ಇರಾನ್ ಯುದ್ಧ ಅತಿರೇಕ, ಉತ್ಪ್ರೇಕ್ಷೆ, ಆತಂಕಗಳ ಪರಾಮರ್ಶೆ

ಇರಾನ್ ಯುದ್ಧ ಅತಿರೇಕ, ಉತ್ಪ್ರೇಕ್ಷೆ, ಆತಂಕಗಳ ಪರಾಮರ್ಶೆ
ಇರಾನ್ ಯುದ್ಧ ಅತಿರೇಕ, ಉತ್ಪ್ರೇಕ್ಷೆ, ಆತಂಕಗಳ ಪರಾಮರ್ಶೆ
Published on

ಲೇಖಕರು ಫಿಶರ್ ಇನ್ವೆಸ್ಟ್‌ಮೆಂಟ್ಸ್‌ನ ಸಂಸ್ಥಾಪಕ, ಕಾರ್ಯಕಾರಿ ಅಧ್ಯಕ್ಷ ಮತ್ತು ಸಹ-ಮುಖ್ಯ ಹೂಡಿಕೆ ಅಧಿಕಾರಿ. 1979ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿ 37 ವರ್ಷ ಅದರ ಸಿಇಒ ಆಗಿದ್ದರು. ಇದು ಜಾಗತಿಕವಾಗಿ 386 ಬಿಲಿಯನ್ ಅಮೆರಿಕನ್ ಡಾಲರ್‌ಗಿಂತ ಹೆಚ್ಚಿನ ಹಣಕಾಸು ನಿರ್ವಹಿಸುವ ಹೂಡಿಕೆ ಸಲಹಾ ಸಂಸ್ಥೆ. ನ್ಯೂಯಾರ್ಕ್ ಟೈಮ್ಸ್‌ನ 4 ಬೆಸ್ಟ್‌ಸೆಲ್ಲರ್ ಸೇರಿದಂತೆ 11 ಪುಸ್ತಕಗಳ ಲೇಖಕರಾಗಿರುವ ಫಿಶರ್, ವಿಶ್ವದ 28 ದೇಶಗಳ ಪ್ರಮುಖ ಮಾಧ್ಯಮಗಳಲ್ಲಿ ಅಂಕಣಗಳನ್ನು ಆಯಾ ದೇಶದ ಸ್ಥಳೀಯ ಭಾಷೆಗಳಲ್ಲಿ ಬರೆಯುತ್ತಾರೆ.
ಇರಾನ್ ಯುದ್ಧದಿಂದ ಉಂಟಾದ ಇಂಧನ ಕೊರತೆ, ಕರ್ನಾಟಕದ ಆರ್ಥಿಕತೆಗೆ ಭಾರಿ ಹೊಡೆತ ನೀಡಲಿದೆ ಎಂಬ ಭೀತಿಯು ಉತ್ಪ್ರೇಕ್ಷೆಯಿಂದ ಕೂಡಿದ್ದು ಎಂದು ಸಾಬೀತಾಗಿದೆ. ಜಾಗತಿಕ ತೈಲ ಉತ್ಪಾದನೆ ಹೆಚ್ಚುತ್ತಿದೆ. ಪರ್ಯಾಯ ಮಾರ್ಗಗಳೂ ಸಿದ್ಧವಾಗುತ್ತಿವೆ. ಇದರಿಂದಾಗಿ ಹೊರ್ಮುಜ್​ ಜಲಸಂಧಿಯ ಮೇಲಿನ ಅವಲಂಬನೆ ಕಡಿಮೆಯಾಗುತ್ತಿದೆ.

