ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 'ಕಾಕ್ರೋಚ್ ಜನತಾ ಪಾರ್ಟಿ' ವಿವಾದ: ಸಿಬಿಐ ತನಿಖೆಗೆ ಕೋರಿ ಪಿಐಎಲ್ ಸಲ್ಲಿಕೆ! Cockroach Janta Party

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 'ಕಾಕ್ರೋಚ್ ಜನತಾ ಪಾರ್ಟಿ' ವಿವಾದ: ಸಿಬಿಐ ತನಿಖೆಗೆ ಕೋರಿ ಪಿಐಎಲ್ ಸಲ್ಲಿಕೆ! Cockroach Janta Party
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 'ಕಾಕ್ರೋಚ್ ಜನತಾ ಪಾರ್ಟಿ' ವಿವಾದ: ಸಿಬಿಐ ತನಿಖೆಗೆ ಕೋರಿ ಪಿಐಎಲ್ ಸಲ್ಲಿಕೆ! Cockroach Janta Party
Published on

ಪ್ರಮುಖ ಮುಖ್ಯಾಂಶಗಳು

  • ಕಾಕ್ರೋಚ್ ಜನತಾ ಪಾರ್ಟಿ ಎಂಬ ವ್ಯಂಗ್ಯಭರಿತ ಆನ್‌ಲೈನ್ ಅಭಿಯಾನ ಈಗ ಕೋರ್ಟ್ ಮೆಟ್ಟಿಲೇರಿದೆ
  • ಸಿಜೆಪಿ ಚಟುವಟಿಕೆಗಳ ತನಿಖೆ ಆಗಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ
  • ನ್ಯಾಯಾಲಯದ ಪ್ರಕ್ರಿಯೆಗಳನ್ನು ಆಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ವಿಡಂಬಣೆ ಸರಿಯಲ್ಲ
  • ಈ ಹಠಾತ್ ಬೆಳವಣಿಗೆಯ ಹಿಂದೆ ನಡೆದಿರುವ ಘಟನಾವಳಿಗಳ ಸಂಪೂರ್ಣ ತನಿಖೆಯಾಗಬೇಕೆಂದು ಅರ್ಜಿಯಲ್ಲಿ ಆಗ್ರಹ
ನವದೆಹಲಿ : ಸುಪ್ರೀಂ ಕೋರ್ಟ್ ಕಲಾಪದ ವೇಳೆ ಇತ್ತೀಚೆಗೆ ನಡೆದ ಚರ್ಚೆಯೊಂದರ ಬೆನ್ನಲ್ಲೇ ಹುಟ್ಟಿಕೊಂಡ 'ಕಾಕ್ರೋಚ್ ಜನತಾ ಪಾರ್ಟಿ' ( Cockroach Janta Party ) ಎಂಬ ವ್ಯಂಗ್ಯಭರಿತ ಆನ್‌ಲೈನ್ ಅಭಿಯಾನ ಈಗ ಕೋರ್ಟ್ ಮೆಟ್ಟಿಲೇರಿದ್ದು, ಇದರ ಚಟುವಟಿಕೆಗಳ ಕುರಿತು ಕೇಂದ್ರೀಯ ತನಿಖಾ ದಳ (CBI) ತನಿಖೆಗೆ ಆದೇಶಿಸಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ನ್ಯಾಯಾಲಯದ ಪ್ರಕ್ರಿಯೆಗಳನ್ನು ಆಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಂಬನಾತ್ಮಕ ಟ್ರೆಂಡ್ ಮತ್ತು ಅದರ ಹಿಂದಿನ ಉದ್ದೇಶಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಡಿಜಿಟಲ್ ಲೋಕದ ಈ ಹಠಾತ್ ಬೆಳವಣಿಗೆಯ ಹಿಂದೆ ನಡೆದಿರುವ ಘಟನಾವಳಿಗಳ ಸಂಪೂರ್ಣ ತನಿಖೆಯಾಗಬೇಕು ಎಂದು ಒತ್ತಾಯಿಸಿದೆ.
ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ರಾಜಾ ಚೌಧರಿ ಎಂಬುವವರು ಸಲ್ಲಿಸಿದ್ದಾರೆ. ನ್ಯಾಯಾಲಯದ ಕಲಾಪಗಳ ವೇಳೆ ನ್ಯಾಯಮೂರ್ತಿಗಳು ನೀಡುವ ಮೌಖಿಕ ಹೇಳಿಕೆಗಳನ್ನು ತಮ್ಮ ವಾಣಿಜ್ಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇತ್ತೀಚಿನ ವಿಚಾರಣೆಯೊಂದರ ವೇಳೆ ಮುಖ್ಯ ನ್ಯಾಯಮೂರ್ತಿಗಳು ಹೇಳಿದ ತಮ್ಮ ಅಭಿಪ್ರಾಯಗಳನ್ನು ತಮಗೆ ಬೇಕಾದಂತೆ ಎಡಿಟ್​ ಮಾಡಿ, ಆ ಸಂದರ್ಭಕ್ಕೆ ಅಪಚಾರವಾಗುವಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ವಿಡಿಯೋಗಳು, ಮೀಮ್ಸ್‌ಗಳನ್ನು ಮಾಡಿ ವಾಣಿಜ್ಯ ಸರಕನ್ನಾಗಿ ಪರಿವರ್ತಿಸಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಅಷ್ಟೇ ಅಲ್ಲದೆ, ನ್ಯಾಯಾಲಯದ ಈ ಪ್ರಕ್ರಿಯೆಗಳನ್ನು ಬಳಸಿಕೊಂಡು ಟ್ರೇಡ್‌ಮಾರ್ಕ್ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಮತ್ತು ಒಬ್ಬರ ಟೀಕೆ ಅಥವಾ ಅಭಿಪ್ರಾಯಗಳನ್ನು ಹಣಗಳಿಕೆಯ ರೂಪದಲ್ಲಿ ಪ್ರಸಾರ ಮಾಡುತ್ತಿರುವುದರ ವಿರುದ್ಧವೂ ತನಿಖೆಯಾಗಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಇದರೊಂದಿಗೆ, ಈ ಅರ್ಜಿಯು ಕಾನೂನು ವ್ಯವಸ್ಥೆಯಲ್ಲಿನ ಮತ್ತೊಂದು ಗಂಭೀರ ಸಮಸ್ಯೆಯತ್ತ ಗಮನ ಸೆಳೆದಿದ್ದು, ನಕಲಿ ವಕೀಲರು ಮತ್ತು ವಂಚನೆಯ ಮೂಲಕ ಪಡೆದಿರುವ ಕಾನೂನು ಪದವಿಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ. ಇಂತಹ ನಕಲಿ ಜಾಲಗಳು ಮತ್ತು ನ್ಯಾಯಾಲಯದ ಕಲಾಪಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರವೃತ್ತಿಯು ನ್ಯಾಯಾಂಗ ವ್ಯವಸ್ಥೆಯ ವೃತ್ತಿಪರ ಗುಣಮಟ್ಟ ಹಾಗೂ ಗಾಂಭೀರ್ಯತೆಯನ್ನು ಆಳವಾಗಿ ಕುಸಿಯುವಂತೆ ಮಾಡುತ್ತಿದೆ ಎಂದು ಅರ್ಜಿದಾರರು ಕಳವಳ ವ್ಯಕ್ತಪಡಿಸಿದ್ದಾರೆ.
ತಾವು ಸಲ್ಲಿಸಿರುವ ಈ ಅರ್ಜಿಯು ನ್ಯಾಯಾಂಗದ ಮೇಲಿನ ಕಾನೂನುಬದ್ಧ ಟೀಕೆಗಳು, ಪ್ರಜಾಪ್ರಭುತ್ವದ ಧ್ವನಿ, ವ್ಯಂಗ್ಯ ಅಥವಾ ಸಂವಿಧಾನಬದ್ಧವಾಗಿ ಸಿಕ್ಕಿರುವ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಉದ್ದೇಶವನ್ನು ಹೊಂದಿಲ್ಲ ಎಂದು ಅರ್ಜಿದಾರರು ಸ್ಪಷ್ಟಪಡಿಸಿದ್ದಾರೆ, ಆದರೆ ಕೋರ್ಟ್ ಕಲಾಪಗಳ ಸಂಭಾಷಣೆಯನ್ನು ವಾಣಿಜ್ಯೀಕರಣಗೊಳಿಸಿ, ವ್ಯವಸ್ಥಿತವಾಗಿ ಡಿಜಿಟಲ್ ಲೋಕದಲ್ಲಿ ಹರಡುತ್ತಾ ಹಣ ಗಳಿಸುತ್ತಿರುವುದರ ವಿರುದ್ಧ ಮಾತ್ರವೇ ಈ ಕಾನೂನು ಹೋರಾಟ ರೂಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಗಂಭೀರ ಪ್ರಕರಣದಲ್ಲಿ ಭಾರತ ಸರ್ಕಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಕೇಂದ್ರೀಯ ತನಿಖಾ ದಳವನ್ನು ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ.

ಏನಿದು ವಿವಾದ?

