ಹೈದರಾಬಾದ್‌ನಲ್ಲಿ ಟ್ರಂಪ್ ಹೆಸರಿನ ರಸ್ತೆ! ಜೂ. 23ಕ್ಕೆ ಉದ್ಘಾಟನೆ: ಏನಿದು ‘ಡೊನಾಲ್ಡ್ ಟ್ರಂಪ್ ಅವೆನ್ಯೂ’ | US Consulate

US Consulate
US Consulate
Published on
ಹೈದರಾಬಾದ್: ತೆಲಂಗಾಣ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ಹೈದರಾಬಾದ್‌ನ ಅಮೆರಿಕ ಕಾನ್ಸುಲೇಟ್ (US Consulate) ಪಕ್ಕದಲ್ಲಿರುವ ಪ್ರಮುಖ ರಸ್ತೆಗೆ ‘ಡೊನಾಲ್ಡ್ ಟ್ರಂಪ್ ಅವೆನ್ಯೂ’ ಎಂದು ಹೆಸರು ಇಡಲು ಮುಂದಾಗಿದೆ. ಈ ಹೊಸ ಹೆಸರಿನ ರಸ್ತೆಯನ್ನು ಜೂನ್ 23ರಂದು ಅಧಿಕೃತವಾಗಿ ಉದ್ಘಾಟಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ.
ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಹಾಗೂ ಭಾರತದಲ್ಲಿನ ಅಮೆರಿಕ ರಾಯಭಾರಿ ಉನ್ನತ ಆಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಈ ಕಾರ್ಯಕ್ರಮವನ್ನು ಉನ್ನತ ಮಟ್ಟದ ರಾಜತಾಂತ್ರಿಕ ಕಾರ್ಯಕ್ರಮವಾಗಿ ಆಯೋಜಿಸಲಾಗುತ್ತಿದೆ.
ಪ್ರಸ್ತುತ ಈ ರಸ್ತೆ ಹೈದರಾಬಾದ್‌ನ ಫೈನಾನ್ಷಿಯಲ್ ಡಿಸ್ಟ್ರಿಕ್ಟ್‌ನಲ್ಲಿ ಇರುವ ಅಮೆರಿಕ ಕಾನ್ಸುಲೇಟ್‌ಗೆ ಹೊಂದಿಕೊಂಡಿದೆ. ಇದೇ ರಸ್ತೆಗೆ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ನೀಡಲಾಗುತ್ತಿದೆ. ಇದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೈದರಾಬಾದ್ ಮತ್ತಷ್ಟು ಗಮನ ಸೆಳೆಯಲಿದೆ ಎಂದು ಸರ್ಕಾರದ ವಲಯಗಳು ಹೇಳಿವೆ.

ವಿವಿಧ ಸಂಸ್ಥೆಗಳ ಹೆಸರು!

ಈ ಯೋಜನೆಯ ಮೂಲ 2025ರಲ್ಲಿಯೇ ರೂಪುಗೊಂಡಿತ್ತು. ಆಗ ಮುಖ್ಯಮಂತ್ರಿ ರೇವಂತ್ ರೆಡ್ಡಿ, ನವದೆಹಲಿಯಲ್ಲಿ ನಡೆದ US-India Strategic Partnership Forum (USISPF) ಕಾರ್ಯಕ್ರಮದಲ್ಲಿ ಹೈದರಾಬಾದ್‌ನ ಪ್ರಮುಖ ರಸ್ತೆಗಳಿಗೆ ಜಾಗತಿಕ ಕಂಪನಿಗಳು ಮತ್ತು ಪ್ರಭಾವಿ ವ್ಯಕ್ತಿಗಳ ಹೆಸರಿಡುವ ಆಲೋಚನೆಯನ್ನು ಮುಂದಿಟ್ಟಿದ್ದರು. ನಂತರ ಸರ್ಕಾರ ಈ ಪ್ರಸ್ತಾವನೆಯನ್ನು ಅಧಿಕೃತವಾಗಿ ಅನುಮೋದಿಸಿತ್ತು. ‘ಡೊನಾಲ್ಡ್ ಟ್ರಂಪ್ ಅವೆನ್ಯೂ’ ಮಾತ್ರವಲ್ಲದೆ, ನಗರದಲ್ಲಿನ ಇನ್ನೂ ಕೆಲವು ಪ್ರಮುಖ ರಸ್ತೆಗಳಿಗೆ ಹೊಸ ಹೆಸರುಗಳನ್ನು ನೀಡುವ ಯೋಜನೆಯೂ ಇದೆ. ಗೂಗಲ್ ಕಂಪನಿಯ ದೊಡ್ಡ ಕ್ಯಾಂಪಸ್ ಇರುವ ಪ್ರದೇಶದ ರಸ್ತೆಗೆ ‘ಗೂಗಲ್ ಸ್ಟ್ರೀಟ್’, ಮೈಕ್ರೋಸಾಫ್ಟ್‌ಗೆ ಸಂಬಂಧಿಸಿದ ರಸ್ತೆಗೆ ‘ಮೈಕ್ರೋಸಾಫ್ಟ್ ರೋಡ್’, ವಿಪ್ರೋ ಸಂಸ್ಥೆಯ ಹೆಸರಿನಲ್ಲಿ ‘ವಿಪ್ರೋ ಜಂಕ್ಷನ್’ ಎಂಬ ಹೆಸರುಗಳನ್ನು ನೀಡುವ ಪ್ರಸ್ತಾವವೂ ಇದೆ.

