'ಜೈ ಶ್ರೀರಾಮ್' ಎಂದವರ ಮೇಲೆ ಲಾಠಿ ಬೀಸಿದವರು, ಈಗ ಅದೇ ಹೆಸರಿನಲ್ಲಿ ರಾಜಕೀಯ! ಎಸ್‌ಪಿ-ಕಾಂಗ್ರೆಸ್ ವಿರುದ್ಧ ಯೋಗಿ ಟೀಕೆ

Yogi
Yogi
Published on
ರಾಂಪುರ (ಉತ್ತರ ಪ್ರದೇಶ): ಅಯೋಧ್ಯೆ ರಾಮ ಮಂದಿರ ದೇಣಿಗೆ ಹಣ ದುರ್ಬಳಕೆ ಆರೋಪದ ವಿಚಾರವಾಗಿ ರಾಜಕೀಯ ವಾಗ್ವಾದ ತೀವ್ರಗೊಂಡಿರುವ ನಡುವೆಯೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi), ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಂಪುರದಲ್ಲಿ ₹690 ಕೋಟಿಗೂ ಹೆಚ್ಚು ಮೌಲ್ಯದ 102 ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಒಮ್ಮೆ ರಾಮ ಮಂದಿರ ಚಳವಳಿಯನ್ನು ವಿರೋಧಿಸಿದ್ದ ಪಕ್ಷಗಳು ಈಗ ರಾಜಕೀಯ ಲಾಭಕ್ಕಾಗಿ ಶ್ರೀರಾಮನ ಹೆಸರನ್ನು ಬಳಸುತ್ತಿವೆ ಎಂದು ಆರೋಪಿಸಿದರು.

'ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದರು'

"ಒಮ್ಮೆ 'ಜೈ ಶ್ರೀರಾಮ್' ಘೋಷಣೆ ಕೂಗಿದವರ ಮೇಲೆ ಲಾಠಿ ಚಾರ್ಜ್ ಮಾಡಿಸಿದ್ದವರು ಮತ್ತು ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದವರು ಇಂದು ಭಕ್ತಿಯ ಹೆಸರಿನಲ್ಲಿ ಮಾತನಾಡುತ್ತಿದ್ದಾರೆ" ಎಂದು ಯೋಗಿ ಹೇಳಿದರು. ರಾಮ ಮಂದಿರ ದೇಣಿಗೆ ಹಣ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ನಡೆಸುತ್ತಿರುವ ಟೀಕೆಗೆ ಅವರು ಈ ಮೂಲಕ ತಿರುಗೇಟು ನೀಡಿದರು.

'ಜನರ ನಂಬಿಕೆಯೇ ನಿಲುವು ಬದಲಿಸಿದೆ'

ಜನರ ಭಾವನೆ ಮತ್ತು ನಂಬಿಕೆಯೇ ಪ್ರತಿಪಕ್ಷಗಳ ನಿಲುವು ಬದಲಿಸುವಂತೆ ಮಾಡಿದೆ. "ಒಮ್ಮೆ ಶ್ರೀರಾಮ ಮತ್ತು ಶ್ರೀಕೃಷ್ಣರನ್ನು ಪ್ರಶ್ನಿಸುತ್ತಿದ್ದವರೇ ಇಂದು 'ರಾಮ ಎಲ್ಲರಿಗೂ ಸೇರಿದ್ದಾರೆ' ಎಂದು ಹೇಳುತ್ತಿದ್ದಾರೆ. ಅಯೋಧ್ಯೆಗೆ ಭೇಟಿ ನೀಡಲು ಉತ್ಸುಕರಾಗಿದ್ದಾರೆ. ಇದು ಜನರ ನಂಬಿಕೆಯ ಶಕ್ತಿ" ಎಂದು ಹೇಳಿದರು.

