ದೇಶಾದ್ಯಂತ ನೀಟ್ ಪ್ರತಿಭಟನೆಯ ಕಾವು; ಪರೀಕ್ಷೆಯನ್ನೇ ಸಂಪೂರ್ಣವಾಗಿ ರದ್ದುಗೊಳಿಸಲು ತಮಿಳುನಾಡು ಸಿಎಂ ವಿಜಯ್ ಪಡೆ ಪಟ್ಟು! NEET Protest

NEET Protest(ಚಿತ್ರ X)
NEET Protest(ಚಿತ್ರ X)
Published on
ಚೆನ್ನೈ: ದೆಹಲಿಯಲ್ಲಿ ನೀಟ್ (NEET) ಪರೀಕ್ಷೆ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ, ತಮಿಳುನಾಡಿನ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವು ನೀಟ್ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಆಗ್ರಹಿಸಿದೆ. ಕೇವಲ ಪರೀಕ್ಷಾ ಅಕ್ರಮಗಳನ್ನು ತಡೆಯುವುದಷ್ಟೇ ಅಲ್ಲದೆ, ಪ್ರವೇಶ ಪರೀಕ್ಷೆಯನ್ನೇ ರದ್ದುಪಡಿಸಬೇಕು ಎಂದು ಪಟ್ಟು ಹಿಡಿದಿದ್ದು, ಇದರೊಂದಿಗೆ ವೈದ್ಯಕೀಯ ಶಿಕ್ಷಣ ಮತ್ತು ಪ್ರವೇಶಾತಿಯ ಸಂಪೂರ್ಣ ಅಧಿಕಾರ ಹಾಗೂ ಹಕ್ಕನ್ನು ಕೇಂದ್ರ ಸರ್ಕಾರವು ಆಯಾ ರಾಜ್ಯ ಸರ್ಕಾರಗಳಿಗೆ ಮರಳಿಸಬೇಕು ಎಂದು ಟಿವಿಕೆ ಬಲವಾಗಿ ಒತ್ತಾಯಿಸಿದೆ.

ರಾಜಿಯಾಗದ ಮತ್ತು ದೃಢವಾದ ನಿಲುವು: ಟಿವಿಕೆ

ಈ ವಿಷಯದಲ್ಲಿ ತನ್ನ ನಿಲುವು ದೃಢ ಹಾಗೂ ರಾಜಿಯಾಗದಂತಹದ್ದು ಎಂಬುದನ್ನು ಟಿವಿಕೆ ಪುನರುಚ್ಚರಿಸಿದೆ. ವೈದ್ಯಕೀಯ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಮಟ್ಟದ ನೀಟ್ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕೆಂದು ಪಕ್ಷವು ಬಲವಾಗಿ ಪ್ರತಿಪಾದಿಸಿದೆ.ಅಷ್ಟೇ ಅಲ್ಲದೇ ಶಿಕ್ಷಣವನ್ನು ಸಂವಿಧಾನದ ಸಮಕಾಲೀನ ಪಟ್ಟಿಯಿಂದ ರಾಜ್ಯ ಪಟ್ಟಿಗೆ ಬದಲಾಯಿಸಬೇಕೆಂದು ಪಕ್ಷವು ಕರೆ ನೀಡಿತು. ಇದು ಈ ಸಮಸ್ಯೆಗೆ ದೀರ್ಘಕಾಲೀನ ಪರಿಹಾರವನ್ನು ಒದಗಿಸುತ್ತದೆ ಎಂದು ವಾದಿಸಿತು.
ಒಂದು ವೇಳೆ ಹಾಗೆ ಮಾಡುವಲ್ಲಿ ಯಾವುದೇ ಕಾನೂನು ಅಥವಾ ಕಾರ್ಯವಿಧಾನದ ಅಡೆತಡೆಗಳಿದ್ದಲ್ಲಿ, ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲು ಆ ತೊಂದರೆಗಳು ಬಗೆಹರಿಯುವವರೆಗೆ ಮಧ್ಯಂತರ ಕ್ರಮವಾಗಿ ವಿಶೇಷ ಸಮವರ್ತಿ ಪಟ್ಟಿಯನ್ನು ರಚಿಸಬೇಕು ಎಂದು ಟಿವಿಕೆ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಇದು ವೈದ್ಯಕೀಯ ಶಿಕ್ಷಣ ಸೇರಿದಂತೆ ಶಿಕ್ಷಣದ ಮೇಲೆ ರಾಜ್ಯಗಳಿಗೆ ಸಂಪೂರ್ಣ ಅಧಿಕಾರವನ್ನು ನೀಡುತ್ತಿದ್ದು, ಶಾಶ್ವತ ಮತ್ತು ಮಧ್ಯಂತರ ಪರಿಹಾರಕ್ಕಾಗಿ ಇದು ನಮ್ಮ ದೃಷ್ಟಿಕೋನವಾಗಿದೆ. ಸಿಎಂ ವಿಜಯ್​ ಈಗಾಗಲೇ ಇದನ್ನು ಒತ್ತಿ ಹೇಳಿದ್ದಾರೆ ಎಂದು ಪಕ್ಷ ಹೇಳಿಕೆ ನೀಡಿದೆ.