ಪೆಟ್ರೋಲ್ ಮತ್ತು ಎಲ್ಪಿಜಿ ಬೆಲೆ ಏರಿಕೆಯಿಂದ ತೊಂದರೆಯಾಗುತ್ತಿದ್ದರೂ ಇದು ಕೇವಲ ತಾತ್ಕಾಲಿಕ. ಇದು ಯಾವುದೇ ಆರ್ಥಿಕ ಹಿಂಜರಿತ ಅಥವಾ ವ್ಯಾಪಕ ಹಣದುಬ್ಬರವನ್ನು ಉಂಟುಮಾಡುವುದಿಲ್ಲ. ಇರಾನ್ ಯುದ್ಧವು ಭಾರತದ ಬೆಳವಣಿಗೆ ಅಥವಾ ಕರ್ನಾಟಕದ ಆರ್ಥಿಕತೆಯ ಮೇಲೆ ದೀರ್ಘಾವಧಿ ದುಷ್ಪರಿಣಾಮ ಬೀರುವುದಿಲ್ಲ ಎಂದು ನಾನು ಮಾರ್ಚ್ ತಿಂಗಳ ಅಂಕಣದಲ್ಲಿ ವಿವರಿಸಿದ್ದೆ. ಆಗ ಕೆಲವರು ‘ಹೌದು, ಆದರೆ...’ ಎಂದು ತಮ್ಮ ಆತಂಕಗಳನ್ನು ವ್ಯಕ್ತಪಡಿಸಿದ್ದರು. ‘ಒಂದು ವೇಳೆ ಶಾಂತಿ ಮಾತುಕತೆ ವಿಫಲವಾದರೆ?, ತೈಲ ಬೆಲೆಗಳು ಗಗನಕ್ಕೇರುವುದಿಲ್ಲವೇ?, ವಾಣಿಜ್ಯ ಅನಿಲ (ಎಲ್ಪಿಜಿ) ನಿರ್ಬಂಧಗಳ ಕಥೆಯೇನು?’ ಹೀಗೆ ಅನೇಕ ಪ್ರಶ್ನೆಗಳು ಎದ್ದಿದ್ದವು. ಈ ಆತಂಕಗಳು ಸಹಜವಾಗಿದ್ದರೂ ಅವು ಈಗ ಅತಿರೇಕವೆಂದು ಸಾಬೀತಾಗುತ್ತಿವೆ. ಬನ್ನಿ, ಈ ಬಗ್ಗೆ ವಿಶ್ಲೇಷಿಸೋಣ.
ಹೌದು, ಭಾರತವು ಸದ್ಯದ ಇಂಧನ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸುತ್ತಿದೆ. ಆದರೆ ಅಸ್ಥಿರ ಶಾಂತಿ ಮಾತುಕತೆಗಳು ಮತ್ತು ಅಮೆರಿಕದ ದಿಗ್ಬಂಧನಗಳು ಆತಂಕಕಾರಿಯಾಗಿವೆ. ಈ ನಡುವೆ, ಅಮೆರಿಕದ ಈ ದಿಗ್ಬಂಧನದಿಂದ ಭಾರಿ ಬದಲಾವಣೆ ಏನೂ ಆಗಲಿಲ್ಲ. ಯುದ್ಧ ಆರಂಭವಾದ ಬಳಿಕ ಇರಾನ್‌ನಿಂದ 8-10 ದಶಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಭಾರತ ಆಮದು ಮಾಡಿಕೊಂಡಿದೆ. ಅಲ್ಪಕಾಲೀನ ನಿರ್ಬಂಧ ತೆರವು ಎರಡು ದಿನಗಳಿಗೆ ಸಾಕಾಗುವಷ್ಟು ಮಾತ್ರದ ಅತ್ಯಲ್ಪ ಅನಿಲ ಪೂರೈಕೆಗಾಗಿತ್ತು. ಅಮೆರಿಕದ ದಿಗ್ಬಂಧನವು ಇರಾನ್‌ನ ಆರ್ಥಿಕತೆಯನ್ನು ಹೈರಾಣಾಗಿಸುತ್ತಿದೆಯೇ ಹೊರತು ಭಾರತದ್ದನ್ನಲ್ಲ.
