ಕೇಂದ್ರ ಬಜೆಟ್ 2026: ಜನ ಸಾಮಾನ್ಯರಿಗೆ ಯಾವುದು ಅಗ್ಗ? ಯಾವುದು ದುಬಾರಿ? ಇಲ್ಲಿದೆ ಪೂರ್ಣ ಪಟ್ಟಿ…Union Budget 2026

ಕೇಂದ್ರ ಬಜೆಟ್ 2026
ಕೇಂದ್ರ ಬಜೆಟ್ 2026
Published on

ಪ್ರಮುಖ ಮುಖ್ಯಾಂಶಗಳು

  • ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಇಂದು 9ನೇ ಬಜೆಟ್​ ಮಂಡನೆ
  • ಕೇಂದ್ರ ಬಜೆಟ್​ನಲ್ಲಿ ಇಲ್ಲ ಯಾವುದೇ ಮೆಗಾ ಯೋಜನೆಗಳ ಘೋಷಣೆ
  • ತೆರಿಗೆ ವ್ಯವಸ್ಥೆಯಲ್ಲೂ ಯಾವುದೇ ಮಹತ್ವದ ಬದಲಾವಣೆಗಳನ್ನು ಕೈಗೊಂಡಿಲ್ಲ
  • ಕೇಂದ್ರ ಬಜೆಟ್​ನಿಂದ ಯಾವ ವಸ್ತುಗಳು ಅಗ್ಗ ಮತ್ತು ಯಾವುದು ದುಬಾರಿಯಾಗಲಿವೆ?
ನವದೆಹಲಿ: ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆ.1) ತಮ್ಮ 9ನೇ ಬಜೆಟ್​ ಮಂಡನೆ ( Union Budget 2026 ) ಮಾಡಿದ್ದಾರೆ. ಜಿಡಿಪಿ ಇಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿ, ಅಗತ್ಯ ವಸ್ತುಗಳ ಜತೆಗೆ ಚಿನ್ನ, ಬೆಳ್ಳಿ ಬೆಲೆ ಏರಿಕೆ, ಅಮೆರಿಕದ ತೆರಿಗೆ ನೀತಿಯಿಂದ ಉಂಟಾಗಿರುವ ಜಾಗತಿಕ ವಿಪ್ಲವ, ಹಣದುಬ್ಬರಕ್ಕೆ ಅಂಕೆ ಹಾಕುವಂತಹ ಗಂಭೀರ ಸವಾಲುಗಳ ನಡುವೆಯೇ ಇಂದು ಆಯವ್ಯಯ ಮಂಡನೆ ಮಾಡಿದ ನಿರ್ಮಾಲಾ ಸೀತಾರಾಮನ್​, ಯಾವುದೇ ಮೆಗಾ ಯೋಜನೆಗಳನ್ನು ಘೋಷಣೆ ಮಾಡಿದೆ ಮತ್ತು ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಗಳನ್ನು ಕೈಗೊಳ್ಳಲಿಲ್ಲ. ಆದರೆ, ಕಸ್ಟಮ್ಸ್​ ಸುಂಕದಲ್ಲಿ ಕೆಲವೊಂದಿಷ್ಟು ವಿನಾಯಿತಿ ನೀಡಲಾಗಿದೆ. ಹೀಗಾಗಿ, ಈಗ ಎಲ್ಲರ ಕಣ್ಣುಗಳು ಗ್ರಾಹಕರಿಗೆ ಕೈಗೆಟುಕುವ ಅಥವಾ ಹೆಚ್ಚು ದುಬಾರಿಯಾಗಿರುವ ವಸ್ತುಗಳ ಮೇಲೆ ನೆಟ್ಟಿವೆ. ಹಾಗಾದರೆ, ಇಂದಿನ ಬಜೆಟ್​ ಬಳಿಕ ಯಾವ ವಸ್ತುಗಳು ಅಗ್ಗವಾಗುತ್ತವೆ ಮತ್ತು ಯಾವುದು ದುಬಾರಿಯಾಗಲಿವೆ ಎಂಬ ಪಟ್ಟಿ ಈ ಕೆಳಕಂಡಂತಿದೆ.
ಅಂದಹಾಗೆ, ಮೂಲ ಕಸ್ಟಮ್ಸ್ ಸುಂಕ (BCD) ಮತ್ತು ಇತರ ತೆರಿಗೆ ವಿನಾಯಿತಿಗಳಲ್ಲಿನ ಕಡಿತದಿಂದಾಗಿ ಈ ಕೆಳಗಿನ ವಸ್ತುಗಳು ಬೆಲೆ ಇಳಿಕೆ ಕಾಣುವ ನಿರೀಕ್ಷೆಯಿದೆ.
* ಅಗತ್ಯ ಔಷಧಗಳು: ಹೊಸ ಕಸ್ಟಮ್ಸ್ ಸುಂಕ ವಿನಾಯಿತಿಯಿಂದಾಗಿ 17 ಜೀವ ಉಳಿಸುವ ಔಷಧಗಳು, ವಿಶೇಷವಾಗಿ ಮಧುಮೇಹ ಮತ್ತು ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧಗಳು ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿವೆ.