ಹಿರಿಯ ವಕೀಲರ ಹುದ್ದೆಯ ಪದನಾಮಕ್ಕೆ ಸಂಬಂಧಿಸಿದಂತೆ ಈ ತಿಂಗಳ ಆರಂಭದಲ್ಲಿ ಸುಪ್ರೀಂ ಕೋರ್ಟ್​ನಲ್ಲಿ ನಡೆದ ವಿಚಾರಣೆಯ ಹಿನ್ನೆಲೆಯಲ್ಲಿ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ. ಅಂದು ವಿಚಾರಣೆ ನಡೆಸುತ್ತಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, ವಕೀಲಿ ವೃತ್ತಿಯ ವೃತ್ತಿಪರ ಗುಣಮಟ್ಟ ಹಾಗೂ ನಕಲಿ ವಕೀಲರು ವ್ಯವಸ್ಥೆಯೊಳಗೆ ನುಸುಳುತ್ತಿರುವುದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಅವರು, ಉದ್ಯೋಗವಿಲ್ಲದ ಯುವಕರು ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಮತ್ತು ಆರ್‌ಟಿಐ ಮೂಲಕ ಸಾಮಾಜಿಕ ಕಾರ್ಯಕರ್ತರಂತೆ ನಟಿಸುವುದನ್ನು 'ಜಿರಳೆಗಳಿಗೆ' ಹೋಲಿಸಿ ಕೆಲವು ಮೌಖಿಕವಾಗಿ ಕೆಲವು ಟೀಕೆಗಳನ್ನು ಮಾಡಿದ್ದರು. ಆದರೆ, ನಂತರ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಕಾಮೆಂಟ್‌ಗಳು ಕೇವಲ ನಕಲಿ ಪದವಿಗಳನ್ನು ಹಿಡಿದು ವೃತ್ತಿಗೆ ಸೇರುತ್ತಿರುವವರನ್ನು ಉದ್ದೇಶಿಸಿ ಹೇಳಿದ್ದೇ ಹೊರತು ಬೇರೆ ಯಾರಿಗೂ ಅಲ್ಲ ಎಂದು ಸ್ಪಷ್ಟೀಕರಣವನ್ನೂ ನೀಡಿದ್ದರು.
ಆದರೆ, ನ್ಯಾಯಾಲಯದಲ್ಲಿ ನಡೆದ ಈ ಆಂತರಿಕ ಸಂಭಾಷಣೆಯ ಕೆಲವು ಭಾಗಗಳನ್ನು ಮಾತ್ರ ಉದ್ದೇಶಪೂರ್ವಕವಾಗಿ ಕತ್ತರಿಸಿ, ಯಾವುದೇ ಸಂದರ್ಭದ ಹಿನ್ನೆಲೆಯಿಲ್ಲದೆ ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗಿತ್ತು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲಿಂಗ್, ಮೀಮ್ಸ್ ಹಾಗೂ ಮಿಮಿಕ್ರಿ ವೀಡಿಯೋಗಳು ಸೃಷ್ಟಿಯಾಗಲು ಕಾರಣವಾಯಿತು ಮತ್ತು ಮೂಲ ಕಲಾಪದ ಉದ್ದೇಶವನ್ನೇ ಸಂಪೂರ್ಣವಾಗಿ ಮರೆಮಾಚಿ ವೈರಲ್ ಮಾಡಲಾಯಿತು. ಈ ವಿವಾದದ ಬೆನ್ನಲ್ಲೇ ಇಂಟರ್ನೆಟ್‌ನಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಹೆಸರಿನ ಹೊಸ ಸಾಮಾಜಿಕ ಮಾಧ್ಯಮ ಅಭಿಯಾನವೊಂದು ಮುಂಚೂಣಿಗೆ ಬಂದು, ಭಾರಿ ಜನಪ್ರಿಯತೆ ಗಳಿಸಿತು.
ನ್ಯಾಯಾಲಯದಲ್ಲಿ ನಡೆದ ಈ ಗಂಭೀರ ವಿವಾದವನ್ನು ಕೆಲವರು ತಮ್ಮ ವೈಯಕ್ತಿಕ ಬ್ರ್ಯಾಂಡಿಂಗ್, ಪ್ರಚಾರ, ಆನ್‌ಲೈನ್ ವೀಕ್ಷಣೆ ಹಾಗೂ ವಾಣಿಜ್ಯ ಚಟುವಟಿಕೆಗಳಿಗಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅರ್ಜಿದಾರರು ವಾದಿಸಿದ್ದಾರೆ. ನ್ಯಾಯಾಂಗ ಪ್ರಕ್ರಿಯೆಗಳ ಅವಧಿಯಲ್ಲಿ ನಡೆಯುವ ಮೌಖಿಕ ಸಂಭಾಷಣೆಗಳನ್ನು ಯಾವುದೇ ಕಾರಣಕ್ಕೂ ವಾಣಿಜ್ಯ ಡಿಜಿಟಲ್ ಆಸ್ತಿಯನ್ನಾಗಿ, ರಾಜಕೀಯ ಬ್ರ್ಯಾಂಡಿಂಗ್ ಆಗಿ ಅಥವಾ ಹಣ ಗಳಿಸುವ ಸಾರ್ವಜನಿಕ ಮನರಂಜನೆಯ ವಸ್ತುವನ್ನಾಗಿ ಪರಿವರ್ತಿಸಲು ಅವಕಾಶ ನೀಡಬಾರದು ಎಂದು ಅರ್ಜಿಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net