ಒಂದೆಡೆ, ಇರಾನ್ ದಿಗ್ಬಂಧನಕ್ಕೆ ಪರ್ಯಾಯ ಮಾರ್ಗಗಳು ಬೆಳೆಯುತ್ತಿವೆ. ಭಾರತಕ್ಕೆ ಈಗ 40ಕ್ಕೂ ಹೆಚ್ಚು ದೇಶಗಳಿಂದ ಇಂಧನ ಹರಿದುಬರುತ್ತಿದೆ. ಏಪ್ರಿಲ್‌ನಲ್ಲಿ ಸೌದಿ ಅರೇಬಿಯಾದಿಂದ ಶೇಕಡ 23ರಷ್ಟು ಆಮದು ಹೆಚ್ಚಾಗಿದೆ. ಇನ್ನು ಯುಎಇನಿಂದ ಆಮದು ಮೂರು ಪಟ್ಟು ಅಧಿಕವಾಗಿದೆ! ಇವೆರಡೂ ಹೊಮುಜ್ ಜಲಸಂಧಿಯನ್ನು ಬಳಸದೆ ಪೈಪ್‌ಲೈನ್‌ಗಳ ಮೂಲಕ ಇಂಧನ ಸರಬರಾಜು ಮಾಡುತ್ತಿವೆ. ಇದರೊಂದಿಗೆ ಸ್ಥಗಿತಗೊಂಡ ನಿರ್ಬಂಧಗಳ ನಡುವೆಯೂ ರಷ್ಯಾದ ಆಮದಿನಲ್ಲಿ ಹೆಚ್ಚಳ ಕೂಡ ಕೊರತೆಯನ್ನು ನೀಗಿಸುತ್ತಿದೆ.
ಎಲ್ಲೆಡೆ, ಗಲ್ಫ್ ಹೊರತಾದ ಉತ್ಪಾದಕರು, ತೈಲ ಉತ್ಪಾದನೆಯನ್ನು ಹೆಚ್ಚಿಸುತ್ತಿದ್ದಾರೆ. ಏಪ್ರಿಲ್‌ನಲ್ಲಿ ಅಮೆರಿಕದ ಕಚ್ಚಾ ತೈಲ ರಫ್ತು ದಾಖಲೆ ಮಟ್ಟ ತಲುಪಿದೆ. ವೆನೆಜುವೆಲಾ ಕೂಡ ಹೆಚ್ಚಿನ ತೈಲ ಹೊರತೆಗೆಯುತ್ತಿದೆ. ಕರ್ನಾಟಕದಲ್ಲಿ ಆತಂಕದಿಂದಾಗಿ ಹೆಚ್ಚಿದ್ದ ಪೆಟ್ರೋಲ್ ಬೇಡಿಕೆ ಈಗ ಇಳಿಮುಖವಾಗುತ್ತಿದೆ. ಮಾರ್ಚ್ ತಿಂಗಳಲ್ಲಿ ದಿನಕ್ಕೆ 3.75 ಲಕ್ಷ ಸಿಲಿಂಡರ್‌ಗಳಿದ್ದ ಮಾರಾಟ, ಏಪ್ರಿಲ್ ಅಂತ್ಯದ ವೇಳೆಗೆ ಸುಮಾರು 3 ಲಕ್ಷಕ್ಕೆ ಇಳಿದಿದೆ. ಇನ್ನು ವಾಣಿಜ್ಯ ಎಲ್ಪಿಜಿ ನಿರ್ಬಂಧಗಳು ಕರ್ನಾಟಕದ ಆಟೋ ಚಾಲಕರು ಮತ್ತು ಹೋಟೆಲ್‌ಗಳ ಮೇಲೆ ದುಷ್ಪರಿಣಾಮ ಬೀರಿರುವುದು ನಿಜ. ಭವಿಷ್ಯ ಮತ್ತಷ್ಟು ಭೀಕರವಾಗಲಿದೆ.