ಅಯೋಧ್ಯೆ ಅಭಿವೃದ್ಧಿ ಪ್ರಸ್ತಾಪ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಯೋಧ್ಯೆಯಲ್ಲಿ ಸಾಕಷ್ಟು ಅಭಿವೃದ್ಧಿ ನಡೆದಿದೆ. ಉತ್ತಮ ರಸ್ತೆ ಹಾಗೂ ರೈಲು ಸಂಪರ್ಕ, ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ವಿವಿಧ ಮೂಲಸೌಕರ್ಯ ಯೋಜನೆಗಳಿಂದ ಅಯೋಧ್ಯೆಯ ರೂಪವೇ ಬದಲಾಗಿದೆ ಎಂದು ಅವರು ಹೇಳಿದರು. "ಇಂದಿನ ಅಯೋಧ್ಯೆ ತ್ರೇತಾಯುಗದ ವೈಭವವನ್ನು ನೆನಪಿಸುವಂತಾಗಿದೆ" ಎಂದರು.

'ಅಭಿವೃದ್ಧಿ ಸಹಿಸಲಾಗದೆ ಸುಳ್ಳು ಆರೋಪ'

ಅಯೋಧ್ಯೆಯ ಅಭಿವೃದ್ಧಿಯನ್ನು ತಡೆಯಲು ಸಾಧ್ಯವಾಗದ ಕಾರಣ ಪ್ರತಿಪಕ್ಷಗಳು ಸುಳ್ಳು ಆರೋಪಗಳನ್ನು ಮಾಡುತ್ತಿವೆ ಎಂದು ಯೋಗಿ ಆರೋಪಿಸಿದರು.
"ಜನರು ಈಗಾಗಲೇ ಅವರಿಗೆ ತಕ್ಕ ಉತ್ತರ ನೀಡಿದ್ದಾರೆ. ಅದಕ್ಕಾಗಿಯೇ ಅವರು ಸುಳ್ಳು ಮಾಹಿತಿ ಹರಡುತ್ತಿದ್ದಾರೆ" ಎಂದು ಹೇಳಿದರು. ರಾಮಾಯಣವನ್ನು ಉಲ್ಲೇಖಿಸಿದ ಅವರು, ಶ್ರೀರಾಮನ ಮೇಲಿನ ಭಕ್ತಿಯೇ ಹನುಮಂತನಿಗೆ ಎಲ್ಲ ಸವಾಲುಗಳನ್ನು ಎದುರಿಸುವ ಶಕ್ತಿ ನೀಡಿತ್ತು. ಆದರೆ ಕೆಲವರು ರಾಜಕೀಯ ಉದ್ದೇಶಕ್ಕಾಗಿ ಸುಳ್ಳು ಮತ್ತು ದಾರಿತಪ್ಪಿಸುವ ಮಾಹಿತಿಯನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದರು.

ಎಸ್‌ಪಿ ಆಡಳಿತದ ವಿರುದ್ಧ ಟೀಕೆ

2017ಕ್ಕೂ ಮೊದಲು ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆಗಳು ಹೆಚ್ಚಾಗಿದ್ದವು. ಧಾರ್ಮಿಕ ಹಬ್ಬಗಳ ವೇಳೆ ಅಡಚಣೆಗಳು ಉಂಟಾಗುತ್ತಿದ್ದವು ಮತ್ತು ರಾಜ್ಯದ ಸಾಂಸ್ಕೃತಿಕ ಪರಂಪರೆ ನಿರ್ಲಕ್ಷ್ಯಕ್ಕೊಳಗಾಗಿತ್ತು ಎಂದು ಯೋಗಿ ಆರೋಪಿಸಿದರು. ಒಂದು ಕಾಲದಲ್ಲಿ ಸಮಾಜವಾದಿ ಪಕ್ಷದ ಭದ್ರಕೋಟೆಯಾಗಿದ್ದ ರಾಂಪುರ ಜಿಲ್ಲೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಮೂಲಸೌಕರ್ಯ ಮತ್ತು ಪರಂಪರೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು. "ರಾಂಪುರ ಸಾಕಷ್ಟು ಬದಲಾಗಿದೆ. ಅಭಿವೃದ್ಧಿ ಯೋಜನೆಗಳು ವೇಗವಾಗಿ ಜಾರಿಯಾಗುತ್ತಿದ್ದು, ಜಿಲ್ಲೆ ಹೊಸ ದಿಕ್ಕಿನಲ್ಲಿ ಸಾಗುತ್ತಿದೆ" ಎಂದು ಯೋಗಿ ತಿಳಿಸಿದರು,(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net