ಮಾಜಿ ಪ್ರಧಾನಿ ದೇವೇಗೌಡರು ಬರೆದಿರುವ ಪತ್ರದ ಪ್ರಕಾರ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬಿಡದಿ ಹೋಬಳಿಯ ಬೈರಮಂಗಲ, ಬನಗಿರಿ, ಹೊಸೂರು, ಕೆ.ಜಿ.ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ, ಅರಳಾಳುಸಂದ್ರ, ಕೆಂಪಯ್ಯನಪಾಳ್ಯ, ಮಂಡಲಹಳ್ಳಿ ಹಾಗೂ ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಸೇರಿದಂತೆ ಒಟ್ಟು 9 ಗ್ರಾಮಗಳ 7,481 ಎಕರೆ 21.08 ಗುಂಟೆ ಜಮೀನನ್ನು ವಶಪಡಿಸಿಕೊಳ್ಳಲು ಉದ್ದೇಶಿಸಿದೆ. ಸುಮಾರು 18,133 ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ಈ ಉಪನಗರ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು, ಈಗಾಗಲೇ ಕಾಯ್ದೆ ಅಡಿಯಲ್ಲಿ ಪ್ರಾಥಮಿಕ ಅನುಮೋದನೆ ಕೂಡ ನೀಡಲಾಗಿದೆ. ಆದರೆ, ಈ ಭೂಸ್ವಾಧೀನದಿಂದಾಗಿ ಈ ಭಾಗದ ಒಟ್ಟು 10,580 ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಆಧಾರವನ್ನೇ ಕಳೆದುಕೊಂಡು ಬೀದಿಪಾಲಾಗಲಿದ್ದಾರೆ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.