ಹೌದು, ಆಸ್ಪತ್ರೆ ಮತ್ತು ಶಾಲೆಗಳಂತಹ ಅಗತ್ಯ ಸೇವೆಗಳಿಗೆ ವಾಣಿಜ್ಯ ಎಲ್ಪಿಜಿ ಪೂರೈಕೆಯಲ್ಲಿ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ ಇತರ ವಲಯಗಳಿಗೆ ಭಾರಿ ಹೊಡೆತ ಬಿದ್ದಿದೆ. ಯಾವುದೇ ಕೊರತೆಯಿಲ್ಲ ಎಂದು ಕರ್ನಾಟಕ ಸರ್ಕಾರ ಮತ್ತು ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಹೇಳುತ್ತಿದ್ದರೂ ತಾತ್ಕಾಲಿಕ ಸಮಸ್ಯೆ ಉಂಟಾಗಿರುವುದಂತೂ ನಿಜ. ಆದರೂ ಇವು ಆರ್ಥಿಕ ಹಿಂಜರಿತಕ್ಕೆ ಕಾರಣವಾಗುವುದಿಲ್ಲ. ಏಕೆಂದರೆ ಕರ್ನಾಟಕದ ಒಟ್ಟು ದೇಶೀಯ ಉತ್ಪನ್ನದಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಪಾಲು ಕೇವಲ ಶೇ. 1ರಷ್ಟಿದ್ದರೆ, ರಸ್ತೆ ಸಾರಿಗೆಯ ಪಾಲು ಶೇ. 3ರಷ್ಟಿದೆ.
ಅಲ್ಲದೆ, ವಾಣಿಜ್ಯ ಎಲ್ಪಿಜಿ ಹಂಚಿಕೆ ಈಗ ಬಿಕ್ಕಟ್ಟಿನ ಪೂರ್ವದ ಮಟ್ಟದ ಶೇ. 70ಕ್ಕೆ ಮರಳಿದೆ. ಆಟೋಮೊಬೈಲ್ ಮತ್ತು ಕೃಷಿ ವಲಯಗಳಿಗೆ ಇಲ್ಲಿ ಆದ್ಯತೆ ನೀಡಲಾಗುತ್ತಿದ್ದು, ಇದು ಕರ್ನಾಟಕಕ್ಕೆ ಅನುಕೂಲಕರವಾಗಿದೆ. ಬೆಂಗಳೂರಿನಲ್ಲಿ ಕಡಿಮೆ ವೆಚ್ಚದ ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್‌ಜಿ) ಪೂರೈಕೆಗಾಗಿ 25,000 ವಸತಿ ಮತ್ತು 69 ವಾಣಿಜ್ಯ ಸಂಪರ್ಕಗಳನ್ನು ಒದಗಿಸುವ ಯೋಜನೆಗೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿದೆ. ಇದು ಉದ್ಯಾನ ನಗರಿಯ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತಷ್ಟು ಬಲ ನೀಡಲಿದೆ. ಇದರೊಂದಿಗೆ ರಸ್ತೆ ಅಗೆಯುವ ಕೆಲಸಕ್ಕೆ ಸಿಗುವ ವೇಗದ ಅನುಮತಿ ಮತ್ತು ಪೈಪ್‌ಲೈನ್ ಅಳವಡಿಕೆಗೆ ಅತಿ ಅಗ್ಗದ ಶುಲ್ಕಗಳನ್ನು ವಿಧಿಸಲಾಗುತ್ತಿದೆ. ಒಟ್ಟಾರೆ ರಾಜ್ಯಾದ್ಯಂತ, ವಾಸ್ತವವು ಬಹುಶಃ ನಿರಾಶಾದಾಯಕ ನಿರೀಕ್ಷೆಗಳಿಗಿಂತ ಉತ್ತಮವಾಗಿರುತ್ತದೆ.
