ಮಹಾರಾಷ್ಟ್ರದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಮುನ್ನುಡಿ; ಸಿಎಂ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ತಜ್ಞರ ಸಮಿತಿ ರಚನೆ! UCC In Maharashtra

ಮಹಾರಾಷ್ಟ್ರದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಮುನ್ನುಡಿ; ಸಿಎಂ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ತಜ್ಞರ ಸಮಿತಿ ರಚನೆ!
ಮಹಾರಾಷ್ಟ್ರದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಮುನ್ನುಡಿ; ಸಿಎಂ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ತಜ್ಞರ ಸಮಿತಿ ರಚನೆ!
Published on
ಮುಂಬೈ: ಉತ್ತರಾಖಂಡ ರಾಜ್ಯದ ಬೆನ್ನಲ್ಲೇ ಈಗ ಮಹಾರಾಷ್ಟ್ರದಲ್ಲೂ ಏಕರೂಪ ನಾಗರಿಕ ಸಂಹಿತೆ (UCC In Maharashtra) ಜಾರಿಗೆ ತರಲು ಆಡಳಿತಾರೂಢ ಮಹಾಯುತಿ ಸರ್ಕಾರ ಅಧಿಕೃತವಾಗಿ ಮೊದಲ ಹೆಜ್ಜೆ ಇಟ್ಟಿದೆ. ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆಯ ಕರಡು ನಿಯಮಗಳನ್ನು ಸಿದ್ಧಪಡಿಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಲು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತೀರ್ಮಾನಿಸಿದ್ದಾರೆ ಎಂದು ಗೃಹ ಇಲಾಖೆಯ ರಾಜ್ಯ ಸಚಿವ ಯೋಗೇಶ್ ಕದಮ್ ಮಂಗಳವಾರ ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ.
ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ನಡೆದ ಮಹತ್ವದ ಚರ್ಚೆಯೊಂದಕ್ಕೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ತರಲು ನಮ್ಮ ಸರ್ಕಾರ ನೂರಕ್ಕೆ ನೂರರಷ್ಟು ಸಕಾರಾತ್ಮಕವಾಗಿದೆ. ತಜ್ಞರ ಸಮಿತಿಯು ನೀಡುವ ವರದಿಯ ಆಧಾರದ ಮೇಲೆ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಬಹುವಿವಾಹ ಪದ್ಧತಿಗೆ ಬೀಳಲಿದೆಯೇ ಬ್ರೇಕ್?

ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಚಿವ ಯೋಗೇಶ್ ಕದಮ್, ಏಕರೂಪ ನಾಗರಿಕ ಸಂಹಿತೆಯ ಕರಡನ್ನು ಸಿದ್ಧಪಡಿಸುವಾಗ ಸಮಾಜದಲ್ಲಿ ಚಾಲ್ತಿಯಲ್ಲಿರುವ ಬಹುವಿವಾಹ ಪದ್ಧತಿಯನ್ನು ತಡೆಯುವ ಮತ್ತು ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ನಿಬಂಧನೆಗಳ ಬಗ್ಗೆ ತಜ್ಞರ ಸಮಿತಿಯು ಕೂಲಂಕಷವಾಗಿ ಪರಿಶೀಲಿಸಲಿದೆ ಎಂದರು. ಅಲ್ಲದೆ, ಮುಸ್ಲಿಂ ಮಹಿಳೆಯರ ಹಿತರಕ್ಷಣೆಗಾಗಿ ಕೇಂದ್ರ ಸರ್ಕಾರ ತಂದಿರುವ ತ್ರಿವಳಿ ತಲಾಕ್ ನಿಷೇಧ ಕಾಯ್ದೆಯನ್ನು ಮಹಾರಾಷ್ಟ್ರದಲ್ಲಿ ಈಗಾಗಲೇ ಅತ್ಯಂತ ಕಠಿಣವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ನಾಸಿಕ್ ಮಹಿಳೆಯರ ಕಣ್ಣೀರಿನ ಕಥೆ ಬಿಚ್ಚಿಟ್ಟ ಬಿಜೆಪಿ ಶಾಸಕಿ!

