3 ಮದ್ವೆಗೆ 35 ಲಕ್ಷ ಸಾಲ... ತಂದೆಗೆ ಕೊಟ್ಟ ಮಾತಿಗೆ 10 ಅಕ್ಕಂದಿರ ಮದ್ವೆ ಹೊಣೆ ಹೊತ್ತವನ ಮಾತು ಕೇಳಿದ್ರೆ ಮನಕಲಕುತ್ತೆ! Son Kept Father Promise

3 ಮದ್ವೆಗೆ 35 ಲಕ್ಷ ಸಾಲ... ತಂದೆಗೆ ಕೊಟ್ಟ ಮಾತಿಗೆ 10 ಅಕ್ಕಂದಿರ ಮದ್ವೆ ಹೊಣೆ ಹೊತ್ತವನ ಮಾತು ಕೇಳಿದ್ರೆ ಮನಕಲಕುತ್ತೆ! Son Kept Father Promise
3 ಮದ್ವೆಗೆ 35 ಲಕ್ಷ ಸಾಲ... ತಂದೆಗೆ ಕೊಟ್ಟ ಮಾತಿಗೆ 10 ಅಕ್ಕಂದಿರ ಮದ್ವೆ ಹೊಣೆ ಹೊತ್ತವನ ಮಾತು ಕೇಳಿದ್ರೆ ಮನಕಲಕುತ್ತೆ! Son Kept Father Promise
Published on

ಪ್ರಮುಖ ಮುಖ್ಯಾಂಶಗಳು

  • ಬೆಳ್ಳಿಪರದೆಯ ಸಿನಿಮಾ ಕತೆಯನ್ನೇ ಮೀರಿಸುವಂತಿದೆ ಈ ಯುವಕನ ರೋಚಕ ಹಾಗೂ ಭಾವುಕ ಜೀವನ ಪಯಣ
  • ಪ್ರತಿಯೊಬ್ಬ ಸಾಮಾನ್ಯ ಭಾರತೀಯನು ತನ್ನ ಜೀವನದಲ್ಲಿ ಎದುರಿಸುವ ಕಷ್ಟಗಳನ್ನು ಈತನ ಕತೆ ನೆನಪಿಸುತ್ತೆ
  • ತನ್ನ ತಂದೆ ಕ್ಯಾನ್ಸರ್​ನಿಂದ ಸಾಯುವ ಕೊನೇ ಗಳಿಗೆಯಲ್ಲಿ ತನ್ನ 10 ಅಕ್ಕಂದಿರಿಗೆ ಮದುವೆ ಮಾಡುತ್ತೇನೆಂದು ಮಾತು ಕೊಟ್ಟ
  • ಕೊಟ್ಟ ಮಾತಿನಂತೆ 35 ಲಕ್ಷ ಸಾಲ ಮಾಡಿ ಮೂವರು ಅಕ್ಕಂದಿರಿಗೆ ಮದುವೆ ಮಾಡಿದ ಸಹೋದರ ಉಳಿದ ಮದುವೆಗೆ ಸಿದ್ಧತೆ
Son Kept Father Promise : ಹೆತ್ತವರ ಕನಸುಗಳನ್ನು ನನಸಾಗಿಸಲು ಮತ್ತು ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ತಮ್ಮ ಇಡೀ ಜೀವನವನ್ನೇ ಮುಡುಪಾಗಿಡುವ ವ್ಯಕ್ತಿಗಳ ಬದುಕು ಸದಾ ಸ್ಫೂರ್ತಿದಾಯಕ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಇದೀಗ ಅಂತಹದೇ ಒಬ್ಬ ಸಾಧಕನ ಕಠಿಣ ಪರಿಶ್ರಮ ಮತ್ತು ಹೋರಾಟದ ಕಥೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಕಣ್ಣಾಲಿಗಳನ್ನು ಒದ್ದೆಯಾಗಿಸುತ್ತಿದೆ! ಹೌದು, ಬೆಳ್ಳಿಪರದೆಯ ಸಿನಿಮಾ ಕಥೆಯನ್ನೇ ಮೀರಿಸುವಂತಿರುವ ಈ ರೋಚಕ ಹಾಗೂ ಭಾವುಕ ಪಯಣವು, ಪ್ರತಿಯೊಬ್ಬ ಸಾಮಾನ್ಯ ಭಾರತೀಯನು ತನ್ನ ದೈನಂದಿನ ಜೀವನದಲ್ಲಿ ಎದುರಿಸುವ ಕಷ್ಟ-ಕಾರ್ಪಣ್ಯಗಳು ಮತ್ತು ಆತ ನಡೆಸುವ ನಿರಂತರ ಜೀವನ ಸಂಘರ್ಷವನ್ನು ನಮಗೆ ಮತ್ತೊಮ್ಮೆ ನೆನಪಿಸುವಂತಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ತುಣುಕಿನಲ್ಲಿ, ಸತತ ಹತ್ತು ಹೆಣ್ಣುಮಕ್ಕಳು ಜನಿಸಿದ ನಂತರ ತಮ್ಮ ತಂದೆ ಒಂದು ಗಂಡು ಮಗುವಿಗಾಗಿ ಎಷ್ಟು ಹಂಬಲಿಸುತ್ತಿದ್ದರು ಎಂಬುದನ್ನು ಯುವಕ ನೆನಪಿಸಿಕೊಂಡಿದ್ದಾನೆ. ಆದರೆ, ಅವರ ತಂದೆ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡುತ್ತಾ ತಮ್ಮ ಕೊನೆಯ ದಿನಗಳನ್ನು ಎಣಿಸುತ್ತಿದ್ದಾಗ ಕುಟುಂಬದ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಯಿತು. ಕೊನೆಯುಸಿರೆಳೆಯುವ ಮುನ್ನ ತಮ್ಮ ಮಗನಿಂದ ಒಂದು ಮಾತನ್ನು ಪಡೆದರು. ಅದೇನೆಂದರೆ, ಯಾವುದೇ ಸಂಬಂಧಿಕರ ಮೇಲೆ ಅವಲಂಬಿತರಾಗದೆ ಅಥವಾ ಯಾರೊಂದಿಗೂ ಹೊರೆಯನ್ನು ಹಂಚಿಕೊಳ್ಳದೆ, ತನ್ನ ಹತ್ತು ಮಂದಿ ಅಕ್ಕಂದಿರ ಮದುವೆಯನ್ನು ಅವನೇ ಖುದ್ದಾಗಿ ನಿಂತು ಜವಾಬ್ದಾರಿಯಿಂದ ಮಾಡಬೇಕು ಎಂಬುದಾಗಿತ್ತು. ಅಷ್ಟಕ್ಕೂ ಆ ಯುವಕ ತಂದೆಯ ಮಾತನ್ನು ಉಳಿಸಿಕೊಂಡನಾ? ಕುಟುಂಬ ಜವಾಬ್ದಾರಿಯನ್ನು ಆತ ನಿಭಾಯಿಸಿದ್ದು ಹೇಗೆ ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ.
ಅಂದಹಾಗೆ, ಆ ಯುವಕ ತಂದೆಯ ಕೊನೆಯ ಆಸೆಗೆ ಮರುಮಾತನಾಡದೆ ತಕ್ಷಣವೇ ಒಪ್ಪಿಕೊಂಡನು. ಹೇಳಬೇಕೆಂದರೆ, ಆತನಿಗೆ ಮುಂಬರುವ ವರ್ಷಗಳಲ್ಲಿ ಈ ಬದ್ಧತೆಯನ್ನು ನಿಭಾಯಿಸುವುದು ಎಷ್ಟು ಕಷ್ಟಕರ ಮತ್ತು ಸವಾಲಿನದ್ದಾಗಿರಬಹುದು ಎಂಬುದರ ಸಂಪೂರ್ಣ ಅರಿವು ಕೂಡ ಇರಲಿಲ್ಲ. ಆದರೆ, ತಂದೆಗೆ ಕೊಟ್ಟ ಮಾತಿನಂತೆ ಆತ ಈಗಾಗಲೇ ತನ್ನ ಮೂವರು ಅಕ್ಕಂದಿರ ವಿವಾಹವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿದ್ದಾನೆ. ಆದರೆ, ಈ ಪ್ರಮುಖ ಜವಾಬ್ದಾರಿಗಳನ್ನು ಪೂರೈಸಲು ಆತ ಭಾರಿ ಪ್ರಮಾಣದ ಆರ್ಥಿಕ ಹೊರೆಯನ್ನು ಹೊರಬೇಕಾಗಿದೆ.
ಆ ಯುವಕನ ಪ್ರಕಾರ, ಕೇವಲ ಮೂರು ಮದುವೆಗಳಿಗಾಗಿಯೇ ಆತ ಮಾಡಿಕೊಂಡಿರುವ ಒಟ್ಟು ಸಾಲದ ಮೊತ್ತ ಈಗ ಸುಮಾರು 35 ಲಕ್ಷ ರೂಪಾಯಿಗಳನ್ನು ತಲುಪಿದೆ. ಇನ್ನುಳಿದಂತೆ ಇನ್ನೂ ಏಳು ಮಂದಿ ಸಹೋದರಿಯರ ವಿವಾಹ ಕಾರ್ಯಗಳು ಬಾಕಿ ಉಳಿದಿದ್ದು, ಮುಂಬರುವ ವರ್ಷಗಳಲ್ಲಿ ಕೌಟುಂಬಿಕ ನಿರೀಕ್ಷೆಗಳಿಗೆ ತಕ್ಕಂತೆ ಮದುವೆ ಸಮಾರಂಭಗಳು ಮತ್ತು ಉಡುಗೊರೆಗಳ ಜವಾಬ್ದಾರಿಯನ್ನು ನಿಭಾಯಿಸಲು ಹಾಗೂ ತಂದೆಗೆ ನೀಡಿದ ಭಾಷೆಯನ್ನು ಸಂಪೂರ್ಣವಾಗಿ ಈಡೇರಿಸಲು ತನಗೆ ಇನ್ನೂ ಕನಿಷ್ಠ 2 ರಿಂದ 3 ಕೋಟಿ ರೂಪಾಯಿಗಳ ಅಗತ್ಯವಿರಬಹುದು ಎಂದು ಆತ ಅಂದಾಜಿಸಿದ್ದಾನೆ.