ನಿಜ, ಆದರೆ ಇರಾನ್ ಹೊಮುಜ್ ಜಲಸಂಧಿಯ ಸಂಚಾರಕ್ಕೆ ಸುಂಕ ವಿಧಿಸಿದರೆ ದೀರ್ಘಕಾಲದವರೆಗೆ ತೈಲ ಬೆಲೆಗಳು ಏರಿಕೆಯಾಗುತ್ತವೆ ಎನ್ನಬಹುದು. ಇರಾನ್ ಪ್ರತಿ ಬ್ಯಾರೆಲ್ ತೈಲಕ್ಕೆ 1 ಡಾಲರ್ ಸಂಚಾರ ಶುಲ್ಕ ವಿಧಿಸಬಹುದು ಎಂಬ ಆತಂಕವಿದೆ. ಇದರಿಂದ ಒಂದು ತೈಲ ಟ್ಯಾಂಕರ್‌ಗೆ 20 ಲಕ್ಷ ಡಾಲರ್ ಹೆಚ್ಚುವರಿ ವೆಚ್ಚ ತಗುಲಬಹುದು. ಇದು ಕೇಳಲು ಆತಂಕಕಾರಿ ಎನಿಸಬಹುದು! ಆದರೆ ಗಲ್ಫ್ ರಾಷ್ಟ್ರಗಳ ತೈಲ ಉತ್ಪಾದನೆ ವೆಚ್ಚ ಪ್ರತಿ ಬ್ಯಾರೆಲ್‌ಗೆ ಸುಮಾರು 20 ಡಾಲರ್ ಆಸುಪಾಸಿನಲ್ಲಿದೆ. ಕೇವಲ ಒಂದು ಡಾಲರ್ ಹೆಚ್ಚುವರಿ ಸುಂಕದಿಂದ ಬೆಲೆಗಳು ಗಗನಕ್ಕೇರುವುದಿಲ್ಲ. ಇನ್ನು, ಇಂತಹ ಸುಂಕದ ಜಾರಿಯಾಗುವ ಖಚಿತತೆಯೂ ಇಲ್ಲ. ಉದಾಹರಣೆಗೆ ಏಪ್ರಿಲ್ 29ರಂದು ಜಪಾನ್‌ನ ಒಂದು ಟ್ಯಾಂಕರ್ ಯಾವುದೇ ಶುಲ್ಕವಿಲ್ಲದೆ ಈ ಜಲಸಂಧಿಯನ್ನು ದಾಟಿದೆ. ಅಕಸ್ಮಾತ್ ಬೆಲೆಗಳು ಏರಿಕೆಯಾದರೂ, ಅದು ಜಾಗತಿಕವಾಗಿ ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸಲು ಪ್ರೇರೇಪಿಸುತ್ತದೆ. ಹೆಚ್ಚುವರಿ ಪೂರೈಕೆಯು ಶೀಘ್ರದಲ್ಲೇ ಬೆಲೆಗಳನ್ನು ಮತ್ತೆ ಇಳಿಕೆಯತ್ತ ತಳ್ಳುತ್ತದೆ. ಇದು ಬೇಡಿಕೆ ಮತ್ತು ಪೂರೈಕೆಯ ಸರಳ ನಿಯಮ.
ಆದರೆ ವಾಣಿಜ್ಯ ಎಲ್ಪಿಜಿ ಬೆಲೆ ಏರಿಕೆಯು ಭಾರಿ ಹಣದುಬ್ಬರಕ್ಕೆ ಕಾರಣವಾಗಬಹುದು ಎಂಬ ಆತಂಕ ಕೆಲವರಿಗಿರುವುದು ನಿಜ! ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರಗಳು ಶೇ. 70ಕ್ಕೂ ಅಧಿಕ ಏರಿಕೆಯಾಗಿರುವುದು ಯಾರಿಗೂ ಇಷ್ಟವಾಗದ ವಿಷಯ. ಉದ್ಯಮಗಳು ಈ ವೆಚ್ಚದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವುದರಿಂದ ಖರೀದಿ ಸಾಮರ್ಥ್ಯ ಕುಸಿಯುತ್ತದೆ ಎಂಬ ಭೀತಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಇಂಧನ ಬೆಲೆ ಏರಿಕೆ ಎಂದಿಗೂ ದೀರ್ಘಕಾಲದ ಹಣದುಬ್ಬರಕ್ಕೆ ಕಾರಣವಾಗುವುದಿಲ್ಲ. ಆದರೆ ಕೇಂದ್ರ ಬ್ಯಾಂಕ್‌ಗಳು ಮಿತಿಮೀರಿ ಹಣದ ಪೂರೈಕೆ ಮಾಡಿದಾಗ ಮಾತ್ರ ಹಣದುಬ್ಬರ ಉಂಟಾಗುತ್ತದೆ. ಇದಕ್ಕೆ ಕೋವಿಡ್ ಸಮಯವೇ ಸಾಕ್ಷಿ.
