Donald Trump ಇದ್ದಾಗಲೇ ವೈಟ್ ಹೌಸ್ ಬಳಿ ಗುಂಡಿನ ದಾಳಿ..!

Donald Trump
Donald Trump
Published on
ಅಮೆರಿಕ: ಅಮೆರಿಕದ ಶ್ವೇತಭವನದ ಸಮೀಪ ಶನಿವಾರ ಸಂಜೆ ನಡೆದ ಗುಂಡಿನ ದಾಳಿ ಆತಂಕ ಸೃಷ್ಟಿಸಿದೆ. ಶ್ವೇತಭವನದ ಭದ್ರತಾ ತಪಾಸಣಾ ಕೇಂದ್ರದ ಬಳಿ ಬಂದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಗುಂಡಿನ ದಾಳಿ ನಡೆಸಿದ್ದು, ಪ್ರತಿಯಾಗಿ ಅಮೆರಿಕದ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಶಂಕಿತ ವ್ಯಕ್ತಿ ಮೃತಪಟ್ಟಿದ್ದು, ಒಬ್ಬ ಪಾದಚಾರಿಗೂ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಷಿಂಗ್ಟನ್‌ನ 17ನೇ ಸ್ಟ್ರೀಟ್ ಹಾಗೂ ಪೆನ್ಸಿಲ್ವೇನಿಯಾ ಅವೆನ್ಯೂ ಸಮೀಪ ಈ ಘಟನೆ ನಡೆದಿದೆ. ಸ್ಥಳೀಯ ಸಮಯ ಸಂಜೆ 6 ಗಂಟೆಯ ಸುಮಾರಿಗೆ ಶಂಕಿತ ವ್ಯಕ್ತಿ ಬ್ಯಾಗ್‌ನಿಂದ ಪಿಸ್ತೂಲ್ ತೆಗೆದು ಭದ್ರತಾ ಸಿಬ್ಬಂದಿಯತ್ತ ಗುಂಡು ಹಾರಿಸಿದ್ದಾನೆ. ತಕ್ಷಣ ಪ್ರತಿಕ್ರಿಯಿಸಿದ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಶಂಕಿತನ ಮೇಲೆ ಗುಂಡು ಹಾರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಘಟನೆಯ ವೇಳೆ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ Donald Trump ಇದ್ದರು ಎಂದು ವರದಿಯಾಗಿದೆ. ಆದರೆ ಅವರಿಗೆ ಯಾವುದೇ ಅಪಾಯವಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ದಾಳಿ ನಡೆದ ತಕ್ಷಣ ಶ್ವೇತಭವನ ಪ್ರದೇಶವನ್ನು ಲಾಕ್‌ಡೌನ್ ಮಾಡಲಾಗಿದ್ದು, ಅಲ್ಲಿ ಇದ್ದ ಮಾಧ್ಯಮ ಪ್ರತಿನಿಧಿಗಳನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಯಿತು.
ಘಟನೆಯ ಸಮಯದಲ್ಲಿ ಹಲವು ಪತ್ರಕರ್ತರು ಸ್ಥಳದಲ್ಲೇ ವರದಿ ಮಾಡುತ್ತಿದ್ದರು. ಗುಂಡಿನ ಸದ್ದು ಕೇಳುತ್ತಿದ್ದಂತೆಯೇ ಕೆಲವರು ನೆಲಕ್ಕುರುಳಿ ರಕ್ಷಣೆ ಪಡೆದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕೆಲ ವರದಿಗಾರರು “ದಶಕಗಟ್ಟಲೆ ಗುಂಡು ಹಾರಿಸಿದ ಶಬ್ದ ಕೇಳಿಸಿತು” ಎಂದು ಹೇಳಿದ್ದಾರೆ.
ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (FBI) ಕೂಡ ಪ್ರಕರಣದ ತನಿಖೆಯಲ್ಲಿ ಸೇರಿಕೊಂಡಿದೆ. ಶಂಕಿತನ ಉದ್ದೇಶ ಏನು ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಕೆಲವು ವರದಿಗಳ ಪ್ರಕಾರ, ಆತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿಯಾಗಿರಬಹುದು ಎಂದು ಶಂಕಿಸಲಾಗಿದೆ.
ಇತ್ತೀಚಿನ ವಾರಗಳಲ್ಲಿ ಶ್ವೇತಭವನದ ಸುತ್ತಮುತ್ತ ನಡೆದಿರುವ ಭದ್ರತಾ ಘಟನೆಗಳ ಹಿನ್ನೆಲೆ ಈ ದಾಳಿ ಮತ್ತಷ್ಟು ಆತಂಕ ಹುಟ್ಟಿಸಿದೆ. ಅಮೆರಿಕ ರಾಜಕೀಯ ವಲಯದಲ್ಲಿ ಭದ್ರತೆ ಕುರಿತ ಚರ್ಚೆ ಮತ್ತೆ ಜೋರಾಗಿದೆ,(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net