ಹುಬ್ಬಳ್ಳಿಯಲ್ಲಿ ರಣಜಿ ಫೈನಲ್‌: ಕರ್ನಾಟಕ ಫೀಲ್ಡರ್‌ಗೆ ಡಿಚ್ಚಿ ಹೊಡೆದ ಕಾಶ್ಮೀರ ಕ್ಯಾಪ್ಟನ್! ಮಾಯಾಂಕ್, ರಾಹುಲ್ ಆಕ್ರೋಶ | RanjiTrophy Final

ಹುಬ್ಬಳ್ಳಿಯಲ್ಲಿ ರಣಜಿ ಫೈನಲ್‌: ಕರ್ನಾಟಕ ಫೀಲ್ಡರ್‌ಗೆ ಡಿಚ್ಚಿ ಹೊಡೆದ ಕಾಶ್ಮೀರ ಕ್ಯಾಪ್ಟನ್! ಮಾಯಾಂಕ್, ರಾಹುಲ್ ಆಕ್ರೋಶ
ಹುಬ್ಬಳ್ಳಿಯಲ್ಲಿ ರಣಜಿ ಫೈನಲ್‌: ಕರ್ನಾಟಕ ಫೀಲ್ಡರ್‌ಗೆ ಡಿಚ್ಚಿ ಹೊಡೆದ ಕಾಶ್ಮೀರ ಕ್ಯಾಪ್ಟನ್! ಮಾಯಾಂಕ್, ರಾಹುಲ್ ಆಕ್ರೋಶ
Published on
ಹುಬ್ಬಳ್ಳಿ: ಪ್ರತಿಷ್ಠಿತ ರಣಜಿ ಟ್ರೋಫಿ(Ranji Trophy Final) 2026ರ ಫೈನಲ್ ಪಂದ್ಯವು ಕ್ರೀಡಾ ಸ್ಫೂರ್ತಿಯನ್ನು ಮರೆತು ಜಗಳಕ್ಕೆ ಸಾಕ್ಷಿಯಾಗಿದೆ. ಜಮ್ಮು ಮತ್ತು ಕಾಶ್ಮೀರ ತಂಡದ ನಾಯಕ ಪರಸ್ ಡೋಗ್ರಾ ಅವರು ಕರ್ನಾಟಕದ ಫೀಲ್ಡರ್ ಕೆ.ವಿ. ಅನೀಶ್ ಅವರಿಗೆ ಹೆಲ್ಮೆಟ್‌ನಿಂದ ಗುದ್ದಿದ ಘಟನೆ ಎರಡನೇ ದಿನದಾಟದಂದು ನಡೆದಿದೆ. ಈ ಅನಿರೀಕ್ಷಿತ ವರ್ತನೆಯಿಂದ ಮೈದಾನದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ನಡೆದಿದ್ದೇನು..?