ಪ್ರಸ್ತುತ, ಭಾರತದ ವಿಶಾಲವಾದ ಹಣದ ಪೂರೈಕೆಯ ಅಳತೆಯಾದ ಎಂ4, ವರ್ಷದಿಂದ ವರ್ಷಕ್ಕೆ (ಇಯರ್ ಆನ್ ಇಯರ್) ಶೇ. 12.8ರಷ್ಟು ಹೆಚ್ಚಾಗಿದೆ. ಇದು ಐತಿಹಾಸಿಕ ಮಾನದಂಡಗಳಿಗೆ ಹೋಲಿಸಿದರೆ ಅಸಹಜವೇನಲ್ಲ. ಇನ್ನು ಅಮೆರಿಕಾದ ಎಂ4 ವರ್ಷದಿಂದ ವರ್ಷಕ್ಕೆ ಶೇ. 5.8ರಷ್ಟು ಹೆಚ್ಚಾಗಿದೆ. ಇದು 2020ರ ಮಧ್ಯಭಾಗದಲ್ಲಿದ್ದ ಶೇ. 30.4ರಷ್ಟು ಹಣದುಬ್ಬರದ ತೀವ್ರ ಹೆಚ್ಚಳಕ್ಕಿಂತ ಬಹಳ ದೂರವಿದೆ!
ಮಾರುಕಟ್ಟೆಗೆ ಹೆಚ್ಚಿನ ಹಣದ ಹರಿವು ಬಾರದೇ ತೈಲ ಬೆಲೆಗಳ ಏರಿಕೆಯು ವಿಶೇಷವಾಗಿ ಐಷಾರಾಮಿ ವಸ್ತುಗಳ ಬೆಲೆ ಕುಸಿಯುವಂತೆ ಮಾಡುತ್ತದೆ. ಜನರು ತಮ್ಮ ಅನಗತ್ಯ ಖರ್ಚುಗಳನ್ನು ತಗ್ಗಿಸಬಹುದು. ಮೋಜು-ಮನರಂಜನೆಯನ್ನಲ್ಲ. ಇದು ಹಣದುಬ್ಬರ ಏರಿಕೆಗೆ ಅಥವಾ ಜಿಡಿಪಿ ಹಿಂಜರಿತಕ್ಕೆ ದಾರಿಯಾಗುವುದಿಲ್ಲ. ಇಲ್ಲಿ ಕೇವಲ ಹಣ ಬಳಕೆಯ ಆದ್ಯತೆಗಳು ಬದಲಾಗುತ್ತವೆ.
ನಾಳೆ ಎಲ್ಲವೂ ಬದಲಾದರೆ ಏನು ಮಾಡುವುದು ಎಂಬ ಆತಂಕ ನಿಮ್ಮಲ್ಲಿರಬಹುದು! ಖಂಡಿತವಾಗಿ ಪರಿಸ್ಥಿತಿಯೂ ಬದಲಾಗಬಹುದು! ಆದರೆ ನಮ್ಮ ಆರ್ಥಿಕ ವ್ಯವಸ್ಥೆ ಬಹಳ ಬೇಗನೆ ಚೇತರಿಸಿಕೊಳ್ಳುವ ಶಕ್ತಿ ಹೊಂದಿದೆ. ಈಗಾಗಲೇ ಆ ಪ್ರಕ್ರಿಯೆ ಆರಂಭವಾಗಿದೆ. ತೈಲ ಕಂಪನಿಗಳು ಬದಲಾವಣೆಗೆ ಸಿದ್ಧವಾಗುವ ತನಕ ಭಾರತದ ಬಳಿ ಇರುವ ಇಂಧನ ಸಂಗ್ರಹ ಆಸರೆಯಾಗಲಿದೆ. ಆದ್ದರಿಂದ ಈ ‘ಹೌದು, ಆದರೆ...’ ಎಂಬ ಆತಂಕಗಳಿಗೆ ಕಿವಿಗೊಡಬೇಡಿ. ಈ ಬಿಕ್ಕಟ್ಟು ಶೀಘ್ರದಲ್ಲೇ ಅಂತ್ಯವಾಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net