ಇರಾನ್-ಅಮೆರಿಕ ಶಾಂತಿ ಒಪ್ಪಂದವಾದರೂ ನಿಲ್ಲಲ್ಲ ಲೆಬನಾನ್ ಸಮರ! ನೆತನ್ಯಾಹು ಖಡಕ್ ಎಚ್ಚರಿಕೆ | Israel-Lebanon War

ಇರಾನ್-ಅಮೆರಿಕ ಶಾಂತಿ ಒಪ್ಪಂದವಾದರೂ ನಿಲ್ಲಲ್ಲ ಲೆಬನಾನ್ ಸಮರ! ನೆತನ್ಯಾಹು ಖಡಕ್ ಎಚ್ಚರಿಕೆ
ಇರಾನ್-ಅಮೆರಿಕ ಶಾಂತಿ ಒಪ್ಪಂದವಾದರೂ ನಿಲ್ಲಲ್ಲ ಲೆಬನಾನ್ ಸಮರ! ನೆತನ್ಯಾಹು ಖಡಕ್ ಎಚ್ಚರಿಕೆ
Published on
ಟೆಲ್​ಅವಿವ್​: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀಕರತೆ ತಗ್ಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ನಡುವೆ ಸಂಭವನೀಯ ಶಾಂತಿ ಒಪ್ಪಂದದ ಮಾತುಕತೆಗಳು ನಡೆಯುತ್ತಿದ್ದರೂ, ಲೆಬನಾನ್‌ನಲ್ಲಿರುವ ಹೆಜ್ಬುಲ್ಲಾ(Israel-Lebanon War) ವಿರುದ್ಧದ ತನ್ನ ಸೈನಿಕ ಕಾರ್ಯಾಚರಣೆಯನ್ನು ಇಸ್ರೇಲ್ ನಿಲ್ಲಿಸುವುದಿಲ್ಲ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.

ನೆತನ್ಯಾಹು ಅವರ 'ಲೆಬನಾನ್' ಪ್ಲಾನ್

ಇಸ್ರೇಲ್ ಹಯೋಮ್ ಪತ್ರಿಕೆಯ ವರದಿಯ ಪ್ರಕಾರ, ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಮುಚ್ಚಿದ ಬಾಗಿಲಿನ ಮಾತುಕತೆಯಲ್ಲಿ ನೆತನ್ಯಾಹು ಈ ಕಠಿಣ ನಿಲುವು ತಳೆದಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವೆ ಯಾವುದೇ ಒಪ್ಪಂದವಾದರೂ, ಅದು ಲೆಬನಾನ್ ರಂಗಕ್ಕೆ ಅನ್ವಯಿಸುವುದಿಲ್ಲ. ಹೆಜ್ಬುಲ್ಲಾವನ್ನು ಲಿಟಾನಿ ನದಿಯ ಆಚೆಗೆ ಅಟ್ಟಿ ಇಸ್ರೇಲ್‌ನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಿಕ್ಕಿರುವ ಈ ಐತಿಹಾಸಿಕ ಅವಕಾಶವನ್ನು ನಾವು ಬಿಟ್ಟುಕೊಡುವುದಿಲ್ಲ ಎಂದು ನೆತನ್ಯಾಹು ಹೇಳಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಕದನ ವಿರಾಮ ಪ್ರಸ್ತಾವನೆಯನ್ನೂ ಇಸ್ರೇಲ್ ತಿರಸ್ಕರಿಸಿದೆ.

ಲೆಬನಾನ್ ಸರ್ಕಾರದ ಆಕ್ರೋಶ: ನಮ್ಮನ್ನು ಯುದ್ಧಕ್ಕೆ ಎಳೆದದ್ದು ಇರಾನ್

ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಲೆಬನಾನ್ ಸರ್ಕಾರವು ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ಗಳ (IRGC) ಮೇಲೆ ನೇರ ವಾಗ್ದಾಳಿ ನಡೆಸಿದೆ. IRGC ಸದಸ್ಯರು ಅಕ್ರಮವಾಗಿ ಲೆಬನಾನ್ ಪ್ರವೇಶಿಸಿ ಹೆಜ್ಬುಲ್ಲಾ ಕಾರ್ಯಾಚರಣೆಗಳನ್ನು ನಿಯಂತ್ರಿಸುತ್ತಿದ್ದಾರೆ ಮತ್ತು ನಮ್ಮ ದೇಶವನ್ನು ಯುದ್ಧದ ಕೂಪಕ್ಕೆ ತಳ್ಳುತ್ತಿದ್ದಾರೆ ಎಂದು ಲೆಬನಾನ್ ದೂರಿದೆ. ಈಗಾಗಲೇ ಹೆಜ್ಬುಲ್ಲಾದ ಮಿಲಿಟರಿ ಚಟುವಟಿಕೆಗಳನ್ನು ನಿಷೇಧಿಸಿರುವ ಲೆಬನಾನ್ ಸರ್ಕಾರ, ತನ್ನೊಂದಿಗೆ ನೇರ ಮಾತುಕತೆ ನಡೆಸುವಂತೆ ಇಸ್ರೇಲ್‌ಗೆ ಮನವಿ ಮಾಡಿದೆ.
ಆದರೆ ಹೆಜ್ಬುಲ್ಲಾ ಮುಖ್ಯಸ್ಥ ನಯೀಮ್ ಖಾಸಿಮ್ ಮಾತುಕತೆಯ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದು, ದಾಳಿಯ ನಡುವೆ ಮಾತುಕತೆ ಎಂದರೆ ಅದು ಶರಣಾಗತಿಯ ಸಂಕೇತ ಎಂದು ಗುಡುಗಿದ್ದಾರೆ.