ಜಮ್ಮು-ಕಾಶ್ಮೀರ ತಂಡದ ಮೊದಲ ಇನ್ನಿಂಗ್ಸ್‌ನ 101ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿದೆ. ಪ್ರಸಿದ್ಧ್ ಕೃಷ್ಣ ಬೌಲಿಂಗ್‌ನಲ್ಲಿ ಪರಸ್ ಡೋಗ್ರಾ ಬೌಂಡರಿ ಬಾರಿಸಿದ ನಂತರ, ಸಿಲ್ಲಿ ಪಾಯಿಂಟ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಬದಲಿ ಆಟಗಾರ ಕೆ.ವಿ. ಅನೀಶ್ ಮತ್ತು ಡೋಗ್ರಾ ನಡುವೆ ಮಾತಿನ ಚಕಮಕಿ ನಡೆಯಿತು. ಅನೀಶ್ ಅವರು ಸತತವಾಗಿ ಸ್ಲೆಡ್ಜಿಂಗ್ ಮಾಡುತ್ತಿದ್ದರಿಂದ ಕೋಪಗೊಂಡ ಡೋಗ್ರಾ, ಇದ್ದಕ್ಕಿದ್ದಂತೆ ಅನೀಶ್ ಕಡೆಗೆ ಧಾವಿಸಿ ತಮ್ಮ ಹೆಲ್ಮೆಟ್‌ನಿಂದ ಅವರ ಮುಖಕ್ಕೆ ಗುದ್ದಿದ್ದಾರೆ.
ಮಧ್ಯಪ್ರವೇಶಿಸಿದ ಮಾಯಾಂಕ್ ಮತ್ತು ಕೆಎಲ್ ರಾಹುಲ್
ಘಟನೆ ನಡೆದ ಕೂಡಲೇ ಕರ್ನಾಟಕದ ಹಿರಿಯ ಆಟಗಾರರಾದ ಮಾಯಾಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್ ಅವರು ಓಡಿಬಂದು ಪರಿಸ್ಥಿತಿಯನ್ನು ನಿಯಂತ್ರಿಸಿದ್ಧಾರೆ. ಡೋಗ್ರಾ ಅವರ ಈ ಅಸಭ್ಯ ವರ್ತನೆಯಿಂದ ಕೆರಳಿದ ಕೆಎಲ್ ರಾಹುಲ್, ಮೈದಾನದಲ್ಲೇ ಡೋಗ್ರಾ ವಿರುದ್ಧ ವಾಗ್ದಾಳಿ ನಡೆಸಿದರು. ಅಂಪೈರ್‌ಗಳು ತಕ್ಷಣವೇ ಮಧ್ಯಪ್ರವೇಶಿಸಿ ಆಟಗಾರರನ್ನು ಸಮಾಧಾನಪಡಿಸಿದರು. ಓವರ್ ಮುಗಿದ ನಂತರ ಪರಸ್ ಡೋಗ್ರಾ ಕ್ಷಮೆಯಾಚಿಸಲು ಮುಂದಾದರೂ, ಕರ್ನಾಟಕದ ಫೀಲ್ಡರ್ ಅನೀಶ್ ಅದನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.

ಪಂದ್ಯದ ಸ್ಥಿತಿ

ವಿವಾದದ ನಡುವೆಯೂ ಜಮ್ಮು-ಕಾಶ್ಮೀರ ತಂಡವು ಪಂದ್ಯದ ಮೇಲೆ ಹಿಡಿತ ಸಾಧಿಸಿದೆ. ಮೊದಲ ದಿನದಂದು ಶುಭಂ ಪುಂಡೀರ್ (117*) ಮತ್ತು ಯಾವರ್ ಹಸನ್ (88) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ತಂಡವು ದೊಡ್ಡ ಮೊತ್ತದತ್ತ ಸಾಗುತ್ತಿದೆ. ಕರ್ನಾಟಕದ ಪರ ಪ್ರಸಿದ್ಧ್ ಕೃಷ್ಣ ಎರಡು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ.

ಡೋಗ್ರಾಗೆ ಕಾದಿದೆ ಶಿಕ್ಷೆ..?

ಕ್ರಿಕೆಟ್ ನಿಯಮಗಳ ಪ್ರಕಾರ, ಎದುರಾಳಿ ಆಟಗಾರನ ಮೇಲೆ ದೈಹಿಕ ಹಲ್ಲೆ ನಡೆಸುವುದು 'ಲೆವೆಲ್ 4' ಅಪರಾಧವಾಗಿದ್ದು, ಪರಸ್ ಡೋಗ್ರಾ ಅವರಿಗೆ ಪಂದ್ಯದ ಸಂಭಾವನೆಯಲ್ಲಿ ಕಡಿತ ಅಥವಾ ಕೆಲವು ಪಂದ್ಯಗಳಿಂದ ನಿಷೇಧ ಹೇರುವ ಸಾಧ್ಯತೆ ದಟ್ಟವಾಗಿದೆ. ರಣಜಿ ಇತಿಹಾಸದಲ್ಲೇ ಇಂತಹ ಘಟನೆ ನಡೆದಿರುವುದು ಇದೇ ಮೊದಲು ಎನ್ನಲಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net