ಇಂಡಿಗೋ ಬಿಕ್ಕಟ್ಟು...ನಿಯಮಗಳಿರುವುದು ಜನರ ನೆರವಿಗಾಗಿ, ತೊಂದರೆ ಕೊಡಲು ಅಲ್ಲ..; ಎನ್​ಡಿಎ ಸಚಿವರು, ಸಂಸದರಿಗೆ ಪ್ರಧಾನಿ ಮೋದಿ ಕಿವಿಮಾತು | Narendra Modi

Narendra Modi | ಎನ್​ಡಿಎ ಸಂಸದರ ಸಭೆಯಲ್ಲಿ ಸನ್ಮಾನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ
Narendra Modi | ಎನ್​ಡಿಎ ಸಂಸದರ ಸಭೆಯಲ್ಲಿ ಸನ್ಮಾನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ
Published on
ದೆಹಲಿ: ಇಂಡಿಗೋ ವಿಮಾನಯಾನ ಸಂಸ್ಥೆಗಳ ಆರ್ಥಿಕ ಸಂಕಷ್ಟದ ನಡುವೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಕಾನೂನು ಮತ್ತು ನಿಯಮಗಳು, ಜನರಿಗೆ ಹೊರೆಯಾಗದಂತೆ ಎಚ್ಚರಿಕೆಯ ಹೆಜ್ಜೆ ಇಡಲು ಸಂಸದರಿಗೆ ಸಲಹೆ ನೀಡಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್​ ರಿಜೀಜು ತಿಳಿಸಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಕೂಟದ ಅದ್ಭುತ ಗೆಲುವಿಗಾಗಿ ಆಡಳಿತಾರೂಢ ಎನ್‌ಡಿಎಯ ಸಂಸದರು ಮಂಗಳವಾರ ಪ್ರಧಾನಿ ಮೋದಿಗಾಗಿ ಹಮ್ಮಿಕೊಂಡಿದ್ದ ಸನ್ಮಾನ ಸಭೆಯಲ್ಲಿ ಈ ಸೂಚನೆ ನೀಡಿದ್ದಾರೆ ಎಂದು ಸಚಿವ ರಿಜೀಜು ತಿಳಿಸಿದ್ದು, ಶಾಸನ ರಚಿಸುವ ಸ್ಥಾನದಲ್ಲಿ ಕುಳಿತುಕೊಂಡಿರುವವರು ತಮ್ಮ ಕ್ಷೇತ್ರಗಳಲ್ಲಿ ಜನರ ಜೀವನವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಪ್ರಧಾನಿ ಸಲಹೆ ನೀಡಿರುವುದಾಗಿ ಸಭೆಯ ಮಾಹಿತಿ ಬಹಿರಂಗಪಡಿಸಿದರು.
ಜನರು ಯಾವುದೇ ಸಮಸ್ಯೆಗಳನ್ನು ಎದುರಿಸದಂತೆ ನೋಡಿಕೊಳ್ಳಲು ಪ್ರಧಾನಿ ಮೋದಿ ಎಲ್ಲಾ ವಲಯಗಳಲ್ಲಿ ಸುಧಾರಣೆಗಳಿಗೆ ಒತ್ತು ನೀಡಿದ್ದಾರೆ ಎಂದು ರಿಜಿಜು ಹೇಳಿದ್ದು, ಇಂಡಿಗೋದ ಪ್ರಸ್ತುತ ಕಾರ್ಯಾಚರಣೆಯ ಬಿಕ್ಕಟ್ಟಿನಿಂದ ಜನರು ತೊಂದರೆಗಳನ್ನು ಎದುರಿಸುತ್ತಿರುವ ಮಧ್ಯೆ ಪ್ರಧಾನಿ ಮೋದಿ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ.
ಇಂಡಿಗೋದಿಂದ ಮುಂದುವರೆದ ಅವ್ಯವಸ್ಥೆ..
ಇಂಡಿಗೋ ಬಿಕ್ಕಟ್ಟು ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ವಿಮಾನಯಾನ ಸಂಸ್ಥೆಯ ಕಾರ್ಯಾಚರಣೆಗೆ ರದ್ದತಿ ಮತ್ತು ವಿಳಂಬಗಳು ನಿರಂತರವಾಗಿ ಅಡ್ಡಿಯಾಗುತ್ತಲೇ ಇದೆ. ಮಂಗಳವಾರವೂ ನಡೆಯುತ್ತಿರುವ ಅವ್ಯವಸ್ಥೆಯ ನಡುವೆ ದೆಹಲಿ, ಮುಂಬೈ, ಕೋಲ್ಕತ್ತಾ, ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ. ಈ ನಡುವೆ ಸರ್ಕಾರದ ಪ್ರತಿನಿಧಿಗಳು ಮತ್ತು ಡಿಜಿಸಿಎ ಅಧಿಕಾರಿಗಳು ಇಂದು ಇಂಡಿಗೊ ಸಿಇಒ ಪೀಟರ್ ಎಲ್ಬರ್​​ರನ್ನು ಭೇಟಿಯಾಗಿ ಸದ್ಯದ ಪರಿಸ್ಥಿತಿಯ ಬಗ್ಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net