* ಮೊಬೈಲ್ ಫೋನ್‌ಗಳು: ಉತ್ಪಾದನೆಯಲ್ಲಿ ಬಳಸುವ ಮೊಬೈಲ್​ ಘಟಕಗಳು ಮತ್ತು ಬಂಡವಾಳ ಸರಕುಗಳ ಮೇಲೆ ಸರ್ಕಾರ ಪರಿಹಾರ ನೀಡುತ್ತಿರುವುದರಿಂದ ಬೆಲೆಗಳು ಇಳಿಯುವ ಸಾಧ್ಯತೆ ಇದೆ.

* ಇವಿ ಬ್ಯಾಟರಿಗಳು: ಹಸಿರು ಶಕ್ತಿ ಪರಿವರ್ತನೆಯನ್ನು ಚಾಲನೆ ಮಾಡಲು ಲಿಥಿಯಂ-ಐಯಾನ್ (ಲಿ-ಐಯಾನ್) ಕೋಶಗಳ ಮೇಲಿನ BCD ವಿನಾಯಿತಿ ಪಡೆದಿದೆ. ಇದರಿಂದ ಇವಿ ಬ್ಯಾಟರಿಗಳ ಬೆಲೆ ಇಳಿಕೆಯಾಗಲಿದೆ.

* ಚರ್ಮ ಮತ್ತು ಜವಳಿ: ವೆಟ್ ಬ್ಲೂ ಲೆದರ್​​ನಂತಹ ಕಚ್ಚಾ ವಸ್ತುಗಳು ಮತ್ತು ಜವಳಿಗಾಗಿ ನಿರ್ದಿಷ್ಟಪಡಿಸಿದ ಇನ್ಪುಟ್​ಗಳ ಮೇಲೆ ಸುಂಕ ಕಡಿತವಾಗುತ್ತಿದ್ದು, ಸಿದ್ಧಪಡಿಸಿದ ಚರ್ಮದ ಉತ್ಪನ್ನಗಳು ಮತ್ತು ಉಡುಪುಗಳು ಅಗ್ಗವಾಗಲಿವೆ.

* ಸಮುದ್ರ ಉತ್ಪನ್ನಗಳು: ಸಮುದ್ರಾಹಾರ ಸಂಸ್ಕರಣೆಯಲ್ಲಿ (ಸೀಗಡಿ ಆಹಾರದಂತೆ) ಬಳಸುವ ಸುಂಕ-ಮುಕ್ತ ಆಮದು ಮಿತಿಯನ್ನು FOB ಮೌಲ್ಯದ 1% ರಿಂದ 3% ಕ್ಕೆ ಮೂರು ಪಟ್ಟು ಹೆಚ್ಚಿಸಲಾಗಿದೆ.

* ಕ್ರೀಡಾ ಸಾಧನಗಳು: ಕ್ರೀಡೆಯಲ್ಲಿನ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಕ್ರೀಡಾ ಸಾಮಗ್ರಿಗಳು ಹೆಚ್ಚು ಕೈಗೆಟುಕುವಂತೆ ಮಾಡಲಾಗುತ್ತದೆ ಎಂದು ಹಣಕಾಸು ಸಚಿವರು ವಿಶೇಷವಾಗಿ ಘೋಷಣೆ ಮಾಡಿದರು. ಹೀಗಾಗಿ, ಕ್ರೀಡಾ ಸಾಧನಗಳ ಬೆಲೆ ಕಡಿಮೆಯಾಗಲಿವೆ. 

