ರಿಯಲ್ ಎಸ್ಟೇಟ್‌ನವರು ಆಡಳಿತ ನಡೆಸಿದ್ರೆ ಹೀಗೆ ಆಗೋದು!...ರೈತರು ಬಿತ್ತನೆ ಮಾಡಬೇಡಿ ಎಂದ ಸಿಎಂ ಡಿಕೆಶಿ ವಿರುದ್ಧ ವಿಜಯೇಂದ್ರ ಕಿಡಿ | BY Vijayendra

BY Vijayendra | ರೈತರು ಬಿತ್ತನೆ ಮಾಡಬೇಡಿ ಎಂದ ಸಿಎಂ ಡಿಕೆಶಿ ವಿರುದ್ಧ ವಿಜಯೇಂದ್ರ ಕಿಡಿ
BY Vijayendra | ರೈತರು ಬಿತ್ತನೆ ಮಾಡಬೇಡಿ ಎಂದ ಸಿಎಂ ಡಿಕೆಶಿ ವಿರುದ್ಧ ವಿಜಯೇಂದ್ರ ಕಿಡಿ
Published on
ಬೆಂಗಳೂರು: ರಾಜ್ಯದಲ್ಲಿ ನೀರಿಲ್ಲ, ಹಾಗಾಗಿ ರೈತರು ಬೆಳೆ ಬೆಳೆಯುವುದು ಬೇಡ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ನೀಡಿರುವ ಬೇಜವಾಬ್ದಾರಿ ಹೇಳಿಕೆ ತೀವ್ರ ಆಶ್ಚರ್ಯ ಮತ್ತು ನೋವು ತಂದಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಜಯೇಂದ್ರ ಅವರು, ನಾಡಿನ ದೊರೆಯಾಗಿ ಮುಖ್ಯಮಂತ್ರಿಗಳು ಅತ್ಯಂತ ಪ್ರಬುದ್ಧತೆಯಿಂದ ಮಾತನಾಡಬೇಕಿತ್ತು. ಆದರೆ, ಇಂತಹ ಭೀಕರ ಬರಗಾಲದ ಮುನ್ಸೂಚನೆ ಇರುವಾಗ ಬಿತ್ತನೆ ಮಾಡಬೇಡಿ ಎಂದು ಹೇಳುವ ಮೂಲಕ ಸಿಎಂ ಇಡೀ ಅನ್ನದಾತರ ಮತ್ತು ರಾಜ್ಯದ ಜನರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ರೈತರಿಗೆ ಅಭಯ ನೀಡಬೇಕಾದ ಸರ್ಕಾರ ಎಲ್ಲಿದೆ..?

ಪ್ರಕೃತಿ ಮುನಿಸಿಕೊಂಡಿರುವಾಗ ಸರ್ಕಾರ ರೈತರಿಗೆ ಧೈರ್ಯ ತುಂಬಬೇಕು. ಮುಂದಿನ ಹದಿನೈದು ದಿನಗಳಲ್ಲಿ ಮಳೆಯಾಗುವ ನಿರೀಕ್ಷೆಯಿದ್ದರೂ ಸಿಎಂ ಮಾತ್ರ ಬಿತ್ತನೆ ಮಾಡಬೇಡಿ ಎಂದಿದ್ದಾರೆ. ಮುಖ್ಯಮಂತ್ರಿಗಳ ಮಾತು ಕೇಳಿ ರೈತರು ಬಿತ್ತನೆ ಮಾಡಿಲ್ಲ, ಈಗ ಇದಕ್ಕೆ ಯಾರು ಹೊಣೆ..? ಮಳೆ ಪ್ರಮಾಣ ಕಡಿಮೆಯಾಗಿರುವಾಗ ಸರ್ಕಾರದ ಆದ್ಯತೆಯಾದರೂ ಏನು..? ಜಿಲ್ಲಾಧಿಕಾರಿಗಳ ಖಾತೆಗೆ ಅಥವಾ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಏನಾದರೂ ಅನುದಾನ ಬಿಡುಗಡೆ ಮಾಡಿದೆಯೇ..? ಇಂತಹ ಯಾವುದೇ ಜನಪರ ಕೆಲಸ ಮಾಡದೆ ಸಿಎಂ ಕೈಕಟ್ಟಿ ಕುಳಿತಿದ್ದಾರೆ ಎಂದು ಬಿವೈವಿ ಕಿಡಿಕಾರಿದ್ದಾರೆ.

