ರೋಹಿತ್ ಶರ್ಮಾ ಅಂದಿದ್ದು ಅದೊಂದೇ ಮಾತು!...ರನ್ ಔಟ್ ವಿವಾದದ ಅಸಲಿ ಸತ್ಯ ಬಿಚ್ಚಿಟ್ಟ ನಾಯಕ ಗಿಲ್ | Rohit Sharma Run-Out

Rohit Sharma Run-Out > ರನ್ ಔಟ್ ವಿವಾದದ ಅಸಲಿ ಸತ್ಯ ಬಿಚ್ಚಿಟ್ಟ ನಾಯಕ ಗಿಲ್
Rohit Sharma Run-Out > ರನ್ ಔಟ್ ವಿವಾದದ ಅಸಲಿ ಸತ್ಯ ಬಿಚ್ಚಿಟ್ಟ ನಾಯಕ ಗಿಲ್
Published on
Rohit Sharma Run-Out: ಅಫ್ಘಾನಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದ ಸಂಭ್ರಮದ ನಡುವೆಯೂ, ಹಿರಿಯ ಆಟಗಾರ ರೋಹಿತ್ ಶರ್ಮಾ ಮತ್ತು ಯುವ ನಾಯಕ ಶುಭಮನ್ ಗಿಲ್ ನಡುವೆ ಸಂಭವಿಸಿದ ರನ್ ಔಟ್ ಗೊಂದಲ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮೈದಾನದಲ್ಲಿ ಉಭಯ ಆಟಗಾರರ ನಡುವಿನ ಪರಸ್ಪರ ಸಂವಹನದ ಕೊರತೆಯಿಂದಾಗಿ ರೋಹಿತ್ ಶರ್ಮಾ ದುರದೃಷ್ಟಕರ ರೀತಿಯಲ್ಲಿ ವಿಕೆಟ್ ಒಪ್ಪಿಸಬೇಕಾಯಿತು.
ಈ ರನ್ ಔಟ್‌ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಪಂದ್ಯದ ಮುಕ್ತಾಯದ ಬಳಿಕ ನಾಯಕ ಶುಭಮನ್ ಗಿಲ್ ಈ ಗೊಂದಲಕ್ಕೆ ರೋಹಿತ್ ಶರ್ಮಾ ಹೇಗೆ ಪ್ರತಿಕ್ರಿಯಿಸಿದರು ಎಂಬುದನ್ನು ಬಿಚ್ಚಿಟ್ಟಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ನಾಯಕ ಶುಭಮಾನ್ ಗಿಲ್, ರೋಹಿತ್ ಶರ್ಮಾ ಅವರ ರನ್ ಔಟ್ ಅತ್ಯಂತ ದುರದೃಷ್ಟಕರವಾಗಿತ್ತು ಎಂದಿದ್ದಾರೆ. ರನ್ ಗಳಿಸಲು ಪ್ರಯತ್ನಿಸುತ್ತಿದ್ದಾಗ ಬೌಲರ್ ಮಧ್ಯೆ ಅಡ್ಡ ಬಂದಿದ್ದರಿಂದ ಈ ರನ್ ಔಟ್ ಸಂಭವಿಸಿತು. ಆದರೆ, ಪಂದ್ಯದ ನಂತರ ರೋಹಿತ್ ಶರ್ಮಾ ಅವರೇ ಸ್ವತಃ ವೀಡಿಯೊ ರೀಪ್ಲೇ ವೀಕ್ಷಿಸಿದ್ದು, ಎಲ್ಲವೂ ಸರಿ ಇದೆ ಎಂದು ಔಟ್ ಆದ ಗೊಂದಲದ ಬಗ್ಗೆ ತಣ್ಣಗಾಗಿದ್ದಾರೆ ಎಂದು ಗಿಲ್ ಸ್ಪಷ್ಟನೆ ನೀಡಿದ್ದಾರೆ.

ಗಿಲ್​ ಅದ್ಭುತ ಕ್ಯಾಚ್​

ಇದೇ ವೇಳೆ ಹರ್ಷ್ ದುಬೆ ಬೌಲಿಂಗ್‌ನಲ್ಲಿ ಗಜನ್‌ಫರ್ ನೀಡಿದ ಕಠಿಣ ಕ್ಯಾಚ್ ಅನ್ನು ಶುಭಮನ್ ಗಿಲ್ ಸ್ಲಿಪ್‌ನಲ್ಲಿ ಅದ್ಭುತವಾಗಿ ಹಿಡಿದಿದ್ದು ಪಂದ್ಯದ ಪ್ರಮುಖ ಹೈಲೈಟ್ ಆಗಿತ್ತು. ಈ ಕ್ಯಾಚ್ ಬಗ್ಗೆ ಮಾತನಾಡಿದ ಗಿಲ್, ನಾನು ಸ್ಲಿಪ್ ಕ್ಯಾಚಿಂಗ್ ಅಭ್ಯಾಸವನ್ನು ತುಂಬಾ ಮಾಡಿದ್ದೇನೆ. ನಮ್ಮ ಫೀಲ್ಡಿಂಗ್ ಕೋಚ್ ಜೊತೆಗೂ ಈ ಬಗ್ಗೆ ಮಾತನಾಡುತ್ತಿದ್ದೆ, ಕೊನೆಗೂ ಇಂತಹದ್ದೊಂದು ಅದ್ಭುತ ಕ್ಯಾಚ್ ಹಿಡಿದಿದ್ದಕ್ಕೆ ತುಂಬಾ ಖುಷಿಯಿದೆ ಎಂದು ಹೇಳಿದರು.

30 ರನ್ ಕೊರತೆಯಾಯ್ತು ಎಂದ ಅಫ್ಘಾನ್ ನಾಯಕ

ಅಫ್ಘಾನಿಸ್ತಾನದ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಕೇವಲ 51 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 8 ಬೌಂಡರಿಗಳ ನೆರವಿನಿಂದ 102 ರನ್ ಚಚ್ಚಿ ಭಾರತದ ಬೌಲರ್‌ಗಳಿಗೆ ಶಾಕ್ ನೀಡಿದ್ದರು. ಆದರೆ, ಡೆತ್ ಓವರ್‌ಗಳಲ್ಲಿ ಭಾರತೀಯ ಬೌಲರ್‌ಗಳು ಲಯಕ್ಕೆ ಮರಳಿದ್ದರಿಂದ ಅಫ್ಘಾನ್ ರನ್ ವೇಗಕ್ಕೆ ಬ್ರೇಕ್ ಬಿತ್ತು. ಈ ಬಗ್ಗೆ ಮಾತನಾಡಿದ ಅಫ್ಘಾನಿಸ್ತಾನದ ನಾಯಕ ಹಷ್ಮತುಲ್ಲಾ ಶಾಹಿದಿ, ನಾವು ಬ್ಯಾಟಿಂಗ್ ಪಿಚ್‌ನಲ್ಲಿ ಕನಿಷ್ಠ 30 ರನ್ ಕಡಿಮೆ ಬಾರಿಸಿದೆವು. ಗುರ್ಬಾಜ್ ಔಟ್ ಆದ ಬಳಿಕ ನಾವು ತಪ್ಪು ಶಾಟ್‌ಗಳನ್ನು ಆಡಿ ವಿಕೆಟ್ ಒಪ್ಪಿಸಿದೆವು. ಬೌಲಿಂಗ್‌ನಲ್ಲೂ ಶಿಸ್ತು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net