ರಸ್ತೆಗಳ ಮರುನಾಮಕರಣದ ಉದ್ದೇಶವೇನು?

ಇದರ ಜೊತೆಗೆ ಖ್ಯಾತ ಉದ್ಯಮಿ Ratan Tata ಅವರ ಗೌರವಾರ್ಥ ಹೊಸ ಗ್ರೀನ್‌ಫೀಲ್ಡ್ ರೇಡಿಯಲ್ ರಸ್ತೆಗೆ ಅವರ ಹೆಸರನ್ನು ಇಡಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ‘ಟಾಟಾ ಇಂಟರ್‌ಚೇಂಜ್’ ಎಂಬ ಹೆಸರನ್ನೂ ಒಂದು ಪ್ರಮುಖ ಜಂಕ್ಷನ್‌ಗೆ ನೀಡಲಾಗಿದೆ. ಸರ್ಕಾರದ ಪ್ರಕಾರ, ಈ ಹೆಸರು ಬದಲಾವಣೆಗಳು ಕೇವಲ ರಸ್ತೆಗಳಿಗೆ ಹೊಸ ಹೆಸರು ನೀಡುವುದಕ್ಕಷ್ಟೇ ಸೀಮಿತವಾಗಿಲ್ಲ. ಹೈದರಾಬಾದ್ ಅನ್ನು ಜಾಗತಿಕ ಹೂಡಿಕೆ ಕೇಂದ್ರವಾಗಿ ಗುರುತಿಸುವುದು, ವಿದೇಶಿ ಕಂಪನಿಗಳೊಂದಿಗೆ ರಾಜ್ಯದ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದು ಹಾಗೂ ನವೀನ ಭಾರತದ ಸಂಕೇತವಾಗಿ ತೆಲಂಗಾಣವನ್ನು ಪರಿಚಯಿಸುವುದು ಇದರ ಉದ್ದೇಶವಾಗಿದೆ.
ಕಳೆದ ಎರಡು ವರ್ಷಗಳಲ್ಲಿ ಹಲವು ಅಮೆರಿಕ ಮೂಲದ ಕಂಪನಿಗಳು ಹೈದರಾಬಾದ್‌ನಲ್ಲಿ ತಂತ್ರಜ್ಞಾನ ಕೇಂದ್ರಗಳು ಮತ್ತು ಗ್ಲೋಬಲ್ ಕ್ಯಾಪಬಿಲಿಟಿ ಸೆಂಟರ್‌ಗಳನ್ನು (GCC) ಸ್ಥಾಪಿಸಿವೆ. ಇದರಿಂದ ರಾಜ್ಯಕ್ಕೆ ದೊಡ್ಡ ಪ್ರಮಾಣದ ಹೂಡಿಕೆ ಹಾಗೂ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜೂನ್ 23ರಂದು ನಡೆಯಲಿರುವ ‘ಡೊನಾಲ್ಡ್ ಟ್ರಂಪ್ ಅವೆನ್ಯೂ’ ಉದ್ಘಾಟನೆ ಈಗ ದೇಶದಾದ್ಯಂತ ಕುತೂಹಲಕ್ಕೆ ಕಾರಣವಾಗಿದ್ದು, ಈ ಹೆಸರಿನ ರಸ್ತೆ ಭಾರತದಲ್ಲಿ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net