಯ ಅಪಾಯ

ಕೇವಲ ವೈಮಾನಿಕ ದಾಳಿಗಳಿಂದ ಇರಾನ್‌ನ ಪರಮಾಣು ಸಾಮರ್ಥ್ಯವನ್ನು ನಾಶಪಡಿಸಲು ಸಾಧ್ಯವಿಲ್ಲ. ಯುರೇನಿಯಂ ಅನ್ನು ಭೌತಿಕವಾಗಿ ವಶಪಡಿಸಿಕೊಳ್ಳಬೇಕೆಂದರೆ ಅಮೆರಿಕದ ಸೈನಿಕರು ಇರಾನ್ ಮಣ್ಣಿಗೆ ಇಳಿಯಲೇಬೇಕು. ಇದು ಅತ್ಯಂತ ಅಪಾಯಕಾರಿ ಆಯ್ಕೆಯಾಗಿದ್ದು, ಲಕ್ಷಾಂತರ ಸೈನಿಕರ ಪ್ರಾಣಕ್ಕೆ ಸಂಚಕಾರ ತರಬಹುದು.

3. ನರಕಕ್ಕೆ ಸ್ವಾಗತ ಎಂದ ಇರಾನ್

ಇತ್ತೀಚೆಗೆ ಇರಾನ್ ರಾಯಭಾರ ಕಚೇರಿ Xನಲ್ಲಿ ಅಮೆರಿಕಕ್ಕೆ ನೇರ ಎಚ್ಚರಿಕೆ ನೀಡಿದೆ. ನಾವು ನಿಮಗಾಗಿ ಕಾಯುತ್ತಿದ್ದೇವೆ ಎಂಬ ಸಂದೇಶದೊಂದಿಗೆ ಟೆಹ್ರಾನ್ ಟೈಮ್ಸ್ ಪತ್ರಿಕೆಯ ಮುಖಪುಟವನ್ನು ಹಂಚಿಕೊಂಡಿದೆ. ಅದರ ಹೆಡ್‌ಲೈನ್ ವೆಲ್ಕಮ್ ಟು ಹೆಲ್ ಎಂದಿತ್ತು. ಅಂದರೆ, ಅಮೆರಿಕದ ಭೂಸೇನೆಯನ್ನು ಎದುರಿಸಲು ಇರಾನ್‌ನ ಅತ್ಯಂತ ಪ್ರಬಲ ಪಡೆಗಳು ಸರ್ವಸನ್ನದ್ಧವಾಗಿವೆ.

ಪ್ರಸ್ತುತ ಯುದ್ಧದ ಸ್ಥಿತಿಗತಿ 

ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿಯಿಂದ ಈ ಮಹಾಯುದ್ಧ ಸದೃಶ ಪರಿಸ್ಥಿತಿ ಆರಂಭವಾಯಿತು. ಪ್ರತಿಯಾಗಿ ಇರಾನ್ ಮಿತ್ರ ರಾಷ್ಟ್ರಗಳಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದೆ.
ಅಲ್ಲದೆ, 32 ವರ್ಷಗಳ ಹಿಂದೆ ಕಜಕಿಸ್ತಾನದಲ್ಲಿ ನಡೆದದ್ದು ರಾಜತಾಂತ್ರಿಕ ವಿಜಯವಾಗಿತ್ತು. ಆದರೆ ಇರಾನ್‌ನಲ್ಲಿ ಅಮೆರಿಕ ಏನಾದರೂ ಸಾಹಸಕ್ಕೆ ಕೈಹಾಕಿದರೆ ಅದು ಕೇವಲ ಸೇನಾ ಕಾರ್ಯಾಚರಣೆಯಾಗಿ ಉಳಿಯದೆ, ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡಬಹುದು. 450 ಕೆಜಿ ಯುರೇನಿಯಂ ವಶಪಡಿಸಿಕೊಳ್ಳುವ ಹಂಬಲ ಅಮೆರಿಕಕ್ಕೆ ಭಾರಿ ಬೆಲೆ ತೆರುವಂತೆ ಮಾಡಬಹುದು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net