ಇರಾನ್‌ನ ಪಟ್ಟು: ಲೆಬನಾನ್‌ಗೂ ಬೇಕು ಗ್ಯಾರಂಟಿ

ಒಂದೆಡೆ ಶಾಂತಿ ಮಾತುಕತೆಯ ಸುದ್ದಿ ಹರಡುತ್ತಿದ್ದರೆ, ಇರಾನ್ ಮಾತ್ರ ತನ್ನ ಪರಮಾಪ್ತ ಮಿತ್ರ ಹೆಜ್ಬುಲ್ಲಾವನ್ನು ಕೈಬಿಡಲು ಸಿದ್ಧವಿಲ್ಲ. ಅಮೆರಿಕದೊಂದಿಗೆ ಯಾವುದೇ ಒಪ್ಪಂದವಾದರೂ ಅದರಲ್ಲಿ ಲೆಬನಾನ್ ಮೇಲಿನ ಇಸ್ರೇಲ್ ದಾಳಿಯನ್ನು ನಿಲ್ಲಿಸುವ ಶರತ್ತು ಇರಲೇಬೇಕು ಎಂದು ಇರಾನ್ ಪಟ್ಟು ಹಿಡಿದಿದೆ. ವಾಲ್ ಸ್ಟ್ರೀಟ್ ಜರ್ನಲ್ ಮತ್ತು ರಾಯಿಟರ್ಸ್ ವರದಿಗಳ ಪ್ರಕಾರ, ಇರಾನ್ ಈ ಬೇಡಿಕೆಯನ್ನು ಮಧ್ಯಸ್ಥಗಾರರ ಮುಂದೆ ಬಲವಾಗಿ ಮಂಡಿಸಿದೆ.

ಹೆಜ್ಬುಲ್ಲಾ ಮೇಲಿನ ಪ್ರಹಾರದ ಭೀಕರತೆ

ಇರಾನ್ ಮತ್ತು ಇಸ್ರೇಲ್ ಜಂಟಿ ದಾಳಿಯಲ್ಲಿ ಖಮೇನಿ ಹತ್ಯೆಯಾದ ನಂತರ ಹೆಜ್ಬುಲ್ಲಾ ಟೆಲ್ ಅವಿವ್ ಮೇಲೆ ಭೀಕರ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಲೆಬನಾನ್ ಮೇಲೆ ನಡೆಸುತ್ತಿರುವ ಆಪರೇಷನ್​ನಲ್ಲಿ ಈಗಾಗಲೇ 1,238ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 1982ರಲ್ಲಿ ಇರಾನ್‌ನಿಂದ ಸ್ಥಾಪಿಸಲ್ಪಟ್ಟ ಹೆಜ್ಬುಲ್ಲಾ, ಇಂದು ಇಸ್ರೇಲ್ ಪಾಲಿಗೆ ಅತಿದೊಡ್ಡ ತಲೆನೋವಾಗಿದೆ.
ಟ್ರಂಪ್ ಮತ್ತು ಇರಾನ್ ನಡುವಿನ ಒಪ್ಪಂದವು ಕೇವಲ ಕಾಗದದ ಮೇಲಿನ ಒಪ್ಪಂದವಾಗಿ ಉಳಿಯುತ್ತದೆಯೇ ಅಥವಾ ಇಸ್ರೇಲ್ ತನ್ನ ಹಠದಂತೆ ಹೆಜ್ಬುಲ್ಲಾವನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆಯೇ ಎಂಬುದು ಈಗ ಜಾಗತಿಕ ರಾಜಕೀಯದ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಲೆಬನಾನ್ ಬಗ್ಗೆ ಅಧ್ಯಕ್ಷ ಟ್ರಂಪ್‌ಗೆ ಕಾಳಜಿಯಿಲ್ಲ ಎಂದು ಇಸ್ರೇಲ್‌ನ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಹೇಳಿಕೆ ಈ ಬಿಕ್ಕಟ್ಟನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net