ಬಿಜೆಪಿ ಶಾಸಕಿ ದೇವಯಾನಿ ಫರಾಂಡೆ ಅವರು ಮಂಡಿಸಿದ ಗಮನ ಸೆಳೆಯುವ ಸೂಚನೆಯ ಮೇರೆಗೆ ಸದನದಲ್ಲಿ ಈ ಚರ್ಚೆ ಆರಂಭವಾಯಿತು. ನಾಸಿಕ್ ಜಿಲ್ಲೆಯಲ್ಲಿ ಮುಸ್ಲಿಂ ಮಹಿಳೆಯರಿಗೆ ಅವರ ಪತಿಯಂದಿರು ಫೋನ್ ಮೂಲಕವೇ ದಿಢೀರ್ ವಿಚ್ಛೇದನ (ಇನ್‌ಸ್ಟಂಟ್ ತ್ರಿವಳಿ ತಲಾಕ್) ನೀಡಿ, ದೈಹಿಕ ಕಿರುಕುಳ ನೀಡುತ್ತಿರುವ ಹಾಗೂ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕುತ್ತಿರುವ ಹಲವು ಭೀಕರ ಪ್ರಕರಣಗಳನ್ನು ಅವರು ಸದನದ ಗಮನಕ್ಕೆ ತಂದರು.
ತ್ರಿವಳಿ ತಲಾಕ್ ನಿಷೇಧ ಕಾಯ್ದೆ ಇದ್ದರೂ ತಳಮಟ್ಟದಲ್ಲಿ ಅದರ ಅನುಷ್ಠಾನ ಇನ್ನೂ ಸರಿಯಾಗಿ ಆಗುತ್ತಿಲ್ಲ. ನೆರೆಯ ಪಾಕಿಸ್ತಾನದಲ್ಲೂ ಎರಡನೇ ಮದುವೆಯಾಗಬೇಕಾದರೆ ಮೊದಲ ಹೆಂಡತಿಯ ಅನುಮತಿ ಕಡ್ಡಾಯ ಎಂಬ ನಿಯಮವಿದೆ. ಹೀಗಿರುವಾಗ ನಮ್ಮ ದೇಶದ ಮಹಿಳೆಯರಿಗೆ ಭದ್ರತೆ ನೀಡಲು ಕಠಿಣ ಕಾನೂನಿನ ಅಗತ್ಯವಿದೆ ಎಂದು ದೇವಯಾನಿ ಒತ್ತಾಯಿಸಿದ್ದಾರೆ.

ದೇಶ ನಡೆಯುವುದು ಸಂವಿಧಾನದಿಂದ, ಧರ್ಮಗ್ರಂಥದಿಂದಲ್ಲ!"

ಈ ವಿಷಯ ಸದನದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಭಾರಿ ವಾಗ್ವಾದಕ್ಕೆ ಕಾರಣವಾಯಿತು. ಎನ್‌ಸಿಪಿ (ಶರದ್ ಪವಾರ್ ಬಣ) ನಾಯಕ ಜಯಂತ್ ಪಾಟೀಲ್ ಮತ್ತು ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟಿವಾರ್, ತ್ರಿವಳಿ ತಲಾಕ್ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಕಾನೂನು, ಅದನ್ನು ರಾಜ್ಯ ವಿಧಾನಸಭೆಯಲ್ಲಿ ಚರ್ಚಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಎನ್‌ಸಿಪಿ ಶಾಸಕಿ ಸನಾ ಮಲಿಕ್, ಮಹಿಳೆಯರ ಮೇಲಿನ ದೌರ್ಜನ್ಯಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಮುಸ್ಲಿಂ ವೈಯಕ್ತಿಕ ಕಾನೂನುಗಳು ಅವರ ಧಾರ್ಮಿಕ ತತ್ವಗಳ ಆಧಾರದ ಮೇಲೆ ನಡೆದುಕೊಂಡು ಬಂದಿವೆ ಎಂದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಬಿಜೆಪಿ ಶಾಸಕ ಅತುಲ್ ಭಟ್ಖಲ್ಕರ್, ನಮ್ಮ ಭಾರತ ದೇಶ ನಡೆಯುವುದು ಸಂವಿಧಾನದ ನಿಯಮಗಳ ಮೇಲೆಯೇ ಹೊರತು ಯಾವುದೇ ಧರ್ಮಗ್ರಂಥಗಳ ಆಧಾರದ ಮೇಲಲ್ಲ ಎಂದು ಕಠಿಣ ಧ್ವನಿಯಲ್ಲಿ ತಿರುಗೇಟು ನೀಡಿದ್ದಾರೆ.
ಕೊನೆಯಲ್ಲಿ ಉತ್ತರಿಸಿದ ಸಚಿವ ಯೋಗೇಶ್ ಕದಮ್, ಇದು ಯಾವುದೇ ಧರ್ಮದ ವಿರುದ್ಧದ ಹೋರಾಟವಲ್ಲ, ಬದಲಿಗೆ ಮಹಿಳೆಯರ ಘನತೆ ಮತ್ತು ನ್ಯಾಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ರಾಜ್ಯದಲ್ಲಿ 2024ರಲ್ಲಿ 42 ತ್ರಿವಳಿ ತಲಾಕ್ ಪ್ರಕರಣಗಳು ದಾಖಲಾಗಿ 152 ಜನರನ್ನು ಹಾಗೂ 2025ರಲ್ಲಿ 39 ಪ್ರಕರಣಗಳು ದಾಖಲಾಗಿ 95 ಜನರನ್ನು ಬಂಧಿಸಲಾಗಿದೆ. ತರಲಿರುವ ಏಕರೂಪ ನಾಗರಿಕ ಸಂಹಿತೆಯು ಯಾವುದೇ ನಿರ್ದಿಷ್ಟ ಧರ್ಮಕ್ಕೆ ವಿರುದ್ಧವಾಗಿರುವುದಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಗದ್ದಲಕ್ಕೆ ತೆರೆ ಎಳೆದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net