ಇಷ್ಟೆಲ್ಲಾ ಆದ ಮೇಲೂ ಒಂದು ವೇಳೆ ಏನಾದರೂ ಹಣ ಉಳಿದರೆ, ಆಮೇಲೆ ನಾನೂ ಮದುವೆ ಮಾಡಿಕೊಳ್ಳುತ್ತೇನೆ ಎಂದು ಆ ಯುವಕ ವಿಡಿಯೋದಲ್ಲಿ ನಗುತ್ತಲೇ ಹೇಳಿದ್ದಾನೆ. ಆದರೆ, ಆತನ ಮುಖದ ಮೇಲಿನ ಆ ನಗು ಅತ್ಯಂತ ಭಾವುಕ ಹಾಗೂ ಎಂತವರ ಹೃದಯವನ್ನೂ ಕಲಕುವಂತಿದೆ ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ, "ನನಗೆ ಮಕ್ಕಳು ಹುಟ್ಟಿ ಅವರು ಹೆಜ್ಜೆ ಇಡಲು ಕಲಿಯುವಷ್ಟರಲ್ಲಿ ನನಗೆ 60 ಅಥವಾ 70 ವರ್ಷ ವಯಸ್ಸಾಗಿರುತ್ತದೆ ಎಂದು ತನ್ನ ಭವಿಷ್ಯದ ಅನಿವಾರ್ಯ ಪರಿಸ್ಥಿತಿಯನ್ನು ಆತ ವಿಡಿಯೋದಲ್ಲಿ ಹಂಚಿಕೊಂಡಿದ್ದಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಯುವಕನ ತ್ಯಾಗ ಮತ್ತು ವಾಸ್ತವ ಜೀವನದ ನಡುವಿನ ವ್ಯತ್ಯಾಸದ ಕುರಿತು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ತೀವ್ರ ಆರ್ಥಿಕ ಒತ್ತಡದ ನಡುವೆಯೂ ತಂದೆಯ ಕೊನೆಯ ಆಸೆಯನ್ನು ಈಡೇರಿಸಲು ನಿಂತಿರುವ ಯುವಕನ ಬದ್ಧತೆಯನ್ನು ಶ್ಲಾಘಿಸಿರುವ ಅನೇಕರು, "ಇಂದಿನ ಆಧುನಿಕ ಕಾಲದಲ್ಲಿ ಇಂತಹ ಅಪರೂಪದ ಕೌಟುಂಬಿಕ ಜವಾಬ್ದಾರಿ ನಿಜಕ್ಕೂ ಹೆಮ್ಮೆಯ ವಿಷಯ" ಎಂದು ಕೊಂಡಾಡಿದ್ದಾರೆ. ಆದರೆ, ಮತ್ತೊಂದು ಕಡೆ ಕೆಲವರು "ಕುಟುಂಬದ ಮೇಲಿನ ಪ್ರೀತಿ ನಿಜಕ್ಕೂ ಸುಂದರವಾದದ್ದು, ಆದರೆ ಅದಕ್ಕಾಗಿ ಒಬ್ಬ ವ್ಯಕ್ತಿ ತನ್ನ ಇಡೀ ಭವಿಷ್ಯವನ್ನೇ ಬಲಿಗೊಡುವುದು ಎಷ್ಟರಮಟ್ಟಿಗೆ ಸರಿ?" ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ಭಾರತೀಯ ಕುಟುಂಬಗಳಲ್ಲಿ ಹೆಣ್ಣುಮಕ್ಕಳ ಮದುವೆಗಾಗಿ ಗಂಡುಮಕ್ಕಳು ತಮ್ಮ ವೃತ್ತಿಜೀವನ, ಉಳಿತಾಯ ಮತ್ತು ಸ್ವಂತ ಮದುವೆಯನ್ನು ತ್ಯಾಗ ಮಾಡುವುದು ಸಾಮಾನ್ಯ ಸಂಗತಿಯಾಗಿದೆ ಎಂದು ಹಲವರು ತಮ್ಮ ಸ್ವಂತ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಈ ವೈರಲ್ ಸ್ಟೋರಿಯು ಭಾರತೀಯ ಕುಟುಂಬಗಳಲ್ಲಿ ಮದುವೆ ಸಮಾರಂಭಗಳು