ಯಾವುದು ತುಟ್ಟಿಯಾಗಲಿವೆ?

"ಮೇಕ್ ಇನ್ ಇಂಡಿಯಾ" ಉಪಕ್ರಮವನ್ನು ಉತ್ತೇಜಿಸಲು, ಸ್ಥಳೀಯ ತಯಾರಕರನ್ನು ರಕ್ಷಿಸಲು ಸರ್ಕಾರ ವಿನಾಯಿತಿಗಳನ್ನು ತೆಗೆದುಹಾಕುವುದರಿಂದ ಕೆಲವು ವಸ್ತುಗಳು ಹೆಚ್ಚು ದುಬಾರಿಯಾಗುತ್ತವೆ.
* ಕಡಿಮೆ ಆಮದು ಹೊಂದಿರುವ ವಸ್ತುಗಳು: ಕೆಲವು ಸರಕುಗಳಿಗೆ ಈಗ ಆಮದು ಮಾಡಿಕೊಳ್ಳುವ ಮೇಲಿನ ತೆರಿಗೆ ವಿನಾಯಿತಿ ತೆಗೆದುಹಾಕಲಾಗಿದೆ. ಏಕೆಂದರೆ ಆ ಸರಕುಗಳನ್ನು ಈಗ ದೇಶದೊಳಗೇ ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ ಅಥವಾ ಅವುಗಳ ಆಮದು ಪ್ರಮಾಣ ತುಂಬಾ ಕಡಿಮೆ ಇದ್ದು, ತೆರಿಗೆ ವಿನಾಯಿತಿ ಕೊಡುವ ಅಗತ್ಯವಿಲ್ಲ ಎಂದು ಭಾವಿಸಲಾಗಿದೆ.
* ನಿರ್ದಿಷ್ಟ ಕೈಗಾರಿಕಾ ಸರಕುಗಳು: ಕೆಲವು ಕೈಗಾರಿಕಾ ಸರಕುಗಳಿಗೆ ಸರ್ಕಾರವು ಕಸ್ಟಮ್ಸ್ ಟ್ಯಾರಿಫ್ ದರಗಳನ್ನು ಸರಿಹೊಂದಿಸಿದೆ ಅಥವಾ ಸರಳಗೊಳಿಸಿದೆ. ಇದರಿಂದ ತೆರಿಗೆ ವ್ಯವಸ್ಥೆ ಸರಳವಾಗುತ್ತದೆ ಮತ್ತು ದೇಶೀಯ ಉತ್ಪಾದನೆಗೆ ಬೆಂಬಲ ಸಿಗುತ್ತದೆ. ಆದರೆ ಈ ಬದಲಾವಣೆಯಿಂದ ಕೆಲವು ನಿರ್ದಿಷ್ಟ ಯಂತ್ರೋಪಕರಣಗಳು ಮತ್ತು ಅವುಗಳ ಭಾಗಗಳು ಆಮದು ಮಾಡಿಕೊಳ್ಳುವಾಗ ತೆರಿಗೆ ಹೆಚ್ಚಾಗಬಹುದು. ಇದರಿಂದ ಅವುಗಳ ಬೆಲೆ ಸ್ವಲ್ಪ ಏರಿಕೆಯಾಗಬಹುದು. 
* ತಂಬಾಕು ಉತ್ಪನ್ನಗಳು: ಅಬಕಾರಿ ಸುಂಕ ಮತ್ತು ಆರೋಗ್ಯ ಸೆಸ್ ಹೆಚ್ಚಳದಿಂದಾಗಿ ಸಿಗರೇಟ್, ಪಾನ್ ಮಸಾಲಾ ಮತ್ತು ಇತರ ತಂಬಾಕು ಉತ್ಪನ್ನಗಳು ಹೆಚ್ಚು ದುಬಾರಿಯಾಗಲಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net