ಬಿಕಿನಿ ತೊಟ್ಟ ಮಹಿಳೆಯರ ಮಧ್ಯೆ ಸ್ಟೀಫನ್ ಹಾಕಿಂಗ್: ಎಪ್​ಸ್ಟೀನ್​ ಫೈಲ್ಸ್​ ಬಗ್ಗೆ ಹಾಕಿಂಗ್ ಕುಟುಂಬದ ಸ್ಪಷ್ಟನೆ ಏನು? Epstein Files ​

ಬಿಕಿನಿ ತೊಟ್ಟ ಮಹಿಳೆಯರ ಮಧ್ಯೆ ಸ್ಟೀಫನ್ ಹಾಕಿಂಗ್! Epstein Files ​
ಬಿಕಿನಿ ತೊಟ್ಟ ಮಹಿಳೆಯರ ಮಧ್ಯೆ ಸ್ಟೀಫನ್ ಹಾಕಿಂಗ್! Epstein Files ​
Published on

ಪ್ರಮುಖ ಮುಖ್ಯಾಂಶಗಳು

  • ಇಡೀ ವಿಶ್ವದಲ್ಲೇ ಬಿರುಗಾಳಿ ಎಬ್ಬಿಸಿದೆ ಅಮೆರಿಕದ ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್​ಸ್ಟೀನ್​ ಫೈಲ್ಸ್​
  • ವಿಶ್ವದ ಘಟಾನುಘಟಿ ನಾಯಕರ ಹೆಸರುಗಳು ಎಪ್​ಸ್ಟೀನ್​ ಜತೆ ಕೇಳಿಬರುತ್ತಿವೆ
  • ಇದೀಗ ಸೋರಿಕೆಯಾಗಿರುವ ದಿವಂಗತ ಭೌತಶಾಸ್ತ್ರಜ್ಞ ಸ್ಟೀಫನ್​ ಹಾಕಿಂಗ್ ಫೋಟೋ ವೈರಲ್​ ಆಗುತ್ತಿದೆ
Epstein Files : ಅಮೆರಿಕದ ಕುಖ್ಯಾತ ಲೈಂಗಿಕ ಅಪರಾಧಿ ಮತ್ತು ಉದ್ಯಮಿ ಜೆಫ್ರಿ ಎಪ್​ಸ್ಟೀನ್​ ( Jeffrey Epstein )ಗೆ ಸಂಬಂಧಿಸಿದ ಕಡತಗಳು ಅಮೆರಿಕದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲೇ ಬಿರುಗಾಳಿ ಎಬ್ಬಿಸಿರುವುದು ನಿಮಗೆಲ್ಲರಿಗೂ ಗೊತ್ತಿದೆ. ಕಳೆದ ಎರಡು ತಿಂಗಳಿಂದ ನೂರಾರು ಸುದ್ದಿಗಳು ಪ್ರಕಟವಾಗುತ್ತಲೇ ಇದೆ. ವಿಶ್ವದ ಘಟಾನುಘಟಿ ನಾಯಕರ ಹೆಸರುಗಳು ಎಪ್​ಸ್ಟೀನ್​ ಜತೆ ಕೇಳಿಬರುತ್ತಿವೆ. ಇದೆಲ್ಲದರ ನಡುವೆ ಇದೀಗ, ಮತ್ತೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆ ಫೋಟೋದಲ್ಲಿ ದಿವಂಗತ ಭೌತಶಾಸ್ತ್ರಜ್ಞ ಸ್ಟೀಫನ್​ ಹಾಕಿಂಗ್ ಅವರು​ ಕೈಯಲ್ಲಿ ಕಾಕ್​ಟೈಲ್​ ಹಿಡಿದಿದ್ದಾರೆ ಮತ್ತು ಅವರ ಅಕ್ಕಪಕ್ಕದಲ್ಲಿ ಬಿಕಿನಿ ಧರಿಸಿದ ಮಹಿಳೆಯರಿಬ್ಬರು ಕೂಡ ಕಾಕ್​ಟೈಲ್​​ ಹಿಡಿದು ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ.
ವೈರಲ್​ ಫೋಟೋದಲ್ಲಿ ಕೈಯಲ್ಲಿ ಕಾಕ್‌ಟೈಲ್‌ ಹಿಡಿದಿರುವ ಸ್ಟೀಫನ್​ ಹಾಕಿಂಗ್​, ಸನ್ ಲೌಂಜರ್ ಮೇಲೆ ಒರಗಿಕೊಂಡಿದ್ದಾರೆ. ಹಾಕಿಂಗ್​ ಅವರಿಗೆ 24 ಗಂಟೆಗಳ ವೈದ್ಯಕೀಯ ನೆರವು ಅಗತ್ಯವಿದ್ದ ಕಾರಣ, ದೀರ್ಘಕಾಲದಿಂದ ಅವರನ್ನು ಆರೈಕೆ ಮಾಡುತ್ತಿದ್ದ ಮಹಿಳೆಯರಲ್ಲಿ ಒಬ್ಬರು ಹಾಕಿಂಗ್​ ಅವರ ತಲೆಗೆ ಕೈಹಾಕಿ, ಅದನ್ನು ಸ್ಥಿರಗೊಳಿಸಿದ್ದಾರೆ ಎಂದು ದಿ ಇಂಡಿಪೆಂಡೆಂಟ್ ಮಾಧ್ಯಮ ವರದಿ ಮಾಡಿದೆ. ಸದ್ಯ ಈ ಫೋಟೋ ವಿಜ್ಞಾನ ಲೋಕದಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ.
ಹೊಸದಾಗಿ ಕಾಣಿಸಿಕೊಂಡಿರುವ ಈ ಫೋಟೋವನ್ನು 2006ರಲ್ಲಿ ಸೇಂಟ್ ಥಾಮಸ್‌ನ ರಿಟ್ಜ್-ಕಾರ್ಲ್ಟನ್ ಹೋಟೆಲ್‌ನಲ್ಲಿ ನಡೆದ ವಿಜ್ಞಾನ ವಿಚಾರ ಸಂಕಿರಣದಲ್ಲಿ ತೆಗೆದಿರುವುದಾಗಿ ನಂಬಲಾಗಿದೆ. ಅಲ್ಲಿ, ಹಾಕಿಂಗ್ ಅವರು ಕ್ವಾಂಟಮ್ ವಿಶ್ವವಿಜ್ಞಾನದ ಕುರಿತು ತಮ್ಮ ಭಾಷಣ ಮಂಡನೆ ಮಾಡಿದರು. ಈ ಕಾರ್ಯಕ್ರಮಕ್ಕಾಗಿ ಸೇಂಟ್ ಥಾಮಸ್ ಮತ್ತು ಎಪ್​ಸ್ಟೀನ್​ನ 75 ಎಕರೆ ಖಾಸಗಿ ದ್ವೀಪವಾದ ಲಿಟಲ್ ಸೇಂಟ್ ಜೇಮ್ಸ್‌ಗೆ ಭೇಟಿ ನೀಡಿದ 21 ವಿಜ್ಞಾನಿಗಳಲ್ಲಿ ಹಾಕಿಂಗ್​ ಕೂಡ ಒಬ್ಬರಾಗಿದ್ದರು.

ಹಾಕಿಂಗ್​ ಕುಟುಂಬದ ವಾದವೇನು?

ಫೋಟೋ ವೈರಲ್​ ಆದ ಕೂಡಲೇ ಹಾಕಿಂಗ್ ಕುಟುಂಬದ ಪ್ರತಿನಿಧಿಯೊಬ್ಬರು ಯುಕೆಯ ಡೈಲಿ ಮೇಲ್‌ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಆ ಇಬ್ಬರು ಮಹಿಳೆಯರು, ದಿವಂಗತ ವಿಜ್ಞಾನಿ ಹಾಕಿಂಗ್​ ಅವರ "ದೀರ್ಘಕಾಲದ ಆರೈಕೆದಾರರು" ಎಂದಿದ್ದಾರೆ. ಅಲ್ಲದೆ, ಅವರು ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ನಿಜಕ್ಕೂ ಅಸಂಬದ್ಧ ಎಂದಿದ್ದಾರೆ.

ಹಾಕಿಂಗ್​ ಪರಿಚಯ

ಸ್ಟೀಫನ್ ಹಾಕಿಂಗ್ ಅವರು ಓರ್ವ ವಿಶ್ವವಿಖ್ಯಾತ ಇಂಗ್ಲಿಷ್ ಸೈದ್ಧಾಂತಿಕ ಭೌತಶಾಸ್ತ್ರಜ್ಞ ಮತ್ತು ವಿಜ್ಞಾನಿ. ಇವರು ಕಾಸ್ಮಾಲಜಿಸ್ಟ್ ಆಗಿದ್ದರು. 21ನೇ ವಯಸ್ಸಿನಲ್ಲಿ ಮೋಟರ್ ನ್ಯೂರಾನ್ ರೋಗದಿಂದಾಗಿ ತಮ್ಮ ದೇಹದ ಹೆಚ್ಚಿನ ಭಾಗಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಅಂದಿನಿಂದ ವ್ಹೀಲ್​ಚೇರ್​ಗೆ ಸೀಮಿತರಾದರು. ಆದರೆ, ಹಾಕಿಂಗ್​ ಅವರು ತಮ್ಮ ಮನಸ್ಸಿನ ಶಕ್ತಿಯಿಂದ ತಮ್ಮ ಸಂಶೋಧನೆಯನ್ನು ಮುಂದುವರಿಸಿ, ಕಪ್ಪುಕುಳಿಗಳು ಸಂಕುಚಿತವಾಗಿ ರೇಡಿಯೇಷನ್ ಹೊರಸೂಸುತ್ತವೆ ಎಂಬ ಕ್ರಾಂತಿಕಾರಿ ಸಿದ್ಧಾಂತವನ್ನು ಮಂಡಿಸಿದರು. ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ದೀರ್ಘಕಾಲ ಕೆಲಸ ಮಾಡಿದ ಅವರು, "A Brief History of Time" ಪುಸ್ತಕದ ಮೂಲಕ ವಿಜ್ಞಾನವನ್ನು ಸಾಮಾನ್ಯ ಜನರಿಗೆ ಸುಲಭಗೊಳಿಸಿ ಮಿಲಿಯನ್‌ಗಳ ಪ್ರತಿಗಳನ್ನು ಮಾರಾಟ ಮಾಡಿದರು. ದೈಹಿಕ ಅಡೆತಡೆಗಳ ನಡುವೆಯೂ ವಿಶ್ವದ ಅತ್ಯಂತ ಪ್ರಭಾವಿ ವಿಜ್ಞಾನಿಗಳಲ್ಲಿ ಒಬ್ಬರಾಗಿ, ಬಿಗ್ ಬ್ಯಾಂಗ್, ಬ್ಲ್ಯಾಕ್ ಹೋಲ್‌ಗಳು ಮತ್ತು ಬ್ರಹ್ಮಾಂಡದ ರಹಸ್ಯಗಳ ಬಗ್ಗೆ ಆಳವಾದ ಒಳನೋಟಗಳನ್ನು ನೀಡಿ ಲಕ್ಷಾಂತರರನ್ನು ಸ್ಫೂರ್ತಿಗೊಳಿಸಿದರು.

ಯಾರು ಈ ಜೆಫ್ರಿ ಎಪ್​ಸ್ಟೀನ್​?

ಜೆಫ್ರಿ ಎಡ್ವರ್ಡ್ ಎಪ್​ಸ್ಟೀನ್​, ಅಮೆರಿಕದ ಶ್ರೀಮಂತ ಹಣಕಾಸು ಉದ್ಯಮಿ ಮತ್ತು ಲೈಂಗಿಕ ಅಪರಾಧಿ. ಅಪ್ರಾಪ್ತ ಬಾಲಕಿಯರನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿ, ಕಳ್ಳಸಾಗಾಣೆ ಮಾಡಿದ ಆರೋಪ ಆತನ ಮೇಲಿದೆ. 2008ರಲ್ಲಿ ಶಿಕ್ಷೆಗೆ ಒಳಗಾಗಿದ್ದ ಮತ್ತು 2019ರಲ್ಲಿ ಮತ್ತೆ ಬಂಧನಕ್ಕೊಳಗಾಗಿ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡನು. ಬಿಲ್ ಕ್ಲಿಂಟನ್, ಡೊನಾಲ್ಡ್ ಟ್ರಂಪ್, ಪ್ರಿನ್ಸ್ ಆಂಡ್ರ್ಯೂ ಸೇರಿದಂತೆ ಹಲವು ಪ್ರಭಾವಿ ವ್ಯಕ್ತಿಗಳೊಂದಿಗೆ ಈ ಎಪ್ಸ್ಟೀನ್ ಸಂಪರ್ಕ ಹೊಂದಿದ್ದ ಆದರೆ, ಅವರ ಮೇಲೆ ಯಾವುದೇ ನೇರ ಆರೋಪಗಳಿಲ್ಲ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net