ಈ ಇಡೀ ಬೆಳವಣಿಗೆಯ ಕುರಿತು ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಸಮಾಧಾನ ಹೊರಹಾಕಿರುವ ಟಿಎಂಸಿ, ಜಹಾಂಗೀರ್ ಖಾನ್ರ ನಿರ್ಧಾರವು ವೈಯಕ್ತಿಕವಾಗಿದ್ದು ಪಕ್ಷಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದೆ. ಮೇ 4 ರ ಫಲಿತಾಂಶದ ಬಳಿಕ ಫಾಲ್ತಾ ಕ್ಷೇತ್ರದಲ್ಲಿ 100 ಕ್ಕೂ ಹೆಚ್ಚು ಟಿಎಂಸಿ ಕಾರ್ಯಕರ್ತರನ್ನು ಅಕ್ರಮವಾಗಿ ಬಂಧಿಸಲಾಗಿದೆ ಮತ್ತು ಪಕ್ಷದ ಕಚೇರಿಗಳನ್ನು ಧ್ವಂಸಗೊಳಿಸಿ ವಶಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿರುವ ಪಕ್ಷವು, ಇಷ್ಟೆಲ್ಲಾ ದೌರ್ಜನ್ಯಗಳು ನಡೆಯುತ್ತಿದ್ದರೂ ಚುನಾವಣಾ ಆಯೋಗ ಕಣ್ಣು ಮುಚ್ಚಿ ಕುಳಿತಿದೆ ಎಂದು ದೂರಿದೆ. ಅಂತಿಮವಾಗಿ ಇಂತಹ ತೀವ್ರ ರಾಜಕೀಯ ಒತ್ತಡಗಳಿಗೆ ಮಣಿದು ಅಭ್ಯರ್ಥಿ ಕಣದಿಂದ ಹಿಂದೆ ಸರಿದಿದ್ದಾರೆ ಎಂದು ಟಿಎಂಸಿ ಹೇಳಿಕೊಂಡಿದ್ದು, ಬಿಜೆಪಿಯ ಈ ದಬ್ಬಾಳಿಕೆಯ ವಿರುದ್ಧ ದೀದಿ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ.