ಆತ ಆ ಕರಾಳ ರಹಸ್ಯ ನನಗೆ ಹೇಳಿದ... ಸ್ಫೋಟಕ ಸಂಗತಿ ಬಿಚ್ಚಿಟ್ಟ ಎಪ್ಸ್ಟೀನ್ ಕೈಯಿಂದ ಬಚಾವ್​ ಆದ ಸಂತ್ರಸ್ತೆ! Epstein Files

ಸ್ಫೋಟಕ ಸಂಗತಿ ಬಿಚ್ಚಿಟ್ಟ ಎಪ್ಸ್ಟೀನ್ ಕೈಯಿಂದ ಬಚಾವ್​ ಆದ ಸಂತ್ರಸ್ತೆ ( Epstein Files )
ಸ್ಫೋಟಕ ಸಂಗತಿ ಬಿಚ್ಚಿಟ್ಟ ಎಪ್ಸ್ಟೀನ್ ಕೈಯಿಂದ ಬಚಾವ್​ ಆದ ಸಂತ್ರಸ್ತೆ ( Epstein Files )
Published on

ಪ್ರಮುಖ ಮುಖ್ಯಾಂಶಗಳು

  • ಅಮೆರಿಕದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲೇ ಬಿರುಗಾಳಿ ಎಬ್ಬಿಸಿದ ಜೆಫ್ರಿ ಎಪ್ಸ್ಟೀನ್‌ ಫೈಲ್ಸ್​
  • ವಿಶ್ವದ ಘಟಾನುಘಟಿ ನಾಯಕರ ಹೆಸರುಗಳು ಎಪ್ಸ್ಟೀನ್‌ ಜತೆ ಕೇಳಿಬರುತ್ತಿವೆ
  • ಇದೀಗ ಸ್ಫೋಟಕ ಸಂಗತಿ ಬಿಚ್ಚಿಟ್ಟ ಎಪ್ಸ್ಟೀನ್​ನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆ
Epstein Files : ಅಮೆರಿಕದ ಕುಖ್ಯಾತ ಲೈಂಗಿಕ ಅಪರಾಧಿ ಮತ್ತು ಉದ್ಯಮಿ ಜೆಫ್ರಿ ಎಪ್ಸ್ಟೀನ್‌ ( Jeffrey Epstein )ಗೆ ಸಂಬಂಧಿಸಿದ ಕಡತಗಳು ಅಮೆರಿಕದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲೇ ಬಿರುಗಾಳಿ ಎಬ್ಬಿಸಿರುವುದು ನಿಮಗೆಲ್ಲರಿಗೂ ಗೊತ್ತಿದೆ. ಕಳೆದ ಕೆಲವು ದಿನಗಳಿಂದ ನೂರಾರು ಸುದ್ದಿಗಳು ಪ್ರಕಟವಾಗುತ್ತಲೇ ಇದೆ. ವಿಶ್ವದ ಘಟಾನುಘಟಿ ನಾಯಕರ ಹೆಸರುಗಳು ಎಪ್ಸ್ಟೀನ್‌ ಜತೆ ಕೇಳಿಬರುತ್ತಿವೆ. ಇದೆಲ್ಲದರ ನಡುವೆ ಇದೀಗ, ಎಪ್ಸ್ಟೀನ್​ನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯೊಬ್ಬಳು ಸ್ಫೋಟಕ ಸಂಗತಿಯನ್ನು ಬಿಚ್ಚಿಟ್ಟಿದ್ದಾಳೆ.
ಜೆಫ್ರಿ ಎಪ್ಸ್ಟೀನ್​ ಲೈಂಗಿಕ ದೌರ್ಜನ್ಯದ ಸಂತ್ರಸ್ತೆ ರೀನಾ ಓಹ್ ಎಂಬುವರು ಎನ್​ಡಿಟಿವಿ ಜತೆ ಮಾತನಾಡಿದ್ದು, ಎಪ್ಸ್ಟೀನ್​ನ ಕರಾಳ ರಹಸ್ಯಗಳನ್ನು ತೆರೆದಿಟ್ಟಿದ್ದಾರೆ. ಲೈಂಗಿಕ ಅಪರಾಧಿ ಎಪ್ಸ್ಟೀನ್​, ವರ್ಷಗಳ ಕಾಲ ತನ್ನ ಮೇಲೆ ಹೇಗೆಲ್ಲ ದೌರ್ಜನ್ಯ ಎಸಗಿದ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಆಗಿನ್ನೂ 21 ವರ್ಷ ವಯಸ್ಸು

ದೌರ್ಜನ್ಯ ನಡೆದಂತಹ ಸಮಯದಲ್ಲಿ ಓಹ್​ಗೆ 21 ವರ್ಷ ವಯಸ್ಸು. ಆರಂಭದಲ್ಲಿ ನನ್ನ ಸೌಂದರ್ಯವನ್ನು ಹೊಗಳುತ್ತಿದ್ದ ಎಪ್ಸ್ಟೀನ್​, ಕೆಲವೇ ದಿನಗಳಲ್ಲಿ ನನ್ನನ್ನು ಅವಮಾನಿಸಲು ಆರಂಭಿಸಿದ. ನನ್ನ ದೇಹವನ್ನು ಟೀಕಿಸುತ್ತಿದ್ದ. ನನ್ನ ದೇಹದೊಂದಿಗೆ ಏನು ಮಾಡಬೇಕೆಂದು ನನಗೆ ಆದೇಶಿಸುತ್ತಿದ್ದ. ಇದೇ ಮಾತನ್ನು ಅನೇಕ ಬಾರಿ ಹೇಳುತ್ತಿದ್ದನು. ಹೀಗಿರುವಾಗ, ನಿನಗೆ ವಯಸ್ಸಾಗಿದೆ ಎಂದು ಹೇಳಲು ಆರಂಭಿಸಿದನು. ಆ ಸಮಯದಲ್ಲಿ ನನಗೆ 21 ವರ್ಷ ಮತ್ತು ಆತನಿಗೆ 47 ವರ್ಷ ವಯಸ್ಸಾಗಿತ್ತು. 21 ವರ್ಷದ ಯುವತಿಗೆ ನಿನಗೆ ವಯಸ್ಸಾಗಿದೆ ಎಂದು ಹೇಳಿದಾಗ ಆಕೆಯ ಮಾನಸಿಕ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ನೀವೇ ಯೋಚಿಸಿ ಎಂದು ಎನ್​ಡಿಟಿವಿಗೆ ಓಹ್​ ಹೇಳಿದರು.

ಶಾಂತ ಸ್ವಭಾವದವಳು

ನನ್ನ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗಿದ್ದರಿಂದ ನಾನು ಅನೇಕ ವರ್ಷಗಳ ಕಾಲ ಅದರ ಹಾನಿಯನ್ನು ಅನುಭವಿಸಿದ್ದೇನೆ. ನನ್ನ ಆರಂಭದ ವಯಸ್ಸಿನಲ್ಲಿ ಅಂದರೆ, ನಾನು 6ನೇ ವಯಸ್ಸಿನಲ್ಲಿದ್ದಾಗ ಓರ್ವ ವಯಸ್ಕ ವ್ಯಕ್ತಿ ನನ್ನ ಮೇಲೆ ದೌರ್ಜನ್ಯ ಎಸಗಿದ. ನಾನು ಸ್ವಾಭವಿಕವಾಗಿ ಶಾಂತ ಸ್ವಭಾವದವಳು. ಆ ಸಮಯದಲ್ಲಿ ಆ ದೌಜನ್ಯವನ್ನು ನನ್ನಿಂದ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಹೇಳಬೇಕೆಂದರೆ, ನಾನು ಹದಿಹರೆಯಕ್ಕೆ ಬಂದಾಗಲೂ ಅದರ ಬಗ್ಗೆ ಏನು ಅರ್ಥವಾಗಲಿಲ್ಲ. ನನ್ನನ್ನು ಬಲೆಗೆ ಬೀಳಿಸುವುದು ಸುಲಭವಾಗಿತ್ತು. ನನ್ನ ಈ ಗುಣವನ್ನು ಎಪ್ಸ್ಟೀನ್​ ಬಂಡವಾಳ ಮಾಡಿಕೊಂಡನು ಎಂದು ಓಹ್​ ತಿಳಿಸಿದ್ದಾರೆ.

ನನಗೆ ಕರಾಳ ರಹಸ್ಯ ಹೇಳಿದ್ದ

ನಾನು, ಎಪ್ಸ್ಟೀನ್​ ಮತ್ತು ಇನ್ನೊಬ್ಬ ಹುಡುಗಿಯ ಜೊತೆ ಫ್ಲೋರಿಡಾಕ್ಕೆ ಒಮ್ಮೆ ಪ್ರವಾಸಕ್ಕೆ ಹೋದೆವು. ಆ ಪ್ರವಾಸದ ಸಮಯದಲ್ಲಿ ಎಪ್ಸ್ಟೀನ್​ ನನಗೆ ಹೇಳಿದ ಕೆಲವು ವಿಷಯಗಳು ಆತನ ಕರಾಳ ರಹಸ್ಯಗಳಲ್ಲಿ ಒಂದಾಗಿರಬಹುದು. ಇದೇ ವಿಚಾರವನ್ನು ನಾನು, ಇನ್ನೊಬ್ಬ ಹುಡುಗಿಗೆ ಹೇಳಿದಾಗ, ಆಕೆ ಅದನ್ನು ಮತ್ತೆ ಎಪ್ಸ್ಟೀನ್​ಗೆ ತಿಳಿಸಿದಳು. ಈ ವೇಳೆ ಆತ ನನಗೆ ಬೆದರಿಕೆ ಹಾಕಿದನು. ಇದಾದ ನಂತರ, ನಾನು ಅಂದುಕೊಂಡರೂ ಈ ಬಲೆಯಿಂದ ಹೊರಗೆ ಬರಲು ಸಾಧ್ಯವಿಲ್ಲ ಎಂದು ನನಗೆ ಅನಿಸಿತು ಎಂದು ಓಹ್​ ಹೇಳಿದ್ದಾರೆ.

ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ

ನಾನು ಆ ಸಮಯದಲ್ಲಿ ಆತನ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ, ಆತ ನನಗೆ ಹಲವು ರೀತಿಯಲ್ಲಿ ನೋವುಂಟು ಮಾಡುತ್ತಾನೆಂದು ನನಗೆ ಚೆನ್ನಾಗಿ ತಿಳಿದಿತ್ತು. ನಾನು ಎಲ್ಲಿ ವಾಸಿಸುತ್ತಿದ್ದೆ? ನನ್ನ ಹೆತ್ತವರು ಎಲ್ಲಿದ್ದಾರೆ? ಎಂಬುದು ಆತನಿಗೆ ತಿಳಿದಿತ್ತು. ಆತ ನನ್ನನ್ನು ಹಿಂಬಾಲಿಸುತ್ತಿದ್ದನು ಎಂಬುದಕ್ಕೆ ನನ್ನ ಬಳಿ ಪುರಾವೆಗಳಿವೆ. ನಾನೊಬ್ಬಳೆ ಅಲ್ಲ, ಇತರ ಹಲವಾರು ಹುಡುಗಿಯರೊಂದಿಗೂ ಇದೇ ರೀತಿ ನಡೆದುಕೊಂಡಿದ್ದಾನೆಂದು ನಾನು ಭಾವಿಸುತ್ತೇನೆ ಅಂತ ಓಹ್​ ಹೇಳಿದ್ದಾರೆ.

ತುಂಬಾ ಕೋಪದಲ್ಲಿದ್ದ

ನಾನು ಆತನನ್ನು ಕೊನೆಯ ಬಾರಿ ನೋಡಿದಾಗ ಆತ ತುಂಬಾ ಕೋಪದಲ್ಲಿದ್ದ. ಮತ್ತೆ ನಾನೆಂದಿಗೂ ಅಲ್ಲಿಗೆ ಹಿಂತಿರುಗಲಿಲ್ಲ. ಯಾವುದೇ ಫೋನ್ ಕರೆಗಳಿಗೂ ನಾನು ಉತ್ತರಿಸಲಿಲ್ಲ. ಆ ಬಳಿಕ ಯಾರೊಂದಿಗೂ ನಾನು ಮಾತನಾಡಲಿಲ್ಲ ಎಂದ ಓಹ್​, ಜೆಫ್ರಿ ಎಪ್ಸ್ಟೀನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಮಾಜಿ ಯುಕೆ ಪ್ರಿನ್ಸ್ ಆಂಡ್ರ್ಯೂ ಮೌಂಟ್ಬ್ಯಾಟನ್-ವಿಂಡ್ಸರ್ ಬಂಧನವನ್ನು ಶ್ಲಾಘಿಸಿದರು. ಆದಾಗ್ಯೂ, ಈ ಪ್ರಕರಣದಲ್ಲಿ ಯುಎಸ್ ಸರ್ಕಾರ "ಸಾಕಷ್ಟು ಕೆಲಸ ಮಾಡುತ್ತಿಲ್ಲ" ಎಂದು ಅಸಮಾಧಾನ ಹೊರಹಾಕಿದರು.

ಯಾರು ಈ ಜೆಫ್ರಿ ಎಪ್ಸ್ಟೀನ್‌?

ಜೆಫ್ರಿ ಎಡ್ವರ್ಡ್ ಎಪ್ಸ್ಟೀನ್ (1953-2019) ಅಮೆರಿಕದ ಶ್ರೀಮಂತ ಹಣಕಾಸು ಉದ್ಯಮಿ ಮತ್ತು ಲೈಂಗಿಕ ಅಪರಾಧಿ. ಅಪ್ರಾಪ್ತ ಬಾಲಕಿಯರನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿ, ಕಳ್ಳಸಾಗಾಣೆ ಮಾಡಿದ ಆರೋಪ ಆತನ ಮೇಲಿದೆ. 2008ರಲ್ಲಿ ಶಿಕ್ಷೆಗೆ ಒಳಗಾಗಿದ್ದ ಮತ್ತು 2019ರಲ್ಲಿ ಮತ್ತೆ ಬಂಧನಕ್ಕೊಳಗಾಗಿ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡನು. ಬಿಲ್ ಕ್ಲಿಂಟನ್, ಡೊನಾಲ್ಡ್ ಟ್ರಂಪ್, ಪ್ರಿನ್ಸ್ ಆಂಡ್ರ್ಯೂ ಸೇರಿದಂತೆ ಹಲವು ಪ್ರಭಾವಿ ವ್ಯಕ್ತಿಗಳೊಂದಿಗೆ ಈ ಎಪ್ಸ್ಟೀನ್ ಸಂಪರ್ಕ ಹೊಂದಿದ್ದ ಆದರೆ, ಅವರ ಮೇಲೆ ಯಾವುದೇ ನೇರ ಆರೋಪಗಳಿಲ್ಲ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net