ಮತ್ತು ಸಾಮಾಜಿಕ ನಿರೀಕ್ಷೆಗಳು ತಂದೊಡ್ಡುವ ಭಾರಿ ಆರ್ಥಿಕ ಹಾಗೂ ಭಾವುಕ ಒತ್ತಡವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಇಂದಿಗೂ ಅನೇಕ ಸಮುದಾಯಗಳಲ್ಲಿ, ಕೇವಲ ತಮ್ಮ ಸಾಮಾಜಿಕ ಸ್ಥಾನಮಾನವನ್ನು ಕಾಯ್ದುಕೊಳ್ಳುವ ಸಲುವಾಗಿಯೇ ಅದ್ದೂರಿ ಮದುವೆಗಳು, ದುಬಾರಿ ಉಡುಗೊರೆಗಳು ಮತ್ತು ಭವ್ಯ ಆಚರಣೆಗಳನ್ನು ಆಯೋಜಿಸುವಂತೆ ಕುಟುಂಬಗಳ ಮೇಲೆ ತೀವ್ರ ಸಾಮಾಜಿಕ ಒತ್ತಡವಿರುತ್ತದೆ. ಇದರ ಪರಿಣಾಮವಾಗಿ, ಅನೇಕ ಮಧ್ಯಮ ವರ್ಗದ ಕುಟುಂಬಗಳು ಅನಿವಾರ್ಯವಾಗಿ ದೊಡ್ಡ ಮೊತ್ತದ ಸಾಲದ ಸುಳಿಗೆ ಸಿಲುಕುತ್ತವೆ ಅಥವಾ ಶಿಕ್ಷಣ, ಆರೋಗ್ಯ ಮತ್ತು ನಿವೃತ್ತಿ ಜೀವನಕ್ಕಾಗಿ ಕಷ್ಟಪಟ್ಟು ಕೂಡಿಟ್ಟ ಉಳಿತಾಯವನ್ನು ಮದುವೆಗಾಗಿಯೇ ಖಾಲಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಹೀಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಈ ಚರ್ಚೆಯು ಕೇವಲ ಒಂದು ವೈರಲ್ ವಿಡಿಯೋಗೆ ಮಾತ್ರ ಸೀಮಿತವಾಗಿರದೆ, ಭಾರತದಲ್ಲಿ ಪೋಷಕರ ನಿರೀಕ್ಷೆಗಳು, ಕೌಟುಂಬಿಕ ಗೌರವ ಮತ್ತು ಕೊಟ್ಟ ಮಾತಿಗೆ ಇರುವ ಭಾವುಕ ಮೌಲ್ಯವನ್ನು ಪ್ರತಿಬಿಂಬಿಸುವ ದೊಡ್ಡ ಜಾಗೃತಿಯಾಗಿ ಮಾರ್ಪಟ್ಟಿದೆ. ಸಾಲದ ಸುಳಿಗೆ ಸಿಲುಕುವ ಬದಲು ಸರಳ ವಿವಾಹ ಮತ್ತು ಉತ್ತಮ ಆರ್ಥಿಕ ಯೋಜನೆಯತ್ತ ಕುಟುಂಬಗಳು ಗಮನ ಹರಿಸಬೇಕು ಎಂದು ಹಲವರು ಸಲಹೆ ನೀಡಿದ್ದರೆ, ಮುಂದಿನ ಪೀಳಿಗೆಯಾದರೂ ಇಂತಹ ಹೊರೆಯಿಂದ ಮುಕ್ತವಾಗಲು ಮದುವೆಗೆ ಸಂಬಂಧಿಸಿದ ಸಾಂಸ್ಕೃತಿಕ ನಿರೀಕ್ಷೆಗಳಲ್ಲಿ ಬದಲಾವಣೆ ಬರಬೇಕು ಎಂದು ಇನ್ನು ಕೆಲವರು ವಾದಿಸಿದ್ದಾರೆ. ಆದಾಗ್ಯೂ, ಈ ಯುವಕ ಮಾತ್ರ ತನ್ನ ಮುಂದಿನ ಪಯಣ ಎಷ್ಟು ಕಠಿಣವಾಗಿದ್ದರೂ ಸಹ, ತನ್ನ ತಂದೆಗೆ ನೀಡಿದ ಮಾತನ್ನು ಉಳಿಸಿಕೊಳ್ಳಲು ತಾನು ಬದ್ಧನಾಗಿರುವುದಾಗಿ ದೃಢವಾಗಿ ಹೇಳಿದ್ದಾನೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net