ರಾತ್ರೋರಾತ್ರಿ ನೀರು ಬಿಟ್ಟು ಈಗ ಜ್ಞಾನೋದಯ ಆಯ್ತಾ..?

ರಾಜ್ಯದ ಜಲಾಶಯಗಳಿಂದ ತಮಿಳುನಾಡಿಗೆ ಮನಸ್ಸೋ ಇಚ್ಛೆ ನೀರು ಹರಿಸಲಾಗಿದೆ ಎಂದು ಆರೋಪಿಸಿದ ವಿಜಯೇಂದ್ರ, ನಮ್ಮ ಜಲಾಶಯಗಳಿಂದ ಎಷ್ಟು ನೀರು ಬಿಡಲಾಗಿದೆ ಎಂಬ ಮಾಹಿತಿಯನ್ನು ಸರ್ಕಾರ ಮೊದಲು ಬಹಿರಂಗಪಡಿಸಲಿ. ತಮಿಳುನಾಡಿನಲ್ಲಿರುವ ತಮ್ಮ ಮೈತ್ರಿ ಪಕ್ಷವನ್ನು ಖುಷಿ ಪಡಿಸಲು ರಾತ್ರೋರಾತ್ರಿ ಕಾವೇರಿ ನೀರು ಹರಿಸಿ, ಈಗ ನಮ್ಮ ಜಲಾಶಯಗಳಲ್ಲಿ ನೀರಿಲ್ಲ ಎನ್ನುತ್ತಿದ್ದಾರೆ. ಇವರಿಗೆ ಈಗ ಜ್ಞಾನೋದಯವಾಗಿದೆಯೇ..? ರಿಯಲ್ ಎಸ್ಟೇಟ್‌ನವರು ಆಡಳಿತ ನಡೆಸಿದರೆ ರಾಜ್ಯದ ಹಣೆಬರಹ ಹೀಗೆಯೇ ಆಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಆಕ್ರೋಶ ಹೊರಹಾಕಿದ್ದಾರೆ.

ರೇಟ್ ಫಿಕ್ಸ್ ಆಗ್ತಿಲ್ಲ, ಅದಕ್ಕೆ ಡೇಟ್ ಫಿಕ್ಸ್ ಆಗ್ತಿಲ್ಲ!

ಮುಂಗಾರು ಅಧಿವೇಶನವನ್ನು ಆಗಸ್ಟ್ ಮಧ್ಯಭಾಗಕ್ಕೆ ಮುಂದೂಡುತ್ತಿರುವ ಸರ್ಕಾರದ ನಿರ್ಧಾರವನ್ನು ಖಂಡಿಸಿರುವ ವಿಜಯೇಂದ್ರ, ಶಾಸಕರೆಲ್ಲರೂ ಮನೆ ಮನೆಗೆ ಹೋಗಿ ಎಸ್‌ಐಆರ್ ಮಾಡುತ್ತಿದ್ದಾರೆಯೇ..? ಅಧಿವೇಶನ ಮುಂದೂಡಲು ಎಸ್‌ಐಆರ್ ನೆಪವಲ್ಲ. ಸದ್ಯ ಕಾಂಗ್ರೆಸ್‌ನಲ್ಲಿ ಮಂತ್ರಿ ಸ್ಥಾನಕ್ಕಾಗಿ ಭಾರಿ ರೇಟ್ ಫಿಕ್ಸ್ ಮಾಡುವ ಕೆಲಸ ನಡೆಯುತ್ತಿದೆ. ಅಲ್ಲಿ ಇನ್ನೂ ರೇಟ್ ಫಿಕ್ಸ್ ಆಗುತ್ತಿಲ್ಲ, ಅದಕ್ಕಾಗಿಯೇ ಅಧಿವೇಶನದ ಡೇಟ್ ಕೂಡ ಫಿಕ್ಸ್ ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net