ವಂಚನೆಯ ರಾಜಕೀಯ: ಡಿಎಂಕೆ ವಿರುದ್ಧ ಟಿವಿಕೆ ಗರಂ!

ಡಿಎಂಕೆ (DMK) ಸರ್ಕಾರದ ವಿರುದ್ಧ ಟಿವಿಕೆ (TVK) ಪಕ್ಷವು ತೀವ್ರ ವಾಗ್ದಾಳಿ ನಡೆಸಿದ್ದು, ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರಲು ನೀಟ್ ಅಳಿಸಿಹಾಕುತ್ತೇವೆ ಎಂದು ಸುಳ್ಳು ಭರವಸೆ ನೀಡಿ ಜನರನ್ನು ವಂಚಿಸುವ ರಾಜಕೀಯವನ್ನು ತಾವು ಎಂದಿಗೂ ಮಾಡುವುದಿಲ್ಲ ಎಂದು ಟಿವಿಕೆ ಸ್ಪಷ್ಟಪಡಿಸಿದೆ.
2021ರ ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ, ತಾನು ಅಧಿಕಾರಕ್ಕೆ ಬಂದರೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (NEET) ಸಂಪೂರ್ಣವಾಗಿ ರದ್ದುಗೊಳಿಸುವುದಾಗಿ ಡಿಎಂಕೆ ವಾಗ್ದಾನ ಮಾಡಿತ್ತು. ಈ ಹಿನ್ನೆಲೆಯಲ್ಲಿ ಟಿವಿಕೆ ಪಕ್ಷವು ನೇರವಾಗಿ ಹೆಸರು ಪ್ರಸ್ತಾಪಿಸದೇ ಡಿಎಂಕೆ ಸರ್ಕಾರದ ವಂಚನೆಯ ರಾಜಕೀಯವನ್ನು ಕಟುವಾಗಿ ವಿಮರ್ಶಿಸಿದೆ.
ಕೇವಲ ನೀಟ್ ವಿಚಾರ ಮಾತ್ರವಲ್ಲದೆ, ಇತರರ ಪರಿಶ್ರಮ, ಕಲ್ಪನೆಗಳು ಮತ್ತು ಹೋರಾಟಗಳ ಮೇಲೆ ತಮ್ಮದೇ ಆದ ಲೇಬಲ್ ಹಚ್ಚಿಕೊಳ್ಳುವ' ಕೆಲಸವನ್ನು ಕೆಲ ರಾಜಕೀಯ ನಾಯಕರು ಮಾಡುತ್ತಿದ್ದಾರೆ ಎಂದು ಟಿವಿಕೆ ಆರೋಪಿಸಿದೆ. ಇದರ ಜೊತೆಗೆ, ತಮ್ಮ ಪಕ್ಷವನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ವಿನಾಕಾರಣ ವಾಗ್ದಾಳಿಗಳನ್ನು ವಿಪಕ್ಷಗಳು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿದೆ.

ಗಾಯಕ ಅರಿವು ಬಂಧನದ ಬೆನ್ನಲ್ಲೇ ತೀವ್ರಗೊಂಡ ರಾಜಕೀಯ!

ನೀಟ್ ವಿರುದ್ಧ ಕಠಿಣ ನಿಲುವು ತಳೆದಿದ್ದ ಪ್ರಸಿದ್ಧ ಗಾಯಕ ತೆರುಕ್ಕುರಲ್ ಅರಿವು ಅವರ ವಿರುದ್ಧ ಸರ್ಕಾರ ನಡೆದುಕೊಂಡ ರೀತಿಯನ್ನು ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಟೀಕಿಸಿದ ಬೆನ್ನಲ್ಲೇ ಟಿವಿಕೆಯ ಈ ಮಹತ್ವದ ಹೇಳಿಕೆ ಹೊರಬಿದ್ದಿದೆ.
ಅರಿವು ಅವರು ತಮಿಳುನಾಡು ಸಚಿವಾಲಯದ ಆವರಣದ ಹೊರಗೆ ನೀಟ್ ವಿರುದ್ಧ ಬೃಹತ್ ಘೋಷಣೆಗಳನ್ನು ಕೂಗಿದ್ದರು. ತಕ್ಷಣವೇ ಪೊಲೀಸರು ಅವರನ್ನು ವಶಕ್ಕೆ ಪಡೆದು ಕರೆದೊಯ್ದಿದ್ದು, ಈ ಘಟನೆಯು ರಾಜ್ಯಾದ್ಯಂತ ರಾಜಕೀಯ ಕಾವು ಹೆಚ್ಚಾಗಲು ಕಾರಣವಾಗಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net